ಮಡಿವಾಳ ಮಾಚಿದೇವರ ಬಗ್ಗೆ ಡಾ. ಸಂಗಮೇಶ. ಮ.ಕಲಹಾಳ.ಎಂ.ಡಿ ಅವರು ಲೇಖನ ಬರೆದಿದ್ದಾರೆ. ಈ ಲೇಖನಗಳು ಹಲವು ಕಂತುಗಳಲ್ಲಿ ಅಂತರಾಳ ಕಾಲಂ ನಲ್ಲಿ ಪ್ರಕಟಿಸಲಾಗುತ್ತದೆ.
-ಸಂ

ಭಾಗ-೧

ವಚನ ಸಾಹಿತ್ಯ ರಕ್ಷಕ,ಗಣಾಚಾರ ಸಂಪನ್ನ,ವೀರ ಶರಣ ಶ್ರೀ ಮಡಿವಾಳ ಮಾಚಿದೇವರು

೧೨ನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಆಂದೋಲನವು ಅಮೋಘ ಹಾಗೂ ಅಪೂರ್ವವಾದುದು.ಅಂದಿನ ಸಮಾಜದಲ್ಲಿ ವೈದಿಕ ಧರ್ಮದ ವರ್ಣವ್ಯವಸ್ಥೆಯ ಪ್ರಭಾವದಿಂದಾಗಿ ಮೇಲು ಕೀಳೆಂಬ ಜಾತಿ ವ್ಯವಸ್ಥೆಯಡಿ ಕೆಳಜಾತಿಯವರು ಸಾಮಾಜಿಕ ಹಾಗೂ ಆರ್ಥಿಕ ಶೋಷಣೆಗೆ ಒಳಗಾಗಿದ್ದರು.ಮಹಿಳೆಯರಿಗೆ ಸಮಾನ ಸ್ಥಾನಮಾನ ಇರಲಿಲ್ಲ. ಧರ್ಮದ ಆಚರಣೆ ಕ್ಲಿಷ್ಟವಾಗಿತ್ತು.ಧಾರ್ಮಿಕ ಸಂಪ್ರದಾಯದ ಹೆಸರಿನಲ್ಲಿ ಮೂಢನಂಬಿಕೆ ಮತ್ತು ಕಂದಾಚಾರಗಳು ರಾರಾಜಿಸುತ್ತಿದ್ದವು.ಅಸ್ಪೃಶ್ಯರು, ಮಹಿಳೆಯರು, ನಿರಾಶೆ ಹತಾಶೆ ಶೋಷಣೆಗಳಿಂದ ಅಸಹನೀಯ ಬದುಕಿಗೆ ತುತ್ತಾಗಿದ್ದರು.ಧರ್ಮದ ಸುಧಾರಣೆ ಹಾಗೂ ಸಮಾನತೆ, ಸರ್ವರಿಗೂ ಸಮಪಾಲು, ಸಹಬಾಳು ಒದಗಿಸಲು ಬಸವಣ್ಣ ಮಾಚಿದೇವಾ ಇತ್ಯಾದಿ ಶರಣರು ಸಾಮಾಜಿಕ ಪರಿವರ್ತನೆಯ ಕ್ರಾಂತಿಯನ್ನು ಕೈಗೊಂಡರು.
ಹೀಗಾಗಿ ಮಾಚಿದೇವರು ಶುದ್ಧ, ಸಿದ್ಧ ಬದುಕಿನ ಶರಣ, ಸಾಮಾಜಿಕ ಸುಧಾರಣಾ ಚಳುವಳಿಯ ದಂಡನಾಯಕ, ಸಾಮಾಜಿಕ ಹೊಣೆ ನಿರ್ವಹಿಸಿದ ಗಣಾಚಾರ ಸಂಪನ್ನ, ಶರಣರನ್ನು ಮತ್ತು ವಚನ ಸಾಹಿತ್ಯವನ್ನು ರಕ್ಷಿಸಿದ ವೀರಶರಣ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅಂದು ವಚನ ಸಾಹಿತ್ಯ ರಕ್ಷಿಸದಿದ್ದಲ್ಲಿ ಶರಣ ಧರ್ಮಕ್ಕೆ, ಶರಣ ಸಾಹಿತ್ಯಕ್ಕೆ ಇಂದು ಜೀವಂತಿಕೆಯಿಂದ ಇರಲು ಸಾಧ್ಯವಾಗುತ್ತಿದ್ದಿಲ್ಲ. ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಪರಿವರ್ತನೆಗಾಗಿ ಸತ್ಯ, ನೇರ, ನಿಷ್ಠುರ ನಡೆ ನುಡಿಗಳಿಂದ ಸಮಾಜವನ್ನು ಜಾಗೃತಗೊಳಿಸಿದ ದಾರ್ಶನಿಕನಾಗಿದ್ದಾನೆ.

ಅವತಾರಿ ಪುರುಷ :
ದಕ್ಷನನ್ನು ಸಂಹಾರ ಮಾಡಿ ಅತಿ ಉತ್ಸಾಹದಿಂದ ಶಿವನನ್ನು ಕಾಣಲು ವೀರಭದ್ರ ಶಿವನ ಸಭೆಯೊಳಗೆ ಬರುತ್ತಿರುವಾಗ, ಸಭೆಯಲ್ಲಿರುವ ಶಿವಭಕ್ತನಿಗೆ ಈತನ ಉತ್ತರಿಯ ಸೆರಗು ತಾಕುತ್ತದೆ. ವಿಜಯದ ಉದ್ವೇಗದಲ್ಲಿ ಆದ ಈ ತಪ್ಪಿಗೆ ಭೂಲೋಕದಲ್ಲಿ ಮಡಿವಾಳನಾಗಿ ಜನಿಸಿ ಶರಣರ ವಸ್ತ್ರಗಳನ್ನು ಮಡಿ ಮಾಡುವ ಕಾಯಕ ಪೂರೈಸಿ ದೋಷಮುಕ್ತನಾಗಿ ಬರುವಂತೆ ಶಿವನ ಆದೇಶವಾಗುತ್ತದೆ ಎಂಬ ಕಥೆಯು ಭಾವುಕ ಭಕ್ತರ ಬಣ್ಣನೆಯಾಗಿದೆ. ಹೀಗಾಗಿ ಮಾಚಿದೇವರುವೀರಭದ್ರನ ದೇವಾಂಶ ಸಂಭೂತ ಅವತಾರ ಪುರುಷನೆಂದು ಜನ ನಂಬುತ್ತಾರೆ.

ಉದಯಿಸಿದ ಶರಣ ಕಿರಣ :
ಬಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಪರ್ವತಯ್ಯ ಸುಜ್ಞಾನಮ್ಮ ದಂಪತಿಗಳ ಪುಣ್ಯ ಉದರದಲ್ಲಿ ಜನಿಸಿದ ಶರಣ ಕಿರಣ ಮಾಚಯ್ಯ.ಕ್ರಿ.ಶ. ೧೧೨೦ರಿಂದ ೧೧೩೦ರ ನಡುವೆ ಜನಿಸಿದ್ದಾನೆಂದು ಪ್ರತಿಪಾದಿಸಲಾಗಿದೆ.ಹಿಪ್ಪರಿಗೆಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ಹೊಳೆ ಪ್ರವಾಹದಿಂದ ಕಟ್ಟಿರಲು ಹೊಳೆಗೋಲ ಹಂಗಿಲ್ಲದೆ ಶಿವನನ್ನು ನೆನೆಯಲು ನದಿ ಇಬ್ಬಾಗವಾಯಿತು.ಆ ಮಾರ್ಗ ಮಧ್ಯದಿಂದ ಮಾಚಿತಂದೆ ನಡೆದು ಬರುತ್ತಾನೆಂದು ’ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ’ ತಿಳಿಸುತ್ತದೆ.

ಕ್ರಾಂತಿಕಾರಿ ಗುರುವಿನ ಬೋಧನೆ:
ಮಾಚಿದೇವನ ವಚನಗಳನ್ನು ಅವಲೋಕಿಸಿದಾಗ ಅವನೊಬ್ಬ ಅಪಾರ ಜ್ಞಾನಸಂಪನ್ನನಾಗಿದ್ದನೆಂದು ತಿಳಿಯುತ್ತದೆ.ಲಿಂಗವಂತ ತತ್ವನಿಷ್ಠ, ನಿಜಾಚರಣೆಗಳ ಪಾಲಕ, ಪ್ರಾಣಿಹಿಂಸೆ ಪರನಿಂದೆ ದ್ವೇಷಕ, ಸ್ತ್ರೀ ರಕ್ಷಕ, ವಿಶ್ವಪ್ರೇಮಿ ವ್ಯಕ್ತಿತ್ವ ಹೊಂದಲು ಉತ್ತಮ ಗುರುಗಳ ಬೋಧನೆ ಸಿಕ್ಕಿದ್ದು ಮನವರಿಕೆಯಾಗುತ್ತದೆ.ಶೂದ್ರರಿಗೆ ಶಿಕ್ಷಣ ನಿಷೇಧಿಸಲ್ಪಟ್ಟ ಕಾಲದಲ್ಲಿ ಅಕ್ಷರ ಜ್ಞಾನ ಸಕಲ ಶಾಸ್ತ್ರಗಳನ್ನು ಹೇಳಿಕೊಟ್ಟ ಗುರು ಮಲ್ಲಿಕಾರ್ಜುನಯ್ಯ ಸ್ವಾಮಿಗಳು.ನಿಜಕ್ಕೂ ಅವರು ಒಬ್ಬ ಕ್ರಾಂತಿಕಾರಿ ಗುರುವೆಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ.

 ಬರುತ್ತದೆ.
  • ಡಾ. ಸಂಗಮೇಶ. ಮ.ಕಲಹಾಳ.ಎಂ.ಡಿ