ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಬಿ.ಕೃಷ್ಣಪ್ಪ ಇವರು ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನದ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಪ್ರಭು ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ’ಹಿರಿಯೂರು ತಾಲೂಕಿನ ಇತಿಹಾಸ ಮತ್ತು ಸಂಸ್ಕೃತಿ’ (ಪ್ರಾಗಿತಿಹಾಸ ಕಾಲದಿಂದ ಕ್ರಿ.ಶ.೧೮ನೇ ಶತಮಾನದವರೆಗೆ) ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿಹೆಚ್.ಡಿ ಪದವಿ ನೀಡಿದೆ.

ಇವರು ಚಳ್ಳಕೆರೆ ತಾಲೂಕು, ತಿಮ್ಮಣ್ಣನಾಯಕನಕೋಟೆ ಗ್ರಾಮದ ಶ್ರೀಮತಿ ಯಲ್ಲಮ್ಮ ಮತ್ತು ಶ್ರೀ ಭೀಮಪ್ಪ ಇವರ ಮಗನಾಗಿದ್ದು, ಇದೇ ವಿಶ್ವವಿದ್ಯಾನಿಲಯದಲ್ಲಿ ೧೯೯೫ರಲ್ಲಿ ನಡೆದ ೭೫ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಗಳಿಸುವುದರೊಂದಿಗೆ ಚಿನ್ನದ ಪದಕವನ್ನು ಪಡೆದಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.