೬) ಆರನೇ ಸುತ್ತಿನ ಬಾಗಿಲು ಅಥವಾ ಟೀಕಿನ ಬಾಗಿಲು / ಗಣೇಶನ ಬಾಗಿಲು:-
ಗಂಟೆ ಬಾಗಿಲು ನಂತರ ಬರುವ ಆರನೇ ಸುತ್ತಿನ ಕೋಟೆಯೂ ಅದರ ಹೆಬ್ಬಾಗಿಲಾದ ಟೀಕಿನ ಅಥವಾ ಟಾಕಿನ ಬಾಗಿಲು ಕಾಣುತ್ತೇವೆ. ಕೋಟೆಯ ಈ ಭಾಗವನ್ನು ಫಿರಂಗಿಕೋಟೆ ಎನ್ನುತ್ತಾರೆ. ಇತಿಹಾಸದ ಕಡತಗಳಲ್ಲಿ ಈ ಬಾಗಿಲನ್ನು ಪಾಳೆಯಗಾರನಾದ ಕಸ್ತೂರಿ ರಂಗಪ್ಪನಾಯಕ ಕಟ್ಟಿಸಿದನೆಂದೂ ಅದನ್ನು ಕಸ್ತೂರಿ ರಂಗಪ್ಪನಾಯಕನ ಬಾಗಿಲೆಂದೂ ಕರೆಯುತ್ತಾರೆ.

ಅದರ ಮೇಲೆ ಫಿರಂಗಿ ಗಾಡಿಗಳು ಓಡಾಡಲು ಮತ್ತು ಫಿರಂಗಿ ಇಡಲು ಅನುಕೂಲವಿರುವುದೇ ಈ ಹೆಸರು ಬರಲು ಕಾರಣವಾಗಿದೆ. ಇದರ ಹೆಬ್ಬಾಗಿಲು ಸುಂದರವೂ, ಬಲಯುತವೂ ಆಗಿರುವುದರಿಂದ ಅದಕ್ಕೆ ಟೀಕಿನ ಅಥವಾ ಟಾಕಿನಬಾಗಿಲು ಎಂಬ ಹೆಸರಿದೆ. ಸೌಂದರ್ಯ ಹಾಗೂ ಭದ್ರತೆಯ ದೃಷ್ಟಿಯಿಂದ ಕಾಮನಬಾಗಿಲಿನಷ್ಟೇ ಇದಕ್ಕೂ ಪ್ರಾಮುಖ್ಯತೆಯಿದೆ. ಭಾರೀಕಲ್ಲುಗಳಿಂದ ನಿರ್ಮಿಸಲಾದ ಈ ಬಾಗಿಲನ್ನು ಅಷ್ಟು ವಿಶಾಲವಲ್ಲದ ಎರಡು ಪ್ರಾಕಾರಗಳ ನಡುವಿನಿಂದ ಹಾದು ಮೆಟ್ಟಿಲುಗಳನ್ನು ಏರಿ ಪ್ರವೇಶಿಸಬೇಕು. ಹೊರಗಡೆ ಇರುವವರಿಗೆ ಈ ಬಾಗಿಲಿನ ಇರುವಿಕೆ ತಿಳಿಯುವುದು ಅಸಾಧ್ಯವಾದುದರಿಂದ ಈ ವಿಧದಲ್ಲಿ ಹಿಂದೆ ಶತೃಗಳು ಒಮ್ಮೆ ಈ ಸ್ಥಳದಲ್ಲಿ ಸಿಕ್ಕಿ ಬಿದ್ದರೆಂದರೆ ಸಾವೊಂದೇ ಅವರಿಗಿದ್ದ ಏಕೈಕ ಪಲಾಯನ ಮಾರ್ಗ. ಅಷ್ಟು ಅಪಾಯಕಾರಿ ಸ್ಥಳ ಇದು. ಹೆಬ್ಬಾಗಿಲು ಪಕ್ಕದಲ್ಲಿ ಒಬ್ಬ ವ್ಯಕ್ತಿ ಮಾತ್ರ ಪ್ರವೇಶಿಸಬಹುದಾದ ದಿಡ್ಡಿ ಬಾಗಿಲಿದೆ.

ಹೆಬ್ಬಾಗಿಲು ರಚನೆಯಲ್ಲಿ ಮುಸ್ಲಿಂ ಕಲಾ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಬಾಗಿಲಿನ ಕಲ್ಲು ಮಂಟಪದ ಒಳಗೋಡೆ ಮತ್ತು ಕಂಬಗಳ ಮೇಲಿರುವ ಹುಲಿಯೊಡನೆ ಕಾಳಗ, ಗಜಕಾಳಗ, ನರ್ತಕಿ, ಕಾಳಿಂಗ ಮರ್ಧನ, ಆಂಜನೇಯ ಮೊದಲಾದ ಶಿಲ್ಪಗಳು ಗಮನ ಸೆಳೆಯುತ್ತವೆ. ಟಾಕಿನಬಾಗಿಲನ್ನು ದಾಟಿದಾಕ್ಷಣ ಶ್ರೀಸಾನಂದ ಗಣೇಶನ ದೇವಸ್ಥಾನವಿದೆ. ಆನೆಯು ಸೊಂಡಿಲಿನಿಂದ ಭೂದೇವಿಯನ್ನು ನಮಸ್ಕರಿಸುವಂತೆ ಕಾಣುವ ಹುಟ್ಟು ಬಂಡೆಯ ಮೇಲೆ ಗಣೇಶನ ವಿಗ್ರಹವು ಕೆತ್ತಲ್ಪಟ್ಟಿರುವುದು. ಪಕ್ಕದಲ್ಲಿರುವ ಕಲ್ಲು ಕಟ್ಟಡವು ಗರಡಿಮನೆಯಾಗಿದೆ. ಇದನ್ನು ಪ್ರವೇಶಿಸಲು ಕಿರಿದಾದ ಒಂದೇ ಬಾಗಿಲಿದ್ದು, ಒಳಗಡೆ ಭೂಮಟ್ಟಕ್ಕಿಂತ ಆಳವಾಗಿದೆ. ಗಾಳಿ ಬೆಳಕು ಬರಲು ಛಾವಣಿಯಲ್ಲಿ ಗವಾಕ್ಷಿಯೊಂದನ್ನು ಮಾಡಿರುವರು. ಪುರಾತತ್ವ ಶೋಧಕರು ಈ ಕಟ್ಟಡದ ರಚನೆ ಆಧಾರದ ಮೇಲೆ ಇದು ಮದ್ದು ಸಂಗ್ರಹಾಲಯ ಆಗಿದ್ದಿತೆಂದು ಭಾವಿಸಿದ್ದಾರೆ. ಇದರ ಪಕ್ಕದಲ್ಲಿ ಚೌಕಾಕಾರದ ಕಲ್ಲು ಕಟ್ಟಡವೇ ಕಣಜವಾಗಿದೆ.

ಪಾಳೆಯಗಾರರ ಸಮಾಧಿಗಳು: ಗರಡಿಮನೆ ಮತ್ತು ಕಲ್ಲುಕಣಜಗಳ ಪಕ್ಕದಿಂದ ಕಲ್ಲುಗುಂಡುಗಳ ಮಧ್ಯೆ ಪ್ರಯಾಸದಿಂದ ಮೇಲೆ ಏರಿದರೆ, ಬೃಹತ್ ಬಂಡೆಗಳಲ್ಲಿ ಗೋಡೆಯಿಂದ ಸುತ್ತುವರಿದ ಆವರಣದಲ್ಲಿ ಯಾರ ದೃಷ್ಟಿಗೂ ತಟ್ಟನೆ ಬೀಳದ ಹಾಳು ಮಂಟಪದಂಥ ಸ್ಥಳವಿದೆ. ಇಲ್ಲಿ ಚಿತ್ರದುರ್ಗವನ್ನಾಳಿದ ೧೨ನೇ ದೊರೆ ಬಿಚ್ಚುಗತ್ತಿ ಬರಮಣ್ಣನಾಯಕನ (೧೬೮೯-೧೭೨೧) ಮತ್ತು ೧೭೪೮ರಲ್ಲಿ ಇಕ್ಕೇರಿ ಅರಸ ಮತ್ತು ಅವನ ಮಿತ್ರ ಪಾಳೆಯಗಾರರ ವಿರುದ್ಧ ನಡೆಸಿದ ಮಾಯಕೊಂಡ ಕಾಳಗದಲ್ಲಿ ಮಡಿದ ಅವನ ಮಗ ಹಿರೇಮೆದಕೇರಿ ನಾಯಕರ ಸಮಾಧಿಗಳಿವೆ. ಹುತ್ತ ಬೆಳೆದು ಖಿಲವಾಗಿ ಹೋಗಿರುವ ಪುಟ್ಟ ಛತ್ರಿಯಂತಹ ಮಂಟಪವೇ ಹಿರೇಮೆದಕೇರಿಯ ಸಮಾಧಿ, ಬಂಡೆಯ ಅಡಿಯಲ್ಲಿರುವ ಸಣ್ಣ ಮಂದಿರ ಬರಮಣ್ಣ ನಾಯಕರದ್ದಾಗಿದೆ.

ಲೇಖನ ಸಂಗ್ರಹಕಾರರು :
ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು,

ಚಿತ್ರದುರ್ಗ.ಮೊ: 9448664878.