ಬಸವಣ್ಣನವರು ’ಎನ್ನ ಕಾಯವ ಶುದ್ಧ ಮಾಡಿದಾತ ಮಡಿವಾಳ, ಎನ್ನ ಮನವ ನಿರ್ಮಲ ಮಾಡಿದಾತ ಮಡಿವಾಳ, ಎನ್ನ ಅಂತರಂಗವ ಬೆಳಗಿದಾತ ಮಡಿವಾಳ, ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ, ಕೂಡಲಸಂಗಮದೇವಾ ಎನ್ನ ನಿಮಗೆ ಯೋಗ್ಯನ ಮಾಡಿದಾತ ಮಡಿವಾಳ’ ನೆಂದು ಒಂದೆಡೆ ಅವರ ಉನ್ನತಿಯನ್ನು ಹೇಳಿದ್ದಾರೆ.ಅಲ್ಲದೇ ’ಮಡಿವಾಳ ಮಡಿವಾಳನೆಂಬರು ಮಡಿವಾಳನೆಂಬುದನಾರೂ ಅರಿಯರು, ಎನ್ನ ಆಣವ ಮಾಯಾ ಕಾರ್ಮಿಕಗಳೆಂಬ ಮಲತ್ರಯದಲ್ಲಿ ಹೊದುಕುಳಿಗೊಂಡ ಮನದ ಮೈಲಿಗೆಯ ತಂದು, ತನ್ನ ಮನೆಗೆಕೊಂಡುಹೋಗಿ ಹಾಕಿದಡೆ, ಕೈಮುಟ್ಟದಡೆ ಆಗದೆಂದು ತನ್ನ ಪಾದದೊಳಗೆ ಮೆಟ್ಟಿ ಅಲುಬಿ ಸೆಳೆದನಯ್ಯ.ತನ್ನ ನಿರ್ಮಲವ ಕೊಟ್ಟನೆನಗೆ, ಆ ಕೊಟ್ಟ ಬೀಳುಡಿಗೆಯ ಹೊದೆದುಕೊಂಡೆನಾಗಿ, ಮಡಿವಾಳ ಮಾಚಿದೇವತಂದೆಯ ಕೃಪೆಯಿಂದಲಾನು ಬದುಕಿದೆನಯ್ಯ, ಕೂಡಲ ಸಂಗಮದೇವಾ’ ಎಂದು ಮನದುಂಬಿ ಬಣ್ಣಿಸಿದ್ದಾರೆ.
ಚನ್ನಬಸವಣ್ಣನು’ಪ್ರಭುದೇವರು ಅಪರಿಮಿತ ಆರೋಹಣೆಗೆ ಬಸವಣ್ಣ ಮಡಿವಾಳನೆಂಬ ಎರಡು ತೋಳು ಧರಿಸಿದನೆಂದು’ಮತ್ತು ’ಲಿಂಗಸಾಹಿತ್ಯ ಮಡಿವಾಳ – ಜಂಗಮಸಾಹಿತ್ಯ ಬಸವಣ್ಣ ಇವರಿಬ್ಬರ ಪ್ರಸಾದ ಸಾಹಿತ್ಯ ನಾನೇ’ ಎಂದು ಆನಂದಿಸಿದ್ದಾನೆ.ಸುರಗಿಯ ಚೌಡಯ್ಯ ಶರಣರು ’ಯುಗವನೊಗೆದಾತ, ಯುಗವೆಲ್ಲವ ಮಾಡಿದಾತ, ರುದ್ರನ ಒಡೆಯ ಸುತ್ತಿದ ಫಣಿಯ ಬಿಳಿದು ಮಾಡಿದಾತ, ಇವೆಲ್ಲವ ಬಿಳಿದು ಮಾಡಿ ಬಸವಣ್ಣಂಗೆ ಸೂತ್ರಧಾರಿಯಾದಾತ ಮಡಿವಾಳ ಮಾಚಯ್ಯನ ನೆನದಾಡುತಿರ್ದೆನು’ ಎಂದು ಹೊಗಳಿದ್ದಾರೆ.

ಬಿಜ್ಜಳರಾಜನ ಗರ್ವಭಂಗ :
ಬಿಜ್ಜಳರಾಜ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಿಸುವಂತೆ ಬಸವಣ್ಣನಿಗೆ ದುಂಬಾಲು ಬಿದ್ದ.ಮಡಿವಾಳಯ್ಯ ಪರಮ ಭಕ್ತ ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ.ಇದನ್ನು ಲೆಕ್ಕಿಸದೆ ಮಾಸಿದ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ.ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ಕಂಡ ಮಡಿವಾಳಯ್ಯ ಕೋಪಗೊಂಡು ಸಿಟ್ಟಿನಿಂದ ನೋಡಲು ಆ ಕ್ಷಣದಲ್ಲಿ ಗಂಟು ಉರಿದು ಹೋಯಿತು.
ಇದು ಮಡಿವಾಳಯ್ಯನ ಅಹಂಕಾರವೆಂದು ಭಾವಿಸಿದ ಬಿಜ್ಜಳ ಅವನನ್ನು ಸೆರೆ ಹಿಡಿದು ತರಲು ಕುರುಡ ಕುಂಟರ ಪಡೆಯೊಂದನ್ನು ಕಳಿಸಿದ.ಮಡಿವಾಳಯ್ಯ ತನ್ನ ಶಕ್ತಿಯಿಂದ ಕುರುಡರಿಗೆ ಕಣ್ಣು ಕಾಣುವಂತೆ, ಕುಂಟರಿಗೆ ಕಾಲು ಬರುವಂತೆ ಮಾಡಿ ಅಂಗಸೌಷ್ಠವರನ್ನಾಗಿ ಮಾಡಿದನು.ಉರಿದೆದ್ದ ಬಿಜ್ಜಳ ಮದೋನ್ಮತ್ತ ಆನೆಯನ್ನು ಮಾಚಯ್ಯನ ಮೇಲೆ ಹರಿಹಾಯಲು ಬಿಟ್ಟ.ಸೈನಿಕರ ತುಕುಡಿಯೊಂದನ್ನು ಕಳಿಸಿದ.ಆನೆ ಹಾಗೂ ಅವರನ್ನೆಲ್ಲ ಸದೆ ಬಡೆದು ಜಯಶಾಲಿಯಾದ ಮಾಚಿದೇವ. ಕಾಲಾಂತರದಲ್ಲಿ ಬಿಜ್ಜಳನಿಗೆ ಮಾಚಿದೇವರ ಉನ್ನತ ಮಹಿಮೆ ತಿಳಿದು ತನ್ನ ತಪ್ಪಿನ ಅರಿವಾಗಿ ಗರ್ವದಿಂದ ಹೊರಬಂದು ಬಿಜ್ಜಳ ಶರಣಾಗತನಾಗುವನು.

ವಚನ ಸಾಹಿತ್ಯ ರಕ್ಷಕ :
ಮುಂದೆ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಮಾಚಿದೇವರು ಹೊತ್ತ ಜವಾಬ್ದಾರಿ ಅತ್ಯಂತ ಗುರುತರವಾದುದು. ಶರಣ ಧರ್ಮ ಸಂರಕ್ಷಣೆ, ವಚನ ಸಾಹಿತ್ಯದ ರಕ್ಷಣೆಯ ದಂಡನಾಯಕನಾಗಿ ಜವಾಬ್ದಾರಿ ಹೊತ್ತು ; ಚೆನ್ನಬಸವಣ್ಣ, ಅಕ್ಕನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವರು ಶರಣ ಸಮೂಹದ ಬೆನ್ನಿಗೆ ಭೀಮರಕ್ಷೆಯಾಗಿ ನಿಂತರು. ಕಲಚೂರ್ಯ ರಾಯಮುರಾರಿಯನ್ನು ಎದುರಿಸಿ, ಭೀಮಾನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ, ತಡಕೋಡ, ಕಾತರವಳ್ಳಿಗಳಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು.ತಮ್ಮಧೈರ್ಯ ಅನುಪಮ ಬಲದಿಂದ ಶರಣರನ್ನು ಮತ್ತು ವಚನ ಸಾಹಿತ್ಯವನ್ನು ರಕ್ಷಿಸಿ ಉಳವಿಗೆ ತಲುಪಿಸಿದ ಸಾಹಸಿ.ಅಂದು ವಚನಸಾಹಿತ್ಯ ರಕ್ಷಣೆ ಮಾಡದೇ ಇದ್ದಿದ್ದರೆ ಶರಣ ಸಾಹಿತ್ಯಕ್ಕೆ ಜೀವಂತಿಕೆಯೇ ಇರುತ್ತಿರಲಿಲ್ಲ. ಹೀಗಾಗಿ ಮಡಿವಾಳ ಮಾಚಿದೇವರು ವಚನಸಾಹಿತ್ಯ ರಕ್ಷಣೆ ಮಹಾದಂಡನಾಯಕನಾಗಿ ಅಷ್ಟಗಣಾಧೀಶ್ವರ ಶರಣರಲ್ಲಿ ಒಬ್ಬರಾಗಿದ್ದಾರೆ.

ಸಾಮಾಜಿಕ ಹೊಣೆ ನಿರ್ವಹಿಸಿದ ಗಣಾಚಾರ ಸಂಪನ್ನ:
ಸದಾಚಾರಿಗಳ ನಿಂದೆ, ಸಜ್ಜನರ ನಿಂದೆ, ಸಮಾಜ ಕಲುಷಿತ ಮಾಡುವ ವ್ಯಕ್ತಿ ಅಥವಾ ಸಮುದಾಯವನ್ನು ಎಚ್ಚರಿಸುವ ಹಾಗೂ ದಂಡಿಸುವ ಕೆಲಸವು ತನ್ನ ಆದ್ಯ ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆ ಎಂದು ನಿರ್ಧರಿಸಿಕೊಂಡಿದ್ದ.ಅಷ್ಟೇ ಬದ್ಧತೆಯಿಂದ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಿದನು.ಕಲ್ಯಾಣ ಕ್ರಾಂತಿಯ ಕಾಲಕ್ಕೆ ವಚನಗಳನ್ನು ಮತ್ತು ಶರಣರನ್ನು ಸಂರಕ್ಷಿಸಿದ್ದರಿಂದಲೇ ಗಣಾಚಾರ ಸಂಪನ್ನ ವೀರ ಶರಣನೆಂದು ಬಸವಾದಿ ಶರಣರು ಆದರಿಸಿದ್ದಾರೆ.ಬಹುಪಾಲು ಶರಣರು ಉಳವಿಯಲ್ಲಿ ಲಿಂಗೈಕ್ಯರಾಗಲು ತಮ್ಮ ಮಹಾನ್ ಕರ್ತವ್ಯ ಪೂರೈಸಿ ದೇವರಹಿಪ್ಪರಗಿಗೆ ಬಂದು ನೆಲಸಿದರು.ಮುಂದೆ ಕೆಲ ವರ್ಷಗಳವರೆಗೆ ಜ್ಞಾನ ಅನುಭಾವಗಳನ್ನು ಪ್ರಸಾರ ಮಾಡುತ್ತದೇವರಹಿಪ್ಪರಗಿ ಕಲಿದೇವರಲ್ಲಿ ಐಕ್ಯರಾದರು.

  • ಡಾ. ಸಂಗಮೇಶ. ಮ.ಕಲಹಾಳ.ಎಂ.ಡಿ