ಶಂಕರಘಟ್ಟ: ಮಾನವೀಯತೆಯ ಮಹಾ ಪಾಠ ಕಲಿಸಿದ ಮಹಾಗುರು ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನವೆಂದರೆ ಮನುಷ್ಯತ್ವದ ಉಗಮವಾದ ದಿನ. ಸಹನೆಯ ಮಹಾಪುರುಷ ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅವರು ಇಡೀ ವಿಶ್ವಕ್ಕೆ ಮಾದರಿಯಾಗಿರುವ iಹಾನಾಯಕರು. ಅವರನ್ನು ಗುರುವಾಗಿ ಸ್ವೀಕರಿಸಿ, ಅವರ ತತ್ವಸಿದ್ಧಾಂತಗಳೊಂದಿಗೆ ಸಂವಾದ ಮಾಡಿದಾಗ ಮಾತ್ರ ಸಮನ್ವಯ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಖ್ಯಾತ ಕವಿ ಮತ್ತು ಸಂಸ್ಕೃತಿ ಚಿಂತಕರಾದ ಸುಬ್ಬುಹೊಲೆಯಾರ್ ಅವರ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಪ್ರೊ.ಹಿರೇಮಠ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಏರ್ಪಡಿಸಿದ್ದ ೧೨೬ನೇ ದಿನಾಚರಣೆ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವೆಲ್ಲ ಒಂದೇ ತಾಯಿಯ ಮಕ್ಕಳು. ಜಾತಿ ಉನ್ಮಾದದಿಂದ ಮಾನಸಿಕವಾಗಿ ನರಳುವ ರೋಗಿಗಳಿಗೆ ಅಂಬೇಡ್ಕರ್ ಚಿಂತನೆ ಮತ್ತು ಬದುಕೆ ದಿವ್ಯ ಔಷಧಿ. ದಲಿತ ಸಮುದಾಯಕ್ಕಿರುವ ಸಹನೆ ಇಡೀ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಕೊಳತ ಮನಸ್ಸುಗಳಲ್ಲಿ ಹೂವನ್ನು ಅರಳಿಸುವ ಕೆಲಸವನ್ನು ಮಾಡಬೇಕು. ಈ ಹೊತ್ತು ಸಂಭ್ರಮವನ್ನು, ತಲ್ಲಣ, ಆತಂಕವನ್ನು ಅನುಭವಿಸುತ್ತಿದ್ದೆವೆ. ಎಲ್ಲರೂ ಬದಲಾಗಿ ಬಿಟ್ಟಿದ್ದಾರೆ ಎಂಬ ಭ್ರಮೆಯಲ್ಲಿದ್ದೆವೆ. ನಮಗೀಗ ನೆಲ ಸುಡುತ್ತಿದೆ. ಪಾದವು ಸುಡುತ್ತಿದೆ. ನಮ್ಮ ಮಿದುಳಿನ ಒತ್ತಡವು ಹೆಚ್ಚುತ್ತಿದೆ. ಹೊರನೋಟಕ್ಕೆ ಎಲ್ಲವೂ ಸಮೃದ್ಧಿಯಂತೆ ಕಾಣುವ ದಲಿತ ಸಮುದಾಯ ಒಳಗಿನ ಸಂಕಟದ ಬೇಗುದಿಯಲ್ಲಿ ಬೇಯುತ್ತಿದೆ. ಅನಕ್ಷರಸ್ಥ ದಲಿತರು ಅನುಭವಿಸುತ್ತಿರುವ ನೋವು ಅವಮಾನಗಳಿಗಿಂತ ಅಕ್ಷರಸ್ಥ ದಲಿತರು ಹೆಚ್ಚು ಅನುಭವಿಸುತ್ತಿದ್ದಾರೆ. ಪ್ರತಿಯೊಬ್ಬರು ಅಸಹಾಯಕರಿಗೆ ಮತ್ತು ಅವಮಾನಿತರಿಗೆ ಆಶ್ರಯ ನೀಡುವ ಮೂಲಕ, ಗಿಡಗಳನ್ನು ನೆಡುವ ಮೂಲಕ, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡುವ ಮೂಲಕ, ಹೃದಯ ಹೀನರಲ್ಲಿ ಹೃದಯವಂತಿಕೆಯನ್ನು ಬೆಳೆಸುವ ಮೂಲಕ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಆಚರಿಸಬೇಕೆಂದು ಸುಬ್ಬುಹೊಲೆಯರು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಅಧಿಕಾರಿ ಪ್ರೊ.ಹಿರೇಮಣಿನಾಯ್ಕ ವಹಿಸಿದ್ದರು. ಕು. ಅನುಷಾ ಪ್ರಾರ್ಥಿಸಿದರು. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಜಗನ್ನಾಥ ಕೆ.ಡಾಂಗೆ ಸ್ವಾಗತದೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ವಂದಿಸಿದರು. ಶೃತಿ, ಸಿ.ಎಂ.ನೇತ್ರಾವತಿ, ಸೋಮಶೇಖರ್ ಕಾರ್‍ಯಕ್ರಮ ನಿರೂಪಿಸಿದರು.