ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕೆಲವು ಗ್ರಾಮಗಳ ಜಾನುವಾರುಗಳಲ್ಲಿ ಚರ್ಮಗಂಟು ರೋಗ ರೋಗ್ರೋದ್ರೇಕ ಹಾಗೂ ಕುರಿಗಳಲ್ಲಿ ನೀಲಿ ನಾಲಿಗೆ ಕಾಯಿಲೆ ಕಂಡು ಬಂದಿರುತ್ತದೆ.

 ಈ ಕಾಯಿಲೆಯಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುವುದರ ಜೊತೆಗೆ ಜಾನುವಾರುಗಳ ಆರೋಗ್ಯ ಹದಗೆಡುತ್ತದೆ. ಈ ಸಂಬಂಧ ಚರ್ಮಗಂಟು ರೋಗ ಮತ್ತು ನೀಲಿ ನಾಲಿಗೆ ರೋಗಗಳ ಹತೋಟಿಗೆ ಇಲಾಖೆಯು ಅಗತ್ಯ ಕ್ರಮವಹಿಸಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಕೃಷ್ಣಪ್ಪ ತಿಳಿಸಿದ್ದಾರೆ.

ಕುರಿಗಳಲ್ಲಿ ಕಂಡು ಬರುವ ನೀಲಿ ನಾಲಿಗೆ ರೋಗ: ಅತೀ ಸೂಕ್ಷ್ಮಾಣುವಿನಿಂದ ಉಂಟಾಗುವ ಈ ರೋಗವು ಎಲ್ಲಾ ಮೆಲಕು ಹಾಕುವ ಪ್ರಾಣಿಗಳಲ್ಲಿ ಕಂಡು ಬರುವುದು. ಕುರಿಗಳಲ್ಲಿ ಅತೀ ಹೆಚ್ಚಾಗಿ ಮತ್ತು ತೀಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಒಂದು ಬಗೆಯ ಕುರುಡು ನೊಣಗಳು ರೋಗ ಪೀಡಿತ ಪ್ರಾಣಿಯನ್ನು ಕಚ್ಚಿ ಮತ್ತೊಂದು ಆರೋಗ್ಯವಂತ ಪ್ರಾಣಿಗೆ ಕಚ್ಚಿ ರೋಗವನ್ನು ಹರಡುತ್ತದೆ.

ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಕಂಡು ಬರುವುದು. ನೀರು ನಿಂತಿರುವ ಕೊಳಚೆ ಪ್ರದೇಶಗಳಲ್ಲಿ ನೊಣಗಳು ಹೆಚ್ಚಾಗಿ ರೋಗ ಹರಡಲು ಕಾರಣವಾಗುವುದು.

ರೋಗದ ಲಕ್ಷಣಗಳು: ಪ್ರಾಣಿಗಳಿಗೆ ತೀಕ್ಷಣವಾದ ಜ್ವರ, ಮೂಗು, ನಾಲಿಗೆ, ವಸಡು ಮೇಲೆ ಹುಣ್ಣು. ಮೂಗಿನ ಒಳಪದರು ಕೆಂಪಾಗಿ ಮೂಗಿನ ಒಳಗೆ ಮತ್ತು ಸುತ್ತ ರಕ್ತ ಮಿಶ್ರಿತ ಸಿಂಬಳ ಕಟ್ಟಿಕೊಳ್ಳುವುದು. ಬಾಯಿಯಲ್ಲಿ ಜೊಲ್ಲು ಸೋರುವುದು. ತುಟಿ, ಮೂಗು, ನಾಲಿಗೆ, ಗದ್ದ ಮತ್ತು ಕಿವಿಗಳು ಊದಿಕೊಳ್ಳುವುದು. ಉಣ್ಣೆ ಉದುರುವುದು. ಕಟಿಬಾಯಿಯು ಹರಿದು ರಕ್ತ ಚಿಮ್ಮಿ  ಕೆಂಪಾಗುವುದು. ಕಾಲುಗಳು ಗೊರುಸುಗಳು ಮಧ್ಯಭಾಗ ಕೆಂಪಾಗಿ ಊದಿಕೊಂಡು ಕುರಿಗಳು ಕುಂಟುತ್ತವೆ. ನಾಲಿಗೆ ದಪ್ಪವಾಗಿ ನೀಲಿ ವರ್ಣಕ್ಕೆ ತಿರುಗುವುದು. ಕುರಿಗಳು ನಿಶ್ಯಕ್ತಿಯಾಗಿ ರೋಗದಿಂದ ಸಾವನ್ನಪ್ಪುವುದು.

ಚಿಕಿತ್ಸೆ ಮತ್ತು ನಿಯಂತ್ರಣ:ಈ ರೋಗಕ್ಕೆ ಲಸಿಕೆ ಲಭ್ಯವಿದ್ದು, ರೈತರು ಕುರಿಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು. ನೀಲಿ ನಾಲಿಗೆ ರೋಗವು ಅತೀ ಸೂಕ್ಷ್ಮಾಣುವಿನಿಂದ ಉಂಟಾಗುವ ರೋಗವಾದ್ದರಿಂದ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಅದ್ದರಿಂದ ಚಿಕಿತ್ಸೆಗಿಂತ ಆರೈಕೆ ಹಾಗೂ ಮುಂಜಾಗ್ರತಾ ಕ್ರಮಗಳ ಮೂಲಕ ರೋಗವನ್ನು ನಿಯಂತ್ರಿಸಬಹುದಾಗಿದೆ.

ಆರೈಕೆ:ರೋಗ ಪೀಡಿತ ಕುರಿಗಳ ಬಾಯಿಯನ್ನು ಸೋಡಿಯಂ ಬೈ ಕಾರ್ಬೋನೇಟ್ (ತಿನ್ನುವ ಸೋಡಾ) ಅಥವಾ ಉಪ್ಪು ನೀರಿನಿಂದ ತೊಳೆಯಬೇಕು. ನಾಲಿಗೆ ಮತ್ತು ವಸಡಿಗೆ ಬೋರ್ಯಾಕ್ಸ್ ಪುಡಿ ಮಿಶ್ರಿತ ಜೇನು ತುಪ್ಪ ಅಥವಾ ಗ್ಲೀಸರೀನ್ ಹಚ್ಚಬೇಕು. ಗೋರಸಿನ ಮಧ್ಯಭಾಗದಲ್ಲಿ ಗಾಯವಿದ್ದಲ್ಲಿ ಪೊಟ್ಯಾಶಿಯಂ ಪರಮಾಂಗನೇಟ್ ದ್ರಾವಣದಿಂದ ತೊಳೆದು ಶುಭ್ರ ಹತ್ತಿಯಿಂದ ಒರಸಿ, ನೈಟ್ರೂಪುರಜೋನ್ ಕ್ರೀಮ್, ಹೈಮಾಕ್ಸ್ ಆಯಿಂಟ್ಮೆಂಟ್ ಅಥವಾ ಲೊರೆಕ್ಸೇನ್ ಮುಲಾಮು ಹಚ್ಚಬೇಕು. ಮೆತ್ತನೆ ಆಹಾರ ನೀಡಬೇಕು ಹಾಗೂ ಗಂಜಿ ಕುಡಿಸಬೇಕು. ಒಂದು ಬಕೆಟ್ ನೀರಿಗೆ ನಾಲ್ಕು ಹಿಡಿ ಉಪ್ಪು ಮತ್ತು ಎರಡು ಚಮಚ ಅಡಿಗೆ ಸೋಡಾ ಅಥವಾ ಓಆರ್‍ಎಸ್ ಪುಡಿ ಅಥವಾ ಎಲೆಕ್ಟ್ರೋಲೈಟ್ ಪುಡಿ ಮಿಶ್ರಿತ ನೀರನ್ನು ದಿನಕ್ಕೆ 5ರಿಂದ 6 ಬಾರಿ ಕುಡಿಸಬೇಕಾಗುತ್ತದೆ. ಪಶು ವೈದ್ಯರು ಸಲಹೆಯ ಮೇರೆಗೆ ರೋಗ ಪೀಡಿತ ಕುರಿಗಳಿಗೆ 3ರಿಂದ 5 ದಿನ ಸೂಕ್ತ ಆಂಟಿಬಯೋಡಿಕ್ಸ್, ನೋವು ನಿವಾರಕ ಮತ್ತು ಶಕ್ತಿ ವರ್ಧಕ ಔಷಧಗಳನ್ನು ಕುಡಿಸಬೇಕು.

ಮುಂಜಾಗ್ರತಾ ಕ್ರಮಗಳು: ರೋಗಗ್ರಸ್ಥ ಕುರಿಗಳನ್ನು ಪ್ರತ್ಯೇಕಿಸಿ ಆರೋಗ್ಯವಂತ ಕುರಿಗಳಿಂದ ದೂರವಿಡಬೇಕು. ಕುರಿಗಳನ್ನು ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ತಗ್ಗು ಪ್ರದೇಶದಲ್ಲಿ ಮೇಯಿಸಬಾರದು. ಉಣ್ಣೆ ಕತ್ತರಿಸುವುದನ್ನು ಮುಂದೂಡಬೇಕು. ಕುರಿ ದೊಡ್ಡಿಯಲ್ಲಿ 1 ಇಂಚು ಮಣ್ಣನ್ನು ತೆಗೆದು ಹೊಸ ಮಣ್ಣನ್ನು ಹಾಕಿಸಬೇಕು. ರೋಗಗ್ರಸ್ಥ ಕುರಿಗಳು ಸತ್ತಲ್ಲಿ ಅಳವಾದ ಗುಂಡಿಯಲ್ಲಿ ಹಾಕಿ ಮುಚ್ಚಬೇಕು. ನೋಣಗಳ ಹಾವಳಿ ತಪ್ಪಿಸಲು ದೊಡ್ಡಿ ವ್ಯಾಪ್ತಿಯಲ್ಲಿ ಹಸಿ ಬೇವಿನ ಸೊಪ್ಪಿನ ಹೊಗೆ ಹಾಕಬೇಕು.

 ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಕೃಷ್ಣಪ್ಪ ತಿಳಿಸಿದ್ದಾರೆ.