ಜೀವ ವೈವಿಧ್ಯತೆ ” ಎಂದಾಗ   ಅದು ಒಂದು ಸಮುದಾಯದ ಆಹಾರ, ಆರೋಗ್ಯ, ಉದ್ಯೋಗಗಳನ್ನು ಒದಗಿಸುತ್ತಿದ್ದ ನಿಸರ್ಗದ ವ್ಯವಸ್ಥೆ ಎಂದೇ ಭಾವಿಸಲಾಗಿತ್ತು. ಆದರೆ ಇಂದು ನಿಸರ್ಗದಲಾಗುತ್ತಿರುವ ಏರುಪೇರುಗಳಿಂದಾಗಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿವೆ.

೧.  ಪೌಷ್ಟಿಕ ಆಹಾರ ಸಮಸ್ಯೆ :  ಬಹುಬಗೆಯ ಆಹಾರ ಬೆಳೆಗಳ ಉತ್ಪಾದನೆ ಕಡಿಮೆಯಾಗಿ ಪೌಷ್ಟಿಕ ಆಹಾರದ ಕೊರತೆ ವ್ಯಾಪಕವಾಗಿ ಹರಡಿದೆ.

೨.  ಆರೋಗ್ಯ ಸಮಸ್ಯೆ: ಅಪೌಷ್ಟಿಕತೆಯಿಂದ ರಕ್ತಹೀನತೆ – ಕುಂಠಿತ ಬೆಳವಣಿಗೆ – ಮಾನಸಿಕ ಶಾರೀರಿಕ ಖಿನ್ನತೆ ಕಾಡುತ್ತಿದೆ.

೩.  ಉದ್ಯೋಗ ಸಮಸ್ಯೆ:  ಪ್ರಾಕೃತಿಕ ಉತ್ಪನ್ನಗಳ ಬಳಕೆ / ಅರಣ್ಯ ಉಪ ಉತ್ಪನ್ನಗಳ ಬಳಕೆಗೆ ಕಡಿವಾಣ ಬಿದ್ದಿದೆ.

೪.  ಬಹು ಆಹಾರ ಬೆಳೆಗಾಲ ಉತ್ಪಾದನೆ ಇಲ್ಲವಾದ್ದರಿಂದ ಮೇವಿನ ಕೊರತೆ – ಮಣ್ಣು ಜೀವಿಗಳಿಗೆ ಪೌಷ್ಟಿಕ ಆಹಾರವಾಗಿರುವ ಸಾವಯವ ಗೊಬ್ಬರದ ಕೊರತೆಯಿಂದಾಗಿ ಮಣ್ಣು ಜೀವಾಣುಗಳು ನಾಶವಾಗುತ್ತಿವೆ.

೫.   ಬಗೆಬಗೆಯ ಗಿಡಮರಗಳು ಕೊಡಲಿಗೆ ಬಲಿಯಾಗುತ್ತಿರುವುದರಿಂದ ತಂಪು ವಾತಾವರಣವಿರುವ ಪ್ರದೇಶಗಳು ಕ್ರಮೇಣ ಬಿಸಿಯಾಗುತ್ತಿವೆ.

೬.  ಮಾನವನಿಗೂ, ಪ್ರಾಣಿ ಪಕ್ಷಿಗಳಿಗೂ, ಕ್ರಿಮಿಕೀಟಗಳಿಗೂ ಆಹಾರ –  ಮೇವು – ಔಷಧ – ನೆರಳು – ಆಶ್ರಯ ಒದಗಿಸುತ್ತಿದ್ದ ವಿಧವಿಧ ಮಣ್ಣುಮಿತ್ರ ಅಥವಾ ಮಣ್ಣು ಪೋಷಕ ಗಿಡಗಳು (ಈಗ ಇಂತಹ ಗಿಡಗಳು ‘ಕಳೆಗಿಡಗಳು’/’ಅನಗತ್ಯ ಗಿಡಗಳು’  ಎಂಬ ಆರೋಪಕ್ಕೆ ಗುರಿಯಾಗಿವೆ) ಮಾರಕ ಕಳೆನಾಶಕಗಳಿಂದ ನಿರ್ನಾಮವಾಗುತ್ತಿವೆ.

ಇವೆಲ್ಲಾ ಕಾರಣಗಳಿಂದ ಇಂದು ಮಣ್ಣು ಮೇಲಣ ಜೀವಜಗತ್ತು ಮತ್ತು ಮಣ್ಣೊಳಗಿನ ಜೀವಮಂಡಲದಲ್ಲಿನ ಜೀವರಾಶಿಗಳು ಕಣ್ಮರೆಯಾಗುತ್ತಿವೆ.  ಹಾಗೆಯೇ ಗ್ರಾಮೀಣ ಸಮುದಾಯಗಳ ಜೀವನೋಪಾಯದ ಮೂಲಗಳೂ ಸಹ ನಾಶವಾಗುತ್ತಿವೆ.  ಅತಂತ್ರ ಸ್ಥಿತಿಯಲ್ಲಿರುವ ಗ್ರಾಮೀಣ ಜನತೆ ನಿಮ್ಮದಿಯ ಬದುಕಿಗಾಗಿ, ಗುಣಮಟ್ಟದ ಜೀವನಕ್ಕಾಗಿ ಹುಡುಕಾಟ – ಹೋರಾಟ – ಬಡಿದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇವೆಲ್ಲವನ್ನೂ ಸರಿದೂಗಿಸಬೇಕಾದ ಜವಾಬ್ದಾರಿ ಹೊತ್ತಿರುವ State Biodiversity Board ಏನು ಮಾಡುತ್ತಿದೆ ?  ಯಾವ ರೀತಿಯ ಯೋಜನೆಗಳನ್ನು ರೂಪಿಸಿದೆ ? ಯೋಜನೆಗಳನ್ನು ಜಾರಿಗೊಳಿಸಲು ಸಮುದಾಯಗಳ ಜೊತೆ ಮಾತುಕತೆ ನಡೆಸಿವೆಯೇ ? ಸಮುದಾಯಗಳ ಸಹಕಾರ ಕೋರಿವೆಯೇ? ಯೋಜನೆಗಳನ್ನು ರೂಪಿಸುವಲ್ಲಿ ಸಮುದಾಯಗಳನ್ನು “ಸಲಹೆ – ಸಹಕಾರ – ಭಾಗವಹಿಕೆ “ಗಳಿಗಾಗಿ ಸಂಪರ್ಕಿಸಲಾಗಿದೆಯೇ ?  ಈ ಯೋಜನೆಗಳು “ಸರ್ಕಾರಿ ” ಯೋಜನೆಗಳೂ ಅಥವಾ ಸಮುದಾಯ ರೂಪಿತ – ಪ್ರೇರಿತ ಯೋಜನೆಗಳೋ ?

ಜೀವಮಂಡಲದಲ್ಲಿನ ಸಂಪನ್ಮೂಲಗಳ  ರಕ್ಷಣೆ – ಪಾಲನೆ – ಪೋಷಣೆ – ನಿರ್ವಹಣೆಗಾಗಿ ಸಮುದಾಯದ ಹಿರಿಯರಲ್ಲಿರುವ ಅಪಾರ ತಿಳಿವಳಿಕೆ – ಜ್ಞಾನ – ಅನುಭವಗಳನ್ನೂ ದಾಖಲಿಸಲಾಗಿದೆಯೇ ?  ಪರಿಗಣಿಸಲಾಗಿದೆಯೇ ?

“ಜೀವ ವೈವಿಧ್ಯತೆ” ಸಂರಕ್ಷಣೆಗಾಗಿ ಉಳಿಸಬೇಕಾದ ನಿಸರ್ಗ ಸಹಜ ಸಂಪನ್ಮೂಲಗಳ ಪಟ್ಟಿಯಲ್ಲಿ ” ಕಳೆ ” ಎಂದು ಗುರುತಿಸಲಾಗುತ್ತಿರುವ ಗಿಡಗಳು ಸೇರಿವೆಯೇ? ಈ ಬಗೆಯ ಗಿಡಗಳು ಸಮುದಾಯಗಳಲ್ಲಿನ ಬಹುತೇಕ ಮಹಿಳೆಯರ ಪ್ರಕಾರ “ಪೌಷ್ಟಿಕ ಆಹಾರ ಮೂಲಗಳು “.  ಆದರೆ ಇಂತಹ ಉಪಯುಕ್ತ ಗಿಡಗಳನ್ನು ನಿರ್ನಾಮ ಮಾಡಲು   ಕಳೆನಾಶಕಗಳನ್ನೂ ಬಳಸುವಂತೆ ರೈತರನ್ನು ಪ್ರಚೋದಿಸಲಾಗುತ್ತಿದೆ. ಕಳೆನಾಶಕ ಬಳಕೆಗೆ ಕಡಿವಾಣ ಹಾಕುವತ್ತ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ?

ಮನ್ನಲ್ಲಿನ ಜೀವಜಂತುಗಳೋ ಸಹ ಜೈವಿಕ ಸಂಪನ್ಮೂಲವಾಗಿರುವುದರಿಂದ ಅವುಗಳ ರಕ್ಷಣೆಗೆ ಯಾವ ಬಗೆಯ ಯೋಜನೆಯನ್ನು ರೂಪಿಸಲಾಗಿದೆ ?

“ಜೀವ ವೈವಿಧ್ಯತೆ” ಎಂದಾಗ ಆ ಪಟ್ಟಿಯಲ್ಲಿ “ಬೆಳೆ  ವೈವಿಧ್ಯತೆ – ಗಿಡಮರಗಳ ವೈವಿದ್ಯತೆ – ಜಾನುವಾರು ವೈವಿಧ್ಯತೆ – ಪ್ರಾಣಿಪಕ್ಷಿ ವೈವಿಧ್ಯತೆ – ಕೀಟ ದುಂಬಿ ವೈವಿಧ್ಯತೆ – ಮಾಣು ಜೀವಾಣುಗಳ ವೈವಿಧ್ಯತೆ – ಜಲಜೀವಿಗಳ ವೈವಿಧ್ಯತೆ”  ಇವೆಲ್ಲವೂ ಸೇರುವುದರಿಂದ, ಇವುಗಳಿಗೆ ಸಂಬಂಧಿಸಿದ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ವಿಚಾರ ವಿನಿಮಯ ನಡೆಸಲಾಗಿದೆಯೇ ?

ಜೀವ ವೈವಿಧ್ಯತೆ” ಗೆ ಸಂಬಂಧಿಸಿಡಾಂಟೆ ಕೃಷಿ ಇಲಾಖೆ – ಆಹಾರ ಇಲಾಖೆ – ಆರೋಗ್ಯ ಇಲಾಖೆ – ತೋಟಗಾರಿಕೆ ಇಲಾಖೆ – ಅರಣ್ಯ ಇಲಾಖೆ – ಜೇನು ಕೃಷಿ – ಪಶು ಸಂಗೋಪನೆ – ಕುಕ್ಕುಟ – ಮೀನುಗಾರಿಕೆ – ಗ್ರಾಮೀಣಾಭಿವೃದ್ಧಿ – ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಇಲಾಖೆ – ಉದ್ಯೋಗ ಇಲಾಖೆ – ಯುವಜನ ಸೇವೆ ಇಲಾಖೆ ಇತ್ಯಾದಿ ಇತ್ಯಾದಿ ಇಲಾಖೆಗಳು ಇವೆ.

“ಜೀವ ವೈವಿಧ್ಯತೆ” ನಾಶಕ್ಕೆ ಕಾರಣವಾಗಿರುವ ರಾಸಾಯನಿಕಗಳನ್ನು ಉತ್ಪಾದಿಸುವ, ಬಳಸಲು ಶಿಫಾರಸ್ಸು ಮಾಡುವ ಇಲಾಖೆಗಳು – ಕಂಪನಿಗಳ ಮೇಲೆ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ?

Srinivas (Vasu)
SOIL
+91 9483467779