ರಕ್ತ ಸಂಬಂಧಗಳಿಗಿಂತ ಮೀರಿದ ಬಂಧವಿದು,
ಯಾವ ಬಿಂದುವಿನಲ್ಲಿ ಸಂಧಿಸದು,
ಎಲ್ಲೋ ಹುಟ್ಟಿ…..ಎಲ್ಲೋ ಬೆಳೆದು…..
ಇಲ್ಲಿ ಬಿಡಿಸಲಾರದ ಸ್ನೇಹದ ಸುಳಿಯಲ್ಲಿ ಸಿಲುಕುತ್ತೇವೆ.

ನಾವೆಲ್ಲಾ ಉನ್ನತ ವಿದ್ಯಾಭ್ಯಾಸಕ್ಕೆಂದು ಮನೆ, ಊರು ಬಿಟ್ಟು ಇನ್ನೊಂದು ಊರಲ್ಲಿ ಬದುಕು ಕಟ್ಟಿಕೊಳ್ಳಲು ಬರುತ್ತೇವೆ. ನಮ್ಮಂತಹ ಸಾವಿರಾರು ವಿದ್ಯಾರ್ಥಿಗಳಿಗೆ ವಸತಿನಿಲಯಗಳು ಕೈಬೀಸಿ ಕರೆಯುತ್ತವೆ.
ಈ ವಸತಿನಿಲಯಗಳು ನಮ್ಮೆಲ್ಲ ತರ್ಲೆ, ತುಂಟಾಟ, ಆಟೋಟಗಳಿಗೆ ಕೇಂದ್ರ ಬಿಂದುಗಳು. ಅಲ್ಲಿ ನಾವೇ ಮಾಲೀಕರು, ಇನ್ನೊಬ್ಬರ ಕಾಲೆಳೆಯೋದು, ಮತ್ತೊಬ್ಬರನ್ನು ಗೋಳಾಡಿಸೋದು ನಮ್ಮ ಮೋಜು ಮಸ್ತಿಗಾಗಿ ಬೇರೆಯವರನ್ನು ಬಕ್ರ ಮಾಡಿ ಅತೀವ ಆನಂದ ಪಡೆಯುತ್ತೇವೆ.

ನಾನು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಭೀಮನಕೆರೆ ಗ್ರಾಮದವನು, ನಮ್ಮೂರು ಬಿಟ್ಟು ಪಕ್ಕದ ಜಿಲ್ಲೆ ದಾವಣಗೆರೆಗೆ ಸ್ನಾತಕೋತ್ತರ ಪದವಿ ಪಡೆಯಲು ಪ್ರಯಾಣ ಬೆಳೆಸಿದೆ. ವಿಪರ್ಯಾಸವೆಂದರೆ ಅಲ್ಲಿ ನನಗ್ಯಾರು ಪರಿಚಯವಿರಲಿಲ್ಲ. ಹೇಗೋ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿಗೆ ಪ್ರವೇಶ ಪಡೆದು ಬಾಡಾ ಕ್ರಾಸ್ ಪುರುಷರ ಹಾಸ್ಟೆಲ್‌ನಲ್ಲಿ ಸೇರಿಕೊಂಡೆ. ಅಲ್ಲಿ ದಿನಕಳೆದಂತೆ ಸ್ನೇಹಿತರು ಪರಿಚಿತರಾಗಿ ಉತ್ತಮ ಬಾಂಧವ್ಯವನ್ನು ಬೆಳಸಿಕೊಳ್ಳುವಷ್ಟರಲ್ಲಿ, ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿಗೆ ಬಂದಾಗ ಹಾಸ್ಟೆಲ್ ಬದಲಾವಣೆಗೊಂಡಿತು, ಅಂದರೆ ವಿವಿಯೊಳಗೆ ವಸತಿನಿಲಯಗಳನ್ನು ಕಲ್ಪಿಸಲಾಗಿತ್ತು. ಒಂಥರ ಬೇಸರ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿದ್ದ ಹಾಸ್ಟೆಲ್ ಎಲ್ರೂ ಒಬ್ಬರಿಗೊಬ್ಬರು ಪರಿಚಯವಾಗಿದ್ವಿ ಇದ್ಯಾಕ್ ಚೇಂಜ್ ಮಾಡಿದ್ರೋ ಎಂದು ಎಲ್ಲಾ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದುಂಟು. ಆದರೂ ಬೇರೆ ವಿಧಿಯಿಲ್ಲದೆ ವಿವಿ ಹಾಸ್ಟೆಲ್ನಲ್ಲಿ ಉಳಿದುಕೊಳ್ಳುವಂತಾಯ್ತು, ಅಷ್ಟರಲ್ಲಾಗಲೆ ಎಲ್ಲಾ ಸ್ನೇಹಿತರು ಪರಿಚಯವಿದ್ದವರೆ ಆಗಿದ್ದರಿಂದ ಬಹುಬೇಗ ಹೊಂದಿಕೊಂಡೆವು, ಹೊಸ ಹಾಸ್ಟೆಲ್ ಆಗಿದ್ದರಿಂದ ನಮ್ ಡಿಪಾರ್ಟ್‌ಮೆಂಟ್ ಹುಡುಗರ ಅಕ್ಕ-ಪಕ್ಕದಲ್ಲಿದ್ದರೆ ಚೆಂದವೆಂದು ಮಧು, ಸಂದೀ, ತಿಪ್ಪೇಶ್, ಮಂಜು ಇವರಿದ್ದ ಎದುರಿನ ರೂಮ್ ಆಯ್ಕೆ ಮಾಡಿಕೊಂಡೆ. ಇವರೆಲ್ಲಾ ತುಂಬಾ ಆತ್ಮೀಯರಾಗಿದ್ದರು ಹೀಗೆ ದಿನಕಳೆದಂತೆ ನಮ್ಮ ಆತ್ಮೀಯತೆ ಸಲಿಗೆ ಹೆಚ್ಚಾಗಿದ್ದು, ನಮ್ಮ ಹಾಸ್ಯಕ್ಕೆ ಇನ್ನೊಬ್ಬರು ಗುರಿಯಾಗುತ್ತಿದ್ದರು.

ಹೀಗೆ ವಸತಿನಿಲಯದಲ್ಲಿ ನಡೆದ ಹಲವಾರು ಮಸ್ತಿಗಳಲ್ಲೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಮ್ಮದು ಜರ್ನಲಿಸಮ್ ಆಗಿದ್ದರಿಂದ ರಿಪೋರ್ಟಿಂಗ್, ಅಸೈನ್ಮೆಂಟ್, ಕ್ಲಾಸ್‌ವರ್ಕ್‌ಗಳಿಂದ ತುಂಬಾ ಸುಸ್ತಾದಂತೆ ಅನ್ನಿಸುತ್ತಿತ್ತು, ನನ್ನ ಸಹಪಾಠಿಗಳು ಕೂಡ ಸಪ್ಪೆಮುಖದಿಂದ ಕುಳಿತಿದ್ದರು. ಆಗ ನಾನೂ ಮಧು ಸ್ಕೆಚ್ ಒಂದನ್ನು ಹಾಕಿಕೊಂಡು ಯಾರಿಗೂ ಅನುಮಾನ ಬಾರದಂತೆ ಕುಡುಕನ ಪಾತ್ರದಲ್ಲಿ ನಟನೆ ಮಾಡಲು ಶುರು ಮಾಡಿದೆ, ರೂಂ ಬಾಗಿಲ ಮುಂದೆ ಬಿದ್ದು, ನಿಂತಲ್ಲಿ ನಿಲ್ಲಲಾಗುತ್ತಿಲ್ಲ, ತೊದಲು ನುಡಿಗಳು, ಬಾಯಿಯ ಬಳಿ ಮಧ್ಯಪಾನದ ವಾಸನೆ ಇದನ್ನೆಲ್ಲಾ ಗಮನಿಸಿದ ಹಾಸ್ಟೆಲ್ನ ಹುಡುಗರು ಕೂಡಲೆ ನನ್ನ ಬಳಿ ಓಡಿ ಬಂದರು ಹನುಮೇಶ್‌ಗೆ ಏನಾಯ್ತ್ರೋ, ಇದುವರೆಗೂ ಅವನು ಕುಡಿದಿರೋದೆ ನೋಡಿಲ್ಲ ಇದು ನಿಜನೇನ್ರೋ ಎಂದೆಲ್ಲಾ ಅವರಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು, ಇನ್ನು ಕೆಲವರು ಹೇ ಅವ್ನು ಅಂಥವನಲ್ಲ ನಂಬಲಿಕ್ಕೆ ಅಸಾಧ್ಯವಾಗ್ತಿದೆ ಅನ್ನುತ್ತಿದ್ದರು. ಎಷ್ಟೋ ಹುಡುಗ್ರು ಬಾಯಿ ಹತ್ತಿರ ಬಾಯಿ ತಂದು ವಾಸನೆ ನೋಡುತ್ತಿದ್ದರು. ನಂತರ ಈ ನಾಟಕಕ್ಕೆ ನನ್ನ ಗೆಳೆಯರು ಮೈಮೇಲೆ ನೀರಾಕಿ, ಹಾಸ್ಟೆಲ್ ತುಂಬಾ ನನ್ನದೆ ಮಾತು, ಹೀಗೆ ಬಣ್ಣ ಹಚ್ಚಿದ ಈ ದೃಶ್ಯವನ್ನು ಕಂಡವರೆಲ್ಲಾ ದಿಗ್ಬ್ರಾಂತರಾದರು.

ನಂತರ ಈ ತೇಪೆ ಮುಚ್ಚುವ ಸಲುವಾಗಿ ನನಗೆ ಈ ನಾಟಕವನ್ನೆ ಮುಂದುವರೆಸುವಂತೆ ಕಣ್ಸನ್ನೆ ಮಾಡಿದ ಮಧು. ಸಂದೀಪನಿಗೆ ಹೇಗೋ ನಾವಾಡುವುದು ನಾಟಕವೆಂಬುದು ಗೊತ್ತಾಯ್ತು. ಮೂವರು ಯಾರಿಗೂ ಗೊತ್ತಾಗದಂತೆ ಮೆಲ್ಲ ಎದ್ದು ನಮ್ ರೂಂ ಒಳಗೆ ಹೋಗಿ ಬಾಗ್ಲು ಹಾಕೊಂಡು, ಒಬ್ಬರಿಗೊಬ್ಬರು ಸಖತ್ ನಗೆಯಾಡಿದ್ವಿ, ಅವರಿಬ್ಬರು ಸಲಹೆ ನೀಡಿದರು ನೋಡು ನೀನು ಕುಡಿದಿಯ ಅಂತ ಎಲ್ರು ನಂಬಿದ್ದಾರೆ ನಿನೇನರಾ ಸುಳ್ಳು ಅಂತ ಹೇಳಿದರೆ ಕಷ್ಟವಾಗುತ್ತೆ ಎಂದು ಎಚ್ಚರಿಸಿದರು. ನನಗೂ ಸ್ವಲ್ಪ ಗಾಬರಿಯಾಯಿತು. ಅದನ್ನು ಕಂಟಿನ್ಯೂ ಮಾಡಿದರಾಯ್ತು ಅಂತ ಹೊರಗೆ ಬಂದ್ರೆ, ಎಲ್ರೂ ನನ್ ವಿಚಾರದ ಕುರಿತು ಚರ್ಚೆಯಲ್ಲಿ ಮುಳುಗಿದ್ದಾರೆ. ಅವರನ್ನೆಲ್ಲಾ ನೋಡಿದಾಗ ಅವರ ಮುಗ್ದತೆ ಕಂಡು ನಗು ಒತ್ತರಿಸಿ ಬಂತು. ಹಾಗೆಯೇ ಎಂತಹ ಒಳ್ಳೆಯ ಗೆಳೆಯರು ಸಿಕ್ಕದ್ದಾರಲ್ಲ ಅಂತ ನೋವು ಉಂಟಾಯಿತು. ಯಾವತ್ತು ಡ್ರಿಂಕ್ಸ್ ರುಚಿಯೇ ಕಾಣದ ನನಗೆ ಹಾಸ್ಟೆಲ್, ಯುನಿವರ್ಸಿಟಿ ತುಂಬೆಲ್ಲಾ ಕುಡುಕ ಹನುಮೇಶ್ ಎಂದು ಕರೆಯುತ್ತಿದ್ದಾಗಲೆಲ್ಲ ನಂಗಂತು ಫುಲ್ ನಗು ಬರ್‍ತಿತ್ತು. ನಿಜಕ್ಕೂ ಈ ದೃಶ್ಯ ನನ್ನ ಮನದಾಳದಲ್ಲಿ ಬಂದರೆ ಮನೋಲ್ಲಾಸವಾಗುತ್ತದೆ.
ಹೀಗೆ ಹತ್ತು ಹಲವಾರು ಘಟನೆಗಳನ್ನು ನೆನೆದರೆ ನನ್ನ ಕಣ್ಣಾಲಿ ಒದ್ದೆಯಾಗುತ್ತವೆ. ಈ ರೀತಿ ಆನಂದಿಸಿದ ನಾವು ಇಂದು ಅಸಹಾಯಕರಾಗಿದ್ದೇವೆ ಈ ತಾಂತ್ರಿಕ ಜೀವನಕ್ಕೆ ಹೊಂದಿಕೊಂಡು ಎಷ್ಟೋ ಸೃಜನಶೀಲತೆ ನಮ್ಮಿಂದ ಕಣ್ಮರೆಯಾದಂತೆ ಭಾಸವಾಗುತ್ತದೆ.

 

(ಸಂಪರ್ಕ-8618859300).).