ಚಿತ್ರದುರ್ಗ: ಕಲಿಯುಗದಲ್ಲಿ ಎಲ್ಲರೂ ಹಣ, ಅಧಿಕಾರದ ಹಿಂದೆ ಬಿದ್ದಿದ್ದಾರೆಯೇ ವಿನಃ ಭಕ್ತಿಯ ಮಾರ್ಗದಲ್ಲಿ ಹೋಗುವವರು ಸಂಖ್ಯೆ ಕಡಿಮೆಯಿದೆ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಸ್ವಾಮೀಜಿ ಹೇಳಿದರು.
ಬೆಂಗಳೂರಿನ ಮಂಜುನಾಥನಗರದಲ್ಲಿ ವೀರಾಂಜನೇಯಸ್ವಾಮಿ ನೂತನ ದೇವಸ್ಥಾನದ ಕುಂಭಾಭಿಷೇಕ ಹಾಗೂ ಕಳಶ ಸ್ಥಾಪನೆ ನೆರವೇರಿಸಿ ಸ್ವಾಮೀಜಿ ಮಾತನಾಡಿದರು.
ಆತ್ಮನಿವೇದನೆ ಮಾಡಿಕೊಳ್ಳಲು ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗಿ ದೇವರನ್ನು ಪೂಜಿಸಬೇಕೆ ವಿನಃ ಆತ್ಮವಂಚನೆ ಮಾಡಿಕೊಳ್ಳಬಾರದು. ಮನುಷ್ಯನಾದ ಮೇಲೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತಪ್ಪು ಮಾಡುವುದು ಸಹಜ. ಆದರೆ ದೇವಸ್ಥಾನಕ್ಕೆ ಹೋದ ಮೇಲೆ ದೇವರ ಸನ್ನಿಧಿಯಲ್ಲಿ ತಪ್ಪನ್ನು ತಿದ್ದಿಕೊಂಡು ಸರಿಯಾದ ಮಾರ್ಗದಲ್ಲಿ ಹೋಗುವುದನ್ನು ಕಲಿಯಬೇಕು ಎಂದು ತಿಳಿಸಿದರು.
ದೇವಸ್ಥಾನಗಳನ್ನು ಕಟ್ಟುವವರು ಸಂಖ್ಯೆ ಜಾಸ್ತಿಯಿದೆ. ಭಕ್ತಿ ಮನಸ್ಸಿನಲ್ಲಿ ಇರಬೇಕು. ಆಡಂಭರಕ್ಕಾಗಿ ಪೂಜೆ ಮಾಡಿ ಭಕ್ತಿಯನ್ನು ಮತ್ತೊಬ್ಬರ ಎದುರು ಪ್ರದರ್ಶಿಸಲು ಹೋದರೆ ನಿಜವಾಗಿಯೂ ದೇವರು ಮೆಚ್ಚುವುದಿಲ್ಲ. ಹಾಗಾಗಿ ದೇವಸ್ಥಾನಗಳನ್ನು ಕಟ್ಟುವುದಕ್ಕಿಂತ ಮುಖ್ಯವಾಗಿ ಮನಸ್ಸುಗಳನ್ನು ಕಟ್ಟುವ ಮೂಲಕ ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆಯನ್ನು ರೂಪಿಸಿಬೇಕಾಗಿದೆ ಎಂದರು.
ಚಂದ್ರಶೇಖರನಾಥಸ್ವಾಮೀಜಿ, ಹನುಮಂತನಾಥಸ್ವಾಮೀಜಿ, ದೇವಸ್ಥಾನದ ಅಧ್ಯಕ್ಷ ಕೃಷ್ಣಪ್ಪ, ಮಂಜು, ಶಿವಭದ್ರಯ್ಯ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.