ಪಾಟ್ನಾ: ಬಿಹಾರದ ಮಧುಬನಿ ಜಿಲ್ಲೆಯ ಕೌವಾಹ ಬರ್ಹಿ ಗ್ರಾಮದಲ್ಲಿ 15 ವರ್ಷದ ಕಿವುಡ ಹಾಗೂ ಮೂಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ದುರುಳರು ನಂತರ ಆಕೆ ತಮ್ಮನ್ನು ಗುರುತಿಸಬಾರದೆಂದು ಆಕೆಯ ಕಣ್ಣುಗಳಿಗೆ ಚೂಪಾದ ವಸ್ತುವಿನಿಂದ ಕುಕ್ಕಿ ಹಾನಿಗೊಳಿಸಿದ್ದಾರೆ. ಬಾಲಕಿಯ ಎರಡೂ ಕಣ್ಣುಗಳು ಹಾನಿಗೊಂಡಿದ್ದು ಆಕೆ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದಾಳೆಯೇ ಎಂದು ಇನ್ನೂ ಕೂಡಾ ತಿಳಿದು ಬಂದಿಲ್ಲ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಮಧುಬನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಈ ಪ್ರಕರಣಕ್ಕೆ ಸಂಬAಧಪಟ್ಟ ಮೂವರನ್ನು ಪೊಲೀಸ್ ಹೀಗಾಗಲೇ ಬಂಧಿಸಿದ್ದಾರೆ. ಬಾಲಕಿ ಆಡುಗಳನ್ನು ಮೇಯಿಸಲೆಂದು ತೆಗೆದುಕೊಂಡು ಹೋಗಿದ್ದ ವೇಳೆ ಈ ಘಟನೆ ನಡೆದಿದ್ದು ಆರೋಪಿಗಳೆಲ್ಲರೂ ಆಕೆಯ ಗ್ರಾಮದವರೇ ಎಂದು ತಿಳಿದು ಬಂದಿದೆ.

ಬಾಲಕಿಯ ಮೇಲೆ ನಡೆದ ಪೈಶಾಚಿಕ ಕೃತ್ಯದ ಕುರಿತಂತೆ ಆಕೆಯ ಜತೆಗೆ ತೆರಳಿದ್ದ ಮಕ್ಕಳಲ್ಲೊಬ್ಬರು ಆಕೆಯ ಕುಟುಂಬಕ್ಕೆ ತಿಳಿಸಿದ್ದು ಆಕೆಯ ಕುಟುಂಬ ಸದಸ್ಯರು ಧಾವಿಸಿ ಬಂದಾಗ ಹತ್ತಿರದ ಗ್ರಾಮದ ಪಾಳು ಗದ್ದೆಯಲ್ಲಿ ಆಕೆ ಪ್ರಜ್ಞಾಶೂನ್ಯಳಾಗಿ ಬಿದ್ದಿದ್ದಳು.
ಬಾಲಕಿಯನ್ನು ಆರಂಭದಲ್ಲಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಮಧುಬನಿಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.