ಮೈಸೂರು: ನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಮೈಸೂರು ಮಹಾನಗರದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಧರ್ಮಪ್ರಕಾಶ ಡಿ. ಬನುಮಯ್ಯ ವಿದ್ಯಾಸಂಸ್ಥೆಯು ತನ್ನ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ.

ಸಂಸ್ಥೆಯ ಸಂಸ್ಥಾಪಕರು ಮೈಸೂರಿನ ಪ್ರಖ್ಯಾತ ಮಾನವ ಹಿತಾಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದ ಪ್ರಾತಃಸ್ಮರಣೀಯ ಧರ್ಮಪ್ರಕಾಶ ರಾವ್ ಬಹದ್ದೂರ್ ಸಾಹುಕಾರ ಡಿ. ಬನುಮಯ್ಯನವರು (ಜನನ:05.07.1860). ಶ್ರೀಯುತರು ಅಂಗಡಿಯೊಂದರಲ್ಲಿ ಚಾಕರಿಗೆ ಸೇರಿಕೊಂಡು, ಸ್ವಂತ ವ್ಯಾಪಾರ ಪ್ರಾರಂಭಿಸಿ ಹಂತಹಂತವಾಗಿ ಉತ್ತುಂಗಕ್ಕೇರಿ, ಮೈಸೂರಿನ ವರ್ತಕ-ರಾಜಕುಮಾರರೆಂದು ಖ್ಯಾತಿವೆತ್ತ ಅವರ ಯಶೋಗಾಥೆ ಅಸಾಧಾರಣ. ಕೆಲವು ಸಮಾನ ಮನಸ್ಕ ಮಹನೀಯರೊಡಗೂಡಿ ಅವರು 1908 ರಲ್ಲಿ ಕುಂಚಟಿಗರ ಆಂಗ್ಲೋ-ವರ್ನಾಕ್ಯುಲರ್ ಶಾಲೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಈ ಶಾಲೆಯು 1916 ರಲ್ಲಿ ಡಿ. ಬನುಮಯ್ಯ ಶಾಲೆಯಾಗಿ ಪರಿವರ್ತಿತವಾಯಿತು. ಶಾಲೆಗಾಗಿ ನಿರ್ಮಿಸಿದ ಭವ್ಯ ಭವನ 1917ರಲ್ಲಿ ಉದ್ಘಾಟನೆಯಾಯಿತು. ಅರಮನೆಗಳ ನಗರಿಯ ಪ್ರಮುಖ ಪಾರಂಪರಿಕ ಕಟ್ಟಡಗಳಲ್ಲಿ ಇದೂ ಒಂದೆಂದು ಪರಿಗಣಿತವಾಗಿರುವುದು ಹೆಮ್ಮೆಯ ಸಂಗತಿ. ಆನಂತರ ಶಾಲೆಯು ಪ್ರೌಢಶಾಲೆಯಾಗಿ ಉನ್ನತೀಕರಿಸಲ್ಪಟ್ಟಿತು. ಶಾಲೆಯ ನಿರ್ವಹಣೆಗಾಗಿ ಬನುಮಯ್ಯನವರು 1919 ರ ಅಕ್ಟೋಬರ್ 02 ರಲ್ಲಿ ಒಂದು ಟ್ರಸ್ಟನ್ನು ಸ್ಥಾಪಿಸಿ ನೋಂದಾಯಿಸಿದರು. ಪ್ರಮುಖವಾಗಿ ಶಿಕ್ಷಣ ವಂಚಿತರಾದ ಹಿಂದುಳಿದ ಸಮುದಾಯಗಳ ಹಾಗೂ ಗ್ರಾಮೀಣ ಬಡ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವುದು ಅದರ ಉದಾತ್ತ ಆಶಯವಾಗಿತ್ತು. ಕಡು ಬಡತನದಿಂದಾಗಿ ಬಾಲ್ಯದಲ್ಲಿ ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿದ್ದ ಬನುಮಯ್ಯನವರು, ಸಮಾಜದ ದೀನದಲಿತರ ಮಕ್ಕಳಿಗೆ ಶಿಕ್ಷಣ ಒದಗಿಸಬೇಕೆಂಬ ಬೃಹತ್ ಕನಸು ಹೊಂದಿದ್ದರು. ಅವರು ಈ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಅದನ್ನು ನನಸಾಗಿಸಿದರು. ಆಧ್ಯಾತ್ಮಿಕ ಜೀವಿಯಾದ ಬನುಮ್ಯಯನವರು ತಾವು ಕಷ್ಟಪಟ್ಟು ಸಂಪಾದಿಸಿದ ಸಂಪತ್ತಿನ ಬಹ್ವಂಶವನ್ನು ಸಾಮಾಜಿಕ, ಧಾರ್ಮಿಕ ಉದ್ಧೇಶಗಳಿಗಾಗಿ ದಾನ ಮಾಡಿದರು. ಅದೇ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಭಾರತದ ಸ್ವಾತಂತ್ರ್ಯ ಚಳುವಳಿಗೂ ಅವರು ಸಾಕಷ್ಟು ಧನಸಹಾಯ ಮಾಡಿದ್ದಲ್ಲದೆ, ಮಹಾತ್ಮರು 1927ರಲ್ಲಿ ಮೈಸೂರಿಗೆ ಭೇಟಿ ನೀಡಿದಾಗ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಅವರನ್ನು ಬರಮಾಡಿಕೊಂಡರು. ಇಷ್ಟೆಲ್ಲಾ ಸಾಧನೆಗೈದ ಬನುಮಯ್ಯನವರು 1932ರ ಸೆಪ್ಟಂಬರ್ 26 ರಲ್ಲಿ ಇಹಲೋಕ ತ್ಯಜಿಸಿದರು.

ಡಿ. ಬನುಮಯ್ಯನವರ ಸುಪುತ್ರ ಡಿ.ಬಿ. ವಿಶ್ವಂಭರಯ್ಯ ಹಾಗೂ ಪೌತ್ರ ಬಿ.ವಿ. ಬನುಮಯ್ಯನವರು (1924-1974) 1949ರಲ್ಲಿ ಈ ಮಹಾನ್ ವಣಿಕ-ಸ್ಥಾಪಕರ ಸ್ಮಾರಕಾರ್ಥ ಇಂಟರ್ ಮೀಡಿಯಟ್ ವಾಣಿಜ್ಯಶಾಸ್ತ್ರ ಕಾಲೇಜನ್ನು ಸ್ಥಾಪಿಸಿದರು. 1953 ರಲ್ಲಿ ಬಿ.ಕಾಂ., 1959 ರಲ್ಲಿ ಬಿ.ಎ. ಹಾಗೂ ಬಿ.ಬಿ.ಎಂ. (ಪ್ರಸ್ತುತ ಬಿ.ಬಿ.ಎ.) ಪದವಿ ಶಿಕ್ಷಣ ಕ್ರಮಗಳನ್ನು ಪ್ರಾರಂಭಿಸಲಾಯಿತು. ಹಳೇ ಮೈಸೂರು ರಾಜ್ಯದ ಪ್ರಪ್ರಥಮ ಖಾಸಗಿ ವಾಣಿಜ್ಯಶಾಸ್ತ್ರ ಕಾಲೇಜು ಎಂಬ ಹೆಗ್ಗಳಿಕೆಗೂ ಈ ಕಾಲೇಜು ಪಾತ್ರವಾಯಿತು. ಕಾಲೇಜಿನ ಸ್ಥಾಪಕ-ಪ್ರಾಂಶುಪಾಲರೂ, ಸಂಸ್ಥೆಯ ಅಧ್ಯಕ್ಷರೂ ಆದ ಬಿ.ವಿ. ಬನುಮಯ್ಯನವರು ಅಸಾಧಾರಣ ದಾರ್ಶನಿಕ ಶಿಕ್ಷಣವೇತ್ತರಾಗಿದ್ದರು. ಅವರ ಅವಧಿಯಲ್ಲಿ ಸಂಸ್ಥೆಯು ಉತ್ತರೋತ್ತರವಾಗಿ ಪ್ರವರ್ಧಿಸಿತು. ಶಾಲೆಯ ಬಡ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯ್ನನು 60ರ ದಶಕದಲ್ಲಿಯೇ ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾಗೆಯೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಟ್ಯುಟೋರಿಯಲ್ ಪದ್ಧತಿ ಮತ್ತು ಬೇಸಿಗೆ ಶಾಲೆಯನ್ನು ಪರಿಚಯಿಸಿದರು. ಕಾಲೇಜಿನಲ್ಲಿ ದೇಶದಲ್ಲೇ ವಿನೂತನವಾದ ಯೋಜನಾ ವೇದಿಕೆಯನ್ನು ರಚಿಸಿ ಪ್ರಖ್ಯಾತರಾದರು. ಸಂಸ್ಥೆಯು 1972ರಲ್ಲಿ ಅರಮನೆ ಮೋತಿಖಾನೆ ಎಂದು ಪ್ರಖ್ಯಾತವಾದ ಭವ್ಯ ಪಾರಂಪರಿಕ ಕಟ್ಟಡವನ್ನು ಖರೀದಿಸಿತು. ಮೈಸೂರಿನ ಉದಯಗಿರಿ ಬಡಾವಣೆಯಲ್ಲಿ ಪಾಲಿಟೆಕ್ನಿಕ್, ಐಟಿಐ, ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿದೆ. ಯರಗನಹಳ್ಳಿ ಹಾಗೂ ಹಂಚ್ಯಾ ಬಡಾವಣೆಗಳಲ್ಲಿ ಸಹ ಶಾಲೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ.

ಡಿ. ಬನುಮಯ್ಯ ವಿದ್ಯಾಸಂಸ್ಥೆಯು ಪ್ರಸ್ತುತ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿಯವರೆಗೆ 12 ಅಂಗಸಂಸ್ಥೆಗಳಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಸುಲಭಸಾಧ್ಯ ವೆಚ್ಚದಲ್ಲಿ ನೀಡಲು ಶ್ರಮಿಸುತ್ತಿದೆ. ನಗರದ ಹೃದಯ ಭಾಗದಲ್ಲಿರುವ ವಿದ್ಯಾಸಂಸ್ಥೆಯ ಶಾಲಾಕಾಲೇಜುಗಳು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅಸಂಖ್ಯಾತ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ದೇಶವಿದೇಶಗಳಲ್ಲಿ ಮನುಕುಲಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿ ವಿಖ್ಯಾತರಾಗಿದ್ದಾರೆ. ಸದರಿ ಸಂಸ್ಥೆಯ ಬಹುತೇಕ ವಿದ್ಯಾರ್ಥಿಗಳು ಪ್ರಮುಖವಾಗಿ ವಾಣಿಜ್ಯ, ವ್ಯವಹಾರ, ಉದ್ಯಮ, ಬ್ಯಾಂಕಿಂಗ್, ಆಡಳಿತ ನಿರ್ವಹಣೆ, ಶಿಕ್ಷಣ ಮತ್ತು ಲಲಿತ ಕಲಾ ಕ್ಷೇತ್ರಗಳಲ್ಲಿ ರಾಷ್ಟ್ರನಿರ್ಮಾಣಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಧರ್ಮಪ್ರಕಾಶ ಡಿ. ಬನುಮಯ್ಯ ವಿದ್ಯಾಸಂಸ್ಥೆಯು ಶತಮಾನ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಸಂಸ್ಥೆಯು ನೋಂದಾಯಿಸಲ್ಪಟ್ಟ ಚರಿತ್ರಾರ್ಹ ದಿನಾಂಕವನ್ನು ಪರಿಗಣಿಸಿ ಆಡಳಿತ ಮಂಡಳಿಯು ಇದೇ 2018ರ ಅಕ್ಟೋಬರ್ 02 ರಿಂದ ‘ಶತಮಾನೋತ್ಸವ ವರ್ಷ’ವನ್ನು ಆಚರಿಸಲು ನಿರ್ಧರಿಸಿದೆ. ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ “ಶತಮಾನೋತ್ಸವ”ವನ್ನು 2019ರ ಅಕ್ಟೋಬರ್ 02 ರಂದು ಭವ್ಯ ಸಮಾರೋಪ ಸಮಾರಂಭದೊಂದಿಗೆ ಸಂಪನ್ನಗೊಳಿಸಲಾಗುವುದು. ಶತಮಾನೋತ್ಸವ ಸಂಭ್ರಮದ ಸವಿನೆನಪಿಗಾಗಿ ಶತಮಾನೋತ್ಸವ ಭವನವೊಂದನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರು ಉದಾರ ಧನಸಹಾಯ ಮಾಡುವ ಮೂಲಕ ನಮ್ಮೀ ವಿದ್ಯಾಭಿಯಾನದಲ್ಲಿ ನೆರವಾಗಬೇಕೆಂದೂ ಸಹ ಆಡಳಿತ ಮಂಡಳಿಯು ವಿನಂತಿಸುತ್ತದೆ.

 

  • ಶತಮಾನೋತ್ಸವ ಸಂಭ್ರಮದಲ್ಲಿ ಮೈಸೂರಿನ ಡಿ. ಬನುಮಯ್ಯ ವಿದ್ಯಾಸಂಸ್ಥೆ