ಕನ್ನಡ ನಾಡು-ನುಡಿಗೆ ಅನನ್ಯವಾದ ಕಾಣ್ಕೆ ನೀಡಿದ ಬಸವಣ್ಣ ವಿಶ್ವ ಶ್ರೇಷ್ಠ ಸಾಂಸ್ಕøತಿಕ ನಾಯಕ. ತನ್ನ ಸಮಕಾಲೀನರು, ಜನಪದರು ಹಾಗೂ ಕವಿಗಳ ಕೃತಿಗಳಿಗೆ ವಸ್ತುವಾಗಿರುವ ಬಸವಣ್ಣನವರು ಅನುಭವ ಮತ್ತು ಅನುಭಾವವನ್ನು ಒಗ್ಗೂಡಿಸಿ, ಅರಳಿದವರು. ಆಧುನಿಕ ಕನ್ನಡ ಕವಿಗಳು ಕಂಡಂತೆ ಬಸವಣ್ಣ ಎಂಬ ಲೇಖನವನ್ನು ನಲ್ಲಿಕಟ್ಟಿ ಎಸ್. ಸಿದ್ದೇಶ್ ಬರೆದಿದ್ದಾರೆ.
-ಸಂ
ಸಾವಿಲ್ಲದ ಸಾಹಿತ್ಯಕ್ಕೆ ವಾಸ್ತುವಾಗುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ. ಬದುಕನ್ನು ಹಿತವಾಗಿಸುವ ಸಾಹಿತ್ಯದೊಳಗೆ ಜೀವ ಚೈತನ್ಯವಿದೆ. ಕನಸು ಕಟ್ಟಿ ನನಸಾಗಿಸುವ, ಮಾಲಿನ್ಯಗೊಂಡ ಮನವನ್ನು ಮಡಿಯಾಗಿಸಿ, ವ್ಯಷ್ಟಿ ಮತ್ತು ಸಮಷ್ಟಿಯನ್ನು ಸದೃಢಗೊಳಿಸುವ ಶಕ್ತಿ ಕಾವ್ಯಕ್ಕಿದೆ. ವ್ಯಕ್ತಿ ಮತ್ತು ಸಮಾಜದ ಸಂವರ್ಧನೆಯ ಬೀಜವು ಕಾವ್ಯದೊಳಗೆ ಅಡಗಿಕೊಂಡಿರುತ್ತದೆ. ಭೂತಕಾಲವು ವರ್ತಮಾನಕ್ಕೆ ಪ್ರೇರಕ ಶಕ್ತಿಯಾದಂತೆ, ವರ್ತಮಾನ ಭವಿಷ್ಯತ್‍ಕಾಲದ ನಡುವಳಿಕೆಗೆ ಸ್ಫೂರ್ತಿಯಾಗಿರುತ್ತದೆ. ಕಾಲ ಮತ್ತು ಸಮಾಜವನ್ನು ಮುನ್ನಡೆಸುವ ದೀಶಕ್ತಿಗಳೆಂದರೆ ವಿಶಿಷ್ಟವಾದ ಆದರ್ಶ ಮತ್ತು ಮೌಲ್ಯಗಳು. ಇಂಥ ಆದರ್ಶ ಮತ್ತು ಮೌಲ್ಯಗಳನ್ನು ರೂಪಿಸಿ, ರೂಢಿಸಿಕೊಂಡು ಬಾಳಿ ಬೆಳಗಿದ ಬಸವಣ್ಣ ಯುಗಪುರುಷ.
ಕನ್ನಡ ನಾಡು-ನುಡಿಗೆ ಅನನ್ಯವಾದ ಕಾಣ್ಕೆ ನೀಡಿದ ಬಸವಣ್ಣ ವಿಶ್ವ ಶ್ರೇಷ್ಠ ಸಾಂಸ್ಕøತಿಕ ನಾಯಕ. ತನ್ನ ಸಮಕಾಲೀನರು, ಜನಪದರು ಹಾಗೂ ಕವಿಗಳ ಕೃತಿಗಳಿಗೆ ವಸ್ತುವಾಗಿರುವ ಬಸವಣ್ಣನವರು ಅನುಭವ ಮತ್ತು ಅನುಭಾವವನ್ನು ಒಗ್ಗೂಡಿಸಿ, ಅರಳಿದವರು. ಬಸವಣ್ಣನವರ ಬದುಕು ಮತ್ತು ಬರಹಗಳು ಸಮಾಜವನ್ನು ಸಾಮರಸ್ಯದೊಳಗೆ ಬೆಸೆಯುವ ಬೆಸುಗೆಗಳು. ತನ್ನ ತಾನರಿತ ಬಸವಣ್ಣನವರ ನುಡಿಯೊಳಗಿನ ನಡೆಯನ್ನು, ನಡೆಯೊಳಗಿನ ನುಡಿಯನ್ನು ಅವರ ಅರಿವಿನ ಅನುಭವ ಮಂಟಪವನ್ನು ಕನ್ನಡ ಸಾಹಿತ್ಯ ದಾಖಲಿಸುತ್ತಾ ಬಂದಿದೆ.
ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿನ ಕಲ್ಮಶಗಳ ಬಗ್ಗೆ ಬಸವಣ್ಣನವರಿಗಿದ್ದ ಅತೃಪ್ತಿಯನ್ನು, ವ್ಯಷ್ಟಿ ಮತ್ತು ಸಮಷ್ಟಿಯ ಪ್ರಗತಿಗೆ ಕಂಟಕವಾಗಿರುವ ಅಂಶಗಳನ್ನು ನಿರಾಕರಿಸಿದ ಬಗೆಯನ್ನು, ಸರ್ವ ಸಮಾನತೆಗೆ ಭಕ್ತಿ ಮತ್ತು ಸತ್ಯಶುದ್ಧ ಕಾಯಕ ಮಾರ್ಗಗಳನ್ನು ಅನ್ವೇಷಿಸಿದ ರೀತಿಯನ್ನು ಆಧುನಿಕ ಕನ್ನಡ ಕವಿಗಳು ಅನಾವರಣಗೊಳಿಸಿರುವರು. ಯುಗಪ್ರರ್ವತಕ ಬಸವಣ್ಣನವರ ಸಾಧನೆಯೊಳಗೆ ಸಹಸ್ರ ಸಹಸ್ರ ಸಂಕಟಗಳಿವೆ. ಆ ಎಲ್ಲ ಸಂಕಟಗಳನ್ನು ಅನುಭವಿಸಿ, ಅನುಭಾವದ ನೆಲೆಯಲ್ಲಿ ಅಮರರಾದವರು. ಆಧುನಿಕ ಕನ್ನಡ ಕಾವ್ಯದ ನವೋದಯ, ಪ್ರಗತಿಶೀಲ, ನವ್ಯ ಹಾಗೂ ದಲಿತ-ಬಂಡಾಯ ಕವಿಗಳು ಬಸವಣ್ಣನವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ವ್ಯಕ್ತಿ ಶೋಧ, ಸಮಾಜಶೋಧ ಮತ್ತು ಮೌಲ್ಯಾದರ್ಶದ ನೆಲೆಗಳಲ್ಲಿ ಚಿತ್ರಿಸಿದ್ದಾರೆ. “ಕವಿತೆ ಅಂದರೆ ಜಾಡಮಾಲಿಯ ಪೊರಕೆಯಾಗಿ| ಬಟ್ಟೆ ಒಗೆಯುವ ಅಗಸನಹಾಗೆ| ಕುಂಬಾರ ಗುಂಡಪ್ಪನ ತಿಗುರಿಯ ಹಾಗೆ| ಹೊಲೇರ ಮೂಕಪ್ಪನ ಡಪ್ಪಿನ ಹಾಗೆ| ಕೊರವರ ಕುರಿಮ್ಯಾನ್ ಬಿಜಲಿಯ ಹಾಗೆ|” ಎಂಬ ಜಂಬಣ್ಣ ಅಮರಚಿಂತ ಅವರ ಕವಿತೆಯು ಕಾವ್ಯಕ್ಕೆ ಬರೆದ ಅನನ್ಯವಾದ ವ್ಯಾಖ್ಯಾನವಾಗಿದೆ.
“ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ ನೀ ಬಂದೆ| ಬಟ್ಟೆಗೆಟ್ಟವರಿಗೊಂದು ದೊಂದಿ ದಿಕ್ಕಾಗಿ| ಎಂಟು ಶತಮಾನಗಳ ಹಿಂದೆ| ಅಗ್ನಿ ಖಡ್ಗವನಾಂತ ಓ ಅಧ್ಯಾತ್ಮ ಕ್ರಾಂತಿವೀರ| ದೇವದಯೊಂದು ಹೇ ಧೀರಾವತಾರ| ಶ್ರೀಬಸವೇಶ್ವರಾ|-ಎಂದು ಪರಿಚಯಿಸುವ ರಾಷ್ಟ್ರಕವಿ ಕುವೆಂಪುರವರು “ಇಂದಿಗೂ ನಾವು ನಿನ್ನೆತ್ತರಕ್ಕೆ ಏರಲಾರದೆ ಅಯ್ಯೊ| ಮತದ ಉಸುಬಿಗೆ ಸಿಲುಕಿ ತತ್ತರಿಸುತಿಹವೆಯ್ಯ| ಬಾರಯ್ಯ, ಕೈಹಿಡಿದೆತ್ತಿ ಬದುಕಿಸು ನಮ್ಮನೆಳೆದು”ಎಂದು ಕರೆಯುವರು. ಜಾತಿ ಜಾಡ್ಯದಿಂದ ಪಾರಾಗಲು ಬಸವಣ್ಣ ತೋರಿದ ಪಥವೆ ಸತ್ಪಥವೆಂದು ಸಾರುವರು.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಕಾರವನ್ನು ಇಷ್ಟಲಿಂಗದ ಮೂಲಕ, ಆರ್ಥಿಕ ಸ್ವಾವಲಂಬನೆಯನ್ನು ಕಾಯಕದಿಂದ, ಸಾಂಸ್ಕøತಿಕ ಸಂಸ್ಕಾರವನ್ನು ಸದ್ಗುಣಗಳ ತತ್ವದಿಂದ ಶೋಷಕ ಮತ್ತು ಶೋಷಿತರ ಹೃನ್ಮನಗಳಲ್ಲಿ ಬಿತ್ತಿ ಬೆಳೆದವರು ಬಸವಣ್ಣನವರು. ಅನ್ಯಾಯ, ಅಪಮಾನತೆ, ಅದಕ್ಷತೆಯ ಆರ್ಭಟಕ್ಕೆ ಬೇಸತ್ತ ಕವಿ ರಂ.ಶ್ರೀ.ಮುಗಳಿಯವರು “ಬಿರುಗಾಳಿಯಾಗಿ ಬಸವಣ್ಣ ಮರಳಿ| ಬಾರೊ ಜಡ ತೂರಿ ಚೈತನ್ಯವರಳಿ|’’ ಎಂದು ಕರೆಯುವರು. ಜಡವನ್ನು ಚೈತನ್ಯವಾಗಿಸುವ, ಮೂಕನನ್ನು ಮಾತುಗಾರನಾಗಿಸುವ ಬಸವಣ್ಣ ಬಿರುಗಾಳಿಯಾಗಿ ಬರಲಿ. ಮನ-ಮನಗಳಲ್ಲಿನ ಕಲ್ಮಶಗಳನ್ನು ತೂರಲಿ ಎಂಬ ಆಶಯ ಕವಿಯದ್ದು.
“ಅನುಭಾವದನುವಿಡಿದು, ಅಂತರಾಳವ ಕಡೆದು| ಹೊಮ್ಮಿರುವ ಚಿಜ್ಯೋತಿಯೆ| ಧರೆಯ ಮೇಲಿನ ಶೂನ್ಯ ಸಿಂಹಾಸನವನೇರು| ಮುಗಿಲ ಗುರುಗುಂಭ ದೊರೆಯೆ|-ಎಂದು ಅಂತರಂಗದ ಮಥsÀನದಿಂದ ಅತೀಂದ್ರ್ರಿಯದ ಆನಂದವನ್ನು, ಅಜ್ಞಾನ, ಅಂಧಾನುಕರಣೆಯನ್ನು ಮುಗಿಲ ಗುರುವಾಗಿ ತೊಲಗಿಸಿ ಬಾ ಶ್ರೇಷ್ಠ ದೊರೆಯೇ ಎನ್ನುವರು ಚನ್ನವೀರ ಕಣವಿಯವರು. ಬಸವಣ್ಣನವರ ಮೂಲ ಆಶಯ ಸಾಹಿತ್ಯ ಸಾಧನೆಯಲ್ಲ. ಜೀವ-ಜೀವನ ಶೋಧನೆ. ಜೀವ-ಜೀವನಕ್ಕಾಗಿ ಅವರು ಸಾಹಿತ್ಯ ಮತ್ತು ಸಂಘಟನೆಯನ್ನು ಅವಲಂಬಿಸಿದವರು. “ನೂರಾರು ವರ್ಷಗಳು ನಡೆದು ನೋಡಿದರೀಗ| ಉಳಿದಿರುವೆ ಹಲವಾರು ವಚನದಲ್ಲಿ.| ನಿನ್ನ ದಯೆ, ಪ್ರಾಮಾಣಿಕತೆ, ನಿಷ್ಠೆ, ಮರು ಹುಟ್ಟು ಪಡೆಯುತಿದೆ ಮಾತಿನಲ್ಲಿ-ಎನ್ನುವರು ಸುಮತೀಂದ್ರನಾಡಿಗರು. ಬಸವಣ್ಣ ಸರಳ ನುಡಿಯಲ್ಲಿ ತಮ್ಮ ಅನುಭವ ಮತ್ತು ಅನುಭಾವವನ್ನು ಅಭಿವ್ಯಕ್ತಿಸಿದವರು. “ಮಡುಗಟ್ಟಿನಾರಿದ್ದು ಸಂಪ್ರದಾಯಕ್ಕೆ| ನಾಲೆ ಬಿಡಿಸಿ ಹೊಸಹಾದಿಗಳ ರಚಿಸಿದಾತ| ಈ ನಾಡ ಹಿರಿ ಬದುಕಿಗಂಟಿದ್ದ ಕಿಲುಬನ್ನು| ಉಜ್ಜುಜ್ಜಿ ಮತ್ತೊಮ್ಮೆ ತೊಳೆದಾತ| ಹತ್ತು ಬಗೆ ಮರಗಿಡದ ಒಕ್ಕೂಟವೀ ತೋಟ| ಸರಿಸಮದ ಆರೈಕೆ ಮಾಡಿದಾತ| ಜೀವನ ವನಡಿಗಡಿಗೆ ಸೋಸಿ, ಅರಿವನ್ನರಿಸಿ| ಭಕ್ತಿಯನ್ನೆ ಬೆಂಬತ್ತಿ ಅಗಿದಾತ”-ಎನ್ನುತ್ತಾರೆ ಕೆ.ಎಸ್. ನಿಸಾರ್‍ಅಹಮದ್ ಅವರು. ಬಸವಣ್ಣ ಮೌಢ್ಯ, ಸಂಪ್ರದಾಯಗಳ ಕೂಪದಲ್ಲಿ ಕೊಳೆಯುತ್ತಿದ್ದ ಸಾಮಾಜಿಕ ವ್ಯವಸ್ತೆಯನ್ನು ಸರಿಪಡಿಸಿದವರು. ಅಲ್ಲದೆ ಸ್ವಯಂ ಘೋಷಿತ ಶ್ರೇಷ್ಠರೆಂದು ಕರೆದುಕೊಳ್ಳುತ್ತಿದ್ದವರಲ್ಲಿನ ಕಿಲುಬನ್ನು ಉಜ್ಜುಜ್ಜಿ ತೊಳೆದವರು ಬಸವಣ್ಣ. ಅರಿವಿನ ಮೂಲಕ ಆನಂದಿಸುವ ಪರಿಯನ್ನು ತಿಳಿಸಿದವರು. ಘನವ್ಯಕ್ತಿತ್ವದ ಜೀವಾಳವಾದ ಭಕ್ತಿಯಿಂದ ಭವಲೋಕ ಗೆಲ್ಲುವುದನ್ನು ಕಲಿಸಿದವರು ಬಸವಣ್ಣ.
ಜಿ.ಎಸ್.ಶಿವರುದ್ರಪ್ಪನವರು ಹೇಳುವಂತೆ “ಬದುಕಿದವ ನೀನು ಸಂಗನ ಮುಂದೆ ಕರ್ಪೂರ ಉರಿದಂತೆ” ಜ್ಯೋತಿ ಇತರರ ಏಳಿಗೆಗೆ ಉರಿದಂತೆ, ಬಸವಣ್ಣನವರು ಸಮಾಜದ ಏಳಿಗೆಗಾಗಿ ದುಡಿದವರು. ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡವರು. “ವಜ್ರಲೇಪದಲ್ಲಿ ಒಳಗು-ಹೊರಗುಗಳ ಬೆಸೆದೆ|” ಎನ್ನುವ ಸಿಪಿಕೆ ಯವರು. ಬಸವ ಸ್ಮøತಿ ಎಂಬ ತಮ್ಮ ಕವಿತೆಯಲ್ಲಿ ಬಸವಣ್ಣ ಬೆಳೆದ ಪರಿಯನ್ನು ರೂಢಿಗತವಾದ ಅಂಧ ಸಂಪ್ರದಾಯಗಳ ವಿರುದ್ಧ ಪ್ರತಿಭಟಿಸಿದ ರೀತಿಯನ್ನು ಚಿತ್ರಿಸಿದವರು. ಕನ್ನಡ ನಾಡು-ನುಡಿಯ ಇತಿಹಾಸದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯನ್ನುಂಟು ಮಾಡಿದ 12ನೇ ಶತಮಾನ ಕ್ರಾಂತಿಕಾಲ. ಈ ಕ್ರಾಂತಿಯ ನಾಯಕ ಬಸವಣ್ಣ ವಿಚಾರ ಶಕ್ತಿಯನ್ನು ಬೆಳೆಸಿದವರು.ಕವಿ ಸಿದ್ದಯ್ಯ ಪುರಾಣಿಕರು ‘ಬಸವನ ಬೆಳಕೆ’ ಎಂಬ ಕವಿತೆಯಲ್ಲಿ “ಬಸವನ ಬೆಳಕೆ | ಎಲ್ಲಾಡಿ ಬಂದೆ? ಕಾಯಕಕ್ಷೇತ್ರದಿ| ನಲಿದಾಡಿ ಬಂದೆ | ಬೆವರಿನ ಹನಿಯಲ್ಲಿ ಬೊಮ್ಮವ| ತೋರಿಸಿ | ಕಾಯಕರ್ಮದಲ್ಲಿ | ಕೈಲಾಸ ತೋರಿಸಿ| ವೃತ್ತಿಯ ಮುಖಕೆ | ಹೊಸಕಳೆ ಬರಿಸಿ | ದುಡಿಮೆಯ ದೇವರ |ದೇಗುಲದಲಿ ್ಲ | ನರ್ತಿಸಿ ಬಂದೆ | ಕೀರ್ತಿಸಿ ಬಂದೆ”|-ಎನ್ನುತ್ತಾರೆ. ಸಾಮಾಜಿಕ ಸಮಾನತೆಯ ವೃತ್ತಿಯಲ್ಲಿನ ಮೇಲು-ಕೀಳು ಭಾವನೆ ಅಡ್ಡಿಯಾಗುವುದನ್ನು ನಿವಾರಿಸ ಬೇಕೆಂಬ ಬಸವಣ್ಣನವರ ವೈಚಾರಿಕ ನಿಲುವು ಅಪೂರ್ವವಾದದ್ದು. ಯಾವ ಕೆಲಸವು ಕೀಳಲ್ಲವೆಂದು ಬೋಧಿಸಿದ ಬಸವಣ್ಣನವರು ವೃತ್ತಿ ಅಥವಾ ಕೆಲಸ-ಎಂಬುದಕ್ಕೆ ‘ಕಾಯಕ’ ಎಂಬ ಪರಿಕಲ್ಪನೆಯನ್ನು ನೀಡಿ, ಕಾಯಕವೇ ಕೈಲಾಸವೆಂದು ಸಾರಿದವರು. ಅಂಥ ಬಸವಣ್ಣನವರನ್ನು ‘ಬೆಳಕಿಗೆ’ ಹೋಲಿಸಿದ ಕವಿ ಸಿದ್ಧಯ್ಯ ಪುರಾಣಿಕರು ಪ್ರಶ್ನೋತ್ತರ ರೀತಿಯ ಕಾವ್ಯ ಕಟ್ಟಿ, ಬಸವಣ್ಣನವರ ಸಾಧನೆಯನ್ನು ಚಿತ್ರಿಸಿರುವರು.
`ಕುಲವೊಂದೆ ತನ್ನ ತಾರಿದವರಿಗೆ’ ಎಂದು ಸಾರಿದ ಬಸವಣ್ಣನವರು ‘ಜಾತಿ’ಯ ಕಬಂಧ ಬಾಹುವಿನಿಂದ ಬಿಡಿಸಿದವರು. “ಮತದೆಲ್ಲೆಗಳನಳಿಸಿ ಸರ್ವಸಮತೆಯ ಬಲಿಸಿ| ದ್ವೇಷಕ್ಕೆ ಪ್ರೇಮಜಲದಭಿಷೇಕವನುಗೈದೆ|ಕರೆವರಿಗೆ ಕೈ ನೀತಿ, ಮೊರೆವರಿಗೆ ಮನ ನೀತಿ |ಅನುದಿನವು ನೆನೆವರಿಗೆ ಬಸವಾ ಮಂತ್ರವಾದೆ”-ಎನ್ನುವರು ಶಾಂತರಸರು. ಸಿರಿಗೆರೆಯ ಲಿಂಗೈಕ್ಯ ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಹೇಳುವಂತೆ “’ಹೊಲೆಯ’ ಎಂಬುದು ಕೀಳು ಮಾನವನ ಮನೋಧರ್ಮ, ಅದೊಂದು ಜಾತಿಯಲ್ಲ. ಬ್ರಾಹ್ಮಣನೆಂಬುದು ಮಾಲಿನ್ಯವೇ, ಹೊಲೆಯನೆಂಬುದು ಮಾಲಿನ್ಯವಾದರೆ ಬ್ರಾಹ್ಮಣನೆಂಬುದು ಮಹಾಮಾಲಿನ್ಯ. ಹೊಲೆಯನೆಂಬ ಮಾಲಿನ್ಯದ ಉತ್ಪತ್ತಿಗೆ ಬ್ರಾಹ್ಮಣ್ಯವೆಂಬ ಮೇಲು ಕುಲವೇ ಕಾರಣವಲ್ಲವೇ? ..ಆದುದರಿಂದಲೇ ಮಾಲಿನ್ಯವನ್ನು ತೊಳೆಯ ಬೇಕೆಂದರೆ ಹೊಲೆಯನಲ್ಲಿರುವುದನ್ನಲ್ಲ, ಆ ಹೊಲೆಯನಲ್ಲಿ ಮಾಲಿನ್ಯವು ಬೇರೂರಲು ಕಾರಣವಾದ ತಾನು ಮೇಲೆಂಬುದಕ್ಕೆ ಪೋಷಕವಾದ ಉತ್ತಮ ಕುಲವೆಂಬ ಮಹಾಮಾಲಿನ್ಯವನ್ನು ತೊಳೆಯಬೇಕೆಂದು’’ ಬಸವಣ್ಣನವರು ಕ್ರಿಯಶೀಲರಾದವರು.
ವ್ಯಕ್ತಿ ತನ್ನ ನಡೆ-ನುಡಿಗಳಿಂದ, ಆಚಾರ-ವಿಚಾರ, ರೀತಿ-ನೀತಿಗಳಿಂದ, ಮೇಲು-ಕೀಳೆನಿಸಿಕೊಳ್ಳುವನೆಂದು ಮನವರಿಕೆ ಮಾಡುವ ಬಸವಣ್ಣನವರು ಅರ್ಥಹೀನ ಜಾತಿಕುಲಗಳನ್ನು ಖಂಡಿಸಿದವರು `ಕಲ್ಯಾಣ ಜ್ಯೋತಿ’ ಎಂಬ ಕವಿತೆಯಲ್ಲಿ ಎಸ್.ಡಿ. ಇಂಚಲ ಅವರು “ಮರಳಿ ಬಾ ಬಸವಣ್ಣ, ಧರೆಯು ಕೊರಗುತ್ತಿಹುದು| ನಿನ್ನ ಭೋದೆಯ ಸುಧೆಯ ಮತ್ತೆ ನೀಡು| ನರಳಿ ನೊಂದಿದೆ ಜಗವು. ಕರುಣೆಯನ್ನು ಕರೆಯಣ್ಣ| ಬರಡಾಗುತಿದೆ ನೆಲ ಬೆಳಕ ನೀಡು”-ಎಂದು ಇಂದಿನ ತಲ್ಲಣ ಆತಂಕಗಳ, ಅಶಾಂತಿಯ ಅಗ್ನಿನರ್ತನಕ್ಕೆ ಬಸವಣ್ಣನ ಕರುಣೆಯ ಬೆಳಕನ್ನು ಕರೆಯುತ್ತಾರೆ. ಎನ್.ಎಂ.ಗಿರಿಜಾಪತಿಯವರು ‘ನೀ ಬರುವ ಮುನ್ನ’ ಎಂಬ ಕವಿತೆಯಲ್ಲಿ “ಬಸವನನೆ ನೀನೂ ಇಂದು ಪ್ರಶ್ನೆಯೇ? ಬಂದವನು ಯಾಕೆ ಮರಳಿ ಹೋದ?| ದೈವ, ದೇವ-ದೇವಾಂಶ ಸಂಭೂತರಿಂದು| ತಮ್ಮ ಕಿರೀಟ- ಮಹಲುಗಳನು ನಿನಗಿಟ್ಟು| ವೇಷ ಬದಲಿಸಿದ್ದಾರೆ ಬಸವಾ| ನೀ ನುಡಿದು ನುಡಿಸಿದ ವಚನಗಳೆಲ್ಲ ಜಪದ ಮಂತ್ರಗಳು ಬಸವಾ| ನಡೆದ ಪಥ, ತೋರಿದ ದರ್ಶನ, ಬಿತ್ತರಿಸಿದವು| ನಿಲುವುಗಳೆಲ್ಲ ಕಾಗದದ ಕಮಲಗಳು”-ಎಂದು ವರ್ತಮಾನದ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತಾರೆ. ಆ ಮೂಲಕ ಬಸವಣ್ಣನವರ ಹೆಸರಿಗೆ, ಸಾಧನೆಯಗಿರಿಗೆ, ಬೆಂಕಿಹಚ್ಚಬೇಡಿ, ಬೆಳಕನ್ನೋತ್ತಿಸಿರೆಂದು ಅರಿವನ್ನು ಬಿತ್ತಿದ್ದಾರೆ. ಶ್ರೀಶೈಲಮಠಪತಿಯವರು “ಬದುಕುತ್ತಿದ್ದೇವೆ ಬಸವ | ಬದುಕು ಮಾರಿಕೊಡು | ಬಹಿರಂಗ ಶುದ್ಧಿಯಲ್ಲಿ | ಅಂತರಂಗ ಮರೆತು | ನಾಯಕತ್ವದ ಬೆಂಬತ್ತಿ | ಕಾಯಕವ ಮೂಲೆಗೊತ್ತೀ ||” ಎಂಬಿತ್ಯಾದಿಯಾಗಿ ಇಂದಿನ ಜನಜೀವನದ ಚಿತ್ರಣವನ್ನು ಬಸವಣ್ಣನವರು ಕಂಡ ಕನಸ್ಸಿನ ಸಮಾಜದೊಂದಿಗೆ ಹೋಲಿಕೆ ಮಾಡುವ ಮೂಲಕ ಯಾವ ಬದುಕು ಉತ್ಕøಷ್ಟ, ಯಾವ ಬದುಕು ಕನಿಷ್ಟ ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ಕವಿ ಪ್ರೇರೇಪಿಸುತ್ತಾರೆ.
“ನನ್ನಂತರಂಗವನು ಆವರಿಸಿ ನಿಂತಿರುª| ಓ ನನ್ನ ಗುರು ಬಸವ ಜಗದ ಬೆಳಕೆ |ನೂರೆಂಟು ಶತಮಾನ ಸಂದರೂ ಮಾಸದಿಹ| ಹಾದಿ ತೋರಿದೆ ನೀನು ಮನುಜ ಕುಲಕೆ||” ಎನ್ನುತ್ತಾರೆ ಎಂ.ಡಿ.ಗೋಗೇರಿಯವರು. ಹೀಗೆ ನೂರಾರು ಹೃದಯದಲ್ಲಿ ಬಸವಣ್ಣನವರ ‘ನಡೆ-ನುಡಿ’ ನಂದಾದೀಪವಾಗಿ ಬೆಳಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮೋಸ, ವಂಚನೆಗಳು, ಲಿಂಗಜಾತಿ, ಮತ ಭೇದಗಳು ವಿಜೃಂಭಸುತಿರುವುದಕ್ಕೆ ಬೆಸರವಾದ ಕವಿ ಮನಗಳು ಬಸವಣ್ಣ ಬಾರಪ್ಪ, ಬಾರಯ್ಯ, ಬಾರೋ ಎಂದೆಲ್ಲ ನೋವಿನ ನೆಲೆಯಲ್ಲಿ ಹೃದಯತುಂಬಿ ಕರೆಯುತ್ತೇವೆ. ಪ್ರಕೃತಿಯೇ ದೇವರೆಂದು ಪೂಜಿಸುತ್ತಿದ್ದ ಕಾಲವು ದೇಗುಲದೆಡೆಗೆ ಸಾಗಿ, ದೇಗುಲವನ್ನೇ ದೇಹದೆಡೆಗೆ ಸಾಗಿಸಿ ದೇಹದೊಳಗಿರುವ ಆತ್ಮವೇ ಪರಮಾತ್ಮವಾಗಿಸುವ ಪರಿಯನ್ನು ಭೋದಿಸಿದ ಬಸವಣ್ಣನವರು ಮೌಢ್ಯಗಳನ್ನು ಅಳಿಸಿ, ನೀತಿಯನ್ನು ಪ್ರತಿಪಾದಿಸಿದವರು.
‘ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ’ ಎಂದು ಇಹ-ಪರಗಳನ್ನು ಸಮನ್ವಯಗೊಳಿಸಿದ ಬಸವಣ್ಣನವರು ‘ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ’ ವೆಂದು ಹೇಳಿ ಜನತೆಯ ನಡೆ-ನುಡಿಯನ್ನು ತಿದ್ದಿತೀಡಿದವರು. ಧ್ಯಾನ, ಪೂಜೆ, ಪ್ರಾರ್ಥನೆಗಳು ವ್ಯಕ್ತಿಯ ಅಂತರಂಗವನ್ನು ಶುದ್ಧಗೊಳಿಸಬೇಕು. ಮೃದುಗೊಳಿಸಬೇಕು. ಇದುವೇ ಆಧ್ಯಾತ್ಮ. ಬಸವಣ್ಣನವರ ವೈಚಾರಿಕತೆಯನ್ನು ರೂಢಿಸಿಕೊಳ್ಳಬೇಕೆಂದು ಕವಿಗಳು ಕರೆನೀಡುತ್ತಾರೆ. ಇಂಥ ಪ್ರಖರತೆಯ ಬಸವಣ್ಣನವರನ್ನು ಪಿ.ಬಿ.ಬೋರನಾವಂಕರ ಅವರು “ನಗೆಯು ಬರೆತಿದೆ ಎನಗೆ, ನಗೆಯು ಬರುತಿದೆ | ಅಣ್ಣ ಬಸವಣ್ಣನ ಜಾತಿವಾದಿಗಳು ಹಿಡಿದೆಳೆಯುವುದ | ಕಂಡು ನಗೆಯು ಬರುತಿದೆ”ಎನ್ನುತ್ತಾರೆ. ಬಾಯಿಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆವೆಂಬಂತೆ ಬದುಕುವವರು ಬದಲಾಗಬೇಕೆಂಬ ಕಳಕಳಿಯು ಇಲ್ಲಿದೆ. “ಬರುವುದಾದರೆ ಮುಂಡಿಗೆಯ ಬಿಡಿಸು | ಬರಬೇಕು, ಬಂದರೆ ಇಲ್ಲೇ ಇರಬೇಕು| ಅಣ್ಣಾ…. ಎನಿಸಿಕೊಂಡದ್ದಕ್ಕೆ ತಮ್ಮಂದಿರ ಎಲ್ಲಾ| ಮಂಗಾಟಗಳ ಸಹಿಸಬೇಕು ….ಬಿಟ್ಟು ಕಬಳಿಸುವ| ಭಕ್ತರನ್ನು ತೊರೆಯಬೇಕು ಕೇಡಿಗೆ ಕೊರಳಾಡಿಸುವ| ಕೋಲೆ ಬಸವಗಳ ಧರ್ಮ ಸುಲಿಯಬೇಕು| ಮಠಗಳನು ಮಹಾಮನೆ ಮಾಡಿ |ಒಳಗಿರುವ ನಾರಣಕ್ರಮಿತ |ಕೊಂಡಿ ಮಂಚಣ್ಣರನ್ನು ಹೊರದೂಡಬೇಕು| ….. ಹೆಸರು ಹಸನುಗೆಡಿಸಿದವರ ಮತ್ತೆ ನೀನೇ ಸಲಹಬೇಕು|’’-ಎನ್ನುವ ಕವಿ ಕುಮಾರಚಲ್ಯ ಅವರು, ಬಸವಣ್ಣನವರ ತತ್ವ-ಸತ್ವಗಳು ಹೃದಯಸ್ಥವಾಗಿ ಅಣ್ಣ ತಮ್ಮಂದಿರರನ್ನು ಅಪ್ಪಿಕೊಂಡು, ಒಟ್ಟಿಕೊಂಡು, ತಪ್ಪೊಪ್ಪುಗಳನ್ನು ತಿದ್ದಿತೀಡಿ, ಬೆಳಗುವಂತೆ ಬೆಳೆಸಬೇಕು. ಬಸವಣ್ಣ ಎಂಬ ತತ್ವ ನಮ್ಮ ಒಳಹೊಕ್ಕಾಗ ಅದು ಭವದ ತೊಡಕಿನ ಮುಂಡಿಗೆಯನ್ನು ಬಿಡಿಸಬೇಕು. ಜೀವÀ–ಜೀವನ ಅರ್ಥವಾದ ಮೇಲೆ ನಮ್ಮೊಳಗಿನ ಬಿಟ್ಟಿ ಕವಳಿಸುವ, ಕೇಡಿಗೆ ಕೊರಳಾಡಿಸುವ ಮೊದಲಾದ ದುರ್ಗುಣಗಳನ್ನು ತೊರೆದು ಹಸನುಗೆಡದಂತೆ ಬಾಳಬೇಕು. ಬಸವ ಅಲ್ಲಿಯೇ ಅಡಗಿಸಿಕೊಂಡು ಆನಂದಿಸಬೇಕು, ನಿಜದರಿವನ್ನು ಎಂದು ಬಿತ್ತುತ್ತಾರೆ.
ಗವಿಸಿದ್ದಪ್ಪ ಎಚ್.ಪಾಟೀಲ್ ಅವರು ತಮ್ಮ ಕವಿತೆಯಲ್ಲಿ “ಹುಟ್ಟಿದರೆ ಹುಟ್ಟಬೇಕು ಇದ್ದರೆ| ಇರಬೇಕು ಬಸವಣ್ಣನ ಹಾಗೆ ಜಗದಣ್ಣನಾಗಿ|’’-ಎಂದು ತಾಯಿ-ತಂದೆಯರ ಬಯಕೆಯನ್ನು ನೊಂದು-ಬೆಂದವರ ನಿರೀಕ್ಷೆಗಳನ್ನು ತಿಳಿಸಿದವರು. ಈ ನೆಲದಲ್ಲಿ ಹುಟ್ಟುವ, ಈ ನೆಲವನ್ನು ಮೆಟ್ಟುವ, ಮಗು ಬಸವಣ್ಣನವರಂತೆ ಸದ್ಗುಣಗಳ ಗಣಿಯಾದಾಗ ಇಡೀ ಸಮಾಜ, ರಾಜ್ಯ, ರಾಷ್ಟ್ರ ಸಮೃದ್ಧಿಯ ಸತ್ಪಥದಲ್ಲಿ ಸಾಗುವುದೆಂಬ ಸದಾಶಯ ಕವಿಯದು. “ಮೇಲಿದ್ದ ದೇವನನ್ನು ಎಳೆದು ತಂದು| ಕೆಳಗಿನವರ ಕೈಯಲ್ಲಿಕೊಟ್ಟು| ಗುಡಿಯಾಗಿ ಓಡಾಡಿದ| ನಮ್ಮ ಮಧ್ಯೆಯೇ ಇದ್ದ| ಅವನು ಕಳೆದು ಹೋಗಿದ್ದಾನೆ |ಅವನÀನ್ನ ಇಂದಿಗೂ ಬಸವಣ್ಣ ಎಂದೇ ಕರೆಯುತ್ತಾರೆ”-ಎನ್ನುವ ಮೃತ್ಯಂಜಯ ರುಮಾಲೆಯವರು- ‘ಬಸವಣ್ಣ’ ಬರೀ ವ್ಯಕ್ತಿಯಲ್ಲ, ಆತನೊಬ್ಬ ಧೀಶಕ್ತಿ ಎಂಬುದನ್ನು ತಿಳಿಸುತ್ತಾರೆ. ಫ್ಯಾಷನ್ ಬದುಕಿನಲ್ಲಿ ಕಳೆದು ಹೋಗುತ್ತಿದ್ದರೂ, ಸಂಪೂರ್ಣ ಕರಗಿ ಹೋಗದೆ, ಮತ್ತೆ ಚಿಗುರುವ ಗಿಡವಾಗಿ, ಮರವಾಗಿ, ಹೆಮ್ಮಾರವಾಗುವ ತಾಕತ್ತು ನೀಡುವ ಶಕ್ತಿ ಬಸವಣ್ಣನವರ ಬದುಕು-ಬರಹÀಕ್ಕಿದೆಂಬುದನ್ನು ಕವಿಗಳು ಅಭಿವ್ಯಕ್ತಿಸಿದ್ದಾರೆ.
ಆಧುನಿಕ ಕನ್ನಡ ಕವಿಗಳಿಗೆ ಬಸವಣ್ಣನವರು ಸ್ಫೂರ್ತಿಯ ಸೆಲೆಯಾಗಿರುವರು. ಅವರ ಜೀವನ ಯಾನವನ್ನು ಪರಿಚಯಿಸುತ್ತಲೇ ಆತನ ಹಂಬಲ-ಬೆಂಬಲಗಳನ್ನು, ಆನಂದದ ಅನ್ವೇಷಣೆಯನ್ನು, ಸಮಸಮಾಜದ ಕನಸಿನ ಸೊಗಸನ್ನು, ವರ್ತಮಾನದ ಸಂದಿಗ್ಧತೆಗಳಿಂದ ಮುಕ್ತಗೊಳಿಸುವ ಪರಿಯನ್ನು ಕಂಡುಕೊಳ್ಳಲು ಕಾವ್ಯ ಕಣ್ಣು ತೆರೆಸುತ್ತದೆ, ಹೃದಯವನ್ನು ಅರಳಿಸುತ್ತದೆಂಬುದಕ್ಕೆ ಈ ಕವಿತೆಗಳು ಸಾಕ್ಷಿಯಾಗಿವೆ. ಊರು ಮುಂದೆ-ಇರುವ ಅಶ್ವತ್ಥವೃಕ್ಷದ ಕಟ್ಟೆಯ ಮೇಲೆ ಹೊಲೆಯರು-ಮಾದರನ್ನು ಹತ್ತಿಸುವುದಿಲ್ಲ. ಆದರೆ ಆ ಅಶ್ವತ್ಥ ವೃಕ್ಷದ ಬೇರುಗಳು ಹೊಲಗೇರಿ ಮಾದರ ಕೇರಿಗೆ ಚಾಚಿಕೊಂಡು ಅಲ್ಲಿನ ನೀರು ಕುಡಿದು ಬೆಳೆದಿರುತ್ತದೆಂಬುದನ್ನು ಮರೆತವರಿಗೆ ಅರಿವನ್ನು ಬಿತ್ತುವಂತಹ, ಸೌಹಾರ್ದತೆಯ ಕಾಳಜಿಯ ವಿಚಾರಧಾರೆಗಳು ಬಸವಣ್ಣನವರನ್ನು ಕುರಿತು ಕವಿತೆಗಳಲ್ಲಿದೆ.
“ ಚಾರ್ತುವರ್ಣಂ ಮಾಯ ಸೃಷ್ಟಂ| ಗುಣ ಕರ್ಮ ವಿಭಾಗಶಃ” | ಎಂಬ ಉಪನಿಷತ್ ವಾಣಿಯಂತೆ ಗುಣ ಮತ್ತು ಕರ್ಮದಿಂದ ವಿಭಾಗಗೊಂಡಿರುವ ಬ್ರಾಹ್ಮಣ, ಕ್ಷತ್ರೀಯ ಬರಿ ವರ್ಣಗಳಷ್ಟೇ ಅಲ್ಲ ಅವು ಪ್ರತಿಯೊಬ್ಬರಲ್ಲಿರುವ ಗುಣಗಳು. ನನ್ನಲ್ಲಿ ವಿದ್ಯೆ, ಜ್ಞಾನವಿರುವುದರಿಂದ ಬ್ರಾಹ್ಮಣ. ನನ್ನನ್ನು ರಕ್ಷಿಸಿಕೊಳ್ಳವ ಮತ್ತು ರಕ್ಷಣೆ ಬೇಡಿ ಬಂದವರನ್ನು ಕಾಪಾಡುವ ಸಾವiಥ್ರ್ಯವಿರುವುದರಿಂದ ಕ್ಷತ್ರೀಯ. ಈ ಜೀವನವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕೌಶಲ್ಯವನ್ನು ಸಂಪಾದಿಸಿಕೊಂಡಿರುವುದರಿಂದ ವೈಶ್ಯ. ಜೀವನ ನಿರ್ವಹಣೆಗೆ ಸತ್ಯಶುದ್ಧ ಕಾಯಕದಲ್ಲಿ ನಿರತನಾಗಿ ಸೇವೆ ಮಾಡುತ್ತಿರುವುದರಿಂದ ಶೂದ್ರ. ಪ್ರತಿಯೊಬ್ಬರಲ್ಲೂ ಈ ನಾಲ್ಕು ಗುಣಗಳಿವೆ ಎಂಬ ಅರಿವನ್ನು ಬಸವಣ್ಣವರ ಬದುಕು-ಬರಹ ಬಿತ್ತುತ್ತದೆಂಬ ಚಿಂತನ-ಮಂಥನ ಕವಿತೆಗಳಲ್ಲಿದೆ.
ಮೂಲತಃ ಹೊಲದ ಒಡೆಯಯರಾದವರನ್ನು ಹೊಲೆಯರಾಗಿಸಿದ ವ್ಯವಸ್ಥೆಗೆ ಅರಿವನ್ನು ಬಿತ್ತಿದವರು ಬಸವಣ್ಣ. ಕವಿ ಸುಬ್ಬುಹೊಲೆಯರ ಕವಿತೆಯೊಂದರಲ್ಲಿ ಹೇಳುವುದು ಹೀಗಿದೆ: “ಊರ ದೇವರಿಗೆ ಹರಿಕೆ ಹೊತ್ತು | ಹೊರಗಿದ್ದು ಮುರಿಯದ ಗೊನೆ ಕೊಟ್ಟು| ಒಳಗೆ ಪ್ರಾರ್ಥಿಸಿದ | ಕರಿ ಕಂಬಳಿ ಹೊದ್ದ ನನ್ನಜ್ಜ| ಲೋಕ ಕಾಪಾಡು ಸುಗ್ಯಮ್ಮ ಎಂದ’’ ||-ಈ ಲೋಕದ ಮೇಲೆ, ಈ ಜನತೆಯ ಮೇಲೆ, ಈ ಮಣ್ಣಿನ ಮೇಲೆ ದಲಿತರಿಗೆ ಅಪಾರ ಪ್ರೀತಿ, ಗೌರವ. ಅವಮಾನಿಸಿದವರನ್ನೇ, ಬುದ್ಧೀ, ಅಪ್ಪಾ, ದಣಿ, ಒಡೆಯಾ, ಅಜ್ಜಾ, ಅವ್ವರೇ, ಯಾಜಮಾನರೇ, ಅಕ್ಕರೇ, ಅಣ್ಣರೇ ಎಂದೆಲ್ಲ ವಿನಯದಿಂದ ಕರೆಯುವರು. ದಲಿತರ ಸಹನಶಕ್ತಿಗೆ, ತಾಳ್ಮೆಯ ಒಲುಮೆಗೆ ಬೆಲೆ ಕಟ್ಟಲಾಗದು. ಕೊಚ್ಚೆ ಕೊಳಕಿನಲ್ಲಿಟ್ಟು, ಒಂದೊತ್ತಿನ ಕೂಳಿಗಾಗಿ ಅಲೆದಾಡಿಸಿದವರಿಗೆ, ಬಂಗಲೆಗಳಲ್ಲಿದ್ದು ಗುಡಿಸಲಿನಲ್ಲಿಟ್ಟವರಿಗೆ, ನೆಲವು ನೊಂದಿತೆಂಬ ಭಯದಲ್ಲಿಯೇ ನಡೆದಾಡುವಂತೆ ಮಾಡಿ, ವ್ಯಾನು-ವಿಮಾನನುಗಳಲ್ಲಿ ತಿರುಗಾಡುವವರಿಗೆ ‘ಕಾಪಾಡು ಸುಗ್ಯಮ’ ಎಂದು ಹಾರೈಸುವ ದಲಿತರನ್ನು ದೂರವಿಡುವಂತಹ ಕಲ್ಮಶ ಹೃದಯವನ್ನು ಇನ್ನೂ ಇಟ್ಟುಕೊಳ್ಳುವಿರಾ? ಎಂಬಂತಹ ಪ್ರಶ್ನಾ ಜ್ಯೋತಿಯನ್ನು ಹೊತ್ತಿಸಿರುವ ಬಸವಣ್ಣನವರು ಸಾರ್ವಕಾಲಿಕ ಸತ್ಯವನ್ನು ಸಾರಿದ ದಾರ್ಶನಿಕರು. ಬಸವಣ್ಣನವರ ಆರಾಧನೆಯೆಂದರೆ ಅದು ಇಡೀ ಮನುಕುಲದ ಆರಾಧನೆಯಿಂದ್ದಂತೆ. ‘ಕಲ್ಯಾಣದಣ್ಣ | ಬಾರೋ ಬಸವಣ್ಣ | ನೀ ಬರದಿದ್ದರೆ | ಜಗಕ್ಕೆಲ್ಲ ಅಳಿಗಾಲವಣ್ಣ’, ‘ನೀ ನಾರಿಗಿಲ್ಲದವನು ಬಸವಣ್ಣ |ದೈವ ಶೃಂಗಾರದವನು | – ಎಂಬಂತಹ ನೂರಾರು ಜನಪದ ಹಾಡುಗಳಿಗೆ ವಸ್ತುವಾಗಿರುವರು ಬಸವಣ್ಣನವರು.
ಕವಿ ಕುಮಾರಚಲ್ಯ ಅವರು ತಮ್ಮ ಕವಿತೆಯಲ್ಲಿ ಹೇಳುವಂತೆ “ ಮಣ್ಣಿನ ಹಣತೆಯಲ್ಲಿ | ಎಣ್ಣೆಯ ತುಂಬಿ ಹೊತ್ತಿಸಿದ ಬತ್ತಿ | ಬೆಳಕಾದ ಬಳಿಕ | ಬೆಳಕು ಯಾವ ಕುಲ | ಮಣ್ಣ ಕಲಸಿದವನು | ಎಣ್ಣೆ ಸೋಸಿದವನು | ಹತ್ತಿಯನು ಬಿತ್ತಿ ಬೆಳೆದವನು | ಕೂಡಿ ಕುಲವ ಅಳಿದ ಬಳಿಕ | ಅವರು ಯಾವ ಕುಲ?| ಬೆಳಕು ಆವ ಕುಲ?-ಎಂಬಂತಹ ಅರಿವನ್ನು ಬಿತ್ತಿರುವ ಬಸವಣ್ಣನವರ ಕನಸ್ಸಿನ ಸಮಸಮಾಜ, ಸರ್ವೋದಯ ಸಮಾಜ ನಿರ್ಮಾಣವಾಗಲೆಂಬ ಹಂಬಲ, ಕಾಳಜಿ, ತುಡಿತವಿದೆ. ಬಸವಣ್ಣನವರದು ತೆಂಗಿನ ಮರದಂತಹ ವ್ಯಕ್ತಿತ್ವವೆಂಬುದು ಆಧುನಿಕ ಕನ್ನಡ ಕವಿಗಳ ಚಿತ್ರಿಸಿದ ಕವಿತೆಗಳಲ್ಲಿದೆ. ಈ ಕವಿತೆಗಳ ಕಾಳಜಿಯು ಸಹೃದಯಿಗಳಲ್ಲಿ ನೆಲೆಯಾಗಿ, ಅನುಷ್ಠಾನಗೊಂಡಾಗ ಕಾವ್ಯ ಸಾರ್ಥಕತೆಯನ್ನು ಪಡೆಯುತ್ತದೆ.

ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್
ಎಂ.ಎ.,ಎಂ.ಇಡಿ.,ಪಿ.ಜಿ.ಡಿ.ಜೆ.,ಪಿಎಚ್.ಡಿ.
ಸಹಾಯಕ ಪ್ರಾಧ್ಯಾಪಕರು
ಕನ್ನಡಭಾರತಿ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ