ಶಿವಮೊಗ್ಗ:  ಸಮಾಜದಲ್ಲಿ ಸಾಮಾಜಿಕವಾಗಿ ಹಿಂದುಳಿದವರು ಆರ್ಥಿಕವಾಗಿಯೂ ಹಿಂದುಳಿದಿರುತ್ತಾರೆ ಅಂತವರು  ಸಾಮಾಜಿಕವಾಗಿ ಸುಧಾರಿಸುವಂತಾದರೆ ಆಗ ದೇವರಾಜ್ ಅರಸು ದುರ್ಬಲರ ಏಳಿಗೆ ಬಗ್ಗೆ ಕಂಡ ಕನಸು ನನಸಾಗುತ್ತದೆ ಎಂದು ಮಾಜಿ ಲೋಕಸಭಾ ಸದಸ್ಯರು ಹಾಗೂ ನಿವೃತ್ತ ಐಪಿಎಸ್ ಅಧಿಕಾರಿಗಳಾದ ಪಿ.ಕೋದಂಡರಾಮಯ್ಯನವರು ಆಬಿಪ್ರಾಯಪಟ್ಟರು.
ಅವರು ಇಂದು ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ.ಎಸ್.ಪಿ.ಹಿರೇಮಠ ಸಭಾಂಗಣದಲ್ಲಿ ಸ್ನಾತಕೋತ್ತರ ರಾಜ್ಯಶಾಸ್ತ್ರ ವಿಭಾಗ ಹಾಗೂ ಶಾಂತವೇರಿ ಗೋಪಾಲಗೌಡ ಪೀಠ ಜಂಟಿಯಾಗಿ ಆಯೋಜಿಸಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ: ಡಿ.ದೇವರಾಜ ಅರಸರ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ’ಡಿ. ದೇವರಾಜ ಅರಸು ಕುರಿತು ವಿಶೇಷ ಉಪನ್ಯಾಸ’ ಮಾಲಿಕೆಯಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ದೇವರಾಜ ಅರಸರು ತಾವು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಉಳುವವನನ್ನೆ ಹೊಲದ ಒಡೆಯನನ್ನಾಗಿ ಮಾಡುವಂತಹ ಭೂಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಭೂಮಿಯ ಒಡೆಯ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆಯನ್ನು ತಂದು ತನ್ನ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾನೆ ಎನ್ನುವ ದೃಷ್ಟಿಯಿಂದ ಪ್ರತಿ ತಾಲ್ಲೋಕಿನಲ್ಲಿ ಭೂನ್ಯಾಯ ಮಂಡಳಿಗಳನ್ನು ರಚಿಸಿ ಅವುಗಳ ಮೂಲಕ  ಆ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬೇಕೆಂಬ ಜಾಣ್ಮೆ ಮೆರೆದಿದ್ದರಿಂದ ಇಂದು ಭೂಹೀನರು ಭೂಒಡೆಯರಾಗಿದ್ದರೆಂದ ಕೋದಂಡರಾಮಯ್ಯನವರು ದೇವರಾಜ್ ಅರಸರಂತಹ ಹಿಂದುಳಿದ ನಾಯಕ ಈ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿರದ್ದೇ ಇದ್ದರೆ ಈಗಿರುವ ಅರ್ಧದಷ್ಟು ಹಿಂದುಳಿದ ನಾಯಕರುಗಳು ಇಂದಿನ ರಾಜಕಾರಣದಲ್ಲಿ ಇರುತ್ತಿರಲಿಲ್ಲ. ಈಗಿನ ಹಿಂದುಳಿದ ನಾಯಕರುಗಳು ದೇವರನ್ನು ಪೂಜಿಸುವ ಬದಲು ದೇವರಾಜ ಅರಸರ ಭಾವಚಿತ್ರವನ್ನು ಪೂಜಿಸಬೇಕೆಂದರು.
ಮುಂದುವರಿದು ಮಾತನಾಡುತ್ತಾ ೨೦ ಅಂಶಗಳ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ದೇವರಾಜ ಅರಸರು ಜಾರಿಗೆ ತಂದಿದ್ದರಿಂದ ಕಾಂಗ್ರೆಸ್ ಇನ್ನು ಕೂಡ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದೆ, ಅದನ್ನು ಜಾರಿಗೆ ತರದಿರುವ ದೇಶದ ಉತ್ತರದ ಭಾಗಗಳಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಜೆ. ಸೋಮಶೇಖರ್‌ರವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕುಲಸಚಿವ ಪರೀಕ್ಷಾಂಗ ಪ್ರೊ.ಸಿ.ಎಂ.ತ್ಯಾಗರಾಜ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪೀಠದ ಸಂಚಾಲಕರಾದ ಪ್ರೊ.ಎಸ್.ಎ.ಜಾವೀದ್ ಸ್ವಾಗತಿಸಿದರೆ, ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಪ್ರೊ.ಕೆ. ಚಂದ್ರಶೇಖರ್ ವಂದಿಸಿದರು. ಡಾ.ಪ್ರವೀಣ ಟಿ.ಎಲ್. ಕಾರ್ಯಕ್ರಮ ನಿರೂಪಿಸಿದರು. ಕು.ಸಿಂಧು ಮತ್ತು ಕು.ರೋಹಿಣಿ ಜೈನ್ ನಾಡಗೀತೆ ಹಾಡಿದರು.