ಬ್ರಹ್ಮಾಂಡವೆಂಬ  ವಾಸ್ತವದ ಭೂಮಿ ಎಂಬ ಪುಟ್ಟ ಗೂಡಿನ ,  ಪುಟ್ಟ ದೇಶದ , ಪುಟ್ಟ ಊರಿನ , ಪುಟ್ಟ ಗಲ್ಲಿಯಲ್ಲಿ , ಎಲ್ಲಾ ನನ್ನಿಂದ ಮಾರಾಯ ಎಂದು ಬೀಗುತ್ತಿದ್ದ ಮನುಷ್ಯನಿಗೆ “”ಪ್ರಕೃತಿ”” ಸಣ್ಣ ಚಡಿಯೇಟು ಕೊಟ್ಟು ಮನೆ ಒಳಗೆ ಕೂರಿಸಿದೆ….

ನಾವು ಪ್ರಕೃತಿಗೆ ಕೊಟ್ಟ ಬಳುವಳಿಯನ್ನು ಅದು ಯಥಾವತ್ತಾಗಿ ನಮಗೆ ರಿಟರ್ನ್ ಗಿಫ್ಟ್ ಕೊಡುತ್ತಿದೆ ಅಷ್ಟೇ. ಕಣ್ಣಿಗೆ ಕಾಣದ ಒಂದು ವೈರಸ್ ನಮ್ಮ ಅಹಂಕಾರ, ದವಲತ್ತು , ಜಾತಿ-ಧರ್ಮ ಎಲ್ಲದರ ಹೆಡೆಮುರಿಕಟ್ಟಿ ಮನೆಯೊಳಗೆ ಕೂರುವಂತೆ ಮಾಡಿದೆ.  ಮಾನವನು  “ದೇವರಾಗುವ ಹುಂಬತನ”ದಲ್ಲಿ ಓಡುತ್ತಿದ್ದ ವೇಗಕ್ಕೆ ಕಾಲು ಮುರಿದು ಕೂರಿಸಿದೆ..ಬಂದ ಆಪತ್ತಿಗೆ ನಾವು ದೇವರನ್ನು ಬಯ್ಯುವುದಕ್ಕೆ ಆಗದೆ ಸಂಕಟ ಪಡುತ್ತಿರುವುದು ಇದು ಮೊದಲನೇ ಬಾರಿ ಇರಬೇಕು .?!                  ಈ Corona  ನಮ್ಮ ಪಾಪದ ಕೂಸು ದೇವರನ್ನು ಹೊಣೆ ಮಾಡುವುದಕ್ಕೆ ಹೇಗೆ ಸಾಧ್ಯ.

ದಿನಬೆಳಗಾದರೆ ಟಿವಿಯಲ್ಲಿ ನಿತ್ಯ ಬರುತ್ತಿದ್ದ “ಜ್ಯೋತಿಷಿ”ಗಳು ಎಲ್ಲೋ ಮಾಯವಾಗಿದ್ದಾರೆ!…

ಭಕ್ತರನ್ನು ನಿತ್ಯವೂ ತಾವು “ದೇವಮಾನ”ವರು ಎಂದು ನಂಬಿಸುತ್ತಿದ್ದ ಪವಾಡಪುರುಷರು ಭಕ್ತರನ್ನು ಭೇಟಿ ಮಾಡುವುದನ್ನೆ ನಿಲ್ಲಿಸಿದ್ದಾರೆ. ಜಾತಿಗಳ ಮೇಲೆ ದೇವಸ್ಥಾನಗಳಿಗೆ , ದೇವರ ದರ್ಶನಗಳಿಗೆ ಅನುಮತಿ  ನೀಡುತ್ತಿದ್ದವರು, ಜ್ವರ ಇಲ್ಲದವರಿಗೆ ಮಾತ್ರ ಪ್ರವೇಶ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಬೀದಿಗೊಂದು ಬ್ಯೂಟಿಪಾರ್ಲರ್ ಗಳು ನಗುತ್ತಾ ನಿಂತಿದ್ದ ಬೀದಿಗಳಲ್ಲಿ , ಜನ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ , ಸಿನಿಮಾ,  ರಾಜಕೀಯ,  ಷೇರು ಮಾರುಕಟ್ಟೆ, ನಿತ್ಯವೂ ಸಿಂಗರಿಸಿ ನಿಲ್ಲುತ್ತಿದ್ದ ಮಾಲ್ ಗಳು, ನಗರದಲ್ಲಿ ಬಳುಕುತ್ತಾ ಓಡಾಡುತ್ತಿದ್ದ ಮೆಟ್ರೋ ,  ಮೈಮುರಿದು ಕೈಚಾಚಿ ನಿಂತಿದ್ದ ಫ್ಲೈಓವರ್ ಗಳು ಎಲ್ಲವೂ ಬಂದ್..

“ಕರೋನಾ”ಎಂಬ ಮಹಾಮಾರಿಯು ನಮಗೆ, ಸಮಾಜಕ್ಕೆ ಬದುಕನ್ನು ಕಲಿಸುತ್ತದೆ ಎಂದರೆ ನಂಬಲು ಸಾಧ್ಯವೇ ಇಲ್ಲ!?..ಹೆೆಗೆ ಮತ್ತೆ ನಮಗೆ ಬದುಕು ಕಲಿಸುತ್ತಿದೆ. ಬದುಕಿನ ಅರ್ಥ ತಿಳಿಸುತ್ತಿದೆ ಇರುವೆಯಂತೆ ಮುತ್ತುತ್ತಿದ್ದ ಜನರ ಗುಂಪನ್ನು ಚದುರಿಸಿದೆ. ನಗರಗಳು ಖಾಲಿ ಖಾಲಿ ಯಾಗಿವೆ, ಕುಟುಂಬಗಳನ್ನು ಮತ್ತೆ ಒಂದು ಮಾಡಿದೆ,

ಗಂಡ-ಹೆಂಡತಿ ಜೊತೆಗೆ ಕುಳಿತು ಮಾತನಾಡುತ್ತಿದ್ದಾರೆ, ಮಕ್ಕಳಿಗೆ ಅಪ್ಪ ಅಮ್ಮ ಮನೆಯಲ್ಲಿ ಸಿಗುತ್ತಿದ್ಧಾರೆ ಅನ್ನೋ ನಂಬಿಕೆ ಮತ್ತೆ ಹುಟ್ಟಿದೆ.            ಕೈತೊಳೆದು ಊಟ ಮಾಡಬೇಕು ಎಂದು ಹಿರಿಯರು ಹೇಳುತ್ತಿದ್ದಾಗ ಕಿವಿಗೆ ಹಾಕಿಕೊಳ್ಳದ ನಾವು , ಈಗ ದಿನಕ್ಕೆ 30 ಬಾರಿ ಕೈತೊಳೆಯುವಂತೆ ಮಾಡಿದೆ.                                 ಹಳ್ಳಿಗಳೆಂದರೆ”ನೈರ್ಮಲ್ಯ” ಇಲ್ಲದ ಊರುಗಳು ಎಂದು ಅಸಡ್ಡೆ ತೋರುತ್ತಿದ್ದ ಜನರೇ ಈಗ ಹಳ್ಳಿಗಳತ್ತ ಮುಖ ಮಾಡಿದ್ದಾರೆ.

ಈ “ಕೊರೊನ “ದಿಂದ ವಿಭಕ್ತ ಕುಟುಂಬಗಳು “ಅವಿಭಕ್ತ “ಕುಟುಂಬಗಳ ಲಾಗುತ್ತಿವೆ.                             ಮನುಷ್ಯನ ಅಮೂಲ್ಯ  ಜೀವಕ್ಕೆ ಇರುವ ಬೆಲೆ ನಮಗೆ ಸ್ಪಷ್ಟವಾಗಿ ಮನದಟ್ಟಾದ೦ತಿದೆ.  ಹುಚ್ಚು ಕುದುರೆಯಂತೆ ಓಡುತ್ತಿದ್ದ ನಮಗೆ ಲಗಾಮು ಬಿದ್ದಿದೆ ,                   ಜೀವಕ್ಕೆ ಹೆದರಿ ನಮ್ಮ ನಮ್ಮ ಊರುಗಳಿಗೆ ಓಡಿ ಬಂದಿದ್ದೇವೆ , ಅಮ್ಮನ ಕಳವಳ , ಅಪ್ಪನ ಆತಂಕ,  ಸ್ನೇಹಿತರ ಕಾಳಜಿ ಎಲ್ಲವೂ ಅರಿವಾಗಿದೆ . ನಾವು ಬದುಕಿದ ಬದುಕಿನ ಬಗ್ಗೆ ಒಂದು ಅವಲೋಕನ ಮಾಡಿಕೊಳ್ಳೋಣ ಮತ್ತೆ ನಾವು ಬದುಕುವ ಬದುಕಲ್ಲಿ ತಪ್ಪುಗಳಾದರೆ     ಆ ತಪ್ಪುಗಳಿಗೆ ನಮ್ಮ ಮಕ್ಕಳು ಬೆಲೆ ತೆರಬೇಕಾಗುತ್ತದೆ .

Corona ಥ್ಯಾಂಕ್ಯು …?!. ನಿನ್ನಿಂದ ಬದುಕಿನ ಬೆಲೆ ಅರಿವಾಗಿದೆ ನಮಗೆ ….. ಹಾಗಾಗಿ  ಈ “””ಭೂಮಿಯಿಂದ ನೀನು  ಹೊರಟುಹೊಗು”” ನಮ್ಮಿಂದ ಮತ್ತೆ ತಪ್ಪಾಗದಂತೆ ನಾವು ಬದುಕುತ್ತೇವೆ.. ಹೊರಡು ,ಹೊರಡು ಹೊರಡು ಇಲ್ಲಿಂದ ಈ ಭೂಮಿಯಿಂದ,ನಮ್ಮಿಂದ ಪೂರ್ಣ ಹೊರಟೆ ಬಿಡು  .ಇಂತಿ “ಕರೋನಾ” ಕಾರಣ ಆರೋಗ್ಯ ಜಾಗೃತಿ  ಅಭಿಯಾನ .

  • ವಿಜಯಕುಮಾರ ತೊಡರನಾಳ್, ಚಿತ್ರದುರ್ಗ.