ಕಾಯಕ ನಿಷ್ಠ:
ಮಾಚಿದೇವ ಹುಟ್ಟಿನಿಂದ ಮಡಿವಾಳನಾಗಿದ್ದು ಅಚಲ ಕಾಯಕ ನಿಷ್ಟನಾಗಿದ್ದ.ತನ್ನ ಕಾಯಕವೇ ಭಕ್ತಿ, ಜೀವನದುಸಿರು ಎಂದು ನಂಬಿದ್ದ. ಶಿವನು ಇವನ ಕಾಯಕನಿಷ್ಠೆಯನ್ನು ಪರೀಕ್ಷಿಸಲು ಜಂಗಮ ವೇಷದಲ್ಲಿ ಬಂದು, ಶಿವನ ಬಟ್ಟೆಗಳನ್ನು ಆತನ ಷರತ್ತಿನ ಮೇರೆಗೆ ತನ್ನ ಹೆಂಡತಿ ಮಲ್ಲಿಗೆಮ್ಮಳ ಎದೆ ಬಗೆದ ರಕ್ತದಲ್ಲಿ ಒಗೆದು ಒಣಗಿಸಿಕೊಟ್ಟ ಪ್ರಸಂಗಗಳು ಪುರಾಣಗಳಲ್ಲಿ ಮೂಡಿ ಬಂದಿದ್ದು ರೋಮಾಂಚವನ್ನುಂಟು ಮಾಡುತ್ತದೆ.
ಶಿವಶರಣರ ಹಾಗೂ ಕಾಯಕದಲ್ಲಿ ನಿಷ್ಟೆಯುಳ್ಳವರ ಮೈಲಿಗೆಯ ಬಟ್ಟೆಗಳನ್ನು ಮಡಿ ಮಾಡಿ ಮುಟ್ಟಿಸುವ ಕಾಯಕ ಇವರದಾಗಿತ್ತು.ಮಡಿಬಟ್ಟೆ ಹೊತ್ತುಕೊಂಡು ವೀರಘಂಟೆ ಬಾರಿಸುತ್ತ ಹೋಗುವಾಗ ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದೆಂದು ನಿಯಮವನ್ನು ವಿಧಿಸಿಕೊಂಡಿದ್ದರು.ಕುಚೋದ್ಯಕ್ಕೆ ಬಂದು ಮುಟ್ಟುವ ಭವಿಗಳನ್ನು ಕಿಡಿಗೇಡಿಗಳನ್ನು ದಂಡಿಸಿ ಮುನ್ನಡೆಯುವುದು ಮಾಚಿದೇವರ ನಡತೆಯಾಗಿತ್ತು.

ಭವಿಯೊಬ್ಬ ಮಡಿಗಂಟು ಮುಟ್ಟಿಮೈಲಿಗೆಗೊಳಿಸಿದ್ದಕ್ಕೆ ಆತನನ್ನು ಆಕಾಶಕ್ಕೆ ತೂರಿದ ಘಟನೆಯಿಂದಾಗಿ ಜನರು ಭಕ್ತಿ ಭಾವದಿಂದ ಮಡಿವಾಳಯ್ಯನನ್ನು ಗೌರವಿಸುತ್ತಿದ್ದರು.ಈ ಪ್ರಸಂಗ ಮುಂದೆ ಕಲ್ಯಾಣಕ್ರಾಂತಿಯಲ್ಲಿ ಸಾಹಸ ಮೆರೆಯುವ ಸೂಚಕವಾಗಿದೆ.
ಕಾಯಕ ಮಾಡದ ಸೋಮಾರಿಗಳ, ಬಡವರನ್ನು ಶೋಷಿಸುವ ಸೋಮಾರಿಗಳ, ದುರ್ಗುಣವುಳ್ಳವರ ಬಟ್ಟೆಗಳನ್ನೆಂದೂ ಆತ ಮುಟ್ಟುತ್ತಿರಲಿಲ್ಲ. ’ಅರಸುತನ ಮೇಲ್ಲ ಅಗಸತನ ಕೀಳಲ್ಲ’ ಎಂಬುದನ್ನು ಜನತೆಗೆ ಸಾರಿದರು.ಹಿಮಾಚಲದಂತೆ ಗಟ್ಟಿ ಕಾಯಕದ ಹಿರಿಯಾಳು ಮಾಚಿದೇವನಾಗಿದ್ದ ಎಂಬುದನ್ನು ತಿಳಿಸುತ್ತದೆ.

ಶರಣರ ಮಾರ್ಗದರ್ಶಕ:
ನುಲಿಯ ಚಂದಯ್ಯ ತನ್ನ ಕಾಯಕಕ್ಕೆ ಬೇಕಾದ ಹುಲ್ಲನ್ನು ಕೆರೆಯಲ್ಲಿ ಕುಯ್ಯುತ್ತಿದ್ದಾಗ ಧರಿಸಿದ ಇಷ್ಟಲಿಂಗ ಜಾರಿ ಕೆರೆಯೊಳಗೆ ಬೀಳುತ್ತದೆ.ಜಾರಿಬಿದ್ದ ಲಿಂಗ ಮತ್ತೇಕೆ ? ಭಾವಲಿಂಗವೊಂದನ್ನು ಪೂಜಿಸಿದರೆ ಸಾಕೆಂದು ಹುಲ್ಲಿನ ಹೊರೆಹೊತ್ತು ಮನೆಗೆ ತೆರಳುವನು. ಆಗ ಲಿಂಗದೇವ ಮಾಚಿದೇವರ ಮೊರೆ ಹೊಗುತ್ತಾನೆ. ಮಾಚಿದೇವರು ’ಸಿಹಿಬೇಕು ಹಣ್ಣು ಬೇಡವೆಂದರೆ ಹೇಗೆ ?ಗುರು ಪೂಜೆ ಅರಿದಡೆ ಲಿಂಗಪೂಜೆ ಬಿಡಲಾಗದೆಂದು’ ಚಂದಯ್ಯನವರಿಗೆ ಅವರ ತಪ್ಪಿನ ಅರಿವನ್ನುಂಟು ಮಾಡುವರು. ಇದೊಂದು ದಿವ್ಯ ಪ್ರಸಂಗ !
ಇನ್ನೊಂದು ಪ್ರಸಂಗದಲ್ಲಿ ’ಬೇಡುವ ಭಕ್ತರಿಲ್ಲದೆ ಬಡವಾದೆ’ನೆಂದು ಬಸವಣ್ಣನವರು ಅಹಂಭಾವನೆಯಿಂದ ಮಾತನಾಡಿರುತ್ತಾರೆ. ಆಗ ಮಾಚಿದೇವರು ಬಸವಣ್ಣನವರಿಗೆ ನೀವೊಬ್ಬರೆ ದಾನ ಮಾಡಲು ಹುಟ್ಟಿದ ದಾನಿಗಳು ಉಳಿದ ಭಕ್ತರೆಲ್ಲ ಭಿಕಾರಿಗಳೇ,ದರಿದ್ರರೇ ?ಎಂದು ಪ್ರಶ್ನಿಸುತ್ತಾರೆ.ಮುಂದೆ ಎನ್ನ ಮಹಾನುಭಾವರ ಬಡತನದಿರುವನ್ನು ನಿಮಗೆ ತೋರುವೆನೆಂದು ಪಾದದಿಂದ ನೀರನ್ನು ಚಿಮ್ಮಲು ಆ ನೀರು ಹನಿಗಳೆಲ್ಲ ಮುತ್ತು ರತ್ನಗಳಾದವು.ಇದೊಂದು ಅದ್ಭುತ ಸಂದರ್ಭ !ಹೀಗೆ ವಿನಯತೆ, ಇಂದ್ರಿಯ ನಿಗ್ರಹ, ನಿರಂಹಕಾರಗಳು ಭಕ್ತಿಯ ಕುರುಹು ಎಂದು ತಿಳಿಸುತ್ತ ಅಹಂಕಾರ ನಿರ್ಮೂಲಗೊಳಿಸಿದರು.
ಮತ್ತೊಂದು ಸಂದರ್ಭದಲ್ಲಿ ಮೇದಾರ ಕೇತಯ್ಯ ಬಿದಿರು ಕಡಿಯುವಾಗ ಕೆಳಗೆ ಬೀಳುತ್ತಾನೆ. ಎದೆಗೆ ಬಿದಿರು ಮೂಳೆ ಚುಚ್ಚಿ ಕೇತಯ್ಯ ಶಿವಸನ್ನಿಧಿ ಸೇರುತ್ತಾನೆ. ಆಗ ಬಸವಣ್ಣ ಮಾಚಿದೇವನನ್ನು ಕರೆಸುವನು.ಆಗ ಮಾಚಿದೇವ ಬಂದು ಶಿವಶರಣರ ಪ್ರಾಣವೇ ತನ್ನ ಪ್ರಾಣವೆಂದು ನಂಬಿದ ಬಸವಣ್ಣ ಇನ್ನು ಜೀವಂತವಾಗಿದ್ದು ತನ್ನ ವಚನ ಪಾಲಿಸಿಲ್ಲ ಎಂದನು.ಬಸವಣ್ಣ ಪ್ರಾಣ ಬಿಡುವನು.ಆ ಪ್ರಾಣ ಕೇತಯ್ಯನ ಪ್ರಾಣವನ್ನು ಹಿಂಬಾಲಿಸುತ್ತದೆ.ಬಸವಣ್ಣನ ನಿಷ್ಟೆ ಮೆಚ್ಚಿದ ಮಾಚಿದೇವ, ಶಿವನನ್ನು ಕುರಿತು ಕೆರಳಿ ನುಡಿದು, ಇಬ್ಬರ ಪ್ರಾಣಗಳನ್ನು ಶಿವನಿಂದ ಮರಳಿ ಪಡೆದನೆಂದು ತಿಳಿದು ಬರುತ್ತದೆ.ನಡೆ ನುಡಿಯಲ್ಲಿ ತಪ್ಪಿದ ಭಕ್ತಿ ಎಂಥವರೇ ಆಗಿರಲಿ, ಆಚರಣೆ ಪ್ರಸಂಗ ಬಂದಾಗ ದೇವರನ್ನು ಕೂಡ ಪ್ರಶ್ನಿಸುವ ಧೀರ ಪ್ರವೃತ್ತಿ ಮಾಚಿದೇವನದಾಗಿತ್ತು.

ಮಾಚಿದೇವನ ಘನತೆ :
ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು.ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರೆಗೆ ಪರೀಕ್ಷಿಸಿ, ಮಡಿ ಹಾಸಿ ಸ್ವಾಗತಿಸುವ ಕೆಲಸ ಇವರದಾಗಿತ್ತು.ಕಲ್ಯಾಣಕ್ಕೆ ಹೊರಗಿನಿಂದ ಬರುವವರಿಗೆ ಮಾಚಿದೇವನ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಸಿಗುತ್ತಿರಲಿಲ್ಲ. ಮಾಚಿದೇವನ ಮಹಾಘನತೆಗೆ ಇದು ಸಾಕ್ಷಿಯಾಗಿದೆ.ಬಸವಾದಿ ಶರಣರ ವಿಶ್ವಕಲ್ಯಾಣ ತತ್ವಗಳಿಗೆ ತಮ್ಮನ್ನು ಸಮರ್ಪಿಸಿಕೊಂಡ ಮಾಚಿತಂದೆಗೆ ಶರಣರೆಂದರೆ ಪಂಚಪ್ರಾಣ.ಮಾಚಿದೇವನ ಅಪಾರ ಜ್ಞಾನ, ಕಾಯಕ ನಿಷ್ಠೆ, ನ್ಯಾಯ ನಿಷ್ಟುರತೆ, ನಿರಹಂಕಾರ ಗುಣಗಳನ್ನು ಕಂಡು ಶರಣರೆಲ್ಲರೂ ಹೃದಯ ತುಂಬಿ ಶ್ಲಾಘಿಸಿದ್ದಾರೆ.
ಮರುಳ ಶಂಕರದೇವರು ’ಎನ್ನ ಜೀವಾತ್ಮ ಚೇತನವಯ್ಯ ಮಡಿವಾಳ ಮಾಚಿತಂದೆ’ ಎಂದರು.ಅಕ್ಕಮಹಾದೇವಿಯು ಮಡಿವಾಳಯ್ಯನೇ ಹೆತ್ತ ತಂದೆಯೆಂದು ಪಿತೃಸ್ಥಾನ ನೀಡಿದ್ದಾಳೆ.ಶಿವಯೋಗಿ ಸಿದ್ಧರಾಮರು ’ಗುರುವಿಂಗೆ ಘನಗುರು ಮಾಚಿತಂದೆಗಳು, ಲಿಂಗಕ್ಕೆ ಘನಲಿಂಗ ಮಾಚಿತಂದೆಗಳು, ಜಂಗಮಕ್ಕೆ ನಿರಂಜನ ವಸ್ತು ನಮ್ಮ ಮಾಚಿತಂದೆಗಳು, ಅಂತಪ್ಪ ಮಾಚಿತಂದೆಗೆ ಪೇಳ್ವತ್ರಾಣ ಎನ್ನಲ್ಲಿಹುದೆ ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂದು ಅವರ ಘನತೆ ಎತ್ತಿ ಹಿಡಿದಿದ್ದಾರೆ.
ಅಲ್ಲಮಪ್ರಭುದೇವರು ’ಇಷ್ಟತನುವಿನ ಘಟ್ಟಿಯ ಕರಗಿಸಿ, ಕಟ್ಟುಗ್ರದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳೆಂಬವ ಸುಟ್ಟುರುಹಿ, ತನುವಿನ ಅವಗುಣವ ಕೆಡಸಿ, ಮನದ ಸಂಚಲನ ನಿಲಿಸಿ, ಸಕಲಕರಣಂಗಳ ಅರಿವಿಂಗೆ ಆಹುತಿಯನಿಕ್ಕಿ, ಸುಜ್ಞಾನಪ್ರಭೆಯನು ಉಟ್ಟು, ಸುಜ್ಞಾನ ಪ್ರಭೆಯ ಹೊದೆದು, ಸುಜ್ಞಾನ ಪ್ರಭೆಯ ಸುತ್ತಿ, ಸುಜ್ಞಾನ ಪ್ರಭೆಯ ಹಾಸಿ, ಮಹಾಜ್ಞಾನದಲ್ಲಿ ನಿರ್ಭಾವ ಸಂಪನ್ನನಾದ ಮಡಿವಾಳನ ; ಮಡಿಯ ಪ್ರಸಾದವ ನಾನು ಹೊದ್ದ ಕಾರಣ ನಿರ್ಮಳನಾದೆನು, ನಿಜೈಕ್ಯನಾದೆನು, ನಿಶ್ಚಿಂತನಾದೆನು. ಇದು ಕಾರಣ ಗುಹೇಶ್ವರ ಲಿಂಗದಲ್ಲಿ ತೆರೆಹಿಲ್ಲದಿಪ್ಪ ಮಡಿವಾಳನ ಪ್ರಸಾದದಿಂದ ನಿಮ್ಮ ಘನವನರಿದು ಬದುಕಿದೆನು’ ಅರಿವಿನ ಗುರುವಿನ ಸ್ಥಾನದ ಎತ್ತರದಲ್ಲಿಟ್ಟು ವಿವರಿಸಿದ್ದಾರೆ.

ಡಾ. ಸಂಗಮೇಶ. ಮ.ಕಲಹಾಳ.ಎಂ.ಡಿ