ಇಂದು ಮಹತ್ವದ ದಿನ. ಸಂಜೆ ಆಗುತ್ತಿದ್ದಂತೆ ಬನ್ನಿ ಮುಡಿದ್ರ. ಬನ್ನಿ ಪತ್ರೆ ಕೊಟ್ಟು ನಮಗೂ ನಿಮಗೂ ವಿಶ್ವಾಸ ಇರಲಿ ಎಂದು ಅಪ್ಪಿಕೊಳ್ಳುತ್ತಾರೆ. ಮಕ್ಕಳಾದರೆ ದೊಡ್ಡವರಿಗೆ ಪತ್ರೆಕೊಟ್ಟು ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಹೀಗೆ ಗೊತ್ತಿಲ್ಲದವರು, ಗೊತ್ತಿದ್ದವರು ಬನ್ನಿ ಪತ್ರೆಯನ್ನು ವಿನಿಮಯಮಾಡಿಕೊಳ್ಳುವುದು ರೂಡಿಯಲ್ಲಿದೆ ಹಾಗಾದ್ರೆ ಬನ್ನಿ ಪತ್ರೆಯ ಮಹತ್ವ ಏನು.?

ಭಾರತದಾದ್ಯಂತ ಬನ್ನಿಗೆ ವಿಶೇಷ ಮಹತ್ವವಿದೆ. ಬನ್ನಿಯನ್ನು ಶುಭದ ಸಂಕೇತವೆಂದು ಪೂಜಿಸುತ್ತಾರೆ. ಕರ್ನಾಟಕದಲ್ಲಿ ಬನ್ನಿ ಮರವನ್ನು ದಸರಾ ಸಂದರ್ಭದಲ್ಲಿ ಭಕ್ತಿಗೌರವಗಳಿಂದ ಪೂಜಿಸುತ್ತಾರೆ. ಬನ್ನಿಯನ್ನು ಬನ್ನಿ, ಶಮೀವೃಕ್ಷವೆಂದೂ, ಅದರ ಎಲೆಗಳನ್ನು ಚಿನ್ನವೆಂದು ಭಾವಿಸುತ್ತಾರೆ. ಬನ್ನಿ ಹಬ್ಬ ಅಥವಾ ಬನ್ನಿ ಮುಡಿಯುವುದು ಎಂದು ಕರೆಯುವುದು ವಾಡಿಕೆ. ಹಿಂದೆ ದಿಗ್ವಿಜಯ ಕೈಗೊಳ್ಳಲು ಸಜ್ಜು ಮಾಡುವ ಮೊದಲ ದಿನವೆಂದು, ಅಂದು ಯುದ್ಧ ಸಾಮಗ್ರಿಗಳಿಗೆ ಪೂಜೆ ಮಾಡಿ ಸೈನ್ಯದೊಡನೆ ಊರ ಮುಂದಿನ ಬನ್ನಿಯ ದಿಬ್ಬಕ್ಕೆ ಸೇರುತ್ತಿದ್ದಂತೆ, ಬನ್ನಿಯ ದಿಬ್ಬದಲ್ಲಿ ಬನ್ನಿಯನ್ನು ಮುಡಿದು ಊರುಗಳಿಗೆ ಬರುತ್ತಿದ್ದರಂತೆ. ವಿಜಯದಶಮಿಯ ಆಚರಣೆಯಲ್ಲಿ ಊರ ದೇವರುಗಳು ಪಲ್ಲಕ್ಕಿಯಲ್ಲಿ ಸಂಚರಿಸಿ, ಬನ್ನಿಕಟ್ಟೆಯಲ್ಲಿ ಸೇರಿ, ಬನ್ನಿಯನ್ನು ಮುಡಿಯುವುದು ಮೇಲಿನ ನಿದರ್ಶನಕ್ಕೆ ಸಾಕ್ಷಿ ಒದಗಿಸಿದೆ.

ಉತ್ತರ ಕರ್ನಾಟಕದ ಭಾಗದಲ್ಲಿ ವಿಜಯದಶಮಿಯಂದು ಜನರು ಪತ್ರಿಗಿಡದ ಎಲೆಯಲ್ಲಿ ಬನ್ನಿ ಎಲೆಗಳನ್ನು ಸೇರಿಸಿ ಮಾಡಿದ ವಸ್ತುವನ್ನು ಬಂಗಾರದ ಗಟ್ಟಿ ಎಂದೂ ಭಾವಿಸುತ್ತಾರೆ. ಬನ್ನಿ ಬಂಗಾರದ ಗಟ್ಟಿಯನ್ನು ಹಿಡಿದು ಜನರು ಮನೆ ಮನೆಗೆ ಹೋಗಿ ‘ನಾವು ನೀವು ಬಂಗಾರದಂಗೆ ಇರೋಣ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಅಂದು ಊರಿನ ಗೌಡರು ಹೊಲದಲ್ಲಿಯ ದೇವಿ ಗುಡಿಗೆ ಪಲ್ಲಕ್ಕಿಯಲ್ಲಿ ತೆರಳಿ ಬನ್ನಿಗಿಡವನ್ನು ಪೂಜಿಸಿ, ಬನ್ನಿಯನ್ನು ಮುಡಿಯುತ್ತಾರೆ. ನಂತರ ಊರಿನ ಜನರೆಲ್ಲ ಪರಸ್ಪರ ಬನ್ನಿ ಹಂಚಿಕೊಂಡು ನಲಿಯುತ್ತಾರೆ. ಬನ್ನಿ ಕೊಟ್ಟು ಬಂಗಾರ ಪಡೆಯುವುದು ಎಂದೇ ಪ್ರಸಿದ್ದಿಯಾಗಿರುವ ಹಬ್ಬವು ಹಳಸಿದ ಸಂಬಂಧಗಳನ್ನು ಬೆಸೆಯುತ್ತದೆ. ಅಲ್ಲದೆ ಹೊಸ ಸ್ನೇಹಕ್ಕೂ ಕಾರಣವಾಗುತ್ತದೆ.