ನಮ್ಮ ಇತಿಹಾಸ ಮತ್ತು ಪರಂಪರೆಯೊಳಗೆ ನಿಜ ಬದುಕಿಗೆ ಕೈದೀವಿಗೆಯಾದವರು ಬುದ್ಧನಾದಿ ಬೌದ್ಧರು, ಬಸವಣ್ಣನಾದಿ ವಚನಕಾರರು, ಕನಕದಾಸರಾದಿ ಕೀರ್ತನಕಾರರು, ನಿಜಗುಣರಾದಿ ತತ್ವಪದಕಾರರು. ವರ್ತಮಾನದ ತಲ್ಲಣ, ಆತಂಕ ಮತ್ತು ಭಯದಿಂದ ಮುಪ್ಪುರಿಗೊಂಡಿರುವ ಜೀವನ ಕಂಪಿಸುತ್ತದೆ. ಕಂಗೆಡುತ್ತಿದೆ. ಕವಿಯುತ್ತಿರುವ ಕಾರ್ಮೋಡದಲ್ಲಿ ಕರಗುತ್ತಿದೆ. ವಿಕಾರಿಗಳ, ವಿಕೃತರ ಆರ್ಭಟದಲ್ಲಿ ಮನಸ್ಸುಗಳು ಮಾಲಿನ್ಯಗೊಳ್ಳುತ್ತಿವೆ. ಸಾಧು ಸಜ್ಜನರು, ಸಮಸಮಾಜದವರು ಮೂಲೆಗುಂಪಾಗುತ್ತಿರುವ ಈ ಸಂಕಷ್ಟ-ಸಂದಿಗ್ದ-ಸಂಕೀರ್ಣವಾದ ಕಾಲದಲ್ಲಿ ‘ಸಾಮಾಜಿಕ ಸಾiರಸ್ಯ, ಕೋಮುಸೌಹಾರ್ದತೆ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ತಮ್ಮ ಉಸಿರಾಗಿಸಿಕೊಂಡಿರುವವರು ಶ್ರೀಕೋಡಿಮಠದ ಪೂಜ್ಯ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು.

ಭವ್ಯವಾದ ಪೌರಾಣಿಕ ಪರಂಪರೆ ಮತ್ತು ಇತಿಹಾಸವನ್ನೊಂದಿರುವ ಅರಸಿಕೆರೆ ತಾಲೂಕಿನ ಹಾರನಹಳ್ಳಿಯಲ್ಲಿರುವ ಶ್ರೀಕೋಡಿಮಠ ಧಾರ್ಮಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆಯಿಂದ ಪ್ರಸಿದ್ದಿಯಾಗಿದೆ. ಹಾರನಹಳ್ಳಿ ಪಾಳೆಗಾರ ಲಿಂಗಣ್ಣರಾಜರ ಭಕ್ತಿಗೆ ಒಲಿದ ಶಿವಯೋಗಿ ಶ್ರೀನೀಲಕಂಠಸ್ವಾಮಿಗಳು ತಮ್ಮ ತಪಃಶಕ್ತಿಯಿಂದ ರಾಜರಿಗೆ ಸಂತಾನದ ಸೌಭಾಗ್ಯವನ್ನು ಕರುಣಿಸಿ, ಶ್ರೀಕೋಡಿಮಠವನ್ನು ಸ್ಥಾಪಿಸಿ, ರಾಜರ ಮಗಳು ನೀಲಮ್ಮ ಅವರ ಅಪೇಕ್ಷೆಗೆ ಅನುಸಾರ ಜೀವಸಮಾಧಿಯನ್ನು ಕರುಣಿಸಿ, ಎರಡು ವರ್ಷ ಆರು ತಿಂಗಳ ನಂತರ ಅದೇ ಸಮಾಧಿಯಲ್ಲಿ ಶ್ರೀನೀಲಕಂಠಸ್ವಾಮಿಗಳು ಜೀವಸಮಾಧಿಯಾಗಿ ನೀಲಮ್ಮಜ್ಜಯ್ಯರಾಗಿ ಸಹಸ್ರರಾರು ಪವಾಡಗಳ ಲೀಲಾ ಕ್ಷೇತ್ರವಾಗಿಸಿದವರು.

ಶ್ರೀಮಠದ ಶ್ರೀನೀಲಲೋಚನ ಸ್ವಾಮಿಗಳ ತಪಃಶಕ್ತಿಗೆ ವಿಸ್ಮಯಗೊಂಡ ಹೈದರಾಲಿ ‘ಜಂಗಮ ಜೀತ್ ಫಕೀರ’ ಎಂಬ ಖಿಲ್ಲತ್ತಿನೊಂದಿಗೆ ಹಲವು ಉಡುಗೊರೆ ನೀಡಿ ಗೌರವಿಸಿರುವುದು ಶ್ರೀಗಳ ಆಧ್ಯಾತ್ಮ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ಇಂಥ ಮಠಕ್ಕೆ ೧೯೭೨ರಲ್ಲಿ ಉತ್ತರಾಧಿಕಾರಿಯಾಗಿ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಆಯ್ಕೆಗೊಂಡು, ಧರ್ಮ, ತತ್ವಶಾಸ್ತ್ರ ಮತ್ತು ಅಧ್ಯಾತ್ಮವನ್ನು ಆಳವಾಗಿ ಅಧ್ಯಯನ ಮಾಡಿದರು. ೧೯೮೫ರಲ್ಲಿ ೫೭ನೇ ಪೀಠಾಧಿಕಾರಿಗಳಾಗಿ ಸಾಗಿ ಬಂದ ಶ್ರೀಗಳ ಸೇವೆಯ ಸತ್ಪಥ ಬೆರಗು ಮೂಡಿಸುತ್ತದೆ.

ಕಾಯಕಜೀವಿಗಳ, ಶ್ರಮ ಜೀವಿಗಳ ಯುಗವನ್ನೇ ಸ್ಥಾಪಿಸಿದ, ಮನುಷ್ಯತ್ವವನ್ನು ಪ್ರತಿಪಾದಿಸಿದ, ಮನದ ಮಾಲಿನ್ಯವನ್ನು ಮೊದಲು ತಾವು ತೊಳೆದುಕೊಂಡು, ಅನ್ಯರು ತೊಳೆದುಕೊಂಡು, ಬೆಳಕಾಗಲು, ಮೊದಲು ತಾವು ಬೆಳಕಾಗಿ ಬೆಳಕಾದ ಶಿವಶರಣರು ಮತ್ತು ಜಗತ್ತಿನ ದಾರ್ಶನಿಕರ ತತ್ವ ಚಿಂತನೆಗಳ ಅನುಷ್ಠಾನದಲ್ಲಿ ಸಂಪೂರ್ಣ ಸಮರ್ಪಿಸಿಕೊಂಡಿರುವ ಶ್ರೀಗಳ ಜೀವನ ಮತ್ತು ಸಾಧನೆ ಅನನ್ಯವಾದುದು.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಚುಗಲ್ಲು ಬಿದರೆ ಗ್ರಾಮದಲ್ಲಿ ಮರುಳಾರಾಧ್ಯ ಮತ್ತು ಪಾರ್ವತಮ್ಮ ದಂಪತಿಗಳ ಮಡಿಲಲ್ಲಿ ೧೯೫೦ರ ಮಹಾಶಿವರಾತ್ರಿಯ ದಿನದಂದು ಜನಿಸಿದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಪ್ರೌಢಶಾಲಾ ಶಿಕ್ಷಣವನ್ನು ಹಾರನಹಳ್ಳಿ ಕೋಡಿಮಠದಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಅರಸಿಕೆರೆಯಲ್ಲಿ, ಬೆಂಗಳೂರಿನ ಶ್ರೀರೇಣುಕಾಚಾರ್ಯ ಕಾಲೇಜಿನಿಂದ ಬಿ.ಎಸ್ಸಿ.ಪದವಿಯನ್ನು, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರು. ಸರ್ವ ಧರ್ಮಗಳ ತುಲನಾತ್ಮಕ ಅಧ್ಯಯನ ಎಂಬ ಡಿಪ್ಲೋಮೊವನ್ನು ಪಡೆದಿರುವ ಶ್ರೀಗಳು, ಕಾನೂನು ವಿಷಯವನ್ನು ಅಧ್ಯಯನ ಮಾಡಿರುವ ಬಹು ಭಾಷಾಪಂಡಿತರು.

ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಸೇವೆಯಲ್ಲಿ ನಿರತರಾಗಿರುವ ಶ್ರೀಗಳು ಹಿಂದೂ-ಮುಸ್ಲಿಂ-ಕ್ರೈಸ್ತರ ಭಾವೈಕ್ಯತೆಗಾಗಿ, ಸರ್ವೋದಯ ಸಮಾಜದ ನಿರ್ಮಾಣಕ್ಕಾಗಿ ಹಗಳಿರುಳು ದುಡಿಯುತ್ತಿರುವ ಕಾಯಕಯೋಗಿ. ಕೃಷಿ ಕಾಯಕದ ಹಿರಿಮೆಯನ್ನು ಸಾರುವ ಶ್ರೀಗಳು ವ್ಯಕ್ತಿ, ಸಮಾಜ, ಗುರು-ಲಿಂಗ-ಜಂಗಮ, ಮಾನವನ ಅಂತರಂಗ-ಬಹಿರಂಗ, ಆಧ್ಯಾತ್ಮ-ಧರ್ಮ, ಸಾಮಾಜಿಕ-ಆರ್ಥಿಕ, ಭೌತಿಕ, ಭೌದ್ಧಿಕ, ಆತ್ಮಜ್ಞಾನ-ವಿಜ್ಞಾನ ಇವುಗಳಲ್ಲಿ ಅದ್ವೈತವನ್ನು ಸಾಧಿಸಿ, ಮೇಲು-ಕೀಳನ್ನು ಮೀರಿದ ಮಾನವೀಯ ಸಮಾಜ ನಿರ್ಮಾಣದ ನಿಲುವನ್ನು ಹೃದಯಸ್ಥವಾಗಿಸಿಕೊಂಡು ಸಲ್ಲಿಸುತ್ತಿರುವ ಶ್ರೀಗಳ ಸೇವೆಯು ಆದರ್ಶವಾದುದು.

ಪರಿಸರದ ಕಾಳಜಿ, ಆಧ್ಯಾತ್ಮ, ಕೃಷಿ ಮತ್ತು ಶಿಕ್ಷಣದ ಹಿರಿಮೆಯನ್ನು ಸಾರುವ ಶ್ರೀಗಳು ಹಾಸನ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಧಾರೆ ಎರೆಯುತ್ತಿರುವರು.

ನಿತ್ಯ ಅನ್ನದಾಸೋಹ, ಜ್ಞಾನದಾಸೋಹವನ್ನು ನೆರವೇರಿಸುತ್ತಿರುವ ಶ್ರೀಗಳು ಗ್ರಂಥ ಭಂಡಾರವನ್ನು, ಪ್ರಾಚ್ಯವಸ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿರುವರು. ಶ್ರೀಗಳ ಸೇವೆಗೆ ರಷ್ಯಾ ದೇಶದ ಅಂತರ್ ರಾಷ್ಟ್ರೀಯ ವಿಶ್ವವಿದ್ಯಾಲಯವು ೨೦೧೪ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಸಾಹಿತ್ಯ, ಸಂಸ್ಕೃತಿಯ ಸಂರಕ್ಷಕರಾಗಿರುವ ಶ್ರೀಗಳು ಭಾವಚಿಂತರತ್ನ, ಭೈರವೇಶ್ವರ ಕಾವ್ಯ ಮೊದಲಾದ ೩೪ ತಾಡೋಲೆಯ ಕೃತಿಗಳನ್ನು ಸಂರಕ್ಷಿಸಿರುವರು. ಶ್ರೀಮಠದಲ್ಲಿ ವಿಶೇಷ ಉಪನ್ಯಾಸ, ವಿಚಾರಸಂಕಿರಣ, ಧಾರ್ಮಿಕ ಸಮ್ಮೇಳನಗಳನ್ನು ಏರ್ಪಡಿಸಿ, ಅನ್ನ, ಅರಿವು ಮತ್ತು ಅಭಿವೃಧ್ಧಿಯ ಜಾಗೃತಿಯನ್ನು ಮೂಡಿಸುತ್ತಿರುವರು. ದೇಶ-ವಿದೇಶಗಳಲ್ಲಿ ಆಧ್ಯಾತ್ಮಿಕ ಪ್ರವಚನಗಳನ್ನು ನೀಡಿರುವರು.

ಭೂತಕಾಲದ ಬೆಳಕಿನೊಳಗೆ ವರ್ತಮಾನದ ಕತ್ತಲನ್ನು ಕಳೆದುಕೊಳ್ಳಬೇಕು. ಆಗ ಭವಿಷ್ಯದ ಬದುಕು ಸಾರ್ಥಕತೆಯೆಡೆಗೆ ಸಾಗಲು ಸಾಧ್ಯವೆನ್ನುವ ಶ್ರೀಗಳು ಇಂದಿರಾ ಗಾಂಧಿ, ಮೂರಾರ್ಜಿ ದೇಸಾಯಿ, ಪಿ.ವಿ.ನರಸಿಂಹರಾವ್, ಬೂಟಾಸಿಂಗ್ ಮೊದಲಾದ ದೇಶ-ವಿದೇಶಗಳ ಗಣ್ಯಾತೀಗಣ್ಯರಿಗೆ ತ್ರಿಕಾಲ ಜ್ಞಾನದ ಮಾಹಿತಿಯೊಂದಿಗೆ ಜೀವ-ಜೀವನ ಕುರಿತು ಮಾರ್ಗದರ್ಶನ ಮಾಡಿರುವರು. ಶ್ರೀಗಳು ತೋರಿದ ದಾರಿಯಲ್ಲಿ ಸಾಗಿದ ಸಾವಿರಾರು ಮಂದಿ ಸಾಧನೆಯಲ್ಲಿ ಯಶಸ್ವಿಯಾಗಿರುವರು.

ಬಾಣಾವರ, ಬಿಕ್ಕೋಡು, ಚಿಕ್ಕನಾಯಕನಹಳ್ಳಿ, ಬೀರೂರು, ಅರಸಿಕೆರೆ, ಬೆಂಗಳೂರು ಇಲ್ಲಿರುವ ಶಾಖಾ ಮಠಗಳಿಗೆ ಸನ್ಮಾರ್ಗದರ್ಶಕರಾಗಿರುವರು. ಸಾಮಾಜಿಕ ಶಾಂತಿ, ಸಾಮಾಜಿಕನ್ಯಾಯವನ್ನು ನೆಲೆಗೊಳಿಸುವ ಸಲುವಾಗಿ ಸರ್ವಧರ್ಮ ಸಮನ್ವಯದ ಹಲವು ಕಾರ್‍ಯಕ್ರಮಗಳನ್ನು, ಮುಸ್ಲಿಂಬಾಂಧವರಿಗಾಗಿ ಹಲವು ಸಮಾರಂಭಗಳನ್ನು ಏರ್ಪಡಿಸಿ, ಯಶಸ್ವಿಯಾಗಿರುವರು

ಸಮಾಜ, ದೇಶ ಶುದ್ಧವಾಗಲು, ವ್ಯಕ್ತಿ ಶುದ್ಧನಾಗಬೇಕು ಎನ್ನುವ ಶ್ರೀಗಳು ದೇಶದಾದ್ಯಂತ ಶಾಂತಿ ನೆಲೆಗೊಳಿಸುವ ಸಲುವಾಗಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವರು. ಶ್ರೀಮಠದಲ್ಲಿ ಸರ್ವ ಸಮಾನತೆಗೆ ಅವಕಾಶವನ್ನು ಕಲ್ಪಿಸಿದವರು.

ಧರ್ಮ, ನೀತಿ ಮತ್ತು ಅಧ್ಯಾತ್ಮದ ಸ್ವರೂಪವನ್ನು ಸರಿಯಾಗಿ ಅರ್ಥೈಸಿಕೊಂಡು, ಅನುಸರಿಸಬೇಕೆಂಬ ಆಶಯ ಶ್ರೀಗಳದು. ವರ್ಣ, ವರ್ಗ, ಜಾತಿ ಮತ್ತು ಲಿಂಗ ತಾರತಮ್ಯದ ಸಮಾಜ ಸುಧಾರಣೆಯಾಗಿ, ಸಮಸಮಾಜ ನಿರ್ಮಾಣವಾಗಬೇಕೆಂಬ ಕಾಳಜಿಯ ಶ್ರೀಗಳ ಜೀವನ ಮತ್ತು ಸಾಧನೆ ಅಭಿನಂದನಾರ್ಹವಾದುದು.

           ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್
         ಸಹಾಯಕ ಪ್ರಾಧ್ಯಾಪಕರು, ಕನ್ನಡಭಾರತಿ, 
         ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-೫೭೭೪೫೧