ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ೨೦೧೭-೧೮ ನೇ ಸಾಲಿನ ಹಿಂಗಾರು/ಬೇಸಿಗೆ ಹಂಗಾಮುಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ಭಿಮಾ ಯೋಜನೆಯನ್ನು ಜಾರಿಗೊಳಿಸಿ ಅಧಿಸೂಚಿಸಲಾಗಿದೆ. ಯೋಜನೆಯಡಿ ಗ್ರಾಮಪಂಚಾಯಿತಿ ಮಟ್ಟದ ವಿಮಾ ಘಟಕಕ್ಕೆ ಆಯಾ ತಾಲ್ಲೂಕಿನ ಮುಖ್ಯ ಬೆಳೆಗಳನ್ನು ವಿಮೆಗೆ ಅಧಿಸೂಚನೆ ಮಾಡಲಾಗಿದೆ. ಹಿಂಗಾರು ಹಂಗಾಮಿಗೆ ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕಿಗೆ ಕಡಲೆ ಮತ್ತು ಜೋಳ (ಮಳೆಯಾಶ್ರಿತ), ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕಿಗೆ ಕಡಲೆ (ಮಳೆಯಾಶ್ರಿತ), ಮೊಳಕಾಲ್ಮೂರು ತಾಲ್ಲೂಕಿಗೆ ಮುಸುಕಿನಜೋಳ (ನೀರಾವರಿ) ಬೆಳೆ ವಿಮೆಗೆ ಅಧಿಸೂಚಿಸಲಾಗಿದೆ.
ಬೇಸಿಗೆ ಹಂಗಾಮಿಗೆ ಗ್ರಾಮಪಂಚಾಯಿತಿ ಮಟ್ಟದ ವಿಮಾ ಘಟಕಕ್ಕೆ ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕುಗಳಿಗೆ ಶೇಂಗಾ (ನೀರಾವರಿ) ಅಧಿಸೂಚಿಸಿದೆ.
ಹೋಬಳಿ ಮಟ್ಟದ ವಿಮಾ ಘಟಕಗಳಿಗೆ ಹಿಂಗಾರು ಹಂಗಾಮಿಗೆ ಈರುಳ್ಳಿ, ಭತ್ತ, ಗೋಧಿ, ಮುಸುಕಿನ ಜೋಳ, ರಾಗಿ, ಸೂರ್ಯಕಾಂತಿ, (ನೀರಾವರಿ), ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ, ಕುಸುಮೆ, ಕಡಲೆ (ಮಳೆಯಾಶ್ರಿತ) ಬೆಳೆಗಳಿಗೆ ವಿಮೆಗೆ ನೊಂದಾಯಿಸಲು ಅವಕಾಶವಿದೆ.
ಬೇಸಿಗೆ ಹಂಗಾಮಿಗೆ ಹೋಬಳಿ ಮಟ್ಟದ ವಿಮಾ ಘಟಕಕ್ಕೆ ಭತ್ತ, ರಾಗಿ, ಸೂರ್ಯಕಾಂತಿ, ಶೇಂಗಾ(ನೀರಾವರಿ) ಅಧಿಸೂಚಲೆ ಮಾಡಿದೆ. ಹೋಬಳಿವಾರು/ಬೆಳೆವಾರು ಅಧಿಸೂಚನೆ ಮಾಹಿತಿಯನ್ನು ರೈತರು ತಮ್ಮ ವ್ಯಾಪ್ರಿಯ ರೈತಸಂಪರ್ಕಕೇಂದ್ರ, ವಿಭಾಗೀಯ ಉಪಕೃಷಿ ನಿರ್ದೇಶಕರ ಕಚೇರಿ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ,ಬ್ಯಾಂಕುಗಳು, ಸಹಕಾರ ಸಂಘಗಳಿಂದ ಪಡೆಯಬಹುದು.
ಬೆಳೆಸಾಲ ಪಡೆದ ರೈತರಿಗೆ ಬೆಳೆವಿಮೆ ಮಾಡಿಸುವುದು ಕಡ್ಡಾಯವಾಗಿದೆ. ಬೆಳೆಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದೆ. ಬೆಳೆಸಾಲ ಪಡೆದ ಮತ್ತು ಪಡೆಯುವ ಇಚ್ಛೆಯುಳ್ಳ ರೈತರು ಬೆಳೆವಿಮೆ ಘೋಷಣೆ ಪತ್ರಗಳನ್ನು ಅವರವರ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್/ಸಹಕಾರ ಸಂಘದಲ್ಲಿ ನೀಡಿ ನೊಂದಣಿ ಮಾಡಬಹುದು. ಬೆಳೆಸಾಲ ಪಡೆಯದ ರೈತರು ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಸಹ ವಿಮಾಕಂತು ಕಟ್ಟಿ ವಿಮೆಗೆ ನೊಂದಾಯಸಿಕೊಳ್ಳಬಹುದು. ಬೆಳೆವಿಮೆಗೆ ನೊಂದಾಯಿಸಲು ರೈತರು ಬ್ಯಾಂಕ್ ಖಾತೆ ಹೊಂದಿರಬೇಕು. ಭೂಮಿ ಹೊಂದಿರುವುದಕ್ಕೆ ಪಹಣಿ/ಖಾತೆ/ಕಂದಾಯ ರಸೀದಿಯನ್ನು ನೀಡಬೇಕು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಲ್ಲಿದ್ದಂತೆ ಪ್ರಸ್ತುತ ವರ್ಷದ ಹಿಂಗಾರು/ಬೇಸಿಗೆ ಹಂಗಾಮಿನಲ್ಲೂ ಯು.ಪಿ.ಐ.ಎಸ್. (ಯೂನಿಫೈಡ್ ಪ್ಯಾಕೇಜ್ ಇನ್ಸೂರೆನ್ಸ್ ಸಿಸ್ಟಂ) ಮುಂದುವರಿಸಲಾಗಿದೆ. ಇದರ ಪ್ರಕಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ಭಿಮಾ ಯೋಜನೆಯಡಿ ಲಭ್ಯ ಸಹಾಯಧನ ಪಡೆಯಲು ಈ ಯೋಜನೆ ಜೊತೆಗೆ ಕೆಳಕಂಡವುಗಳಲ್ಲಿ ಕನಿಷ್ಠ ಎರಡು ಯೋಜನೆಗಳಿಗೆ ವಿಮೆ ನೊಂದಣಿ ಮಾಡುವುದು ಕಡ್ಡಾಯವಾಗಿದೆ.
ಅಪಘಾತ ವಿಮೆ, ಜೀವವಿಮೆ, ಕಟ್ಟಡ ಮತ್ತು ಕಂಟೆಂಟ್‌ಗಳಿಗೆ ವಿಮೆ (ಬೆಂಕಿ ಮತ್ತು ಇತರ ಆಕಸ್ಮಿಕ), ಕೃಷಿ ಪಂಪ್‌ಸೆಟ್‌ಗಳಿಗೆ ವಿಮೆ, ವಿದ್ಯಾರ್ಥಿ ರಕ್ಷಣಾ ವಿಮೆ, ಕೃಷಿ ಟ್ರಾಕ್ಟರ್‌ಗಳಿಗೆ ವಿಮೆ.
ಚಿತ್ರದುರ್ಗ ಜಿಲ್ಲೆಗೆ ಪ್ರಸ್ತುತ ವರ್ಷದ ಹಿಂಗಾರು/ಬೇಸಿಗೆ ಹಂಗಾಮಿಗೆ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿ ಅನುಮೋದಿತವಾಗಿದೆ. ಈ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಬೆಳೆಸಾಲ ಪಡೆದ ಮತ್ತು ಬೆಳೆಸಾಲ ಪಡೆಯುವ ರೈತರು ಬೆಳೆವಿಮೆಗೆ ನೋಂದಣಿ ಮಾಡಲು ಜೋಳ, ಕುಸುಮೆ, ಸೂರ್ಯಕಾಂತಿ (ಮಳೆಯಾಶ್ರಿತ), ಈರುಳ್ಳಿ, ಸೂರ್ಯಕಾಂತಿ (ನೀರಾವರಿ) ಬೆಳೆಗಳಿಗೆ ನವಂಬರ್ ೩೦ ರಂದು ಕೊನೆ ದಿನವಾಗಿದೆ. ಕಡಲೆ, ಮೆಕ್ಕೆಜೋಳ (ಮಳೆಯಾಶ್ರಿತ), ಭತ್ತ, ಮೆಕ್ಕೆಜೋಳ, ರಾಗಿ, ಗೋಧಿ (ನೀರಾವರಿ) ಬೆಳೆಗಳಿಗೆ ಡಿಸೆಂಬರ್ ೧೫ ರಂದು ಕೊನೆಯ ದಿನವಾಗಿದೆ.
ಬೇಸಿಗೆ ಬೆಳೆಗಳಾದ ರಾಗಿ, ಭತ್ತ, ಶೇಂಗಾ, ಸೂರ್ಯಕಾಂತಿ (ನೀರಾವರಿ) ಬೆಳೆಗಳಿಗೆ ೨೦೧೮ ರ ಫೆಬ್ರವರಿ ೨೮ ರಂದು ಕೊನೆಯ ದಿನವಾಗಿದೆ.
ರೈತ ಬಾಂಧವರು ನಿಗದಿತ ದಿನಾಂಕದೊಳಗೆ ಬೆಳೆ ವಿಮೆಗೆ ನೊಂದಣಿ ಮಾಡಿಸಿಕೊಳ್ಳಬೇಕೆಂದು ಹಾಗೂ ಅಂತಿಮ ಸಮಯದಲ್ಲಿ ಜನದಟ್ಟಣೆಗೆ ಅವಕಾಶ ಕೊಡದೆ ಸಕಾಲದಲ್ಲಿ ನೊಂದಣಿ ಮಾಡಿಕೊಳ್ಳುವಂತೆ ಚಿತ್ರದುರ್ಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.