“ಜಾತಿ ಮುಖ್ಯವಲ್ಲ. ನೀತಿ ಮುಖ್ಯ. ಡಾ.ಬಿ.ಆರ್.ಅಂಬೇಡ್ಕರ್ ಇಡೀ ದೇಶ ಸಾಮರಸ್ಯದಿಂದ ಸಮೃದ್ಧಿಯಾಗಿರಬೇಕೆಂದು ಬಯಸಿದವರು. ಅವರ ಕಾಳಜಿಯನ್ನು ಅರ್ಥೈಸಿಕೊಂಡು ಬಾಳಿದಾಗ ನಮ್ಮ ಬಾಳು ಸಾರ್ಥಕವಾಗುತ್ತದೆ. ನೀವು ಟೀಚರ್ ಇದಿರಿ, ಮಕ್ಕಳಿಗೆ ಬುದ್ಧ-ಬಸವಣ್ಣ-ಕನಕ-ಪುರಂದರ-ರಾಮಕೃಷ್ಣಪರಮಹಂಸ-ಸ್ವಾಮಿವಿವೇಕಾನಂದ, ಗಾಂಧಿ-ಅಂಬೇಡ್ಕರ್, ಜನಪದರ-ತತ್ಪಪದಕಾರರ-ಸಾಹಿತಿಗಳ ಚಿಂತನೆಗಳನ್ನು ಮಕ್ಕಳ ಮನದಲ್ಲಿ ಬಿತ್ತಿ ಬೆಳೆಯಿರೆಂದು” ಎಂದು ಸಮಸ್ಯೆಗಳನ್ನೊತ್ತು ಬಂದವರಿಗೆ, ಪರಿಹಾರ ಸೂಚಿಸಿ ಕಳುಹಿಸುವ ಕುಲಪತಿಗಳಿಗೆ ಕೃತಜ್ಞತೆ ಸಲ್ಲಿಸಿದ ದೂರಶಿಕ್ಷಣದ ವಿದ್ಯಾರ್ಥಿಯೊಬ್ಬರು ಬಾಳಿದರೆ, ಹೀಗೆ ಬಾಳಬೇಕು ಸರ್. ಸೇವೆ ಸಲ್ಲಿಸಿದರೆ ಹೀಗೆ ಸೇವೆ ಮಾಡಬೇಕು ಎನ್ನುತ್ತಾರೆ. ಇಂಥ ಸಹಸ್ರಾರು ವಿದ್ಯಾರ್ಥಿಗಳಿಗೆ, ಸಹಸ್ರಾರು ಸ್ನೇಹಿತರಿಗೆ ನಗುನಗುತ್ತಲೇ ಬದುಕಿಗೆ ಸರಿದಾರಿ ತೋರಿಸುವ ಸನ್ಮಾರ್ಗದರ್ಶಕರು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅನನ್ಯ ಸೇವೆ ಸಲ್ಲಿಸಿರುವ ಪ್ರೊ.ಜೋಗನ್ ಶಂಕರ್ ಅವರು.

ಮೂಲತಃ ಅನುಭವ ರೂಪಿತ ಸಮಾಜಶಾಸ್ತ್ರಜ್ಞರು ಮತ್ತು ಸಮಾಜಸುಧಾರಕರಾದ ಜೋಗನ್ ಶಂಕರ್ ಅವರು ಸಮಾಜಮುಖಿ ಚಿಂತಕರು. ಜನಪರ ಕಾಳಜಿ, ಸಾಮಾಜಿಕನ್ಯಾಯ, ಸಮಾನತೆ, ಸರ್ವೋದಯದ ಆದಮ್ಯ ಕನಸ್ಸನ್ನೊತ್ತು ನನಸ್ಸಾಗಿಸುವ ಸೇವೆಯಲ್ಲಿ ನಿರತರಾಗಿ ಸಂಭ್ರಮಿಸಿದÀವರು. ಜಾಗತಿಕ ಮಟ್ಟದ ಸಾಮಾಜಿಕ ಚಿಂತಕರು, ಸಮಾಜಸುಧಾರಕರೆಂದೇ ಗುರುತಿಸಿಕೊಂಡಿರುವ ಜೋಗನ್ ಶಂಕರ್ ಅವರು ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ ಹದಲಗಿ ಗ್ರಾಮದಲ್ಲಿ 1954ರ ಮೇ5ರಂದು ಮಮತೆಯ ಮಾತೆ ರುಕಮ ಮಾತೆಯ ಮಡಿಲಲ್ಲಿ ಜನಿಸಿದವರು. ಬಡತನದ ಬಾಲ್ಯದೊಳಗೆ ಬೇಯುತ್ತಾ ಬೆಳೆದವರು.
“ಆಚಾರಕ್ಕೆ ಅರಸನಗು| ನೀತಿಗೆ ಪ್ರಭುವಾಗು|
ಮಾತಿನಲ್ಲಿ ಚೂಡಾಮಣಿಯಾಗು| ನನಕಂದ
ಜಗಕೆಲ್ಲ ಜ್ಯೋತಿಯಗು” ಎಂಬ ಜನಪದ ವಾಣಿಯಂತೆ ತನ್ನ ಮಗನಾಗಬೇಕೆಂದು ಬಯಸಿದ ರುಕಮ ತನ್ನ ಮಗನಿಗೆ ಹಾಲಿನೊಂದಿಗೆ ಪ್ರೀತಿ, ಕರುಣೆ, ನ್ಯಾಯ, ನೀತಿಯನ್ನು ಧಾರೆ ಎರೆದರು.
“ಆಡಿ ಬಾ ಎನ ಕಂದ| ಅಂಗಾಲ ತೊಳೆದೇನ
ತೆಂಗಿನ ತಿಳಿನೀರ ತಕ್ಕೊಂಡು| ನಿನ್ನ
ಬಂಗಾರ ಮೊರೆ ತೊಳೆದೆನಾ|’’ ಎಂಬ ಜನಪದ ವಾಣಿಯಂತೆ ಮಗ ಆಟವಾಡಲು ಮುಕ್ತ ಅವಕಾಶ ನೀಡುತ್ತಿದ್ದ ರುಕಮ ಅವರು ತನ್ನೊಡಲಿನ ಉಸಿರಾಗಿ, ಗುಟುಕು ಗುಟುಕು ನೀಡಿ ಸಾಕಿದರು. ಸಂಕಷ್ಟದಲ್ಲಿದವರಿಗೆ ಸಹಾಯ ಮಾಡುವ ಮಗನಾಗಬೇಕೆಂಬ ಹಂಬಲದ ತಾಯಿ ರುಕಮ ತಮ್ಮ ಕನಸ್ಸನ್ನು ನನಸ್ಸಾಗಿಸಿಕೊಂಡರು.

ಶ್ರೀಯುತರ ಬಾಲ್ಯದ ಹಸಿವಿನ ಪ್ರಸಂಗವೊಂದು ಹೀಗಿದೆ: “ಹಾಸ್ಟೆಲ್ ಮುಚ್ಚಿಬಿಟ್ಟಿದ್ದರು. ಮೂರು ದಿನಗಳ ಕಾಲ ನೀರು ಕುಡಿದುಕೊಂಡೇ ಬದುಕಿದ್ದೆ. ಕಣ್ಣು ಮಂಜಾಗುತ್ತಿದ್ದವು. ಎಲ್ಲೋ ತೇಲಿದಂತಹ ಅನುಭವ ಒಂದಾರೆ. ತುಂಬಾ ಹಸಿವಿನಿಂದ ಬಳಲುತ್ತಿದ್ದ ಸಂದರ್ಭ. ನನ್ನವ್ವ ಗಂಜಿ ಕಾಸಿದರು. ಇನ್ನೇನು ಕುಡಿಯಬೇಕು, ಮಳೆಗಾಳಿ ಪ್ರಾರಂಭವಾಯಿತು. ಮನೆಯ ಛಾವಣಿಯ ಕಸವೆಲ್ಲ ತಟ್ಟೆಯೊಳಗೆ ಬಿದ್ದುಬಿಡುತ್ತು” ಇಂಥ ಸಂದರ್ಭಗಳು ನನಗೆ ಸಹಜವಾಗಿದ್ದವು ಅಂತಹ ಹೇಳುವಾಗ ಕೊರಳುಬ್ಬಿಸಿಕೊಳ್ಳುವ ಜೋಗನ್ ಶಂಕರ್ ಅವರ ಬಾಲ್ಯದ ಬದುಕು ಬವಣೆಗಳ ಗೂಡಾಗಿತ್ತು. ಸಾವಿರಾರು ಸಂಕಷ್ಟಗಳಿಗೆ ಹೆದರದೆ, ಎದುರಿಸಿ ಬೆಳೆದವರು.

1.ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದರು. ಬೆಳದಿಂಗಳಂತೆ ಮೇಷ್ಟ್ರುಗಳಿದ್ದವರೆನ್ನುವ ಶ್ರೀಯುತರು ಶಾಮರಾವ್ ಮತ್ತು ರಾಮರಾವ್ ಎಂಬ ಮೇಷ್ಟ್ರಗಳಿಬ್ಬರ ಪ್ರೋತ್ಸಾಹದಿಂದ ಬೆಳೆದವರು. ಮಠಾಧಿಪತಿಗಳ ಕೃಪೆಗೆ ಪಾತ್ರರಾದ ಶ್ರೀಯುತರು ಗುಲ್ಬರ್ಗದಲ್ಲಿರುವ ಶರಣಬಸವೇಶ್ವರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ 1971ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ, ಮೇಷ್ಟ್ರುಗಳ ಪ್ರಶಂಸೆಗೆ ಪಾತ್ರರಾದವರು. ಶರಣಸಂಸ್ಕøತಿ ಮತ್ತು ಸೂಫಿ ಸಂಸ್ಕøತಿಯಿಂದ ಪ್ರಭಾವಿತರಾಗಿ ಬೋಧಿಸುತ್ತಿದ್ದ ಮೇಷ್ಟ್ರುಗಳು ತೋರಿದ ದಾರಿಯಲ್ಲಿ ಸಾಗಿದವರು.
ಬಿ.ಎ. ಪದವಿಯನ್ನು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಶ್ರೀಯುತರು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಾದ ಗುಲ್ಬರ್ಗದಲ್ಲಿ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿ, ಉತ್ತೀರ್ಣರಾದರು. ತದಾನಂತರ ಬೆಂಗಳೂರಿನ ನಿಮಾನ್ಸ್‍ನಲ್ಲಿ ಪ್ರಾಜೆಕ್ಟ ಸೋಶಿಯಲಾಜಿಸ್ಟ್ ಆಗಿ ಒಂದು ವರ್ಷ ಸೇವೆ ಸಲ್ಲಿಸಿದರು. ಅನಂತರ ಬೆಳಗಾವಿ ಸ್ನಾತಕೋತ್ತರ ಕೇಂದ್ರದಲ್ಲಿ “ದೇವದಾಸಿ ಪದ್ದತಿ” ಕುರಿತು ಸಂಶೋಧನಾ ಅಧ್ಯಯನದಲ್ಲಿ ನಿರತರಾಗಿ ಪಿಎಚ್.ಡಿ.ಪದವಿಯನ್ನು ಪಡೆದರು. “ಕಷ್ಟಗಳಿಗೆ ಗೌರವ ಕೊಟ್ಟು ಬದುಕಬೇಕೆನ್ನುವ” ಶ್ರೀಯುತರು ಕಷ್ಟಗಳ ಸರಮಾಲೆಯನ್ನು ಕೊರಳಿಗೆ ಕಟ್ಟಿಕೊಂಡು ಬೆಳೆದವರು. ಅವರ ಬೆಳವಣಿಗೆಗೆ ಬೆನ್ನೆಲಬಾದವರು ಪದವಿ ಪೂರ್ವ ಶಿಕ್ಷಣ ಅಧ್ಯಯನದಲ್ಲಿ ಸಹಪಾಟಿಯಾಗಿದ್ದ ಶಶಿಕಲಾ ಅವರು. ಕ್ರೈಸ್ತ ಧರ್ಮಾಧಿಕಾರಿ ಮಗಳಾದ ಶಶಿಕಲಾ ಅವರು ಶ್ರೀಯುತರ ಜೊತೆಯಲ್ಲೆ ವ್ಯಾಸಂಗ ಮಾಡುತ್ತಾ ಅವರ ಉನ್ನತೀಕರಣಕ್ಕೆ ಭದ್ರವಾದ ಬುನಾದಿಯಾದರು. ಅಷ್ಟೆ ಅಲ್ಲ ಸದಾ ಕೈಹಿಡಿದು ನಡೆಸಿ, ಸತಿಯಾಗಿ ಸಾರ್ಥಕ ಬದುಕಿಗೆ ಪ್ರೇರಕಶಕ್ತಿಯಾದರು. ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಅಧ್ಯಾಪಕರ ಪ್ರೀತಿಗೆ ಪಾತ್ರರಾದವರು.

1983ರಿಂದ ಕೆ.ಎಲ್.ಇ.ಸಂಸ್ಥೆಯ ಅಥಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀಯುತರು ಬೆಳಗಾವಿ ಪಿ.ಜಿ.ಸೆಂಟರ್‍ನಲ್ಲಿ ಅತಿಥಿ ಅಧ್ಯಾಪಕರಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿ ನೇಮಕಗೊಂಡು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದರು. ವಿಶ್ವಬ್ಯಾಂಕ್ ಸಹಯೋಗದ ಕರ್ನಾಟಕ ಸರ್ಕಾರದ ಯೋಜನೆಗೆ ಪ್ರಾಜೆಕ್ಟ್ ಸೋಶೀಯಲಾಜಿಸ್ಟ್ ಆಗಿ ಸೇವೆ ಸಲ್ಲಿಸಿದ ಶ್ರೀಯುತರು ಬೆಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಸಮಾಜಶಾಸ್ತ್ರ ವಿಭಾಗದ ಆಹ್ವಾನಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಕೊಲ್ಲಾಪುರ ವಿಶ್ವವಿದ್ಯಾಲಯದಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ತದಾನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹದಿನಾಲ್ಕು ವರ್ಷಗಳ ಕಾಲ ಪ್ರಾಧ್ಯಾಪಕರ ಸೇವೆಯ ಜೊತೆಯಲ್ಲಿ ಸಿಂಡಿಕೇಟ್, ಅಕಾಡೆಮಿಕ್, ಕಲಾನಿಕಾಯ, ನ್ಯಾಕ್ ಸಮಿತಿ, ಐ.ಕ್ಯೂ.ಎ.ಸಿ. ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾಲಯ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ, ವಿಶ್ವಮಂಗಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ, ವಿಮೋಚನಾ ದೇವದಾಸಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸಲ್ಲಿಸಿರುವ ಸೇವೆಯು ಅಪೂರ್ವವಾದುದು.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪರೀಕ್ಷಾ ಮಂಡಳಿ, ಅಧ್ಯಯನ ಮಂಡಳಿಗಳ ಸದಸ್ಯರಾಗಿ, ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ವಿವಿಧ ಸಂಘ-ಸಂಸ್ಥೆಗಳಿಗೆ ಸಲಹೆಗಾರರಾಗಿ ಅನನ್ಯವಾದ ಸೇವೆ ಸಲ್ಲಿಸಿರುವ ಜೋಗನ್ ಶಂಕರ್ ಅವರು ಸಮಸಮಾಜ ನಿರ್ಮಾಣವಾಗಬೇಕೆಂಬ ಆದಮ್ಯ ಕನಸ್ಸನ್ನು ನನಸ್ಸಾಗಿಸುವ ಪ್ರಯತ್ನಕ್ಕಾಗಿ ಹಗಳಿರುಳು ಶ್ರಮಿಸಿರುವ ಉತ್ಸಾಹಿ ಚಿಂತಕರು. ದೇವದಾಸಿ ಪದ್ಧತಿಯ ನಿರ್ಮೂಲನೆಗೆ ಹೋರಾಡಿದವರು. ಅಪ್ಪರ್ ಕೃಷ್ಣ ಯೋಜನೆಯಿಂದ ನಿರ್ವಸತಿಯಾದವರಿಗೆ ಸರಿಯಾದ ಸೌಲಭ್ಯಗಳು ದೊರಕುವಂತೆ ಸೇವೆ ಮಾಡಿದರು.

ತೆಂಗಿನ ಮರ ಮಟ್ಟೆಗಳನ್ನು ಕಳಚಿಕೊಂಡು ಬೆಳೆದಂತೆಲ್ಲ, ಒಂದೊಂದು ಮಟ್ಟೆಯ ಗುರುತುಗಳು ಬಿಡುತ್ತಾ ಹೋಗುತ್ತದೆ. ಅವುಗಳೇ ಅದರ ಬೆಳವಣಿಗೆಯನ್ನು ಸೂಚಿಸುತ್ತವೆಯೋ ಹಾಗೇಯೇ ಶ್ರೀಯುತರು
ಹೆಜ್ಜೆ ಇಟ್ಟ ಕಡೆ ಅಭಿವೃದ್ಧಿಯನ್ನೇ ಜಪ-ತಪವಾಗಿಸಿಕೊಂಡು ಕಾರ್ಯನ್ಮುಖರಾದವರು. ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಬಂದು ವಿಶ್ವವಿದ್ಯಾಲಯದ ಎಲ್ಲ ನೌಕರರೊಡನೆ ಬೆರೆತು, ವಿಶ್ವವಿದ್ಯಾಲಯದ ಬೆಳವಣಿಗೆಗೆ ಪ್ರೇರೇಕಶಕ್ತಿಯಾದವರು. ಪ್ರೊ.ಬಿ.ಕೃಷ್ಣಪ್ಪ ಅಧ್ಯಯನ ಕೇಂದ್ರ, ಡಾ.ಬಾಬು ಜಗಜೀವರಾಮ್ ಅಧ್ಯಯನ ಕೆಂದ್ರ ಸ್ಥಾಪಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಬಸವಣ್ಣ ಅಧ್ಯಯನ ಕೇಂದ್ರ, ಎನ್.ಎಸ್.ಎಸ್., ಎನ್.ಸಿ.ಸಿ ಮೊದಲಾದವುಗಳ ಕ್ರಿಯಾಶೀಲತೆಗೆ, ವಿಶ್ವವಿದ್ಯಾಲಯದ ನೌಕರರೆಲ್ಲ ಒಂದೇ ಕುಟುಂಬದವರ ತರಹ ಸಂತಸದಿಂದ ಕರ್ತವ್ಯ ನಿರ್ವಹಿಸುವ ಸಲುವಾಗಿ ಸಾಂಸ್ಕøತಿಕ-ಕ್ರೀಡೊತ್ಸವವನ್ನು ಏರ್ಪಡಿಸಿರುವುದು, ಕುವೆಂಪು ವಿಶ್ವವಿದ್ಯಾಲಯದ ಗೀತೆಯನ್ನು ಘೋಷಿಸಿದ್ದು, ಭದ್ರಾವತಿ ಆಕಾಶವಾಣಿಯೊಂದಿಗೆ ಕಾರ್ಯಕ್ರಮಗಳನ್ನು ನಡೆಸಿದ್ದು, ವಿವಿಧ ಸಂಘಸಂಸ್ಥೆಗಳು, ಅಕಾಡೆಮಿಗಳ ಜೊತೆ ವಿವಿಧ ವಿಭಾಗಗಳು ಸಹಯೋಗದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಿ ಯಶಸ್ವಿಯಾಗಲು, ವಿಶ್ವ ಮಟ್ಟದಲ್ಲಿ ಅಧ್ಯಾಪಕರ ಸಂಶೋಧನಾ ಪ್ರಬಂಧಗಳು ಗಮನ ಸೆಳೆಯುವಂತಾಗಲು, ಸಂಶೋಧನಾರ್ಥಿಗಳನ್ನು ಪ್ರೋತ್ಸಾಹಿಸಿರುವುದು ಮೊದಲಾದವುಗಳು ಮೂಲಕ ತಮ್ಮ ಚಿಂತನೆÀಗಳನ್ನು ಅನುಷ್ಠಾನಗೊಳಸಿದವರು.

ಪ್ರಪಂಚದ ಉತ್ತಮ ವಿಶ್ವ ವಿದ್ಯಾಲಯಗಳಲ್ಲಿ ಕುವೆಂಪು ವಿಶ್ವವಿದ್ಯಾಲಯವು ಒಂದು ಎನಿಸಿಕೊಳ್ಳುವಲ್ಲಿ, ನ್ಯಾಕ್ ಸಮಿತಿಯಿಂದ `ಎ’ ಗ್ರೇಡ್ ಪಡೆಯುವಲ್ಲಿ, ಎನ್.ಆರ್.ಐ.ಎಫ್.ನಿಂದ 73ನೇ ರ್ಯಾಂಕ್ ಪಡೆಯುವಲ್ಲಿ ಇಡೀ ವಿಶ್ವವಿದ್ಯಾಲಯದ ನೌಕರರೆನ್ನೆಲ್ಲ ತೊಡಗಿಸಿದ್ದು ಅವರ ಆಡಳಿತ ಕೌಶಲ್ಯಕ್ಕೆ ಹಿಡಿದ ರನ್ನಗನ್ನಡಿಯಾಗಿದೆ. `ಬೆಳಕಿನ ಅರಮನೆಗೆ ದಾರಿಗಳು ನೂರು’ ಎಂಬಂತೆ ಪ್ರಗತಿಗಾಗಿ ಹಲವಾರ ಚಿಂತಮಂಥನಗಳನ್ನು, ಸಲಹೆ ಸಹಕಾರಗಳನ್ನು ಪಡೆದವರು. “ನಾನು ಎಂಬುದು ನಾಶ, ನೀನು ಎಂಬುದು ನಿಲುಕದೆ ಬೆಳೆ” ಎಂಬಂತೆ ನಾನತ್ವವನ್ನು ಬೇರು ಸಮೇತ ಕಿತ್ತು ಹಾಕಿದವರು. ಕುಲಸಚಿವರುಗಳ ಹಾಗೂ ಅಧಿಕಾರಿಗಳ, ಅಧ್ಯಾಪಕರ, ಸಿಬ್ಬಂದಿವರ್ಗದವರ ಕರ್ತವ್ಯ ಪ್ರಜ್ಞೆಯನ್ನು ಪ್ರಶಂಸಿಸುವ ಶ್ರೀಯುತರು ತೆಂಗಿನ ಮರದಂತಹ ವ್ಯಕ್ತಿತ್ವವನ್ನು ಸಂಪಾದಿಸಿಕೊಂಡವರು.
“Devadasi Cult: A Sociological Analysis”, “Social Problems and Welfare in India’, “Rural Sociology ” , “City Prostitutes”, “Devadasi Sampradaya”, “People Living in Temporary Sheds’, ` Let Us Build again Submerged Temples’,  Gender Issues in Rehabilitation Programmes of UKP’, ` State Profiles on Child Sex Workers of Tamil Nadu, Karnataka and Kerala States’  ಮೊದಲ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿರುವ ಜೋಗನ್ ಶಂಕರ್ ಅವರು ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳು ಕೃತಿಯ ಕನ್ನಡ ಅನುವಾದಕರಾಗಿ, `ಕರ್ನಾಟಕ ಸಮುದಾಯ ಕೋಶ” ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವರು.

ಶ್ರೀಯುತರ Devadasi Cult’ PÀÈwAiÀÄ£ÀÄß Chiyoka Torri ಅವರು ಜಪಾನ್ ಭಾಷೆಗೆ ಅನುವಾದಿಸಿರುವರು. ಟೋಕಿಯೋ ಪ್ರಕಾಶನದವರು ಪ್ರಕಟಿಸಿರುವರು. ಇದು ಅವರ ವಿಶ್ವ ಮಟ್ಟದ ಸಾಮಾಜಿಕ ಚಿಂತನಗಳ ಉತ್ಕøಷ್ಟತೆಗೆ ಹಿಡಿದ ಕನ್ನಡಿಯಾಗಿದೆ. ನೂರಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗಿವೆ. “ದೇವದಾಸಿ ಪದ್ಧತಿ” ಕುರಿತ ಮಹತ್ತರವಾದ ಸಂಶೋಧನೆಯು ಇವರ ಚಿಂತನೆಯ ಸಂವರ್ಧನೆಗೆ ಇಂಬು ನೀಡಿತು. ಹಲವು ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿ, ಸರ್ಕಾರ, ಸಂಘ-ಸಂಸ್ಥೆಗಳು, ಸಮಾಜದ ಸಂವರ್ಧನೆಗೆ ಸರಿದಾರಿ ತೋರುವ ಚಿಂತನೆಗಳನ್ನು ಮಂಡಿಸಿದವರು. ರಾಜ್ಯ, ರಾಷ್ಟ್ರ, ಅಂತರ್ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಘಟಕರಾಗಿ, ಪ್ರಬಂಧ ಮಂಡನಕಾರರಾಗಿ, ಗೋಷ್ಠಿಗಳ ಅಧ್ಯಕ್ಷರಾಗಿ ಸಫಲತೆಯನ್ನು ಕಂಡವರು. 35ವಿದ್ಯಾರ್ಥಿಗಳ ಪಿಎಚ್.ಡಿ. ಸಂಶೋಧನಾ ಅಧ್ಯಯನಕ್ಕೆ ಯಶಸ್ವಿ ಮಾರ್ಗದರ್ಶಕರಾದವರು.
ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ 1992ರಲ್ಲಿ ರಾಜ್ಯಪ್ರಶಸ್ತಿ, 2006ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ. 1993ರಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಶ್ರೀಯುತರಿಗೆ ಆಕ್ಸ್ ಫರ್ಡ ಯುನಿರ್ವಸಿಟಿಯು ಅಂತರ್ ರಾಷ್ಟೀಯ ವಿಚಾರಸಂಕಿರಣಕ್ಕೆ ಆಹ್ವಾನಿಸಿರುವುದು ಶ್ರೀಯುತ ಬೌದ್ಧಿಕ ಚಿಂತನೆಗೆ ತೋರಿದ ಗೌರವವಾಗಿದೆ. Dr.R.Sudarshan    Life    Time  Achievement         Award        ಏಜ್ಯುಕೇಷನ್ ಲೀರ್ಡಶೀಫ್ ಅವಾರ್ಡ ಮೊದಲಾದ ಪ್ರಶಸ್ತಿಗಳಿಗೆ, ಹಲವು ಸನ್ಮಾನ ಗೌರವಗಳಿಗೆ ಭಾಜನರಾದವರು. ಶ್ರೀಯುತರು `ನಾನು ಶಾಶ್ವತವಲ್ಲ ನಾನು ಮಾಡಿದ ಸೇವೆ ಶಾಶ್ವತ’ ಎಂಬ ತತ್ವಕ್ಕೆ ಬದ್ಧರಾದವರು.

ಸಾಮಾಜಿಕ ನ್ಯಾಯ ಪಡೆಯುವ ಸಲುವಾಗಿ ಹಲವು ಚಳುವಳಿಗಳಲ್ಲಿ ಭಾಗಿಯಾದ ಶೀಯುತರು ಬರೀ ವ್ಯಕ್ತಿ ಮಾತ್ರವಲ್ಲ ; ಅವರೊಂದು ಶಕ್ತಿಸಾಗರ. ಅಂಬೇಡ್ಕರ್ ಅವರ ಬದುಕು-ಬರಹಗಳನ್ನು, ತತ್ವ-ಸತ್ವಗಳನ್ನು ತುಂಬಾ ಆಳವಾಗಿ ಅಧ್ಯಯನ ಮಾಡಿ; ಅವುಗಳ ಅನುಷ್ಠಾನದಲ್ಲಿ ನಿರತರಾಗಿ, ಯಶಸ್ವಿಯ ಪಥವನ್ನು ಕಂಡವರು. ನೊಂದು-ಬೆಂದವರಿಗೆ ಸಾಂತ್ವನವನ್ನು ಧಾರೆ ಎರೆದ ಅಪೂರ್ವ ಚೈತನ್ಯವಾಗಿರುವ ಜೋಗನ್ ಶಂಕರ್ ಅವರು ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ರೂಢಿಸಿಕೊಂಡು, ಶಿಕ್ಷಣ ಪಡೆಯಿರೆಂದು ಯುವಸಮುದಾಯಕ್ಕೆ ತಿಳಿಸುವರು. ಶ್ರೀಯುತರು, ವಿದ್ಯಾರ್ಥಿಯಾಗಿದ್ದಾಗಲೇ ‘ಅಂಬೇಡ್ಕರ್ ಅವರ ತತ್ವಚಿಂತನೆಗಳಿಗೆ ಬದ್ಧರಾಗಿದ್ದವರು. ಸೃಜನಶೀಲ-ಕ್ರಿಯಾಶೀಲ-ಸಂಶೋಧನಾ ಚಿಂತನೆಗಳ ಮೂಲಕ ತಮ್ಮದೇ ಆದ ಚಾಪು ಮೂಡಿಸಿದವರು. ಅವರ ಜೀವನ ಪ್ರೀತಿ ಅಪೂರ್ವವಾದುದು. “ಎಲ್ಲರಿಗಾಗಿ ನಾನು. ನನಗಾಗಿ ಎಲ್ಲರು” ಎಂಬ ಸಹಕಾರ ತತ್ವವನ್ನು ಉಸಿರಾಗಿಸಿಕೊಂಡವರು.
ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ, ಸೇವೆ ಸಲ್ಲಿಸುತ್ತಾ ಸಂತೃಪ್ತಿ ಪಡೆದ ಜೋಗನ್ ಶಂಕರ್ ಅವರು ಇಸ್ರೇಲ್ ದೇಶದಲ್ಲಿ ಜರುಗಿದ ಅಂತರ್ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಭಾಗವಹಿಸಿ, ಅಲ್ಲಿ ಪ್ರಗತಿಗೆ ಕಂಡುಕೊಂಡಿರುವ ಯೋಜನೆಗಳನ್ನು ಅಧ್ಯಯನ ಮಾಡಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವರು. ಶ್ರೀಯುತರ ನಿಸ್ವಾರ್ಥ ಸೇವೆಗೆ ಸಂದ ಗೌರವ ಮನ್ನಣೆಗಳು ಹಲವು. ಸರ್ವರ ಏಳಿಗೆಗಾಗಿ ದೇಶ-ವಿದೇಶಗಳಲ್ಲಿ ಅಲೆದಾಡಿದ ಅನುಭವವನ್ನು ಹಂಚಿದವರು. ಸ್ನೇಹಜೀವಿಯಾದ ಶ್ರೀಯುತರು ಬರೀ ಗೆಳೆಯರಾಗಿ ಅಷ್ಟೆ ಅಲ್ಲ. ತಮ್ಮ ಗೆಳೆಯರಿಗೆಲ್ಲ ಬದುಕು ಏನೆಂಬುದನ್ನು ಕಲಿಸಿಕೊಟ್ಟ ಸನ್ಮಾರ್ಗದರ್ಶಿ. ಅವರ ಸಾಮಿಪ್ಯದವರ ಹೃನ್ಮನದೊಳಗೆ ಚಿರಸ್ಥಾಯಿಯಾಗಿರುವ ಅಪ್ಪಟ ಮಾನವೀಯತೆಯ ಸಾಕಾರಮೂರ್ತಿ. “ಅವರ ಒಡನಾಟವೇ ಸಂತೃಪ್ತ ವೃತ್ತಿಸೇವೆಗೆ, ಸಮಾಜಸೇವೆಗೆ, ಕೌಟಂಬಿಕ ನಿರ್ವಹಣೆಗೆ ಸರಿದಾರಿ ತೋರಿಸಿರುವುದು. ಅವರೊಂದು ಬೆಳಕು. ಆ ಬೆಳಕಿನಡಿಯಲ್ಲಿ ನಮ್ಮ ಜೀವನದ ದಾರಿಯನ್ನು ಗುರುತಿಸಿಕೊಂಡು, ನಿಚ್ಚಳವಾಗಿ ಬದುಕಲು ಪ್ರೇರೇಕಶಕ್ತಿಯಾದವರು” ಎಂಬುದು ಅವರ ಆಪ್ತ ಗೆಳೆಯರ ಹೃನ್ಮನದ ನುಡಿ.
ಶ್ರದ್ಧೆ, ಸತತ ಪರಿಶ್ರಮ, ಹಾಗೂ ಸ್ವಯಂಮೌಲ್ಯಮಾಪನಗಳನ್ನು ರೂಢಿಸಿಕೊಂಡಿರುವ ಜೋಗನ್ ಶಂಕರ್ ಅವರು ಬಂದ ಬಾಧಕಗಳಿಗೆ ಬಾಗದೆ, ದೊರೆತ ಕೀರ್ತಿ, ಪ್ರತಿಷ್ಠೆಗಳಿಗೆ ಬಿಗದೆ ಬಾಳುತ್ತಿರುವುದಕ್ಕೆ ಅವರ ಜೀವ-ಜೀವನವೇ ಸಾಕ್ಷಿಯಾಗಿದೆ. ಅವರು ತಮ್ಮ ಸಾಮೀಪ್ಯ ಬಂದವರಿಗೆಲ್ಲ ಈ ಲೋಕದ ಸವಿ ಸವಿ ಕಾರ್ಯಗಳನ್ನು ಹೇಳಿ ಗುಪ್ತವಾಗಿ ಮಾರ್ಗದರ್ಶನ ಮಾಡುವ ಮನೋಧರ್ಮದವರು. ತೆಂಗಿನ ಮರ ತಾನು ಬೆಳೆಯುತ್ತಾ ಇತರೆ ಎಲ್ಲ ಸಸ್ಯಗಳನ್ನು ಬೆಳೆಸುವಂತೆ ಶ್ರೀಯುತರು ತಮ್ಮ ಸಾಮೀಪ್ಯ ಬಂದವರಿಗೆ ಪ್ರತ್ಯೇಕ್ಷÀವಾಗಿ ಇಲ್ಲವೇ ಪರೋಕ್ಷವಾಗಿ ಬೆಳಗುವಂತೆ ಬೆಳೆಯಲು ಪ್ರೇರೇಕರಾದವರು. “ವಿದ್ಯೆ ಸಂಜೀವಿನಿ ಇದ್ದಂತೆ. ಅದು ಗುಪ್ತವಾಗಿ ರಕ್ಷಿತವಾದ ನಿಧಿ. ವಿದ್ಯೆ ತಾಯಿಯಂತೆ ರಕ್ಷಿಸುವ, ತಂದೆಯಂತೆ ಸರಿದಾರಿ ತೋರಿಸುವ, ಕಾಂತೆಯಂತೆ ದುಃಖ-ದುಮ್ಮಾನಗಳನ್ನು ನಿವಾರಿಸಿ, ಆನಂದ ನೀಡುವುದು. ವ್ಯಕ್ತಿಯನ್ನು ಶಕ್ತಿಯಾಗಿಸುವುದು. ಯುಕ್ತಿಯ ಉತ್ತುಂಗವಾಗಿ ನಿರ್ಮಿಸುವುದೆಂಬುದಕ್ಕೆ ಜೋಗನ್ ಶಂಕರ್ ಅವರ ಜೀವನ-ಸಾಧನೆಗಳೇ ತಿಳಿಸುತ್ತವೆ.
“ನನ್ನ ಪತ್ನಿ ಶಶಿಕಲಾ ನನ್ನ ಪಾಲಿನ ಭಾಗ್ಯದೇವತೆ. ನನ್ನ ಏಳಿಗೆಗಾಗಿ ಸಂಪೂರ್ಣ ಸಮರ್ಪಿಸಿಕೊಂಡುವರು. ನನ್ನ ತಾಯಿ ರುಕಮ ಅವರನ್ನು ತನ್ನ ಹೆತ್ತ ತಾಯಿಯಂತೆ ಪೋಷಣೆ ಮಾಡಿದವರು. ನನ್ನ ಬೆಳಗಿದ ಬೆಳಕು” ಎಂದು ಹೃದಯ ತುಂಬಿ ಹೇಳುವ ಶ್ರೀಯುತರ ಸಾಧನೆಯು ಶ್ರಮಜೀವಿಗಳಿಗೆ, ಹಂಚಿಗೆ ತಳ್ಳಲ್ಪಟ್ಟವರಿಗೆ, ದಲಿತರಿಗೆ ದಾರಿದೀಪ. ಬಿದಿರು ಕೊಳಲಾಗಿ ನುಡಿಯುವಾಗ ಕೇಳುಗರೆಲ್ಲ ನಾದದ ಆನಂದದಲ್ಲಿ ತೇಲುತ್ತಾರೆ. ಆ ಬಿದಿರು ಕೊಳಲಾಗುವಂತೆ ಮಾಡಿದವರ ಶ್ರಮ, ಶ್ರದ್ಧೆಗಳು ಅನುಪಮ. ಅವರೆನ್ನಲ್ಲ ಸ್ಮರಿಸಿಕೊಳ್ಳುವ ಜೋಗನ್ ಶಂಕರ್ ಅವರ ಬದುಕು-ಬರಹ-ಸೇವೆ-ಸಾಧನೆ, ನಡೆ-ನುಡಿ, ವ್ಯಕ್ತಿತ್ವ ಅನುಕರಣೀಯವಾದುದು.
“ ಬೀಜದಿಂದ ಹುಟ್ಟಿದ ವೃಕ್ಷವು ಬೀಜವ ಹೋಲುವಂತೆ
ತಾಯಿಯಿಂದ ಹುಟ್ಟಿದ ಮಕ್ಕಳು ತಾಯಿಯ ಹೋಲುವಂತೆ
ಧಾನ್ಯಗಳಿಂದ ಬೆಳೆದ ಬೆಳಸು ಧಾನ್ಯಂಗಳ ಹೋಲುವಂತೆ
ಗುರುವಿನಿಂದ ಹುಟ್ಟಿದ ಶಿಷ್ಯನು ಗುರುರೂಪವಲ್ಲದೆ
ಬೇರೊಂದು ರೂಪವಲ್ಲವಯ್ಯಾ ಅಖಂಡೇಶ್ವರ’’-ಎಂಬ ಷಣ್ಮುಖಸ್ವಾಮಿ ಅವರ ವಚನವಾಣಿಯಂತೆ ತಾಯಿ, ಮೇಷ್ಟ್ರುಗಳು, ಸತಿಯ ಆಶಯ ಹಾರೈಕೆಯಂತೆ ಸೇವೆಯೊಳಗೆ ನಿರತರಾಗಿ ಯಶಸ್ವಿಯಾದವರು. ಕಷ್ಟ-ಸುಖದೊಳಗೆ ಬೆರೆತು ಬೆರಗಾಗುವಂತೆ ಬೆಳೆದ ಜೋಗನ್ ಶಂಕರ್ ಅವರ ಸಾಧನೆಗೆ ಹೆತ್ತೊಡಲು, ಸತಿಯ ತ್ಯಾಗ, ಬಂಧು-ಮಿತ್ರರ ನೆರವುಗಳು, ಗುರುಗಳ ಹಿತನುಡಿಗಳು ಹಿನ್ನಲೆ, ಪ್ರೇರಣೆಗಳಾಗಿವೆ. ಶ್ರೀಯುತರು ಅವಮಾನಿಸಿದವರೇ ಸನ್ಮಾನ ಮಾಡುವಂತೆ ಸಾಧನೆ ಮಾಡಿದವರು. ಆದರ್ಶ ಅಧ್ಯಾಪಕರಾಗಿ, ಉತ್ತಮ ಸಂಶೋಧಕರಾಗಿ, ದಕ್ಷ ಆಡಳಿತಗಾರರಾಗಿ ನಿರ್ವಹಿಸಿದ ರೀತಿ ಅನನ್ಯವಾದುದು.

ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಎಂ.ಎ.,ಎಂ.ಇಡಿ.,ಪಿಜಿಡಿಜೆ.,ಪಿಎಚ್.ಡಿ.
ಸಹಾಯಕಪ್ರಾಧ್ಯಾಪಕರು,
ಕನ್ನಡಭಾರತಿ, ಕುವೆಂಪು ವಿಶ್ವವಿದ್ಯಾನಿಲಯ,
ಜ್ಞಾನಸಹ್ಯಾದ್ರಿ, ಶಂಕರಘಟ್ಟ, ಶಿವಮೊಗ್ಗ:ಜಿ.
ಜಂಗಮವಾಣಿ:9481416989

Email-nellikattesiddesh@gmail.com

web-nellikatte.blogspot.com