ಶಂಕರಘಟ್ಟ :ದೇಶದಲ್ಲಿ ಹಲವು ವರ್ಷಗಳಿಂದ ಶೋಷಣೆಗೆ ಒಳಗಾದವರಿಗೆ ಹಾಗೂ ನೊಂದವರ ಬಾಳಿಗೆ ಸಾಂತ್ವನ ಹೇಳಿದ ದಿವ್ಯಚೇತನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಶಿವಮೊಗ್ಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಹೆಚ್. ರಾಚಪ್ಪ ಅಭಿಪ್ರಾಯಪಟ್ಟರು.
ಅವರು ಇಂದು ಕುವೆಂಪು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ಘಟಕ ಪ್ರೊ.ಎಸ್.ಪಿ.ಹಿರೇಮಠ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತರತ್ನ ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ರವರ ೬೦ನೇ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಪ್ರೊ.ಹೆಚ್.ರಾಚಪ್ಪ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಪ್ರಪಂಚ ಇಂದು ಭಯೋತ್ಪಾದನೆಯಿಂದ ನರಳುತ್ತಿದೆ. ಕೋಮು ದ್ವೇಷದ ದಳ್ಳುರಿಯಿಂದ ಹೊತ್ತಿಹುರಿಯುತ್ತಿದೆ. ಮೂಡನಂಬಿಕೆಗಳು ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ನೊಂದವರಿಗೆ ಸಾಂತ್ವನ ಹೇಳುವುದು ಅಗತ್ಯವಾಗಿದೆ. ಜನರಿಗೆ ಇದು ಯಾವುದು ಬೇಡವಾಗಿದೆ. ಸಹಬಾಳ್ವೆ ಹಾಗೂ ಸಹಮತದ ಬದುಕು ಬೇಕಾಗಿದೆ ಇಂತಹ ಸಂದರ್ಭದಲ್ಲಿ ಅಂಬೇಡ್ಕರ್‌ರವರ ವಿಚಾರಗಳು ಇಂದಿನ ದಿನಮಾನಗಳಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ಸಾವಿರಾರು ವರ್ಷಗಳ ಕಾಲ ಜಡವಾಗಿದ್ದ ಸಾಮಾಜಿಕ ವ್ಯವಸ್ಥೆಗೆ ಚಿಕಿತ್ಸೆ ನೀಡಿದವರು ಬುದ್ಧ. ಬೌದ್ಧ ಧರ್ಮವನ್ನು ಮರಳಿ ತಾಯ್ನಾಡಿಗೆ ತಂದವರು ಅಂಬೇಡ್ಕರ್. ಜಗತ್ತಿನ ೨೦ ರಾಷ್ಟ್ರಗಳಲ್ಲಿ ಬೌದ್ಧ ಧರ್ಮವಿದೆ ಎಂದ ಪ್ರೊ.ರಾಚಪ್ಪನವರು ಬುದ್ಧ ಮಾರ್ಗದಾತನೆ ಹೊರತು, ಮುಕ್ತಿದಾತನಲ್ಲ. ಸಂತೋಷವೇ ಸ್ವರ್ಗ, ಭಯವೇ ನರಕವೇ ವಿನ: ಸ್ವರ್ಗ-ನರಕಗಳು ಭೂಮಿಯಲ್ಲಿ ಇಲ್ಲ. ಒಳ್ಳೆಯದನ್ನು ಮಾಡಿದ ವ್ಯಕ್ತಿ ದೇವರಾಗುತ್ತಾನೆ. ತಿಳುವಳಿಕೆಯಿಂದ ಪ್ರತಿಯೊಬ್ಬರು ಬುದ್ಧರಾಗಬಹುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಜೆ.ಸೋಮಶೇಖರ್ ರವರು ಬಾಬಾ ಸಾಹೇಬರು ಜ್ಞಾನದ ಚಿಹ್ನೆ. ನಾವು ನಮ್ಮ ಶ್ರಮದ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ಶ್ರಮ ಸಂಸ್ಕೃತಿಯ ವಾರಸುದಾರರೇ ತಳಸಮುದಾಯದವರು. ಅವರ ಶ್ರಮದಿಂದಲೇ ಇಂದು ಪ್ರಜಾಪ್ರಭುತ್ವ ಸುಭದ್ರ ತಳಹದಿಯ ಮೇಲೆ ನಿಂತಿದೆ. ಅಂತಹ ಪ್ರಜಾತಂತ್ರ ವ್ಯವಸ್ಥೆಯ ಬಲಪಡಿಸುವಲ್ಲಿ ಅಂಬೇಡ್ಕರ್‌ರವರ   ಪರಿಕಲ್ಪನೆಯೇ ಮುಖ್ಯಕಾರಣ. ಅವರೊಬ್ಬ ಹುಟ್ಟು ಪ್ರಜಾಪ್ರುಭುತ್ವವಾದಿ. ಸತ್ಯದ ಚರಿತ್ರೆಯನ್ನು ಬರೆದವರು ಅಂಬೇಡ್ಕರ್ ಅವರ ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲ ಸಾಗಬೇಕಿದೆ ಎಂದರು.
ಪ್ರಾರಂಭದಲ್ಲಿ ಘಟಕದ ಸಂಚಾಲಕರಾದ ಡಾ.ಬಿ.ತಿಪ್ಪೇಸ್ವಾಮಿ ಸ್ವಾಗತಿಸಿದರೆ, ಡಾ.ನೆಲ್ಲಿಕಟ್ಟೆ ಸಿದ್ಧೇಶ್ ವಂದಿಸಿದರು. ನವೀನ್ ಮಂಡಗದ್ದೆ ಕಾಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಮೈಸೂರಿನ ಪರಿವರ್ತನ ತಂಡದಿಂದ ’ಬುದ್ಧ ಅಂಬೇಡ್ಕರ್ – ಕುರಿತು ಗೀತ ಗಾಯನ’ ಕಾಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮೊದಲು ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು, ಅಧ್ಯಾಪಕ, ಅಧ್ಯಾಪಕೇತರ ನೌಕರರು, ವಿದ್ಯಾರ್ಥಿಗಳು ಡಾ.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಜ್ಯೋತಿನಮನ ಸಲ್ಲಿಸಿದರು.