ಚಿತ್ರದುರ್ಗ : ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಯುವಸಮೂಹದ ದಿಕ್ಕು ಬದಲಾಗುತ್ತಿದ್ದು, ಪಠ್ಯಪುಸ್ತಕಗಳ ಓದಿನ ಆಸಕ್ತಿ ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಯುವ ಸಮೂಹ ಮತ್ತೆ ಈ ಕಡೆ ಹೊರಳುವಂತೆ ಮಾಡಬೇಕಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷ ಪ್ರೊ. ಜಿ. ವೆಂಕಟೇಶ್ ಹೇಳಿದರು.

ಎಸ್.ಜೆ.ಎಂ. ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗು ಕನ್ನಡ ಅಧ್ಯಾಪಕರ ವೇದಿಕೆ, ದಾವಣಗೆರೆ ವಿಶ್ವವಿದ್ಯಾಲಯ ಇವರ ಸಹಯೋಗದಲ್ಲಿ ನಡೆದ ಪದವಿ ಕನ್ನಡ ಪಠ್ಯ ಪುಸ್ತಕಗಳ ಬಿಡುಗಡೆ ಹಾಗು ಪಠ್ಯಾವಲೋಕನ ಸಮಾರಂಭದಲ್ಲಿ ಮಾತನಾಡುತ್ತ, ವಿದ್ಯಾರ್ಥಿಗಳು ವೈಚಾರಿಕ ನೆಲೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕು. ಇಂದಿನ ಪಠ್ಯಗಳು ವಿದ್ಯಾರ್ಥಿಗಳ ಬದುಕಿಗೆ ಏನಾದರೂ ಸಂಬಂಧ ಇವೆಯೇ ಎಂದು ನೋಡಿಕೊಳ್ಳಬೇಕು. ಭಾಷೆ ಸಾಹಿತ್ಯ, ಸಂಸ್ಕೃತಿ, ಕಲೆ ಇವುಗಳ ಪರಿಚಯವೂ ಮುಖ್ಯವಾಗುತ್ತದೆ. ಪಠ್ಯಗಳು ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಸೃಷ್ಟಿಸಬೇಕು. ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಉದ್ಯೋಗ ಕಂಡುಕೊಳ್ಳುವ ನಿಟ್ಟಿನಲ್ಲಿ ತಿಳಿಸಬೇಕಿದೆ. ಪಠ್ಯದ ಆಚೆಗಿನ ಬದುಕನ್ನು ಕಲಿಸಬೇಕಿದೆ ಎಂದರು.

ದಾವಣಗೆರೆ ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯದರ್ಶಿ ಕೆ.ವಿ. ಪ್ರಭಾಕರ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯನಿರ್ವಹಣಾ ನಿರ್ದೇಶಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಕಾಲೇಜಿನ ಪ್ರಾಚಾರ್ಯ ಸಿ. ಬಸವರಾಜಪ್ಪ ಮಾತನಾಡಿದರು.
ಶಿವಮೊಗ್ಗ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಹೆಚ್. ವೆಂಕಟಶಿವಾರೆಡ್ಡಿ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಗಶ್ರೀ ಪ್ರಾರ್ಥಿಸಿದರು. ಪ್ರೊ. ಜಿ.ಎನ್. ಬಸವರಾಜಪ್ಪ ಸ್ವಾಗತಿಸಿದರು. ಶ್ರೀಮತಿ ಮೀರಾನಾಡಿಗ್ ನಿರೂಪಿಸಿದರು.