ಚಿತ್ರದುರ್ಗ: ರೈತಾಪಿ ವರ್ಗ ಸರ್ಕಾರದ ವಿವಿಧ ರೀತಿಯ ಪ್ರಯೋಜನೆಗಳನ್ನು ಪಡೆಯುವುದು, ಮಳೆ ಬಂದಾಗ ಬಿತ್ತನೆ ಮಾಡುವುದು, ಉತ್ತಮವಾದ ಇಳುವರಿಯನ್ನು ಪಡೆಯುವುದರ ಮೂಲಕ ಅರ್ಥಿಕವಾಗಿ ಪ್ರಗತಿಯನ್ನು ಸಾಧಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್ ಕರೆ ನೀಡಿದರು.
ಜಿ.ಪಂ.ಕೃಷಿ ಇಲಾಖೆ, ತೋಟಗಾರಿಕೆ ವಿಶ್ವ ವಿದ್ಯಾಲಯ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕೃಷಿ ಅಭೀಯಾನ ಕಾರ್ಯಕ್ರಮಕ್ಕೆ ಶನಿವಾರ ಕೃಷಿ ಇಲಾಖೆಯ ಆವರಣದಲ್ಲಿ ಚಾಲನೆ ನೀಡಿ ಮಾಧ್ಯಮರೊಂದಿಗೆ ಮಾತನಾಡಿದ ಅವರು, ಈ ಸಾಲಿನಲ್ಲಿ ನೀರಿನ ಸದ್ಭಳಕೆ ಮತ್ತು ಸಿರಿಧಾನ್ಯಗಳ ಉತ್ತಮ ಇಳುವರಿ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿ ಇಂದಿನ ದಿನದಲ್ಲಿ ಸರ್ಕಾರ ಕೃಷಿಕರಿಗಾಗಿ ವಿವಿಧ ರೀತಿಯ ಸೌಕರ್ಯಗಳನ್ನು ನೀಡುತ್ತಿದೆ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳು ಮತ್ತು ಯಂತ್ರೋಪಕರಣಗಳನ್ನು ಸಹಾ ಕಡಿಮೆ ದರಕ್ಕೆ ಬಾಡಿಗೆ ನೀಡುವುದರ ಮೂಲಕ ರೈತರಿಗೆ ನೆರವಾಗಿದೆ. ಇದರ ಸದುಪಯೋಗ ಪಡೆಯಬೇಕಿದೆ ಎಂದರು.
ಕೃಷಿ ಇಲಾಖೆವತಿಯಿಂದ ಕೃಷಿ ಹೊಂಡವನ್ನು ನಿರ್ಮಾಣ ಮಾಡುವುದಕ್ಕೆ ಸರ್ಕಾರ ಸಹಾಯ ಮಾಡುತ್ತಿದೆ, ಮಳೆ ಬಂದಾಗ ನೀರನ್ನು ಸಂಗ್ರಹಣೆ ಮಾಡುವುದರ ಮೂಲಕ ಕಷ್ಟಕಾಲದಲ್ಲಿ ನೆರವಾಗಲಿದೆ, ಇದ್ದಲ್ಲದೆ ಇದರಲ್ಲಿಯೇ ಮೀನುಗಾರಿಕೆಯನ್ನು ಮಾಡಿದರೆ ಅದಕ್ಕೂ ಸಹಾ ಸರ್ಕಾರದಿಂದ ನೆರವು ಸಿಗಲಿದೆ, ಇದರ ಜೊತೆಯಲ್ಲಿ ಹೊಲದಲ್ಲಿಯೇ ಹೈನುಗಾರಿಕೆಯನ್ನು ಮಾಡಿಕೊಂಡಲ್ಲಿ ಅದರಿಂದ ಬರುವ ತ್ಯಾಜ್ಯ ವಸ್ತುಗಳು ಬೆಳೆಗಳಿಗೆ ಉತ್ತಮವಾಧ ಸಾವಯವ ಗೊಬ್ಬರವಾಗಲಿದೆ ಎಂದರು.
ಚಿತ್ರದುರ್ಗ ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿ, ಗೋನೂರು, ದ್ಯಾಮವ್ವನಹಳ್ಳಿ, ಮದಕರಿಪುರ, ಜಂಪಣ್ಣನಾಯಕನಕೋಟೆ, ದೊಡ್ಡಸಿದ್ದವ್ವನಹಳ್ಳಿ, ಇಂಗಳದಾಳ್, ಅನ್ನೇಹಾಳ್, ಗೊಡಬನಹಾಳ್, ಸೊಂಡೆಕೂಳ, ಜಾನಕೊಂಡ, ಸಿದ್ದಾಪುರ, ಚೋಳಗಟ್ಟ, ಮೇದೇಹಳ್ಳಿ, ಮಠದ ಕುರುಬರಹಟ್ಟಿ ಗ್ರಾಮಗಳಲ್ಲಿ ಸಂಚಾರ ಮಾಡಲಿದ್ದು, ಮೇ. ೩೦ರಂದು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿನ ಐಎಟಿಯಲ್ಲಿ ಹೋಬಳಿ ಮಟ್ಟದ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟ ನಿರ್ದೇಶಕರಾಧ ಲಕ್ಷ್ಮಣ್, ಚಿತ್ರದುರ್ಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್ ಸೇರಿದಂತೆ ವಿವಿಧ ಇಲಾಖೆಯ ಆಧಿಕಾರಿಗಳು ಭಾಗವಹಿಸಿದ್ದರು