ಸಾಮಾಜಿಕಸೇವೆ, ಧಾರ್ಮಿಕ ಸೇವೆ ಮತ್ತು ಆಧ್ಯಾತ್ಮಿಕ ಸೇವೆಗೆ ಸಂಪೂರ್ಣ ಸಮರ್ಪಿಸಿಕೊಂಡಿರುವ ತ್ಯಾಗಜೀವಿ ಮಹಾದೇವಮ್ಮನವರು. ಅವರ ಸಾಮೀಪ್ಯ ಬಂದವರು ಸಮಾಜ, ನಾಡು, ರಾಷ್ಟ್ರ ಮತ್ತು ವಿಶ್ವ ಸೌಹಾರ್ಧಯುತವಾಗಿ ಬಾಳಿ ಬೆಳಗಲು ಪ್ರೇರಕವಾದ ದಿವ್ಯ ಶಕ್ತಿಗಳಾಗಿ ಬೆಳುಗುತ್ತಾರೆಂಬುದಕ್ಕೆ ಹಲವು ಭಕ್ತರ ಬದುಕೇ ಸಾಕ್ಷಿಯಾಗಿ ಕಂಗೊಳಿಸುತ್ತದೆ. ಮಾತೃ ಮಹಾದೇವಮ್ಮನವರ ನಡೆ-ನುಡಿಯ ಧರ್ಮದ ಅನುಷ್ಠಾನಗಳೇ ಅವರನ್ನು ಅಧ್ಯಾತ್ಮದ ಅತ್ಯುನ್ನತ ಸ್ಥಾನಕ್ಕೆ ನಿಲ್ಲಿಸಿವೆ. ಮಹಾದೇವಮ್ಮ ನಿಜದೈವ, ನಮ್ಮೆಲ್ಲರ ಕಣ್ಮುಂದೆ ಕಾಣುವ ಕರುಣೆಯ ದೈವ. ಸಹಸ್ರ ಸಹಸ್ರ ಭಕ್ತರ ಹೃದಯದಲ್ಲಿ ನೆಲೆಯಾಗಿರುವ ಮಹಾದೇವಮ್ಮನವರ ಸಾಮಾಜಿಕ ಸೇವೆ ಅಪೂರ್ವವಾದುದು. ಚಿಕ್ಕಗೊಂಡನಹಳ್ಳಿ ಗ್ರಾಮದ ಗಂಗಮ್ಮ-ಪಾಲಯ್ಯ ಪುಣ್ಯದಂಪತಿಗಳು ಮಡಿಲಲ್ಲಿ ೧೯೬೪ರಲ್ಲಿ ಜನಿಸಿದವರು. ಬಾಲ್ಯದಲ್ಲಿಯೇ ಅತೀಂದ್ರಿಯಶಕ್ತಿಯ ಹಿರಿಮೆಯು ಮಹದೇವಮ್ಮನವರ ಮೂಲಕ ಪ್ರಕಟವಾಗಿದೆ. ಉಕ್ಕಡಗ್ರಾತ್ರಿ ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿಯ ಪರಮ ಭಕ್ತರಾದ ಮಹದೇವಮ್ಮನವರು ಶ್ರೀಗುರುವಿನ ಅನುಗ್ರಹದಂತೆ ಚಿತ್ರದುರ್ಗ ತಾಲೂಕಿನ ಬೆಳಗಟ್ಟದಲ್ಲಿ ನೆಲೆಸಿ, ೧೯೮೩ರಲ್ಲಿ ಶ್ರೀಗುರುವಿನ ಮಠವನ್ನು ಸ್ಥಾಪಿಸಿ ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಸೇವೆಯಲ್ಲಿ ನಿರತರಾದವರು.
ಬದುಕಲು ಅಸಾಧ್ಯವೆಂದು ಆತ್ಮಹತ್ಯೆಯ ಹಾದಿ ಹಿಡಿದು ದೈಹಿಕ ಬಾಧೆಗಳಿಂದ ನರಳುವ, ಮಾನಸಿಕ ಹಿಂಸೆಗಳಿಂದ ಕೊಳೆಯುವ ಸಹಸ್ರ ಸಹಸ್ರ ಮಂದಿಗೆ, ಕಾಡುವ ಕಾಯಿಲೆಗಳಿಂದ ಕಂಗೆಟ್ಟವರಿಗೆ, ದುಷ್ಟರ ದುರಹಂಕಾರಕ್ಕೆ ಬಲಿಯಾಗಿ ಬಳಲುವವರಿಗೆ, ಸಮಸ್ಯೆಗಳ ಸಂಸಾರದಿಂದ ಬೇಯುತ್ತಿದ್ದವರಿಗೆ, ಭೂತ ಪ್ರೇತ, ಮಾಟಮಂತ್ರಗಳಿಗೆ ಬಲಿಯಾಗಿ ನರಳುತ್ತಿದ್ದವರಿಗೆ ಬದುಕುವ ಭರವಸೆಯ ದಾರಿಯನ್ನು ತೋರಿದ ಮತ್ತು ತೋರುತ್ತಿರುವವರು ಕರುಣೆಯ ಕಡಲಿನ ‘ಮಮತೆಯ ಮಡಿಲು ಮಾತೃಮಹಾದೇವಮ್ಮ’ ಅವರು.
ಶ್ರೀಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ವ್ಯಕ್ತಿತ್ವ ವಿಕಸನ ಎಂಬ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸಲ್ಲಿಸುತ್ತಿರುವ ಸೇವೆಯು ಆದರ್ಶ ಮತ್ತು ಅನುಕರಣೀಯವಾದುದು. ಪ್ರತಿ ಸೋಮವಾರ ಮತ್ತು ಗುರುವಾರ ಭಕ್ತರ ಸಂಕಷ್ಟಗಳಿಗೆ ಪರಿಹಾರ ಸೂಚಿಸುವ ಸೇವೆಯನ್ನು ನಿರ್ವಹಿಸುವ ಮಹದೇವಮ್ಮ ಅವರು ಪ್ರತಿ ಪೂರ್ಣಿಮೆ ಮತ್ತು ಅಮವಾಸ್ಯೆಯ ದಿನಗಳಂದು ಸಹಸ್ರ ಸಹಸ್ರ ಜನರ ಸಂಕಷ್ಟಗಳ ನಿವಾರಿಸುವ ಸಲುವಾಗಿ ಜ್ಞಾನದಾಸೋಹ ಮತ್ತು ಅನ್ನದಾಸೋಹ ಕಾರ್‍ಯಕ್ರಮಗಳನ್ನು ಏರ್ಪಡಿಸಿ, ನಿರ್ವಹಿಸುತ್ತಿರುವರು.
ನಮ್ಮ ಆಚಾರ ವಿಚಾರಗಳು ಲೋಕಹಿತವಾಗಿರಬೇಕು. ಶ್ರೀಗುರು ಮೆಚ್ಚಿ ಸೈಸೈ ಎಂದು ಲೋಕನಾಥನೊಳಗೆ ಲೋಕೈಕ್ಯರಾಗಿಸಬೇಕು. ಇದುವೆ ನಮ್ಮ ಧರ್ಮ. ಇದು ಶತ್ರುಗಳಿಲ್ಲದಂತಹ, ಅನುದಿನವು ಆನಂದ ನೀಡುವಂತಹ ಅಜ್ಜಯ್ಯಧರ್ಮ. ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸುವುದೇ ಧರ್ಮದ ತತ್ವ ಮತ್ತು ಸತ್ವ. ವ್ಯಷ್ಟಿ ಮತ್ತು ಸಮಷ್ಟಿಯ ಸಂವರ್ಧನೆಗೆ ಧರ್ಮ ಚಾಲಕ ಶಕ್ತಿ ಎನ್ನುವ ಮಹಾದೇವಮ್ಮ ಅವರು ಲೋಕ ಕಲ್ಯಾಣಕ್ಕಾಗಿ ಪವಿತ್ರ ತಾಣಗಳಿಗೆ ಪಾದಯಾತ್ರೆಯನ್ನು ಕೈಗೊಂಡವರು.
‘ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗುವುದು ಹೇಗೆ?’ ಎಂಬ ವಿಷಯವೇ ಈ ಜ್ಞಾನದಾಸೋಹದ ಕೇಂದ್ರಕಾಳಜಿ ಎನ್ನುತ್ತಾರೆ ಅಮ್ಮನವರು. ಶರಣರು ಮತ್ತು ಭಕ್ತರಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿಸುತ್ತಾ ಸಂಸ್ಕಾರಗಳನ್ನು ಬೆಳೆಸುವರು. ‘ಗೋಸುಂಬೆಯಂತೆ ಬಣ್ಣ ಬದಲಿಸುವ ಕಪಟತನಗಳಿಂದ ಮುಕ್ತರಾಗಿ ಮಕ್ಕಳಾ’ ಎನ್ನುವ ಅಮ್ಮನವರಿಗೆ ಶ್ರೀಮಠಕ್ಕೆ ಬಂದವರೆಲ್ಲ ಸದ್ವರ್ತನೆಯ ಮಹಾ ಸೌಧವಾಗಬೇಕೆಂಬ ಕಾಳಜಿ.
ಅಮ್ಮನವರದು ಸಾಮಾಜಿಕ ಭಕ್ತಿಯೋಗ. ಸಾಮಾಜಿಕ ಏಣಿಶ್ರೇಣಿಯನ್ನು ನಾಶಗೊಳಿಸಿ ಭಕ್ತಿಮಾರ್ಗದೊಳಗೆ ಬಂಧಿಸಿ, ಭಕ್ತಿಯೋಗವನ್ನು ಧಾರೆಯೆರೆಯುವ ಅಮ್ಮಮಹಾದೇವಮ್ಮನವರಲ್ಲಿನ ಶರಣರಲ್ಲಿ ಸಮಾಜದೊಳಗಿರುವ ಎಲ್ಲ ಜಾತಿಯವರಿದ್ದಾರೆ. ಹನ್ನೆರಡನೆ ಶತಮಾನದ ಶಿವಶರಣರ ಅನುಭವಮಂಟಪದ ಆದರ್ಶಗಳೊಂದಿಗೆ ಕೇವಲ ಒಂದು ಒಂದು ತತ್ವ, ಸಿದ್ಧಾಂತಕ್ಕೆ ಮಾತ್ರ ಸೀಮಿತವಾಗದೆ, ಎಲ್ಲ ಧರ್ಮ, ಸಿದ್ಧಾಂತಗಳಲ್ಲಿನ ಸತ್ ವಿಚಾರಗಳಿಗೆ ಮಾನ್ಯತೆ ನೀಡಿ, ಪ್ರಕೃತಿಯ ಪ್ರಖರತೆಗೆ ನಮಿಸುವ, ಸತ್ಯ, ನ್ಯಾಯ, ನೀತಿಯನ್ನು ರೂಢಿಸಿಕೊಳ್ಳುವ ಮನೋಧರ್ಮದ ಬೀಜವನ್ನು ಬಿತ್ತಿ ಬೆಳೆಯುವ ಬೆಳೆಗಾರರು ಅಮ್ಮ ಮಹಾದೇವಮ್ಮನವರು. ಲೋಕ ಕಲ್ಯಾಣಕ್ಕಾಗಿ ಶ್ರೀಗುರುವಿನ ಆದೇಶದಂತೆ ಪ್ರತಿ ಶಿವರಾತ್ರಿಯಲ್ಲಿ ಜರುಗುವ ರಥೋತ್ಸವ ನಂತರ ಅಮ್ಮನವರು ಶರಣರು ಮತ್ತು ಭಕ್ತರೊಂದಿಗೆ ಪಾದಯಾತ್ರೆಗಳನ್ನು ಕೈಗೊಳ್ಳುತ್ತಿರವರು.
“ಮಹದೇವಮ್ಮ ನಿನ್ನ ಮಡಿಲಲಿ| ಸಂತಸ ಕರುಣಿಸುವ ಒಡಲು|| ಬಡತನದ ಬೇಗೆಯಲಿ ಹುಟ್ಟಿ| ಸಾವಿರ ಸಂಕಟಗಳನು ಮೆಟ್ಟಿ||ಬೆಳಗಟ್ಟದಲ್ಲಿ ನೆಲೆಯಾದ| ಅಜ್ಜಯ್ಯನ ಮಾನಸ ಪುತ್ರಿ| ನೀನೇ ಸಹನೆಯ ಧಾತ್ರಿ|| ಸಂಸಾರ ಸಾಗರದಲ್ಲಿ ಕಳೆದು ಹೋಗದೆ| ಬೆಳೆದು ಬೆಳಗಿದ ಬೆಳಗಟ್ಟಾಧೀಶ್ವರಿ ನೀನಮ್ಮ||ಭವಿಗಳ ಬಂಧನಕ್ಕೆ ಬೇಸರವಾಗದ ಬೆಟ್ಟ ನೀನಾದಮ್ಮ|ಅಮ್ಮ ಮಹದೇವಮ್ಮ ಕರುಣೆಯ ಸಾಗರ ನೀನಮ್ಮ|| ನೊಂದು ಬಂದ ಜನಕೆ|ಬೆಂದು ಬಂದ ಮನಕೆ|ಶಾಂತಿ ಬಿತ್ತಿ ಬೆಳಸಿದ ಮಹಾ ತಾಯಿ ಮಹದೇವಮ್ಮ||ಕಪಟಿಗಳ ಕಲ್ಮಳೆಗೆ ಕರಗದೆ|ಕುಹಕಿಗಳ ಕುತಂತ್ರಕ್ಕೆ ಕುಗ್ಗದೆ|ಸುಗಂಧದ ಹೆಮ್ಮರ ನೀನಮ್ಮ|ಅಮ್ಮ ಮಹದೇವಮ್ಮ ಶಾಂತಾ ಮೂರ್ತಿ ನೀನಮ್ಮ|| ಎಂಬ ಕವಿವಾಣಿಯಂತೆ ಬೆಳಗುತ್ತಿರುವ ನಂದಾದೀಪ ಅಮ್ಮ ಮಹಾದೇವಮ್ಮನವರು. ಅಮ್ಮನವರಿಗೆ ಬಡ ಮಕ್ಕಳೆಂದರೆ ಬಹು ಕನಿಕರ. ಹಾಗಾಗಿ ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಶ್ರೀಗುರುವಿನ ಜಾತ್ರೆಯ ಸಂದರ್ಭದಲ್ಲಿ ಪುಸ್ತಕ ಪೆನ್ನು ಕೊಟ್ಟು, ಶಿಕ್ಷಣ ಪಡೆಯಲು ಉತ್ತೇಜಿಸುವರು.
’ಅರಿದೆಡೆ ಶರಣ, ಮರೆತಡೆ ಮಾನವ’ ಎಂಬ ಬಸವಣ್ಣನವರ ನುಡಿಯಂತೆ ಮರೆತ ಮಾನವರಿಗೆ ನೋವು ನಿವಾರಿಸುವ ದಿವ್ಯಔಷಧಿಯಂತೆ ಸೇವೆ ಸಲ್ಲಿಸುತ್ತಿರುವ ಮಹಾದೇವಮ್ಮನವರು ಕರ್ಮಯೋಗಿ, ಪೂಜೆ, ಹೋಮಗಳಲ್ಲಿ ನಿರತರಾದರಂತೆ ಕೃಷಿ ಕಾಯಕದಲ್ಲೂ ತಲ್ಲೀನರಾಗಿ ಕಾರ್‍ಯ ನಿರ್ವಹಿಸುವ ಅಮ್ಮನವರು ಕಳೆ ಕೀಳುವುದು, ಬಿತ್ತುವುದು, ರಾಗಿ ಕೋಯ್ಯುವುದು, ಸೇಂಗ ಕಿಳುವುದು, ಈರುಳ್ಳಿ ಎಚ್ಚುವುದು, ದನಕರಗಳನ್ನು ಕಾಯುವುದು ಮೊದಲಾದ ಕೆಲಸಗಳನ್ನು ನಿರ್ವಹಿಸುವರು. ಅಮ್ಮನವರು ಸುಮ್ಮನೆ ಕುಳಿತುಕೊಳ್ಳವರಲ್ಲ. ಅವರು ಸುಮ್ಮನೆ ಕಾಲಕಳೆದ ದಿನಗಳೇ ಇಲ್ಲ. ಸದಾ ಪಾದರಸದಂತೆ ಸದಾ ಕ್ರಿಯಾಶೀಲರು. ಲೋಕದ ಕಷ್ಟ ಕಾರ್ಪಣ್ಯಗಳನ್ನು ಕಂಡು ಕನಿಕರ ಪಡುವ ಕರುಣಾ ದೇವತೆ ಮಹಾದೇವಮ್ಮ ನವರ ಸಾಧನೆ ಮತ್ತು ಸೇವೆ ಸದ್ದಿಲ್ಲದೆ ನಡೆಯುವಂತಹದ್ದು.
ದೀನ ದಲಿತರ ಉದ್ಧಾರಕ್ಕೆ ಪ್ರತಿ ವ್ಯಕ್ತಿಯೊಳಗಿನ ಶಕ್ತಿಯನ್ನು ಅನಾವರಣಗೊಳಿಸುವ ಸಲುವಾಗಿ ಟೊಂಕ ಕಟ್ಟಿ ಸೇವೆ ಮಾಡುತ್ತಿರುವ ಅಮ್ಮನವರು ಅಪೂರ್ವ ತ್ಯಾಗ ಜೀವಿಗಳು. ಅಧ್ಯಾತ್ಮಿಕರಲ್ಲಿ ಕೆಲವರು ಪ್ರಪಂಚವನ್ನೆಲ್ಲ ಬಿಟ್ಟು, ಹಿಮಾಲಯದ ತಪ್ಪಲ್ಲೆಲೋ, ಗುಹೆಯೆಲ್ಲೋ ಕುಳಿತು ತಪಸ್ಸನ್ನು ಮಾಡುವರರನ್ನು ಕಾಣುತ್ತೇವೆ. ಆದರೆ ಅಮ್ಮನವರು ಜನರ ಮಧ್ಯದಲ್ಲಿಯೇ ಇದ್ದು, ಅಹಂಕಾರ-ಮಮಕಾರಗಳನ್ನು ತ್ಯಾಗ ಮಾಡಿ ಅಜ್ಜಯ್ಯಸ್ವಾಮಿಯ ಬಲದೊಂದಿಗೆ ಆತ್ಮಬಲವನು ಸಮೀಕರಿಸಿ ಭಕ್ತರ ಸೇವೆಯೇ ಭಗವಂತನ ಸೇವೆ ಎಂದು ಕಾರ್‍ಯ ನಿರತರಾಗಿರುವ ಸೇವಾ ನಿಧಿ.

 

ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಎಂ.ಎ., ಎಂ.ಇಡಿ., ಪಿಜಿಡಿಜೆ,.ಪಿಎಚ್.ಡಿ.
ಸಹಾಯಕ ಪ್ರಾಧ್ಯಾಪಕರು, ಕನ್ನಡಭಾರತಿ,
ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ-೫೭೭೪೫೧, ಶಿವಮೊಗ್ಗ ಜಿಲ್ಲೆ
ಮೊಬೈಲ್ :9481416989