ಚಿತ್ರದುರ್ಗ ಅಂದ್ರೆ ಅದೊಂದು ಬರಗಾಲದ ಜಿಲ್ಲೆ ಎಂಬ ಹಣೆ ಪಟ್ಟಿಯನ್ನು ಕಟ್ಟಿಕೊಂಡಿದೆ. ಆದರೆ ಈ ಭಾಗದಲ್ಲಿ ಅಷ್ಟೇ ಹೆಸರು ಮಾಡಿರುವುದು ಹೂ ವಿನ ಬೆಳೆ. ಅದರೆ ಒಂದು ವಿಶೇಷ ಅಂದರೆ ಇಂದು ಈ ಹಳ್ಳಿಗೆ ಹೂ ಬೆಳೆಯೇ ಜೀವಾಳ. ಯುವಕರು ಕೆಲಸಕ್ಕಾಗಿ ಬೆಂಗಳೂರು ಅಂತ ಅಲೆಯುತ್ತಾರೆ ಆದರೆ ಈ ಹಳ್ಳಿಯ ಯುವಕರು ಅತ್ತ ಬೆಂಗಳೂರಿನ ಕಡೆ ಮುಖ ಮಾಡದೆ ಹಳ್ಳಿಯಲ್ಲಿ ಇದ್ದು ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂತ ಹಳ್ಳಿಯ ಪರಿಚಯ.
ಮೂವತ್ತು ವರ್ಷಗಳ ಹಿಂದಿನ ಕಥೆ. ಹುಣಸೆಕಟ್ಟೆ ಗ್ರಾಮದಲ್ಲಿ ದಾಸರ ಬೋರಜ್ಜ ಎಂಬ ಗ್ರಾಮ ಪಂಚಾಯ್ತಿ ಅಧ್ಯಕ್ಷರು ವಾಸವಿದ್ದರು. ಅವರು ಮೊದಲು ಸೇವಂತಿಗೆ ಹೂವನ್ನು ಗ್ರಾಮದಲ್ಲಿ ಬೆಳೆಯುತ್ತಿದ್ದರು. ಬಿಡಿ ಬಿಡಿ ಹೂವನ್ನು ಕುಕ್ಕೆಯಲ್ಲಿ ತುಂಬಿಕೊಂಡು ಚಿತ್ರದುರ್ಗದ ಮಾರುಕಟ್ಟೆಗೆ ಹೋಗಿ ಕೆ.ಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು. ’ಅಜ್ಜ’ನಿಂದ ಆರಂಭವಾದ ಹೂವಿನ ಉದ್ಯಮ ಈಗ ಯುವಕರ ಶ್ರಮ, ದುಡಿಮೆ ಮೇಲೆ ವಿಸ್ತಾರಗೊಳ್ಳುತ್ತಿದೆ. ಅಂದು ಒಂದು ಪಟ್ಟೆ, ಗುಂಟೆಯಲ್ಲಿ ಬೆಳೆಯುತ್ತಿದ್ದ ಒಂದೋ ಎರಡೋ ತಳಿಯ ಹೂವುಗಳು, ಇಂದು ಒಂದು ಎಕರೆವರೆಗೂ ವಿಸ್ತಾರಗೊಂಡಿದೆ. ಹತ್ತಾರು ತಳಿಯ ಹೂವುಗಳನ್ನು ಬೆಳೆಯಲಾಗುತ್ತಿದೆ.
ಈ ಊರಿನವರಿಗೆ ಹೂವೇ ಉಸಿರು. ಹೂವೇ ಜೀವನ. ಹೂವಿನೊಡನೆ ಸ್ನೇಹ, ಒಡನಾಟ. ಹೂವಿನ ಉಳಿವಿವಾಗಿ ಎಂಥ ಹೋರಾಟಕ್ಕೂ ಸಿದ್ಧರಾಗುತ್ತಾರೆ. ಅಲ್ಲಿ ಹೂವು ಅರಳಿದರೆ ಬದಕು ನಲಿಯುತ್ತದೆ. ಮುದುಡಿದರೆ ಬದುಕು ಕಮರುತ್ತದೆ. ಇಂಥ ಅಪರೂಪದ ಹೂವಿನ ಊರಿನ ಹೆಸರು ಹುಣಸೆಕಟ್ಟೆ. ಚಿತ್ರದುರ್ಗ ನಗರದಿಂದ ಹದಿನಾಲ್ಕು ಕಿ.ಮೀ ದೂರದಲ್ಲಿದೆ !
ಹುಣಸೆಕಟ್ಟೆ ಜಿಲ್ಲೆಯಲ್ಲೇ ಅತ್ಯಧಿಕ ಹೂವು ಬೆಳೆಯುವ ಏಕೈಕ ಗ್ರಾಮ. ಪರಿಶಿಷ್ಟರೇ ಹೆಚ್ಚಾಗಿರುವ ಈ ಊರಿನಲ್ಲಿ ೬೦೦ ಕುಟುಂಬಗಳಿವೆ. ಅದರಲ್ಲಿ ೫೫೦ ಕುಟುಂಬಗಳಿಗೂ ಜಮೀನಿದೆ. ಜಮೀನು ಹೊಂದಿರುವರೆಲ್ಲರೂ ಕನಿಷ್ಠ ೧೦ ಗುಂಟೆಯಿಂದ ೧ ಎಕರೆ ಪ್ರದೇಶವನ್ನು ಹೂವಿಗಾಗಿ ಮೀಸಲಿಟ್ಟಿದ್ದಾರೆ. ಕಡಿಮೆ ಜಾಗದಲ್ಲಿ ಹೂವು ಬೆಳೆಯುವವರದ್ದೇ ಸಿಂಹಪಾಲು.
ಅಚ್ಚರಿಯ ವಿಷಯವೆಂದರೆ ಪುಷ್ಪ ಕೃಷಿಯಲ್ಲಿ ತೊಡಗಿರುವವರಲ್ಲಿ ೪೦೦ ಮಂದಿ ೨೨ ರಿಂದ ೪೦ ವರ್ಷದೊಳಗಿನವರು. ಇವರಲ್ಲಿ ಕನಿಷ್ಠ ಎಸ್‌ಎಸ್‌ಎಲ್‌ಸಿಯಿಂದ, ಗರಿಷ್ಠ ಬಿಎ ವರೆಗೆ ಓದಿದವರಿದ್ದಾರೆ. ವಿದ್ಯಾಭ್ಯಾಸವೇನೇ ಇದ್ದರೂ ಗದ್ದೆಗಿಳಿದು ಕೆmಮೈ ಕೆಸರು ಮಾಡಿಕೊಳ್ಳುತ್ತಾರೆ. ಊರಿಗೆ ಬರುವ ಸೊಸೆಯಂದಿರೂ ಇದರಿಂದ ಹೊರತಾಗಿಲ್ಲ. ಹೀಗಾಗಿ ಊರಿನಲ್ಲಿ ಉಳಿಯುವ ಅನಿವಾರ್ಯವೋ, ಅವಕಾಶವಂಚಿತವೋ ಗೊತ್ತಿಲ್ಲ, ಈ ಯಾವ ಯುವಕರು ದುಡಿಮೆಗಾಗಿ ಸಮೀಪದ ನಗರಕ್ಕಾಗಲಿ, ದೂರದ ಬೆಂಗಳೂರಿಗಾಗಲಿ ಹೋಗದೇ, ಹೂವಿನ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಇದೇ ಕೃಷಿಯಲ್ಲಿ ವರ್ಷಕ್ಕೆ ಕನಿಷ್ಠ ೨ ರಿಂದ ೩ ಲಕ್ಷ ಲಾಭ ಗಳಿಸುತ್ತಿದ್ದಾರೆ !
ಸೇವಂತಿಗೆಯ ಚಾಂದಿನಿ, ಬೆಳ್ಳಟ್ಟಿ, ಪಚ್ಚೆ, ಕುಪ್ಪಂ, ಕರ್ನೂಲ್, ಬಟನ್ ರೋಸ್, ದುಂಡು ಮಲ್ಲಿಗೆ ಸೇರಿದಂತೆ ವಿವಿಧ ಬಗೆಯ ಹೂವುಗಳನ್ನು ಬೆಳೆಯುತ್ತಾರೆ. ೧೦೦ ಎಕರೆಯಷ್ಟು ಕನಕಾಂಬರ ಹೂವಿನ ತೋಟವಿದೆ. ಈ ಹೂ ದೋಟದಲ್ಲಿ ನಡುವೆ ನೆರಳಿಗಾಗಿ ಚೊಗಚೆ (ಅಗಸೆ, ತೊಗಜೆ) ಮರಗಳನ್ನು ಬೆಳೆಸಿದ್ದಾರೆ. ’ಈ ಮರಗಳು ಹೂವಿಗೆ ನೆರಳಾಗುತ್ತವೆ. ವೀಳ್ಯೆದೆಲೆಗೆ ಬಳ್ಳಿಗೆ ಆಸರೆಯಾಗುತ್ತವೆ. ಜಮೀನಿನ ಮೇಲೆ ಎಲೆ ಉದುರಿಸಿ ಗೊಬ್ಬರವಾಗಿಸುತ್ತವೆ. ಪ್ರತಿ ವರ್ಷ ಮರಗಳನ್ನು ಸವರಿದ ಎಲೆಗಳಿಂದ ಗೊಬ್ಬರ ತಯಾರಿಸುತ್ತೇವೆ’ ಎನ್ನುತ್ತಾರೆ ಮುಕ್ಕಾಲು ಎಕರೆಯಲ್ಲಿ ಪುಷ್ಪ ಕೃಷಿ ಕೈಗೊಂಡಿರುವ ತಿಪ್ಪೇಸ್ವಾಮಿ.
ಈ ಗ್ರಾಮದಲ್ಲಿ ಎಂಥ ಪರಿಸ್ಥಿತಿಯಲ್ಲೂ ಪುಷ್ಪ ಕೃಷಿ ನಿಂತಿಲ್ಲ. ಬರಗಾಲ ಬಂದಾ, ಕೊಳವೆ ಬಾವಿಯಲ್ಲಿ ನೀರು ಖಾಲಿಯಾದಾಗ ಅಕ್ಕಪಕ್ಕದ ತೋಟಗಳಿಂದ ನೀರು ಖರೀದಿಸಿ ಹೂವಿನ ಕೃಷಿ ಉಳಿಸಿಕೊಂಡಿದ್ದಾರೆ. ’ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎನ್ನವಂತೆ, ಸಾಲ ಮಾಡಿ ಹೂವಿನ ಕೃಷಿ ಮಾಡುತ್ತಿದ್ದಾರೆ. ಕಳೆದ ವರ್ಷದಲ್ಲಿ ನಷ್ಟ ಮಾಡಿಕೊಂಡಿದ್ದನ್ನು, ಮುಂದಿನ ವರ್ಷದಲ್ಲಿ ಬಡ್ಡಿಯೊಂದಿಗೆ ದುಡಿಯುತ್ತೇವೆ ಎಂಬ ವಿಶ್ವಾಸ ಹುಣಸೆ ಕಟ್ಟೆಯ ಹೂವಾಡಿಗರದ್ದು !ಸೇವಂತಿಗೆ ೮ ತಿಂಗಳ ಬೆಳೆ. ಕನಕಾಂಬರ ಕೂಡ ವರ್ಷದ ಬೆಳೆ. ಸೇವಂತಿಗೆ ಬೆಳೆಯನ್ನು ವರ್ಷಕ್ಕೊಮ್ಮೆ ನಾಟಿ ಮಾಡಬೇಕು. ಕನಕಾಂಬರ ಒಂದು ಸಾರಿ ನೆಟ್ಟರೆ ಹತ್ತು ವರ್ಷ ಹೂವು ಬಿಡುತ್ತದೆ. ಹುಣಸೆಕಟ್ಟೆ ವ್ಯಾಪ್ತಿಯಲ್ಲಿ ಅಂದಾಜು ೧೦೦ ಎಕರೆಯಷ್ಟು ಕನಕಾಂಬರದ ಹೂವಿನ ಬೆಳೆ ಇದೆ.
ಎಕರೆ ಹೂವಿನ ಕೃಷಿಯಲ್ಲಿ ನಾಲ್ಕೈದು ತಳಿಗಳನ್ನು ನಾಟಿ ಮಾಡುತ್ತಾರೆ. ಹಬ್ಬ, ಸೀಸನ್, ಬೇಡಿಕೆಗೆ ತಕ್ಕಂತೆ ಹೂವುಗಳನ್ನು ಬೆಳೆಯುತ್ತಾರೆ. ಇದು ಹತ್ತು – ಹದಿನೈದು ವರ್ಷಗಳ ಅನುಭವದಿಂದ ಬಂದ ಕಲೆ. ’ಯುಗಾದಿಯ ಎಡ ಬಲದಾಗೆ ಸೇವಂತಿಗೆ ಹೂವಿನ ಗಿಡಗಳನ್ನು ನಾಟಿ ಮಾಡ್ತೀವಿ. ಅದು ದೀಪಾವಳಿಗೆ ಕೊಯ್ಲಿಗೆ ಬರುತ್ತದೆ. ಇದು ಒಂದು ಜಾತಿ ಹೂವು. ಅದರ ಜೊತೆಗೆ ಇನ್ನೊಂದೆರಡು ಜಾತಿ ಹೂವುಗಳನ್ನು ನಾಟಿ ಮಾಡ್ತೀವಿ. ಒಂದು ಹೂವು ಕೊಯ್ಲು ಪೂರ್ಣವಾಗುವುದೊಳಗೆ ಮತ್ತೊಂದು ತಳಿಯ ಹೂವು ಕೊಯ್ಲಿಗೆ ಸಿದ್ಧ. ಹಾಗಾಗಿ ವರ್ಷಪೂರ್ತಿ ಹೂವು ಕೊಯ್ಲು ನಿರಂತರ. ಇದರಿಂದ ವರ್ಷ ಪೂರ್ತಿ ಕೆಲಸ’ ಎಂದು ವಿವರಿಸುತ್ತಾರೆ ಎರಡು ದಶಕಗಳ ಪುಷ್ಪ ಕೃಷಿಯ ಅನುಭವಿ ರೈತ ಕಾಂತರಾಜು.
ಈಗ ಶ್ರಾವಣದಲ್ಲಿ ಬೆಳ್ಳಟ್ಟಿ ತಳಿ ಸೇವಂತಿಗೆ ನಾಟಿ ಮಾಡಿದ್ದಾರೆ. ಅದು ಯುಗಾದಿಗೆ ಕೊಯ್ಲಿಗೆ ಬರುತ್ತದೆ. ಒಂದು ಎಕರೆ ಜಮೀನಿನಲ್ಲಿ ಕಾಲು ಬಾಗ ಈ ಹೂವಿನ ತಳಿ ನಾಟಿ ಮಾಡಿದ್ದೇವೆ. ನಾಲ್ಕೈದು ತಳಿಗಳನ್ನು ಹಾಕುವುದರಿಂದ ಒಂದು ತಳಿ ಸೋತರೆ, ಮತ್ತೊಂದು ತಳಿ ಗೆಲ್ಲುತ್ತದೆ ಎನ್ನುವುದು ಈ ಊರಿನ ಪುಷ್ಪ ಕೃಷಿಕರ ಲೆಕ್ಕಾಚಾರ.
ಕೃಷಿಯನ್ನು ನಂಬಿ ಕೆಟ್ಟವರು ಅತೀ ವಿರಳ ಭೂ ತಾಯಿ ನಂಬಿದರೆ, ಹಾಗೂ ಲೆಕ್ಕಾವಾರದ ಕೃಷಿ ಮಾಡಿದರೆ ದೇಶಕ್ಕೆ ಒಳ್ಳಯದಲ್ಲವೆ.?