98ಕೃಷಿ ಮಾಹಿತಿಯ ಕೊರೆತೆಯೇ ಕೃಷಿ ಹಿಂದುಳಿಯಲು ಕಾರಣ ಎಂಬ ಸತ್ಯ ಅನೇಕರಿಗೆ ಗೊತ್ತು. ಆದರೂ ಕೃಷಿಕರಿಗೆ ಮಾಹಿತಿ ಎಂಬುದು ಏಕೋ ಏನೋ ನಿರ್ಲಕ್ಷ್ಯದ ಸಂಗತಿ ಎಂದೆನಿಸಿದರೆ ಮಾಹಿತಿ ನೀಡುವ ಸಂಪನ್ಮೂಲ ವ್ಯಕ್ತಿ ಪ್ರತಿ ದಿನವೂ ಕೃಷಿಕರಿಂದ ಸವಾಲು ಸ್ವೀಕರಿಸುತ್ತಿರುತ್ತಾನೆ. ಕೃಷಿ ಸಂಬಂಧಿ ಕಾರ್ಯಾಗಾರ, ವಿಚಾರ ಸಂಕಿರಣಗಳು ಆಯೋಜನೆಗೊಂಡ ಸಂದರ್ಭದಲ್ಲಿ ಕೃಷಿ ಸಮಸ್ಯೆಗೆ ಪರಿಹಾರವೇನು ಎಂಬುದನ್ನು ಸರಳವಾಗಿಯೇ ಹೇಳಲಾಗುತ್ತಿರುತ್ತದೆ. ಆದರೆ ಯಾವುದಾದರೊಂದು ವಿಚಾರದ ಬಗ್ಗೆ “ನಿರ್ಲಕ್ಷ್ಯ” ಎಂಬ ಸಂಗತಿ ಮನುಷ್ಯನ ಮನಸನ್ನು ಆವರಿಸಿತೆಂದರೆ ಅದರಿಂದ ಆತ ಹೊರಬರುವುದು ಅಷ್ಟು ಸುಲಭದ ಮಾತಲ್ಲ.   ಅಂತಹ ನಿರ್ಲಕ್ಷ್ಯ ಸಂಗತಿ ತನ್ನತ್ತ ಹರಿದು ಬರಬಾರದು ಎಂಬ ಬಗ್ಗೆ ಆತ ಸದಾ ಜಾಗೃತನಾಗಿರುತ್ತಾನೆ. ಅದರಿಂದ ತಪ್ಪಿಸಿಕೊಳ್ಳಲು ಮಾಡಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ. ಸಾಂದ್ರ ಕೃಷಿಗೆ ಸಂಬಂಧಿಸಿದಂತೆ ಇಂದು ರಾಜ್ಯದಲ್ಲಿಯೇ ಹೆಸರು ಮಾಡಿರುವ ವಿಶ್ರಾಂತ ಕೃಷಿ ವಿಜ್ಞಾನಿ ಡಾ. ಎಂ.ಕೆ. ರೇಣುಕಾರ್ಯ ಅವರು ಕೃಷಿಯಲ್ಲಿಯೇ ಉಳಿದು ಮತ್ತಷ್ಟು ಕೆಲಸ ಮಾಡಲು ಸಾಧ್ಯವಾಗಿದ್ದು ಹೀಗೆಯೇ.

ಅದು ಅವಿಭಜಿತ ಬಳ್ಳಾರಿ ಜಿಲ್ಲೆಯ ಕಾಲ, ಬಳ್ಳಾರಿಗೂ ಬರಗಾಲಕ್ಕೂ ಎಲ್ಲಿಲ್ಲದ ನಂಟು ಫಲವಂತಿಕೆ ಕಳೆದುಕೊಂಡ ಸಾಕಷ್ಟು ಭೂಮಿ ಜಿಲ್ಲೆಯ ಒಡಲಿನಲ್ಲಿತ್ತು. ಬಳ್ಳಾರಿ ಜಾಲಿ ಬರಡು ಭೂಮಿಯಲ್ಲಿ ಮಾತ್ರ ಬೆಳೆಯುವಂತಹ ಸಸ್ಯ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ. ಇಂತಹ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕು ಬರ, ಅನಭಿವೃದ್ದಿ ಮತ್ತು ಬಿಸಿಲಿನಿಂದ ಬಳಲಿ ಹೋಗಿತ್ತು. ಈ ತಾಲ್ಲೂಕಿನಲ್ಲಿರುವ ಬರಡು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸುವುದು ಹೇಗೆಂದು ವಿಚಾರ ಸಂಕಿರಣವೊಂದು ಹರಪ್ಪನಹಳ್ಳಿಯಲ್ಲಿ ಆಯೋಜನೆಗೊಂಡಿತ್ತು. ಆ ಸಂದರ್ಭದಲ್ಲಿ ಬರಡನ್ನು ಬಂಗಾರವಾಗಿಸುವುದು ಹೇಗೆಂದು ಮಾತನಾಡಿದವರು ಇದೇ ಎಂ.ಕೆ. ರೇಣುಕಾರ್ಯ ಆದರೆ ಇವರ ವಿಚಾರಗಳನ್ನು ಒಪ್ಪದ ಕೃಷಿಕನೋರ್ವ ಬರಡನ್ನು ಬಂಗಾರವಾಗಿಸಬಹುದೆಂದಾದರೆ ಅದನ್ನು ಹೇಳಿ ಕೈ ತೊಳೆದುಕೊಳ್ಳಬೇಡಿ, ಮಾಡಿ ತೋರಿಸಿ ಎಂದು ಸವಾಲೊಡ್ಡಿದ ಅಂದು ಆತನ ಸವಾಲನ್ನು ಸ್ವೀಕರಿಸಿದುದರಿಂದಾಗಿಯೇ ನಾನು ಇಂದಿಗೂ ನೈಜ್ಯ ಕೃಷಿಕನಾಗಿ ಉಳಿದಿದ್ದೇನೆ ಎಂದು ಹಸನ್ಮುಖಿಯಾಗುತ್ತಾರೆ ರೇಣುಕಾರ್ಯ.

ಸವಳು ಮತ್ತು ಕರ್ಲು ಕಾಣೆಯಾಗಿದ್ದು ಹೀಗೆ: ಸವಾಲು ಸ್ವೀಕರಿಸಿದಲ್ಲಿಯೇ ಸಾಧನೆಯನ್ನು ಮಾಡಬೇಕು ಎಂದು ನಿರ್ಧರಿಸಿದ ಅವರು ಅಂದಿನ ಬಳ್ಳಾರಿ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಕಲ್ಲಹಳ್ಳಿಯಲ್ಲಿ 14 ಎಕರೆ ಸವಳು ಹಾಗೂ ಕರ್ಲಿದ್ದ ಬರಡು ಭೂಮಿಯನ್ನು ಮಾರುಕಟ್ಟೆ ದರಕ್ಕಿಂತಲೂ ಅಧಿಕ ಹಣ ನೀಡಿ ಖರೀದಿಸಿದರು. ಕರ್ಲು ಹಾಗೂ ಸವಳನ್ನು ಹೋಗಲಾಡಿಸುವುದೇ ಈ ಭೂಮಿ ಒಡ್ಡಿದ ಮೊದಲ ಸವಾಲಾಗಿತ್ತು ಆದರೆ ಅದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಸಮತಟ್ಟಾಗಿದ್ದ ಭೂಮಿಯನ್ನು ಇಳಿಜಾರಾಗಿ ಪರಿವರ್ತನೆ ಮಾಡಲಾಯ್ತು ಅಷ್ಟೇ, ಇದರಿಂದಾಗಿ ಭೂಮಿಯ ಮೇಲ್ಪದರದಲ್ಲಿದ್ದ ಲವಣಾಂಶಗಳೆಲ್ಲವೂ ಒಂದೆರಡು ಮಳೆಯಲ್ಲಿಯೇ ಕೊಚ್ಚಿ ಹೋದವು ಆನಂತರ ಪ್ರಾರಂಭದಲ್ಲಿ ಬೆಳೆದದ್ದು ಕೇವಲ ಹಸಿರೆಲೆ ಗೊಬ್ಬರ ನೀಡುವಂತಹ ಸಸ್ಯಗಳನ್ನು ಬೆಳೆದು ಭೂಮಿಗೆ ಸೇರಿಸಲಾಯ್ತು ಇದಿಷ್ಟೇ ಪ್ರಕ್ರಿಯೆಯಿಂದಾಗಿ ಇಲ್ಲಿನ ಮಣ್ಣು ಕೃಷಿಯೋಗ್ಯವಾಗಿ ಪರಿವರ್ತಿತವಾಯ್ತು ಆನಂತರದ್ದೆಲ್ಲವೂ ಯಶೋಗಾಥೆಗಳೇ.

ಭಗೀರಥನಾದ ಕೃಷಿ ಹೊಂಡ: ಈ ಭೂಮಿಯೊಡ್ಡಿದ ಎರಡನೇ ಸವಾಲು ನೀರು. ಕೃಷಿಯತ್ತ ಮನಸ್ಸು ಮಾಡುವ ಎಲ್ಲರಂತೆಯೇ ರೇಣುಕಾರ್ಯ ಕೂಡಾ ಕೊಳವೆ ಬಾವಿ ಕೊರೆಸಿದರು ಆದರೆ ಎಷ್ಟು ಆಳ ಕ್ರಮಿಸಿದರೂ ನೀರು ಸಿಗಲಿಲ್ಲ ಇದರಿಂದ ತುಸು ಹತಾಷೆಯಾಯ್ತಾದರೂ ಸ್ವೀಕರಿಸಿದ್ದ ಸವಾಲು ಮನಸ್ಸಿನಾಳದಲ್ಲಿ ಮನೆಮಾಡಿ ಚುಚ್ಚುತ್ತಿತ್ತು ಆನಂತರ ಒಣ ತೋಟಗಾರಿಕೆಯನ್ನಾದರೂ ಮಾಡಬೇಕು ಎಂಬ ಉದ್ದೇಶದಿಂದ ಕೃಷಿ ಹೊಂಡಗಳನ್ನು ನಿರ್ಮಿಸಿದರು ಮಳೆ ಅಕಾಲಿಕವಾಗಿರಲಿ ಅಥವಾ ಸಕಾಲಿಕವಾಗಿರಲಿ ಯಾವ ಕಾಲದಲ್ಲಿ ಬಿದ್ದರೂ 14 ಎಕರೆಯಲ್ಲಿ ಬಿದ್ದ ಮಳೆಯ ಒಂದೇ ಒಂದು ಹನಿ ಕೂಡಾ ಹೊರ ಹೋಗದಂತೆ ಯೋಜಿಸಿಕೊಂಡು 07 ಕೃಷಿ ಹೊಂಡಗಳನ್ನು ನಿರ್ಮಿಸಿದರು ಇಲ್ಲಿ ಸಂಗ್ರಹವಾದ ನೀರಿನಿಂದಲೇ ಕೃಷಿಯನ್ನು ಪ್ರಾರಂಭಿಸಲಾಯ್ತು ಉದ್ದೇಶಕ್ಕಿಂತಲೂ ಹೆಚ್ಚಿನ ಫಲವನ್ನೇ ನೀಡಿದ ಕೃಷಿ ಹೊಂಡಗಳು ಕೊಳವೆ ಬಾವಿಗಳ ಜಲ ಮರು ಪೂರಣಗಳಾಗಿಯೂ ಕೆಲಸ ಮಾಡಿದುದರ ಪರಿಣಾಮ ಕೊಳವೆ ಬಾವಿಯಲ್ಲಿ ಇಂದು ಎಲ್ಲ ಕಾಲದಲ್ಲಿಯೂ ಸಮೃದ್ದ ನೀರು ಬರುತ್ತಿದೆ.

ಎತ್ತರಕ್ಕೊಯ್ದ ಬಹುಮಹಡಿ: ಹತ್ತರ ನಂತರ ಹನ್ನೊಂನೆಯ ಕೃಷಿಕ ನಾನಾಗಬಾರದು ಎಂಬುದನ್ನು ಮನಗಂಡ ರೇಣುಕಾರ್ಯ ತುಸು ವಿಭಿನ್ನವಾಗಿ ಕೃಷಿ ಮಾಡಿದರು. ಅಭಿವೃದ್ದಿಯ ಜೊತೆಗೆ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ಬಹು ಮಹಡಿ ಬೆಳೆಗೆ ಸಂಬಂಧಿಸಿದಂತೆ ಒಂದಷ್ಟು ಕೆಲಸ ಮಾಡಬೇಕು ಎಂದು ನಿರ್ಧರಿಸಿ ಆ ನಿಟ್ಟಿನಲ್ಲಿ ತಮ್ಮ ಪ್ರಯೋಗಗಳನ್ನು ಮುಂದುವರಿಸಿದರು. ಸಾಮಾನ್ಯವಾಗಿ ಕೃಷಿ ವಿಶ್ವವಿದ್ಯಾನಿಲಯಗಳು ಅಡಿಕೆಯ ಅಂತರ 9*9 ಎಂದು ಶಿಫಾರಸ್ಸು ಮಾಡುತ್ತಾರೆ ಆದರೆ ರೇಣುಕಾರ್ಯ ಅದನ್ನು 6*6*18ಕ್ಕೆ ಪರಿವರ್ತಿಸಿ 18 ಅಡಿಯ ಜಾಗದಲ್ಲಿ ರಾಗಿ, ಜೋಳ ಹಾಗೂ ಇತರೆ ಆಹಾರ ಬೆಳೆಗಳನ್ನು ಬೆಳೆದುಕೊಳ್ಳಲು ಅನುಕೂಲ ಕಲ್ಪಿಸಿಕೊಂಡಿದ್ದಾರೆ. ಈ ಮಾದರಿ ಕಡಿಮೆ ಹಿಡುವಳಿದಾರರಿಗೆ ಅನುಕೂಲಕಾರಿಯಾಗಿದೆ.

ಜೋಡಿ ಪದ್ಧತಿಯಲ್ಲಿ ತೆಂಗು ಬೆಳೆಯುವುದರಿಂದ ಬೆಳೆ ವೈವಿಧ್ಯ ಕಾಪಾಡಿಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. 6*6 ಅಡಿಗಳಲ್ಲಿ ತೆಂಗನ್ನು ಜೋಡಿ ಪದ್ದತಿಯಲ್ಲಿ ಹಾಕಿಕೊಂಡು ಒಂದು ಜೋಡಿಯಿಂದ ಮತ್ತೊಂದು ಜೋಡಿಗೆ 33 ಅಡಿ ಅಂತರ ನೀಡಬೇಕು ಆಗ ತೆಂಗು ಪರಸ್ಪರ ವಿರುದ್ದ ದಿಕ್ಕಿನಲ್ಲಿ ಬೆಳೆದು ಒಳ್ಳೆಯ ಇಳುವರಿ ನೀಡುತ್ತವೆ ಹಾಗೂ ಉಳಿದ 33 ಅಡಿ ಅಂತರದಲ್ಲಿ ಅಡಿಕೆ, ಬಾಳೆ, ಮಾವು, ಸಪೋಟ, ನಿಂಬೆ ಕರಿಬೇವು ಹಾಗೂ ಇತರೆ ಬೆಳೆಗಳನ್ನು ಬೆಳೆದುಕೊಳ್ಳಬಹುದು. ಇಲ್ಲಿ ಯಾವ ಬೆಳೆಗೂ ತೊಂದರೆಯಾಗುವುದಿಲ್ಲ ಇಲ್ಲಿ ಗಿಡಗಳ ನಡುವೆ ಸ್ಪರ್ಧೆಯ ಬದಲಿಗೆ ಸಹಬಾಳ್ವೆ ಏರ್ಪಡುತ್ತದೆ ಎಂಬುದು ರೇಣುಕಾರ್ಯ ಅವರ ಅಭಿಪ್ರಾಯ. ಹೀಗೆ ಬಹು ಮಹಡಿ ಎಂಬುದು ಇಂದು ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ರೇಣುಕಾರ್ಯ ಅವರ ಭೂಮಿ ಇರುವುದು ಕೇವಲ 14 ಎಕರೆ ಆದರೆ ಈ ಬಹುಮಹಡಿ ಪದ್ಧತಿಯಿಂದಾಗಿ ಅವರು ತಮ್ಮ ಕೇವಲ 14 ಎಕರೆಯಲ್ಲಿ 52 ಎಕರೆ ಪ್ರದೇಶದಲ್ಲಿ ಬೆಳೆಯಬಹುದಾದಷ್ಟು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ನಮ್ಮ ಭೂಮಿಯನ್ನು ಎಕರೆಗಳಲ್ಲಿ ಅಳೆಯುವ ನಾವು ಉದ್ದ ಅಗಲಗಳನ್ನಷ್ಟೇ ಲೆಕ್ಕ ಹಾಕುತ್ತೇವೆ ಆದರೆ ಅದಕ್ಕೊಂದು ಸೀಮಿತತೆ ಇದೆ. ಇನ್ನು ಮುಂದೆ ನಾವು ಎತ್ತರವನ್ನೂ ಲೆಕ್ಕ ಹಾಕಬೇಕು ಏಕೆಂದರೆ ಅದು ಅನಿಯಮಿತ, ಎತ್ತರ ನಮ್ಮ ಲೆಕ್ಕಕ್ಕೆ ಧಕ್ಕಬೇಕು ಎಂದರೆ ನಾವು ಬಹುಮಹಡಿ ಬೆಳೆಗಳತ್ತ ಹೊರಳಬೇಕು” ಎನ್ನುತ್ತಾರೆ ಎಂ.ಕೆ. ರೇಣುಕಾರ್ಯ.

ಸೌಂದರ್ಯಕ್ಕೂ ಸ್ಥಳವಿರಬೇಕು: ರೇಣುಕಾರ್ಯರ ತೋಟ ಹಣ್ಣು, ಕಾಯಿ, ಧವಸ, ದ್ಯಾನ್ಯಗಳನ್ನು ನೀಡಲಷ್ಟೇ ಸೀಮಿತವಾಗಿಲ್ಲ. ಆ ತೋಟದ ಸೌಂದರ್ಯದ ಅರಿವಾಗಬೇಕೆಂದರೆ ತೋಟವನ್ನೊಮ್ಮೆ ಸುತ್ತಿ ನೋಡಲೇ ಬೇಕು. ತೋಟದ ತುದಿ ತುದಿಯನ್ನು ತಲುಪಬಲ್ಲಂತಹ ಸಾಕಷ್ಟು ದಾರಿಗಳಿವೆ ಇವು ತಿರುಗಾಟಕ್ಕಷ್ಟೇ ಸೀಮಿತವಲ್ಲ ಇದರಿಂದಾಗಿ ಇಲ್ಲಿನ ಸಸ್ಯಗಳಿಗೆ ಗಾಳಿ, ಬೆಳಕು ಸಮೃದ್ಧವಾಗಿ ದೊರಕುತ್ತಿದೆ, ಉತ್ಪನ್ನಗಳ ಸಾಗಾಣಿಕೆಗೂ ಅನುಕೂಲವಾಗಿದೆ ಜೊತೆಗೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿರುವ ವಿವಿಧ ಹೂವ್ವಿನ ಗಿಡಗಳು ಹಾಗೂ ಗಿಡಗಳು ತೋಟಕ್ಕೆ ಹೊಸ ಮೆರುಗನ್ನು ನೀಡಿವೆ. ತೋಟ ಎಂದಾಕ್ಷಣ ನಾವು ಆರ್ಥಿಕ ಅಂಶಗಳನ್ನಷ್ಟೇ ಲೆಕ್ಕ ಹಾಕಬಾರದು ಮನಸ್ಸಿಗೆ ಸಂತಸ ನೀಡುವ ಅಂಶಗಳತ್ತಲೂ ತುಸು ಒತ್ತು ನೀಡಬೇಕು ಆಗ ತೋಟ ಸುತ್ತಲು ನಮಗೂ ಒಂದು ಹುರುಪಿರುತ್ತದೆ ಎನ್ನುತ್ತಾರೆ ರೇಣುಕಾರ್ಯ. “ನನ್ನಂತಹ ನಾನೂ ಕೂಡಾ ತೋಟದಲ್ಲಿಯೇ ಹೆಚ್ಚು ಕಾಲ ಉಳಿಯಬೇಕು ಎನ್ನುವ ಉದ್ದೇಶದಿಂದ ಇಂತಹ ಸೌಂದರ್ಯ ವೃದ್ಧಿಯತ್ತ ಗಮನ ಹರಿಸಿದೆ. ಇದೀಗ ಇಲ್ಲಿಗೆ ಬರುವವರೂ ಕೂಡಾ ಇಲ್ಲಿನ ಹೂವ್ವು ಹಣ್ಣು ಹಾಗೂ ಸೌಂದರ್ಯ ವರ್ಧಕ ಸಸ್ಯಗಳನ್ನು ಕಂಡು ಬೆರಗಾಗುತ್ತಾರೆ” ಎನ್ನುತ್ತಾರೆ ಅವರು. ಈ ಬೆಳುವಲದ ಮಡಿಲಲ್ಲಿ ಒಮ್ಮೆ ಸುತ್ತಾಡಿದರೆ ಇದು ಅವಿಭಜಿತ ಬಳ್ಳಾರಿ ಜಿಲ್ಲೆಯ ಒಂದು ಭಾಗವೇ? ಎಂದೆನಿಸುತ್ತದೆ ಅಷ್ಟೇ ಅಲ್ಲ ಪಶ್ಚಿಮಘಟ್ಟದ ಭಾಗದ ಯಾವುದೋ ಒಂದು ತೋಟಕ್ಕೆ ಬಂದಿದ್ದೇವೇನೋ ಎಂಬತೆ ಭಾಸವಾಗುತ್ತದೆ. ರೇಣುಕಾರ್ಯರ ತೋಟದ ಪರಿಸರದಲ್ಲಿನ ಉಷ್ಣಾಂಶ ತೋಟದ ಹೊರಗಿನ ಉಷ್ಣಾಂಶಕ್ಕಿಂತಲೂ ಎರಡು ಡಿಗ್ರಿಯಷ್ಟು ಕಡಿಮೆ ಇರುತ್ತದೆ. ಸಸ್ಯ ವೈವಿಧ್ಯ ಕಾಪಾಡಿಕೊಂಡಿರುವ ಈ ತೋಟ ಆರ್ಥಿಕವಾಗಿಯೂ ಒಳ್ಳೆಯ ವರಮಾನ ತಂದುಕೊಡುತ್ತಿದೆ.

ಬಹುಮಹಡಿ ಬೆಳೆ, ಸಸ್ಯ ವೈವಿಧ್ಯ ಮತ್ತು ತೋಟ ಶೃಂಗಾರ ಕುರಿತು ಆಸಕ್ತಿ ಇರುವವರು ರೇಣುಕಾರ್ಯರ ತೋಟಕ್ಕೆ ಒಂದು ಭೇಟಿ ನೀಡಲೇ ಬೇಕು.

ಎಂ.ಕೆ. ರೇಣುಕಾರ್ಯ ಅವರ ಸಂಪರ್ಕಕ್ಕಾಗಿ: 9900110947

  • ಅರಕಲಗೂಡು ವಿ. ಮಧುಸೂದನ್