ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾನಿಲಯದ ಪಾಥ್‌ವೇಸ್ ಟ್ರೈನಿಂಗ್ ಅಂಡ್ ಪ್ಲೇಸ್ ಮೆಂಟ್‌ಸೆಲ್‌ವತಿಯಿಂದ  ಸ್ನಾತಕೋತ್ತರ ಎಂ.ಸಿ.ಎ ವಿಭಾಗದ ವಿದ್ಯಾರ್ಥಿಗಳಿಗಾಗಿ ಪ್ರತಿಷ್ಠಿತ ಏಷ್ಯಾದ ಅತೀ ದೊಡ್ಡ ಸಂಸ್ಥೆಯಾದ ಬೆಂಗಳೂರಿನ ಕ್ಯೂಸ್ಪೈಡರ್ ಕಂಪನಿಯವರು ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಿದ್ದರು. ಈ ಸಂದರ್ಶನಲ್ಲಿ ಕಂಪನಿಯು ಸುಮಾರು ೧೫ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಲ್ಲದೆ ಏಳು ಜನರಿಗೆ ಆಯ್ಕೆ ಪತ್ರವನ್ನು ಸ್ಥಳದಲ್ಲಿಯೇ ನೀಡಿತು. ವಿಭಾಗದ ಸುಮಾರು ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ನಡೆದ ಕ್ಯಾಂಪಸ್ ಸಂದರ್ಶನದ ಉದ್ಘಾಟನಾ ಭಾಷಣದಲ್ಲಿ ಕಂಪನಿಯ ಬ್ಯುಸಿನೆಸ್ ಡೆವೆಲಪ್‌ಮೆಂಟ್ ಆಫೀಸರ್ ಜುನೈದ್ ಮಾತನಾಡುತ್ತಾ, ಸುಮಾರು ೧.೫ ಬಿಲಿಯನ್ ಸಾಪ್ಟ್‌ವೇರ್ ನೌಕರರು ಅಮೇರಿಕವನ್ನು ಅವಲಂಭಿಸಿದ್ದಾರೆ. ನೂತನ ಅಧ್ಯಕ್ಷ ಟ್ರಂಪ್‌ರವರ ನಿಲುವನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ದೇಶದ ನೌಕರರು ಉದ್ಯೋಗ ಕಳೆದುಕೊಳ್ಳುವ ಬೀತಿಯನ್ನು ಎದುರಿಸಬೇಕಾದೀತು. ಆದ್ದರಿಂದ ಇಲ್ಲಿನ ವಿದ್ಯಾರ್ಥಿಗಳು ಹೆಚ್ಚು ತಾಂತ್ರಿಕ ನೈಪುಣ್ಯತೆಯನ್ನು ಪಡೆಯುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ತರಬೇತಿಯನ್ನು ಪಡೆಯಬೇಕೆಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪರೀಕ್ಷಾಂಗದ ಕುಲಸಚಿವರಾದ ಡಾ. ರಾಜಾನಾಯಕ ರವರು ವಿವಿಯಲ್ಲಿ ನಾವು ನೀಡುವ ಶಿಕ್ಷಣ ನಿಮ್ಮ ಮೂಲ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಆದರೆ ಕಂಪ್ಯೂಟರ್ ಶಿಕ್ಷಣದಲ್ಲಿ ಹೆಚ್ಚು ನುರಿತವರಾಗಬೇಕಾದರೆ ತಮ್ಮ ಬುದ್ದಿಮಟ್ಟವನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಆ ನಿಟ್ಟಿನಲ್ಲಿ ಓದಿನ ಜೊತೆಯಲ್ಲಿ ಬಿಡುವಿನ ವೇಳೆಯಲ್ಲಿ ನಿಮ್ಮ ಶಿಕ್ಷಣಕ್ಕೆ ಪೂರಕವಾದ ನೈಪುಣ್ಯತೆಯನ್ನು ಪಡೆಯುವ ಸಲುವಾಗಿ ಹೆಚ್ಚು ಹೆಚ್ಚು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ತರಬೇತಿಯನ್ನು ಪಡೆದುಕೊಳ್ಳಲು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಂಪನಿಯ ಕನ್ಸಲ್ಟ್‌ಟೆಂಟ್ ಆದ ಅಭಿಷೇಕ್‌ರವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪಾಥ್‌ವೇಸ್ ಟ್ರೈನಿಂಗ್ ಅಂಡ್ ಪ್ಲೇಸ್‌ಮೆಂಟ್ ಸೆಲ್‌ನ ಸಂಚಾಲಕರಾದ ಡಾ.ಕೆ.ಆರ್.ಮಂಜುನಾಥ್ ಸ್ವಾಗತಿಸಿದರೆ, ಸಹಾಯಕ ಪ್ರಾಧ್ಯಾಪಕ ಸುರೇಶ್ ವಂದಿಸಿದರು. ಕು.ಬಿಂದು ಪ್ರಾರ್ಥಿಸಿದರು. ಕು.ನಾಗಶ್ರೀ ಕಾರ್ಯಕ್ರಮ ನಿರೂಪಿಸಿದರು.