ಪ್ರವಾಸ ಎಂದಾಕ್ಷಣ ಬಹುತೇಕರಿಗೆ ಎಲ್ಲಿಲ್ಲದ ಸಡಗರ, ಸಂಭ್ರಮ ಮನೆ ಮಾಡಿರುತ್ತದೆ. ಅಲ್ಲಿ ಮೋಜು ಮಸ್ತಿಗೇನು ಬರವಿರುವುದಿಲ್ಲ, ಪ್ರವಾಸಕ್ಕೆ ಹೊರಡುವ ಮುನ್ನ ತಯಾರಿಯಂತೂ ಹೇಳತೀರದು. ಯೋಜನೆ ಹಾಕುವುದರಲ್ಲಿಯೇ ಮುಳುಗಿರುತ್ತೇವೆ. ಸಂಬಂಧಿಕರು, ಸ್ನೇಹಿತರು ಸೇರಿದಂತೆ ಎಲ್ಲರ ಬಳಿ ನಾವ್ ಟ್ರಿಪ್ ಹೋಗ್ತೀವಿ ಅಂತ ಡಂಗೂರ ಸಾರಿ ಹೇಳುವ ಬಳಗವು ಉಂಟು, ಅದರಂತೆ ನನಗೂ ಆ ಅನುಭವವಾಗಿದ್ದುಂಟು.

ಮಧ್ಯ ಕರ್ನಾಟಕದ ಚಿತ್ರದುರ್ಗದವರಾಗಿದ್ದರಿಂದ ನಮ್ಮಲ್ಲಿ ಪ್ರವಾಸಗಳಿಗೆ ಹೆಚ್ಚಿನ ಆದ್ಯತೆ ಲಭಿಸುತ್ತದೆ, ಕಾರಣ ಚಿತ್ರದುರ್ಗ ಭೌಗೋಳಿಕವಾಗಿ ಬಯಲುಸೀಮೆ ಹಾಗೂ ಒಂದಷ್ಟು ಗುಡ್ಡಗಾಡು ಪ್ರದೇಶವನ್ನು ಹೊಂದಿರುವುದರಿಂದ ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳು ಇಲ್ಲಿನ ಜನರನ್ನು ಆಕರ್ಷಿಸುತ್ತವೆ. ಅಂತೆಯೇ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನವರಿಗಂತೂ ಕೈ ಬೀಸಿ ಕರೆಯುವುದುಂಟು. ಮೂಲತಃ ಬಯಲುಸೀಮೆಯವರಾಗಿದ್ದು, ಮಲೆನಾಡಿನ ಮಂಜು, ಹೆತೇಚ್ಚವಾದ ಮಳೆಯ ಅನುಭವ ಸ್ವಲ್ಪ ಕಡಿಮೆಯೇ ಹೌದು. ವರ್ಷಕ್ಕೆ ಒಂದೆರಡು ಬಾರಿ ಹೋಗಿಬಂದವರಿಗೆ ಸಾಮಾನ್ಯವೆನಿಸಬಹುದು. ಆದರೆ ಅಪರೂಪಕ್ಕೆಂದು ಪ್ರವಾಸ ಹೋರಟವರಿಗೆ ಎಲ್ಲಿಲ್ಲದ ಸಂತೋಷ ಮನೆ ಮಾಡಿರುತ್ತದೆ.

ಶಾಲಾ-ಕಾಲೇಜು ದಿನಗಳಲ್ಲಿ ವರ್ಷಕ್ಕೆ ಒಂದು ಬಾರಿ ಟ್ರಿಪ್ ಸರ್ವೇಸಾಮಾನ್ಯ, ಅಲ್ಲಿ ಅಪ್ಪ-ಅಮ್ಮನ ಒಪ್ಪಿಸಿ, ಹೇಗಾದರು ಟ್ರಿಪ್ ಹೋಗಲೇಬೇಕು ಎಂದು ಹಠಹಿಡಿದಾದರು ಹೋಗಿ ಬರುವರು, ಹಾಗೇಯೇ ನಾನು ಸಹ ಪ್ರತಿ ವರ್ಷ ಮಿಸ್ ಮಾಡದೆ ಹೋಗಿ ಬಂದಿದ್ದುಂಟು. ಆದರೆ ಕಾಲೇಜು ದಿನಗಳು ಅಂತ್ಯಗೊಂಡಂತೆ ಜವಾಬ್ದಾರಿಗಳು ಹೆಚ್ಚಾಗಿ, ಮನೆಯ ಪರಿಸ್ಥಿತಿಗೆ ತಕ್ಕಂತೆ ಹೋಗುವುದು ಅನಿವಾರ್ಯವಾಗಿರುತ್ತದೆ. ಅಂತೆಯೇ ನಾನು ಚಿತ್ರದುರ್ಗದ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆಯುತ್ತಿದ್ದು, ಟ್ರಿಪ್ ಹೋಗದೆ ಬಹುದಿನಗಳೆ ಕಳೆದು ಹೋಗಿತ್ತು, ಆಫೀಸ್‌ನಲ್ಲಿ ಎಲ್ರೂ ಟ್ರಿಪ್‌ಗೆ ಹೋಗೋಣವೆಂದಾಕ್ಷಣ ಹೋ ಸರಿ ಹೋಗಿ ಬರೋಣವೆಂದು ಮೊದಲು ಜೈ ಅಂದಿದ್ದು ನಾನೆ.

ಬ್ಯಾಚುಲರ್‌ಗಳೆ ಹೆಚ್ಚು ಇದ್ದುದರಿಂದ ೬ ಜನ ಟ್ರಿಪ್‌ಗೆ ಹೋಗುವುದಾಗಿ ಕನ್ಫರ್ಮ್ ಆಯ್ತು, ನಾಗರಾಜ್ ಸರ್, ಶಶಿ, ಕೋಟಿ, ಪ್ರವೀಣ್, ತಿಪ್ಪೇಶ್ ಸೇರಿ ಒಂದೇ ದಿನದಲ್ಲಿ ಪ್ರೀ ಪ್ಲಾನ್ ಮಾಡ್ಕೊಂಡ್ವಿ. ೪ ನೇ ಶನಿವಾರ ಹಾಗೂ ಭಾನುವಾರ ಎರೆಡು ದಿನ ರಜೆ ಇರುವುದರಿಂದ ಟ್ರಿಪ್ ಹೋಗಲು ಅನುಕೂಲವಾಗುತ್ತೆ ಅಂತ ಶುಕ್ರವಾರ ಮಧ್ಯಾಹ್ನನವೆ ಸರ್ ಹತ್ರ ರಜೆ ಕೇಳ್ಕೊಂಡು ಟ್ರಿಪ್‌ಗೆ ತಯಾರಿ ನಡೆಸಲು ಹೊರಟ್ಬಿಟ್ಟೆ. ಅಂದು ರಾತ್ರಿ ೧೨ ಗಂಟೆ ಸರಿಯಾಗಿ ಕಾರ್ ವ್ಯವಸ್ಥೆ ಮೂಲಕ ಚಿಕ್ಕಮಗಳೂರು ಕಡೆ ಹೊರಟ್ವಿ. ಅಬ್ಬಾ ಅಲ್ಲಿಂದ ನೋಡಿ ನಮ್ ಮೋಜು, ಮಸ್ತಿ, ಆನಂದಕ್ಕೆ ಪಾರವೇ ಇಲ್ಲದಂತಾಗಿತ್ತು.

ರಾತ್ರಿಪೂರ ನಿದ್ರೆ ಮಾಡದೆ ಸಾಂಗ್ಸ್ ಹಾಕ್ಕೊಂಡು ಕೂತಲ್ಲಿಯೇ ಕುಣಿತ, ಒಬ್ಬರಿಗೊಬ್ಬರು ಕಾಮಿಡಿ ಮಾಡ್ಕೊಂಡು ಹೋಗ್ತ, ದಾರಿ ಕಳೆದಿದ್ದೆ ಗೊತ್ತಾಗಲಿಲ್ಲ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡಿದ್ದರಿಂದ, ಮೂಡಿಗೆರೆ, ಕೊಟ್ಟಿಗೆಹಾರ, ದೇವರಮನೆ ಮೂಲಕ ಚಾರ್ಮಡಿ ತಿರುವು ನೋಡುವುದೇ ಒಂದು ಥ್ರಿಲ್. ಅಲ್ಲಿ ತಿಂಡಿ ತಿನ್ನೋದ್ಕಂತ ತಿಂಡಿ ಮಾಡಿಸಿದರೆ ಪುಳಿಯೊಗರೆ ಹೋಗಿ, ಬಿರಿಯಾನಿ ರೇಂಜಿಗೆ ಇರೋಬರೋ ಮಸಾಲೆ ಪದಾರ್ಥಗಳನ್ನೆಲ್ಲ ಹಾಕಿ ಮಾಡ್ಬಿಟ್ಟ ಸ್ನೇಹಿತ ಪ್ರವೀಣ. ಅದೊಂದು ಮರೆಯಲಾಗದ ನೆನಪೆ ಸರಿ. ಅಲ್ಲಿಂದ ಕಳಸ, ಹೊರನಾಡು, ಕುದುರೆಮುಖ ನೋಡ್ಕೊಂಡ್ ಕೆಮ್ಮಣ್ಣುಗುಂಡಿಯ ರಾಜಭವನದಲ್ಲಿ ಮೊದಲ ದಿನದ ರಾತ್ರಿ ತಂಗಿದೆವು. ಅಲ್ಲಿನ ವಾತಾವರಣ ನಮ್ಗೆ ಹೊಸತು, ಮಂಜು ಜಿನಿ ಜಿನಿ ಅಂತ ಬೀಳುವುದು, ಮುಂದಿರುವ ವಸ್ತು ಸಹ ಕಾಣದೆ ನಮ್ಗೆ ನಾವೆ ಆಶ್ಚರ್ಯವಂತರಾಗಿದ್ವಿ. ಮಾರನೇ ದಿನ ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ, ಅಬ್ಬೆ ಫಾಲ್ಸ್ ನೋಡ್ಕೊಂಡು, ಮುಳ್ಳಯ್ಯನಗಿರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ್ವಿ, ಮುಳ್ಳಯ್ಯನಗಿರಿ ಎಂದಾಕ್ಷಣ ಜೀವ ಝಲ್ ಎನ್ನುತ್ತಿತ್ತು, ಕಾರಣ ರಾಜ್ಯದಲ್ಲಿ ಅತೀ ಎತ್ತರದ ಶಿಖರವಾಗಿದ್ದರಿಂದ, ಅಲ್ಲಿಂದ ಕೆಳಗೆ ನೋಡಿದರೆ ಒಂದು ಕ್ಷಣ ಭಯವೆನಿಸಬಹುದು ಅಂತ ಕಲ್ಪನೆ ಮಾಡ್ಕೊಂಡಿದ್ದೆ. ಆದರೆ ಅದ್ಯಾವುದಕ್ಕು ಅಲ್ಲಿ ಅವಕಾಶ ಕೊಟ್ಟಿರಲಿಲ್ಲ, ಹಿಮ ಸಹಿತ ಮಳೆ. ಮುಂದಿರುವವರ್‍ಯಾರು ಅನ್ನೋದು ಸಹ ಗೊತ್ತಾಗದಂತೆ ಮಂಜು ಎಲ್ಲವನ್ನು ಆವರಿಸಿಕೊಂಡಿತ್ತು.

ಬೆಟ್ಟದ ರಸ್ತೆ ರಿಪೇರಿ ಕಾರ್ಯವಿರುವುದರಿಂದ ವಾಹನಗಳನ್ನು ೨ ಕಿಲೋಮೀಟರ್ ದೂರ ಇದ್ದಂತೆಯೇ ನಿಲ್ಲಿಸಿ, ಕಾರ್ ಪಾರ್ಕಿಂಗ್ ಮಾಡಿಸಲಾಗುತ್ತಿತ್ತು. ಹಾಗಾಗಿ ಅಷ್ಟು ದೂರ ಬೆಟ್ಟ ಹೇಗ್ ಅತ್ತೋದು ಅಂತ ಸ್ವಲ್ಪ ಹಿಂಜರಿಕೆಯಾಯಿತು. ಆದರೂ ತುತ್ತ ತುದಿಗೆ ಹೋಗಿ ಬರಲೆಬೇಕು ಎನ್ನುವ ಹಠದೊಂದಿಗೆ, ಹತ್ತಲು ಶುರು ಮಾಡಿದ್ವಿ. ಹೋಗ್ತ ಹೋಗ್ತ ದಾರಿ ಕಾಣದೆ ದಿಕ್ಕಿಗೊಬ್ಬರು ವಿಭಾಗವಾಗ್ಬಿಟ್ವಿ, ಒಬ್ಬರಿಗೊಬ್ಬರು ಗಾಬರಿಯಿಂದ ಹುಡುಕಾಟ ನೆಡೆಸುತ್ತ, ಯಾರೂ ಇಲ್ಲದ ಪ್ರದೇಶಕ್ಕೆ ನಾಗರಾಜ್ ಸರ್, ಪ್ರವೀಣ್ ಹೋಗಿಬಿಟ್ಟಿದ್ದರು. ಅವರನ್ನು ಹುಡ್ಕೊಂಡು ನಾವ್ ಒಂದ್ಕಡೆ ಕಾಣೆಯಾಗಿದ್ವಿ. ಅಬ್ಬ ಅಂತೂ ಎಲ್ರೂ ಒಂದೆಡೆ ಸೇರಿ ತಬ್ಬಿಕೊಂಡು ನಗಾಡಿ, ಮುಳ್ಳಯ್ಯನಗಿರಿಯ ಸೊಬಗನ್ನು ಸವಿಯೋಣವೆಂದರೆ ಮಂಜು ಅದಕ್ಕೆ ಅವಕಾಶವೆ ಕಲ್ಪಿಸಲಿಲ್ಲ. ಸ್ವಲ್ಪ ಮಟ್ಟಿಗೆ ಎಲ್ಲವನ್ನು ನೋಡ್ಕೊಂಡು ಪುನಃ ಚಿಕ್ಕಮಗಳೂರು ಮಾರ್ಗವಾಗಿ ಕೊನೆಯಲ್ಲಿ ಚಿಕನ್ ಪಾರ್ಟಿ ಮಾಡ್ಕೊಂಡ್ ಪ್ರವಾಸದಲ್ಲಿ ನೋಡಿದ, ಕಳೆದ ನೆನಪುಗಳನ್ನು ಮಾತಾಡ್ಕೊಳ್ತ ಬರುವಷ್ಟರಲ್ಲಿ ನಮ್ಮ ಮೂಲ ನೆಲೆ ಚಿತ್ರದುರ್ಗ ಬಂದೆ ಬಿಟ್ಟಿತ್ತು, ನಮ್ಮ ಪ್ರವಾಸವು ಮುಗಿದಿತ್ತು.

ಮರುದಿನ ಬೆಳಿಗ್ಗೆ ಟ್ರಿಪ್‌ನಲ್ಲಿ ಮಾಡಿದ ತರಲೆ, ತುಂಟಾಟಗಳೆಲ್ಲವು ಮುದವನ್ನು ನೀಡುತ್ತಿದ್ದವು. ಇಂತಹ ಟ್ರಿಪ್‌ಗಳು ಆಗಾಗ ಹಮ್ಮಿಕೊಂಡಲ್ಲಿ, ಮನಸ್ಸಿಗೆ ನೆಮ್ಮದಿಯ ಜೊತೆ ಹೊಸ ವಿಚಾರಗಳು ತಿಳಿಯುತ್ತವೆ. ಇನ್ನು ಫ್ಯಾಕ್ಟ್ರಿ, ಆಫೀಸ್‌ಗಳಲ್ಲಿ ಕೆಲಸ ಮಾಡುವವರು, ಮೈಂಡ್ ರಿಲೀಫ್ ಆಗ್ಲಿಕ್ಕೆ ಪ್ರವಾಸ ತುಂಬಾ ಸಹಕಾರಿಯಾಗಲಿವೆ.

  • ಹನುಮೇಶ್ ಭೀಮನಕೆರೆ,
    ಸಂಪರ್ಕ (8618859300)