ಜೀವನವೆಂಬ ಸುದೀರ್ಘ ಪಯಣದಲ್ಲಿ ಸಣ್ಣದೊಂದು ಪ್ರವಾಸ ಕೈಗೊಂಡಿದ್ದೆವು. ಬಳ್ಳಾರಿಯಾ ರೇಡಿಯೋಪಾರ್ಕ್ ಬಿ.ಸಿ.ಎಂ ಹಾಸ್ಟೆಲ್ ವತಿಯಿಂದ. ಅದು ತಮಿಳುನಾಡಿನ ದೇವಸ್ಥಾನಗಳು, ಕಡಲ ತೀರಗಳು ವೀಕ್ಷಣೆಗೆ. ಅದು ೬ದಿನಗಳ ಪ್ರವಾಸವಾಗಿತ್ತು. ಮೊದಲ ದಿನದ ರಾತ್ರಿಯೇ ಭರ್ಜರಿ ಡ್ಯಾನ್ಸ್. ಟೂರ್ ಪ್ರಾರಂಭದ ದಿನವಾದ್ದರಿಂದ ಭರ್ಜರಿ ಡ್ಯಾನ್ಸ್ ಶಿಳ್ಳೆ, ಕೇಕೆ. ಕನ್ನಡ ಸೇರಿದಂತೆ ತೆಲುಗು ಹಿಂದಿ ಡಿಜೆ ಹಾಡುಗಳಿಗೆ ತಕ್ಕಂತೆ ಡ್ಯಾನ್ಸ್. ಬಸ್ಸ್‌ನಲ್ಲಿದ್ದ ೫೦ ಯುವಕರ ಪೈಕಿ ಸುಮಾರು ೨೦ಜನ ಡ್ಯಾನ್ಸ್ ಮಾಡಿದ್ದೆ ಮಾಡಿದ್ದು, ಉಳಿದವರೆಲ್ಲಾ ಇವರಿಗೆ ಸಪೋಟ್ ಕೊಡುವುದು. ರಾತ್ರಿಯೆಲ್ಲಾ ಕುಣಿದು ಕುಪ್ಪಳಿಸಿ ನಿದ್ರೆಗೆ ಜಾರಿದೆವು, ಬೆಳಗ್ಗೆ ಎದ್ದು ನೋಡಿದಾಗ, ಮೋಡಕವಿದ ವಾತಾವರಣ. ಮುಂಜಾನೆ ಮಂಜು, ಗಣಪತಿ ಸ್ತೋತ್ರ, ಇದನ್ನೆಲ್ಲಾ ನೋಡಿದ ನಮಗೆ ಯಾವ ಪ್ಲೇಸ್ ಇದು ಎಂದು ಆಶ್ಚರ್ಯವಾಯಿತು. ನಂತರ ಪ್ರೆಶ್ ಆಗಿ ದೇವಸ್ಥಾನಕ್ಕೆ ತೆರಳಿದಾಗ ತಿಳಿಯಿತು ಇದು ಆಂಧ್ರ ಪ್ರದೇಶದ ಶ್ರೀ ವರಸಿದ್ದಿ ವಿನಾಯಕನ ದೇವಸ್ಥಾನ ಕಾಣಿಪಾಕಂ ಎಂದು. ನಂತರ ವಿಘ್ನೇಶ್ವರನ ದರ್ಶನ ಪಡೆದು, ಅಲ್ಲಿಯೇ ಬೆಳಗಿನ ಉಪಹಾರ ಸೇವಿಸಿದೆವು. ಸ್ವಲ್ಪ ಮೋಜು, ಮಸ್ತಿ, ಗೆಳೆಯರ ಜೋತೆ ಸೆಲ್ಪಿಗಳು, ಅಲ್ಲಲ್ಲಿ ತರಲೆ ತಮಾಷೆ ಮಾಡುತ್ತ ಮುಂದೆ ಸಾಗಿದೆವೂ.

ತಮಿಳುನಾಡಿನ ಅತ್ಯದ್ಭುತವಾದ ಗೋಲ್ಡನ್ ಟೆಂಪಲ್ ನೋಡಲು ಸರಿ ಸುಮಾರು ಮೂರು ಕಿಲೋಮೀಟರ್‌ಗಿಂತ ಹೆಚ್ಚಾಗಿ ನಡೆದುಕೊಂಡು ಹೋದೆವು. ಅಲ್ಲಿ ಮೊಬೈಲ್ ಮತ್ತು ಕ್ಯಾಮೆರಾಗಳಿಗೆ ಅನುಮತಿ ಇರಲಿಲ್ಲವಾದ್ದರಿಂದ ಪೋಟೊಗಳೆಲ್ಲಾ ಮಿಸ್. ಬಂಗಾರದ ಗುಡಿಯಲ್ಲಿ ನಾರಾಯಣಿ ದೇವಿ ದರ್ಶನ ಮುಗಿದ ನಂತರ ಮಧ್ಯಾಹ್ನದ ಭೋಜನ ಮುಗಿಸಿಕೊಂಡು ಪ್ರಯಾಣ ಮುಂದುವರಿಸಿದೆವು. ಪ್ರಯಾಣಿಸುತ್ತಿರುವ ಬಸ್‌ನಲ್ಲಿ ೬ ಸ್ಪೀಕರ್‌ಗಳಿದ್ದು ಅದರಿಂದ ಮೂಡಿಬರುವ ಸಂಗೀತಕ್ಕೆ ಯುವಕರ ಕುಣಿತ, ಕೇಕೆ, ಸಂತೋಷಕ್ಕೆ ಪಾರವೇ ಇರಲಿಲ್ಲ. ತುಂಬಾ ಸಂಭ್ರಮದಿಂದ ಪ್ರಯಾಣಿಸುತ್ತಿದ್ದೆವು. ಸುಮಾರು ರಾತ್ರಿ ೧೧ ಗಂಟೆಗೆ ಕುಂಬಕೋಣಂ ತಲುಪಿದೆವು. ರಾತ್ರಿಯ ಭೋಜನ ಮುಗಿಸಿಕೊಂಡು ವಿದ್ಯಾರ್ಥಿಗಳ ರಾತ್ರಿಯಾ ಚಳಿಗೆ ಅಲ್ಲಲ್ಲಿ ಮುದುಡಿ ಕುಳಿತಿರುವ ದೃಶ್ಯ ಕಂಡುಬಂದಿತು. ಇನ್ನುಳಿದ ಗೆಳೆಯರು ಮೋಜು, ಮಸ್ತಿ, ಕುಣಿತಗಳಿಂದ ಸಂಭ್ರಮಿಸುತ್ತಿದ್ದರು. ಹಾಗೆ ಹೀಗೆ ಮೊದಲ ದಿನದ ಪ್ರಯಾಣ ಮುಗಿಸಿ ಅಲ್ಲೇ ವಿಶ್ರಾಂತಿ ತೆಗೆದುಕೊಂಡೆವು. ಬೆಳಿಗ್ಗೆ ಸರಿಸುಮಾರು ೬ ಗಂಟೆಗೆ ಏದ್ದು ಮುಂಜಾನೆಯಾ ಸ್ವಚ್ಛಂದ ವಾತಾವರಣ, ಹಕ್ಕಿಗಳ ಚಿಲಿಪಿಲಿ, ಎಲೆಯ ಮೇಲೆ ಇಬ್ಬನಿಗಳ ಸಾಲು, ಮೈಮುದುಡಿಕೊಳ್ಳುವ ಚಳಿಯಲ್ಲಿ ಕೈ ಉಜ್ಜುತ್ತಾ. ಅದರ ಬಿಸಿ ಅನುಭವಿಸುತ್ತಾ ಆ ದಿನದ ಸ್ನಾನ ಇತ್ಯಾದಿ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿಕೊಂಡು ತದನಂತರ ತಿರುವಣಮಲೈ ರಾಜ್ ಗೋಪುರ ವೀಕ್ಷಿಸಿದೆವು. ಈ ರಾಜ್ ಗೋಪುರವನ್ನು ವೀಕ್ಷಿಸಿದ ನಾವೆಲ್ಲರು ಒಮ್ಮೆ ಆಶ್ಚರ್ಯ! ಚಕಿತರಾದೆವು. ಏಕೆಂದರೆ ಅಷ್ಟು ಬೃಹದಾಕಾರವಾಗಿತ್ತು ಆ ಗೋಪುರ. ಜೊತೆಗೆ ವಿಶೇಷ ಕೆತ್ತನೆ, ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ಇದು ಅಣ್ಣಾಮಲೈ ದೇವಸ್ಥಾನವೆಂದೇ ಖ್ಯಾತಿ ಪಡೆದಿದೆ. ಇಲ್ಲಿಯೇ ಎಲ್ಲರೂ ಸೇರಿ ಗ್ರೂಪ್ ಪೋಟೊ ಒಂದನು ತೆಗೆದೆ. ಸಂಜೆ ಕುಂಬಕೋಣಂ ದೇವಸ್ಥಾನಕ್ಕೆ ಭೇಟಿ ನೀಡಿ ಕುಂಬೇಶ್ವರ ಹಾಗೂ ಶಿವನ ದರ್ಶನ ಮಾಡಿಕೊಂಡು ಮತ್ತೆ ಪ್ರಯಾಣ ಮುಂದುವರಿಸಿದೆವು.

ಎರಡನೇ ದಿನ ಮಧ್ಯಾಹ್ನ ತಂಜಾವೂರಿನ ಬೃಹದೇಶ್ವರ ದೇವಾಲಯ ವೀಕ್ಷಿಸಿದೆವು. ದೇವಾಲಯದಲ್ಲಿ ಫಾರಿನ್ ಗರ್ಲ್ ಹುಂಡಿಗೆ ೫೦೦ ರೂ ನೋಟು ಹಾಕಿದ್ದು ನೋಡಿ ಕೃಷ್ಣ ಮಾಡಿದ ಕಾಮಿಡಿ ಎಂದೆದಿಗೂ ಮರೆಯಲು ಸಾಧ್ಯವಿಲ್ಲ. ಫ್ರಾನ್ಸ್ ದೇಶದ ಜೆಸ್ಸಿ ಅವರ ಕುಟುಂಬದ ಜೊತೆ ಅರ್ಧಂಬರ್ಧ ಬರುವ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಾ, ಕಾಮಿಡಿ ಮಾಡುತ್ತಾ, ಸೆಲ್ಫಿ ತೆಗೆದುಕೊಳ್ಳುತ್ತಾ ಎಂಜಾಯ್ ಮಾಡಿದೆವು. ಮುಂದವರೆದ ಜರ್ನಿ ಮಧುರೈಗೆ ತಲುಪಿತು. ಮಧುರ ಮೀನಾಕ್ಷಿ ತಾಯಿಯ ದರ್ಶನ ಪಡೆದೆವು. ಉದ್ದುದ್ದ ಕ್ಯೂಗಳಲ್ಲಿ ನಿಂತು ನಿಂತು ಕಾಲು ತುಂಬ ನೋವಾಗಿದ್ದವು. ಮಧುರೈ ನಲ್ಲಿ ಶಾಪಿಂಗ್ ನಿಜಕ್ಕೂ ಅದ್ಭುತ ಏಕೆಂದರೆ ಚೀಪ್ ಅಂಡ್ ಬೆಸ್ಟ್. ಹೌದು, ಎಲ್ಲರು ಇಲ್ಲಿಯೇ ಒಂದು ಗಂಟೆಗಳ ಕಾಲ ಶಾಂಪಿಂಗ್ ಮಾಡಿದ್ದು.

ನಮಗೆಲ್ಲಾ ತಮಿಳು ಬರಲ್ಲ, ಅವರಿಗೆ ಕನ್ನಡ ಬರಲ್ಲ. ಫುಲ್ ಕನ್‌ಫ್ಯೂಸ್, ನಕ್ಕು ನಕ್ಕು ಕೆನ್ನೆಯೆಲ್ಲಾ ನೋವಾಗಿಬಿಟ್ಟಿತ್ತು. ತಮಿಳಿನಲ್ಲಿ ಪತ್ತು ರೂಪಾಯಿ ಅಂದರೆ ನಾವು ಅರ್ಥಮಾಡಿಕೊಂಡಿದ್ದು ಒಂದು ರೂಪಾಯಿ ಎಂದು, ಆದರೆ ಅದರ ಅರ್ಥ ಹತ್ತು ರೂಪಾಯಿ. ಎಲ್ಲರು ಮೂಕಭಾಷೆ ಕೈಸನ್ನೆಯಿಂದಲೇ ಮಾತನಾಡಿ ಅರ್ಥೈಸಿಕೊಳ್ಳುವ ಪರಿಸ್ಥಿತಿಯಾಗಿತ್ತು. ಆದರೂ ಅದನ್ನು ನಾವು ಸಂತೋಷವಾಗಿಯೇ ಅನುಭವಿಸಿದೆವು. ಬಸ್ ಪಾರ್ಕಿಂಗ್ ಪ್ಲೇಸ್‌ಯಿಂದ ದೇವಸ್ಥಾನದ ವರೆಗೂ ಹೋಗಿ ಬರುವಾಗ ಗುಂಡು ಬಾಸ್ ಆಟೋ ಡ್ರೈವರ್ ಆಟೋ ಓಡಿಸಿದ ಪರಿ ನಮಗೆಲ್ಲಾ ಮನ ಮೆಚ್ಚಿತ್ತು. ಸಂದು ಸಂದುಗಳಲ್ಲಿಯೇ ಗಲ್ಲಿಗಳಲ್ಲಿಯೇ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಹಾಗೆ ಸಿನೇಮಾ ಡೈಲಾಗ್ ಹೇಳುತ್ತಾ ಸಖತ್‌ಆಗಿ ರಂಜಿಸಿದರು. ನಾವೆಲ್ಲ ಕನ್ನಡದಲ್ಲಿ ಕಾಮಿಡಿ ಮಾಡಿದರೆ ಅವರು ತಮಿಳು ಭಾಷೆಯಲ್ಲಿಯೇ ಸಖತ್ ಕಾಮಿಡಿ ಮಾಡುತ್ತಾ ನಕ್ಕು ನಗಿಸಿದರು.
ರಾತ್ರಿ ಅಲ್ಲಿಯೇ ಊಟ ಮುಗಿಸಿಕೊಂಡು ಎಲ್ಲರು ಕೂತು ಕಾಮಿಡಿ, ಡೈಲಾಗ್ಸ್, ಜಾನಪದ ಗೀತೆಗಳಾಡುತ್ತಾ ಪಯಣ ಮುಂದುವರೆಸಿದೆವು. ರಾತ್ರಿ ಕುಣಿದು ಸುಸ್ತಾಗಿ ಬಸ್‌ನಲ್ಲಿಯೇ ಮಲಗಿದೆವು. ಬೆಳಗ್ಗೆ ಎದ್ದು ಕಣ್ಬುಟ್ಟು ನೋಡಿದಾಗ ಸಮುದ್ರ ಕಣ್ಣೆದುರಿಗಿದೆ. ಆ ಕ್ಷಣವೇ ಬಸ್‌ನಿಂದ ಕೆಳಗಿಳಿದು ಕುಣಿದು ಕುಪ್ಪಳಿಸಿದೆವು. ಕನ್ಯಾಕುಮಾರಿ ಕಡಲನ್ನು ಸೀಳಿ ಹೊರಬರುತ್ತಿರುವ ಸೂರ್ಯನ ಅಂದ ನೋಡಿ ಮೂಕವಿಸ್ಮಿಕರಾದೆವು. ತಿಂಡಿ ತಿಂದು ಬೀಚ್‌ನಲ್ಲಿ ಸ್ವಲ್ಪ ಮುಂದೆ ಇರುವ ಸ್ವಾಮಿ ವಿವೇಕಾನಂದರ ವಿಗ್ರಹ ನೋಡಲು ಬೋಟ್ ಪ್ರವಾಸ ಮಡಬೇಕಿತ್ತು. ನೂರಾರು ಜನರು ಸಾಲು ನಿಂತಿದ್ದರು. ಆದ್ದರಿಂದ ನಾವೆಲ್ಲರು ನಿಂತಲ್ಲೆ ಜಾನಪದ ಗೀತೆ ಸೇರಿದಂತೆ ಸಿನೇಮಾ ಹಾಡುಗಳನ್ನು ಚಪ್ಪಾಳೆ ಬಾರಿಸುತ್ತಾ ಹಾಡಲು ಶುರುಮಾಡಿದೆವು. ಕನ್ನಡದಲ್ಲಿಯೇ ಹಾಡಿದೆವು. ಸುತ್ತಲೂ ಇರುವ ನೂರಾರು ಜನರು, ವಿದೇಶಿಯರು ನಮ್ಮನ್ನೆ ನೋಡುತ್ತಾ ವೀಡಿಯೊ ಮಾಡುತ್ತಾ ಸೂಪರ್ ಸೂಪರ್ ಎಂದು ಕಾಮೆಂಟ್ ಮಾಡುತ್ತಿದ್ದರು. ಕೊನೆಗೆ ಬೋಟ್ ಹತ್ತಿದೆವು. ಎಂತಹ ಅದ್ಭುತ ಅನುಭವವದು. ಸುತ್ತಲೂ ನೀರು, ಬೋಟ್‌ನಲ್ಲಿ ನಾವು. ಸಮುದ್ರದಲ್ಲಿ ತೇಲುವ ಅನುಭವ. ನಿಜಕ್ಕೂ ಇದು ವರ್ಣನಾತೀತ. ಇದು ಭಾರತದ ತುತ್ತತುದಿಯಿದು. ಬಾರ್ಡರ್‌ನಲ್ಲಿ ನಿಂತು ಇಡೀ ರಾಷ್ಟ್ರವನ್ನೇ ಹಾಗೂ ಇಡೀ ಸಮುದ್ರವನ್ನು ನೋಡಬೇಕೆನ್ನುವ ಆಸೆ ಈಡೇರಿತು. ಸ್ವಾಮಿ ವಿವೇಕಾನಂದ ವಿಗ್ರಹ ವೀಕ್ಷಣೆ ಮಾಡಿ ಚಂದಚಂದದ ಪೋಟೊ ತೆಗೆದುಕೊಂಡೆವು.

ಬರುವಾಗ ಮತ್ತೆ ಸಾಲು ನಿಂತೆವು. ನಮ್ಮ ಅಭಿ ಬಾಸ್ ಅಲ್ಲಿರುವ ಒಂದು ಫಾರಿನ್ ಹುಡುಗಿಯನ್ನು ನೋಡುತ್ತಾ ಡ್ರಾಮ ತಿಪ್ಪೇಶನಿಗೆ ನೋಡೊ ನಿಮ್ಮತ್ತೆ ಬಂದವ್ಳೆ ಎಂದು ಸಖತ್ ಕಾಮಿಡಿ ಮಾಡುತ್ತಾ ಎಂಜಾಯ್ ಮಾಡಿದೆವು. ಸಂಜೆ ತಿರುಚಂದೂರ್ ಸುಭ್ರಮಣ್ಯಸ್ವಾಮಿ, ಶನ್‌ಮುಗರ್ ಸನ್ನತಿ, ದೇವಸೇನ ಅಂಬಳ್, ಶ್ರೀವಲ್ಲಿ ಅಂಬಳ್, ಸೂರ ಸಂಹಾರ ಮೂರ್ತಿ, ಶ್ರೀವಿನಾಯಕ ಇನ್ನು ಕೆಲ ದೇವಾಲಯಗಳ ವೀಕ್ಷಣೆ ಮಾಡಿ ಅಲ್ಲಿರುವ ಬೀಚ್‌ನಲ್ಲಿ ಸ್ವಿಮ್ ಮಾಡಿದೆವು. ಇಲ್ಲಿನ ಶಾಂಪಿಂಗ್ ನನಗೆ ಸ್ವಲ್ಪ ವಿವೇಷವೆ ಆಗಿತ್ತು ಏಕೆಂದರೆ ಲೇಡಿಸ್ ಬ್ಯಾಂಗಲ್ ಸ್ಟೋರ್‌ನಲ್ಲಿ ನೇಲ್ ಪಾಲಿಶ್ ನೋಡುತ್ತಿದ್ದೆ. ಆಗ ಆ ಶಾಪ್ ಹುಡುಗಿ ನನ್ನ ಹತ್ತಿರ ಬಂದು ಏನನ್ನೋ ತಮಿಳಿನಲ್ಲಿ ಹೇಳಿದಳು, ಅದೆಲ್ಲಾ ಅರ್ಥವಾಗದ ನಾನು ಟೆಲ್ ಮಿ ಕನ್ನಡ, ಇಂಗ್ಲೀಷ್, ತೆಲುಗು ಎಂದೆ. ಅದು ಆ ಹುಡುಗಿಗೆ ಅಲ್ಪಸ್ವಲ್ಪ ಅರ್ಥವಾಗಿ ದಿಸ್ ನೇಲ್ ಪಾಲಿಶ್ ಓನ್ಲಿ ಟೆನ್ ರೂಪೀಸ್ ಎಂದಳು. ನೋ ಶೈನಿಂಗ್ ದಿಸ್ ಎಂದೆ ನಾನು. ನೋ ನೋ ಎಂದಳು ಅವಳು. ಶೋ ಮೀ ಎಂದೆ ನಾನು, ಆಗವಳು ಅದನ್ನು ಓಪನ್ ಮಾಡಿ ನನ್ನ ಎಡಗೈನ ರಿಂಗ್ ಫಿಂಗರ್‌ಗೆ ಹಚ್ಚಿ ತೋರಿಸಿಯೇ ಬಿಟ್ಟಳು. ಆಗ ನನ್ನ ಫ್ರಂಡ್ ೫೦೦ ನೋಟು ಕೊಟ್ಟ. ಏಕೆಂದರೆ ಒಂದು ಹುಡುಗಿಯಿಂದ ಕೈಗೆ ನೇಲ್ ಪಾಲಿಶ್ ಹಚ್ಚಿಸಿಕೊಳ್ಳುತ್ತೇನೆ ಎಂದು ಬೆಟ್ ಕಟ್ಟಿದ್ದೆ. ಮರುದಿನ ಬೆಳಗ್ಗೆ ರಾಮೇಶ್ವರಂನ ಜ್ಯೋತಿರ್‌ಲಿಂಗ ದರ್ಶನ ಪಡೆದೆವು. ಬೀಚ್ ನೋಡಿ ಖುಷಿ ಪಟ್ಟೆವು. ರಾಮೇಶ್ವರಂನಿಂದ ಶ್ರೀರಂಗೆ ತೆರಳುವ ಮಾರ್ಗದಲ್ಲಿ ಪಂಬನ್ ರೋಡ್ ಬ್ರಿಡ್ಜ್ ನೋಡಿ ಶಾಕ್ ಆದೆವು. ಏಕೆಂದರೆ ಅದು ಸು.೪ಕಿ.ಮೀ ಸಮುದ್ರದಲ್ಲಿರುವ ಬ್ರಿಡ್ಜ್ ಇದು. ರಮಣೀಯ, ಮನಮೋಹಕ ದೃಶ್ಯಗಳನ್ನು ಕಣ್ತುಂಬಿಕೊಂಡ ನಾವೇ ಧನ್ಯರು ಎಂದುಕೊಂಡೆವು. ಕೃಷ್ಣ, ಗುರು, ಅಭಿ ಅಣ್ಣ ಇತರರ ಜೊತೆಗೂಡಿ ಭರ್ಜರಿ ಸೆಲ್ಫಿ ತೆಗೆದುಕೊಂಡೆವು. ಸಂಜೆ ೬ಕ್ಕೆ ಶ್ರೀರಂಗಂನ ರಂಗನಾಥ ಸ್ವಾಮಿ ದೇವಾಲಯ ವೀಕ್ಷಿಸಿದೆವು. ನಂತರ ಅಲ್ಲಿಯೇ ಅಡುಗೆ ಮಾಡಿದೆವು. ಅಡುಗೆ ಭಟ್ಟ ಹೇಳಿದಂತೆ ನಾವೆಲ್ಲಾ ತರಕಾರಿ ಕಟ್ ಮಾಡಿ, ನೀರು ತಂದು ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದೆವು. ಊಟ ಮುಗಿಸಿ ಬಸ್ ಹತ್ತಿದೆವು. ಬೆಣ್ಣೆ, ರಾಮಾಂಜಿನಿ, ಹರೀಶ್, ಪ್ರಭು, ಗುರು, ಪ್ರಕಾಶ್ ಕೋರಿ, ಸಿದ್ದಪ್ಪ, ಡ್ರಾಮ ತಿಪ್ಪೇಶ್, ಕಾಮಿಡಿ ಕೃಷ್ಣ ಇವರೆಲ್ಲರ ಕಾಮಿಡಿ, ನೃತ್ಯ, ಬ್ರೇಕ್ ಡ್ಯಾನ್ಸ್ ಎಲ್ಲರಿಗೂ ಸ್ವರ್ಗದ ದರ್ಶನ ಮಾಡಿಸಿತ್ತು.

ಪ್ರವಾಸದ ಐದನೇ ದಿನ ಬೆಳ್ಳಂಬೆಳಗ್ಗೆ ಏಕನಾಥೇಶ್ವರ ದೇವಾಲಯ ಶ್ರೀ ವಿಷ್ಣು ಸ್ವಾಮಿ, ವಿಷ್ಣು ಕಂಚಿ ಬಂಗಾರದ ಬಲ್ಲಿ ಮುಟ್ಟಿದ್ದು, ಕಂಚಿ ಕಾಮಾಕ್ಷಿಯ ದರ್ಶನ ಪಡೆದು ಪುನೀತರಾದೆವು. ಮಧ್ಯಾಹ್ನ ಚೆನೈ ತಲುಪಿದೆವು. ಬೆಳಗ್ಗೆಯಿಂದ ಟಿಫನ್ ಸಹ ಮಾಡಿರದ ಕಾರಣ ಮೊದಲು ಎಲ್ಲಿಯಾದರು ಊಟ ಮಾಡಿ ನಂತರ ಬೀಚ್‌ಗೆ ತೆರಳಬೇಕೆಂದು ಡಿಸೈಡ್ ಮಾಡಿದೆವು. ಚೆನ್ನೈ ಮಹಾನಗರದಲ್ಲಿ ದಾರಕಾಣದಾದೆವು. ಮ್ಯಾಕ್ ಸಹ ಕೆಲಸಕ್ಕೆ ಬಾರದಾಯಿತು. ಅಡುಗೆ ಮಾಡಲು ಸೂಕ್ತ ಸ್ಥಳ ಸಿಗಲೇ ಇಲ್ಲ. ಕೊನೆಗೆ ಗೈಡ್ ಸಹಾಯ ಪಡೆದೆವು. ಆ ಗೈಡ್ ಇಡೀ ನಗರವನ್ನೇ ಸುತ್ತಿಸಿ, ಕೊನೆಗೊಂದು ಸ್ಥಳ ತೋರಿಸಿದ. ಅಲ್ಲಿಯೇ ಅಡುಗೆ ತಯಾರು ಮಾಡಿ ಊಟ ಮುಗಿಸಿದೆವು. ನಂತರ ಮರೀನಾ ಬೀಚ್‌ನಲ್ಲಿನಲ್ಲಿ ಕುಣಿದು ಕುಪ್ಪಳಿಸಿದೆವು. ಬೃಹತ್ ಅಲೆಗಳಿಗೆ ಎದೆಯೊಡ್ಡಲು ಧೈರ್ಯ ಸಾಲದಾಗಿತ್ತು. ಪ್ರಭು ಹಾಗೂ ಗುರು ಇಬ್ಬರು ರಿಂಗ್ ಆಟ ಆಡಿ ಕೊನೆಗೆ ಒಂದೊಂದು ಗಿಫ್ಟ್ ಗೆದ್ದೆವು. ನಂತರ ತಮಿಳುನಾಡಿನ ಅಮ್ಮ ಜಯಲಲಿತ, ಮಾಜಿ ಸಿಎಂ ಹಾಗೂ ತಮಿಳುನಾಡಿನ ತಲೈವ ಕರುಣಾನಿಧಿ, ಖ್ಯಾತ ನಟ ಹಾಗೂ ರಾಜಕಾರಣಿಯಾದ ಎಂ ಜಿ ರಾಮಚಂದ್ರರಾವ್ ಸಮಾಧಿ ವೀಕ್ಷಿಸಿ ಫೋಟೊ ತೆಗೆದುಕೊಂಡೆವು. ನಂತರ ಅಲ್ಲಿಂದ ವಿಶ್ವದ ಶ್ರೀಮಂತ ದೇವರುಗಳಲ್ಲಿ ಒಂದಾದ ಆಂಧ್ರಪ್ರದೇಶದ ತಿರುಪತಿಗೆ ಪಯಣ ಪ್ರಾರಂಭಿಸಿದೆವು.

ಮಧ್ಯರಾತ್ರಿ ೧೨ಕ್ಕೆ ತಿರುಪತಿ ತಲುಪಿ ೧೨:೩೦ಕ್ಕೆ ಕೆಳಗಿನ ಗೋಪುರದ ಬಳಿ ತೆಂಗಿನಕಾಯಿ ಒಡೆದು ಬೆಟ್ಟ ಹತ್ತಲು ಶುರು ಮಾಡಿದೆವು. ಅದು ಕೂಡ ಕಾಲು ನಡಿಗೆಯಲ್ಲಿಯೇ. ಪ್ರಾರಂಭದಲ್ಲಿ ಎಲ್ಲರು ಜೋಶ್‌ನಲ್ಲಿ ಓಡುತ್ತಾ ಹತ್ತಿದರು. ಆದರೆ ಸಮಯ ಕಳೆದಂತೆ ಕಾಲು ನೋವು ಶುರುವಾಯಿತು. ಕುಳಿತುಕೊಳ್ಳಲು ಶುರುಮಾಡಿದೆವು. ಮತ್ತೆ ನಿಧಾನಗತಿಯಲ್ಲಿ ಹತ್ತಿದೆವು. ಹತ್ತುವಾಗ ಶ್ರೀವೆಂಕಟೇಶ್ವರ ಸ್ವಾಮಿಯ ಘೋಷಣೆಗಳನ್ನು ಕೂಗುತ್ತಾ ಹತ್ತಿದೆವು ಒಟ್ಟು ೩೫೫೦ ಮೆಟ್ಟಿಲುಗಳು, ೯ಕಿ.ಮೀ ನಡಿಗೆ. ತುಂಬಾ ಸುಸ್ತಾಯ್ತು ಅಷ್ಟೇ ಎಂಜಾಯ್‌ಮೆಂಟ್ ಸಹ ಇತ್ತು. . ಅಂತೂ ಇಂತೂ ಬೆಳಗ್ಗೆ ೪ಕ್ಕೆ ದೇವಸ್ಥಾನ ತಲುಪಿದೆವು. ಬೆಳಗ್ಗೆ ೮ಗಂಟೆಗೆ ದರ್ಶನವಿತ್ತು. ಫ್ರೆಶ್ ಆಗಿ ಸ್ಪಲ್ಪ ರೆಸ್ಟ್ ಮಾಡಿ ವೆಂಕಟೇಶ್ವರ ಸ್ವಾಮಿ ದೇವರ ದರ್ಶನಕ್ಕೆ ತೆರಳಿದೆವು. ಕಾಲು ನಡಿಗೆಯಲ್ಲಿಯೇ ತಿಮ್ಮಪ್ಪನ ದರ್ಶನ ಕಂಡಿದ್ದ ನಮಗೆಲ್ಲಾ ತಿಮ್ಮಪ್ಪನ ದರ್ಶನಕ್ಕೆ ಸಾಲು ನಿಂತಾಗ ಸಹ ವೆಂಕಟೇಶ್ವರನ ದರ್ಶನವಾಯಿತು. ಅಂತೂ ಇಂತು ಕೊನೆಗೆ ದರ್ಶನ ಪಡೆದು ಪುನೀತರಾದೆವು. ತಿಮ್ಮಪ್ಪನ ಲಾಡು ಪ್ರಸಾದ ತಿಂದು, ನಂತರ ಊಟ ಮಾಡಿ ಸ್ವಲ್ಪ ರೆಸ್ಟ್ ಮಾಡಿ ನಂತರ ಪೋಟೊ ಕಾರ್ಯಕ್ರಮ ಸೇರಿದಂತೆ ಶಾಪಿಂಗ್ ಕೆಲಸವೆಲ್ಲಾ ಮುಗಿಯಿತು.
ಟಿ.ಟಿ.ಡಿ ಅಂದರೆ ತಿರುಪತಿ ತಿರುಮಲ ದೇವಸ್ಥಾನ. ನಿಜಕ್ಕೂ ಅದ್ಭುತ ಎಂದೇ ಹೇಳಬೇಕು. ಏಕೆಂದರೆ ಏಳು ಬೆಟ್ಟಗಳ ಮಧ್ಯದಲ್ಲಿ ದೇವರು ನೆಲಸಿರುವುದು. ಇಲ್ಲಿ ಎಲ್ಲವು ಉಚಿತ ಉಚಿತ. ಊಟ, ರೂಂ, ಲಗೇಜ್ ಲಾಕರ್, ಶೌಚಾಲಯ, ಪ್ರಸಾದ, ದರ್ಶನ ಎಲ್ಲವೂ ಉಚಿತ. ಆದರೂ ಸಹ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ. ನಿಜಕ್ಕೂ ಅದ್ಭುತ. ವೆಂಕಟೇಶ್ವರ ಸ್ವಾಮಿಯ ದೇವಸ್ಥಾನ ಎಲ್ಲ ಮುಗಿಸಿಕೊಂಡು ಕೊನೆಗೆ ಇಳಿಯುವಾಗಲೂ ಸಹ ಬೆಟ್ಟ ಇಳಿದೆವು. ಎಲ್ಲರಿಗೂ ತುಂಬಾ ಸುಸ್ತಾಗಿದ್ದರಿಂದ ಬಸ್ ಹತ್ತಿದ್ದೆ ತಡ ನಿದ್ರೆಗೆ ಜಾರಿದೆವು. ರಾತ್ರಿ ಕದರಿಯಲ್ಲಿ ಊಟ ಮುಗಿಸಿದಾಗ ಮಲಗಿದಾಗ ಬೆಳಗ್ಗೆ ಕಣ್ಬಿಟ್ಟು ನೋಡಿದರೆ ಬಳ್ಳಾರಿಯಲ್ಲಿದ್ದೆವು.
ಒಟ್ಟಾರೆ ಈ ಪ್ರವಾಸದಲ್ಲಿ ದೇವರ ದರ್ಶನ, ಬೀಚ್‌ಗಳಲ್ಲಿ ಮೋಜು ಮಸ್ತಿ, ಸಖತ್ ಎಂಜಾಯ್‌ಮೆಂಟ್, ಅನುಭವ ಹೆಚ್ಚಾಯಿತು. ನನ್ನ ಜೀವನದಲ್ಲಿ ಮರೆಯಲಾರದ ಪ್ರವಾಸವಿದು.

 

 

 

 

 

 

– ಪ್ರಭಾಕರ.ಪಿ

9980796846