ಮಾಚಿದೇವರ ವಚನಗಳಲ್ಲಿ ತಾವು ಕಟ್ಟಿಕೊಂಡ ಶುದ್ಧ, ಸಿದ್ಧ ಬದುಕಿನಿಂದ ಆದ ಅನುಭವದ ನುಡಿಗಳಿವೆ. ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಪರಿವರ್ತನೆಗಾಗಿ ಸತ್ಯ, ನೇರ, ನಿಷ್ಠುರ ನಡೆ ನುಡಿಗಳಿಂದ ಸಮಾಜವನ್ನು ಎಚ್ಚರಿಸಿದ ದಾರ್ಶನಿಕನಾಗಿದ್ದಾನೆ.ವಚನಗಳಲ್ಲಿನ ಸಂದೇಶಗಳು ಹೀಗಿವೆ.

ವಾಯುಗುಣದ ಸರ್ಪ ಬಲ್ಲುದು.ಮಧುರ ಗುಣವನಿರುಹೆ ಬಲ್ಲುದು.ಗೋತ್ರದ ಗುಣವ ಕಾಗೆ ಬಲ್ಲುದು.ವೇಳೆಯ ಗುಣವ ಕೋಳಿ ಬಲ್ಲುದು.ಇದು ಕಾರಣ ಮನುಷ್ಯ ಜನ್ಮದಲ್ಲಿ ಬಂದು ಶಿವಜ್ಞಾನವನ್ನರಿಯದಿದ್ದರೆ, ಆ ಕಾಗೆ ಕೋಳಿಗಳಿಂದ ಕರಕಷ್ಟ ಕಾಣಾ ಕಲಿದೇವರದೇವಾ || ವಚನದಲ್ಲಿ ಪ್ರಕೃತಿ ನಿಯಮಗಳಿಗೆ ತಕ್ಕಂತೆ ನಡೆಯಬೇಕಾದ ಸಂದೇಶವಿದೆ.

ಇರಿಯಲಾಗದು ಪ್ರಾಣಿಯ, ಜರಿಯಲಾಗದು ಹೆರರ, ನೆರನೆತ್ತಿ ನುಡಿಯಲಾಗದಾರುವನು ಹೆರರ ವಧುವ ಕಂಡು, ಮರುಗದಿರ್ದಡೆ ಶಿವಲೋಕ ತಳಾ ಮಳಕವೆಂದ ಕಲಿದೇವರದೇವಾ || ಸಕಲಜೀವಿಗಳಲ್ಲಿ ದಯೆ ಇರಬೇಕು.ಪ್ರಾಣಿಗಳನ್ನು ಕೊಲ್ಲದಿರುವುದೇ ಧರ್ಮ.ಬೇಕೆನ್ನದಿರುವುದೇ ತಪಸ್ಸು. ಪರವಧುವಿನಲ್ಲಿ ಆಸೆಯಿಲ್ಲದಿರುವುದೇ ಜಪ. ಇಂತಹವರಲ್ಲಿ ದೇವರು ವಾಸವಾಗಿರುತ್ತಾನೆಂದಿದ್ದಾನೆ. ಹೆಣ್ಣಿಗಾಗಿ ಹೊನ್ನಿಗಾಗಿ ಮಣ್ಣಿಗಾಗಿ ಪರಧನ ಪರಸತಿಗಾಗಿ ಸತ್ತಡೆ ಹುಟ್ಟುಸಾವುಗಳು ತಪ್ಪವು, ಸಜ್ಜನನಾಗಿ ಏಕದೇವನಿಷ್ಠಾ ಸಂಪನ್ನನಾಗಿ ಸತ್ತರೆ ಮುಕ್ತಿ || ಎನ್ನುತ್ತ ಏಕದೇವೋಪಾಸನೆ ಶ್ರೇಷ್ಠವೆಂದು ಹಾಗೂ ಬದುಕಿನ ಕಲೆಯನ್ನು ತಿಳಿಸಿದ್ದಾರೆ.
ಪರದೈವ ಪರಧನ ಪರಸ್ತ್ರೀ ಪರನಿಂದೆ ಪರಹಿಂಸೆಯಲ್ಲಿ ತೊಡಗಿರುವವರಿಗೆ ಕ್ರಿಯಾದೀಕ್ಷೆ ಮಾಡುವವನೊಬ್ಬ ಗುರುದ್ರೋಹಿ !ಪರಧನ ಪರಸತಿಗಳನ್ನು ಹಿಡಿದೊಡೆ ಮುಂದೆ ನರಕ ಪ್ರಾಪ್ತಿಯಾಗುವುದು || ಹೀಗೆ ಗುರುದ್ರೋಹವನ್ನು ವಿವರಿಸಿದ್ದಾರೆ.
ಖಂಡವ ತಿಂದು, ಹೆಂಡವ ಕುಡಿದು, ವೇಶ್ಯೆಯ ಸಂಪರ್ಕ ಮಾಡಿ ದಂಡವನು ಕೊಡುವ, ಜಗಭಂಡ ತಾಯ್ಗಂಡ ಹೆಂಡಗಾರರನ್ನು ಹುಳಗೊಂಡದಲ್ಲಿಕ್ಕುವ ನಮ್ಮ ಕಲಿದೇವರು ಎಂದು ನೇರ, ದಿಟ್ಟ, ನಿಷ್ಠುರವಾಗಿ ಸದಾಚಾರಿಯಾಗಿರಬೇಕೆಂದು ಎಚ್ಚರಿಸಿದ್ದಾರೆ.
ಸತ್ಯಸದ್ಭಾವ ಸದ್ವರ್ತನೆ, ಸತ್ಕ್ರೀಯ ಸದಾಚಾರ, ಸಮ್ಯಕ್‌ಜ್ಞಾನ ಷಟ್ಸ್ಥಲಮಾರ್ಗದಲ್ಲಿರುವವರಲ್ಲಿ ಶಿವಗಣಂಗಗಳ ಸದಾ ವಾಸ || ಎಂದರೆ ಸದ್ಭಾವ ಸತ್ ಕ್ರಿಯಾಶೀಲನಲ್ಲಿ ಪರಮಾತ್ಮನಿರುವುನುಎಂದು ಅರ್ಥೈಸಿದ್ದಾನೆ.
ಅಹಂಕಾರಿ ಅರಸನ ಭಕ್ತಿ, ಮುಟ್ಟುತಟ್ಟಿನ ಬ್ರಾಹ್ಮಣನ ಭಕ್ತಿ, ಪ್ರಪಂಚಿನ ಶೀಲವಂತನ ಭಕ್ತಿ,ಕುಟಿಲ ವ್ಯಾಪಾರದ ಶೆಟ್ಟಿಯ ಭಕ್ತಿಗಳು ಡಂಭಾಚಾರವೇ ಹೊರತು ಶುದ್ಧ ಭಕ್ತಿಗಳಲ್ಲ || ಎಂಬುದಾಗಿ ಅರುಹುತ್ತ ಶುದ್ಧ ಭಕ್ತಿ ಇರಲಿ – ಡಂಭಾಚಾರ ಬೇಡವೆಂದು ಕಠೋರವಾಗಿ ವೇದ್ಯ ಮಾಡಿದ್ದಾರೆ.
ತನ್ನೊಳಗಿನ ಶುದ್ಧಿಯನ್ನು ಅರಿಯದೇ ಅನ್ಯರಿಗೆ ಉಪದೇಶ ಮಾಡುವವರ ನುಡಿಗಳನ್ನು ಕೇಳಲಾಗದು || ಎಂದರೆ ತನ್ನ ಬಣ್ಣನೆ ಸರಿಯಲ್ಲವೆಂದಿದ್ದಾರೆ. ತನ್ನದಲ್ಲವನ್ನು ನೋಡಿದರೆ, ಸತ್ಯವಂತರು ಒಪ್ಪಿದುದನ್ನು ಒಪ್ಪದಿದ್ದರೆ, ಮಾಡಿಕೊಂಡ ವೃತವನ್ನು ಮೀರಿದರೆ, ತಾಮಾಡಿದ ಭಕ್ತಿಯನ್ನು ತಾನೇ ಹೇಳಿಕೊಂಡರೆ ಅವನೇ ದುರ್ಜನನು || ಆದ್ದರಿಂದ ಸಜ್ಜನರಾಗಿರಿ ಎಂದಿದ್ದಾರೆ.
ಸಿಂಹದ ಮುಂದೆ ಜಿಂಕೆಯ ಜಿಗಿದಾಟವೇ ? ಪ್ರಳಯಾಗ್ನಿಯ ಮುಂದೆ ಪತಂಗದಾಟವೇ ? ಸೂರ್ಯನ ಮುಂದೆ ಕೀಟದಾಟವೇ ?ನಿಮ್ಮ ಮುಂದೆ ಎನ್ನಾಟವೇ ಕಲಿದೇವಾ || ಇಲ್ಲಿ ತನಗಿಂತ ಕಿರಿಯರಿಲ್ಲವೆಂಬ ಭಾವ ಕಾಣುತ್ತದೆ.ಪ್ರತಿಭಾವಂತ ಶಕ್ತಿವಂತ ಹಿರಿಯರನ್ನು ಗೌರವಿಸಬೇಕೆಂಬ ಉಪದೇಶವಿದೆ.
ಬ್ರಹ್ಮ ಪದವಿ ವಿಷ್ಣು ಪದವಿ ರುದ್ರ ಪದವಿ ಇಂದ್ರ ಪದವಿ ಇನ್ನಾವುದೇ ಪದವಿಗಳು ಬೇಡ.ಇವೆಲ್ಲವಕ್ಕೂ ಒಡೆಯನಾದ ಶಿವನ ಶರಣರ ಮನೆಯಲ್ಲಿ ಸೇವಕನಾಗಿ ಹುಟ್ಟುವ ಪದವಿ ಕರುಣಿಸು ಕಲಿದೇವಾ ಎಂದಿದ್ದಾರೆ || ನಿಸ್ವಾರ್ಥವೇ ಬದುಕಿನ ಜೀವಾಳವಾಗಿರಿಸಿಕೊಂಡವ. ಉನ್ನತ ಸೇವಾಭಾವದ ಶ್ರೇಷ್ಠತೆ ಇದಾಗಿದೆ.
ಲೋಕದಲ್ಲಿ ಹುಟ್ಟಿ ಲೋಕದೊಳಗೆ ಇದ್ದಾಗ ಸ್ತುತಿ ನಿಂದೆಗಳು ಬಂದಡೆ ಕೋಪ ತಾಳದೇ ಸಮಾಧಾನಿಯಾಗಿರಬೇಕು || ಶಾಂತಿ, ಸಹನಾಶೀಲರಾಗಿರಿ ಎಂಬ ಸಂದೇಶ ನೀಡಿದ್ದಾರೆ.
ತನ್ನ ಜೀವಮಾನ ಪರ್ಯಂತ ಸ್ವಯಂ ಸುಧಾರಣೆ ಮತ್ತು ಸಾಮಾಜಿಕ ಸುಧಾರಣೆಗಳನ್ನು ಸಾಧಿಸಿ ತೋರಿಸಿದ ಸಿದ್ಧ ಪುರುಷನಾಗಿ, ವಚನಸಾಹಿತ್ಯ ರಕ್ಷಕನಾಗಿ, ಗಣಾಚಾರ ಸಂಪನ್ನನಾಗಿ ಮತ್ತು ವೀರ ಶರಣನಾಗಿ ನಮಗೆ ಮಾದರಿಯಾಗಿದ್ದಾನೆ ಶ್ರೀ ಮಡಿವಾಳ ಮಾಚಿದೇವ !!

  • ಡಾ. ಸಂಗಮೇಶ. ಮ.ಕಲಹಾಳ.ಎಂ.ಡಿ