ಚಿತ್ರದುರ್ಗ:ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ೨೦೧೫-೧೬ ರ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಚಿತ್ರದುರ್ಗ ಜಿಲ್ಲೆಯ ಹೋಬಳಿವಾರು ಗ್ರಾಮ ಪಂಚಾಯಿತಿವಾರು ಬೆಳೆಗಳ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಆಯಾ ತಾಲ್ಲೂಕಿನ ಮುಖ್ಯ ಬೆಳೆಗಳನ್ನು ಗ್ರಾಮಪಂಚಾಯಿತಿ ಮಟ್ಟಕ್ಕೂ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟಕ್ಕೂ ಅನುಷ್ಠಾನಗೊಳಿಸಲು ಸರ್ಕಾರದಿಂದ ಪ್ರಕಟಣೆ ಹೊರಡಿಸಲಾಗಿದೆ.
ಈ ಯೋಜನೆಗೊಳಪಡುವ ವಿವಿಧ ಬೆಳೆಗಳಿಗೆ ಬೆಳೆಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆ ಸಲ್ಲಿಸಲು ನಿಗದಿಪಡಿಸಿರುವ ಅಂತಿಮ ದಿನಾಂಕ ಇಂತಿದೆ. ಹಿಂಗಾರು ಹಂಗಾಮಿಗೆ ೩೧-೧೨-೨೦೧೫, ಬೇಸಿಗೆ ಹಂಗಾಮಿಗೆ ೨೯-೨-೨೦೧೬.
ಬೆಳೆಸಾಲ ಪಡೆದ ರೈತರಿಗೆ ೨೦೧೫-೧೬ ರ ಹಿಂಗಾರು ಹಂಗಾಮಿಗೆ ದಿನಾಂಕ ೧-೧೦-೨೦೧೫ ರಿಂದ ೩೧-೧೨-೨೦೧೫ ರೊಳಗೆ ಮತ್ತು ಬೇಸಿಗೆ ಹಂಗಾಮಿಗೆ ದಿನಾಂಕ ೧-೧-೨೦೧೬ ರಿಂದ ೩೧-೩-೨೦೧೬ ರೊಳಗೆ ಬೆಳೆಸಾಲ ವಿತರಿಸಲಾಗಿದ್ದರೆ ಅಂತಹ ರೈತರನ್ನು ಕಡ್ಡಾಯವಾಗಿ ಯೋಜನೆಯಡಿಯಲ್ಲಿ ಒಳಪಡಿಸತಕ್ಕದ್ದು. ಬೆಳೆಸಾಲದ ಮೊತ್ತಕ್ಕೆ ರೈತರ ವಿಮಾಕಂತನ್ನು ಹೆಚ್ಚುವರಿಯಾಗಿ ಮಂಜೂರು ಮಾಡತಕ್ಕದ್ದು.
೨೦೧೫-೧೬ ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಇಚ್ಛೆಯುಳ್ಳ ಬೆಳೆಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಲು ಕೊನೆ ದಿನಾಂಕ ೩೧-೧೨-೨೦೧೫ ಹಾಗೂ ಬೇಸಿಗೆ ಹಂಗಾಮಿಗೆ ದಇನಾಂಕ ೨೯-೨-೨೦೧೬ ಆಗಿರುತ್ತದೆ. ಈ ಯೋಜನೆಯಡಿ ಬೆಳೆಸಾಲ ಪಡೆಯದ ರೈತರು ಬೆಳೆ ಬಿತ್ತಿದ/ನಾಟಿ ಮಾಡಿದ ನಂತರ ೩೦ ದಿನದೊಳಗೆ ಅಥವಾ ಮೇಲೆ ನಿಗದಿಪಡಿಸಿದ ದಿನಾಂಕದೊಳಗೆ ಯಾವುದು ಮುಂಚೆಯೋ ಆ ಅವಧಿಯೊಳಗೆ ಬ್ಯಾಂಕಿಗೆ ಘೋಷಣೆ ಸಲ್ಲಿಸತಕ್ಕದ್ದು. ಮೇಲೆ ನಿಗದಿಪಡಿಸಿದ ದಿನಾಂಕದೊಳಗೆ ಯಾವುದು ಮೊದಲೋ ಆ ಅವಧಿಯೊಳಗೆ ಬ್ಯಾಂಕಿಗೆ ಘೋಷಣೆಗಳನ್ನು ಸಲ್ಲಿಸತಕ್ಕದ್ದು. ಮೇಲೆ ನಿಗದಿಪಡಿಸಿದ
ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುವುದು. ಬೆಳೆಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ/ಖಾತೆ/ಪಾಸ್ ಪುಸ್ತಕ/ಕಂದಾಯ ರಸೀದಿ ನೀಡತಕ್ಕದ್ದು.
ಬೆಳೆವಿಮಾ ಯೋಜನೆಯಡಿ ಒಳಪಡುವ ಪ.ಜಾತಿ ಮತ್ತು ಪ.ಪಂಗಡಗಳ ಎಲ್ಲಾ ರೈತರಿಗೆ ವಿಮಾಕಂತಿನಲ್ಲಿ ಶೇ.೯೦ ರಷ್ಟು ರಿಯಾಯಿತಿ ನೀಡಲಾಗುವುದು. ಈ ರಿಯಾಯಿತಿಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ ಶೇ.೫ ರ ಸಹಾಯಧನ ಸೇರಿರುತ್ತದೆ.
ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅನುಷ್ಠಾನ ಸಂಸ್ಥೆಯಾದ ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ, ಬೆಂಗಳೂರು ಇವರು ಬೆಳೆವಿಮಾ ಯೋಜನೆಯಲ್ಲಿ ಭಾಗವಹಿಸಿರುವ ವಿವಿಧ ಸಂಸ್ಥೆಗಳ ಜೊತೆಯಲ್ಲಿ ಸಮನ್ವಯ ನೀಡುವರು.
ಹೆಚ್ಚಿನ ವಿವರಗಳಿಗೆ ತಮ್ಮ ವ್ಯಾಪ್ತಿಯ ರೈತಸಂಪರ್ಕ ಕೇಂದ್ರಗಳು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪವಿಭಾಗೀಯ ಉಪ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಿಲ್ಲಾ ಜಂಟಿ ಕೃಷಿನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಚಿತ್ರದುರ್ಗ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಎಸ್. ಕಳ್ಳೆನ್ನವರ್ ರೈತರಲ್ಲಿ ಮನವಿ ಮಾಡಿದ್ದಾರೆ.