ಚಿತ್ರದುರ್ಗ: ಯೂರಿಯಾ ರಸಗೊಬ್ಬರದ ಮಾರಾಟ ದರ ಮಾತ್ರ ಸರ್ಕಾರದ ನಿಯಂತ್ರಣದಲ್ಲಿದ್ದು, ಇದನ್ನು ಹೊರತುಪಡಿಸಿ ಉಳಿದ ರಸಗೊಬ್ಬರಗಳಾದ ಡಿ.ಎ.ಪಿ, ಮ್ಯೂರೇಟ್ ಆಫ್ ಪೋಟ್ಯಾಷ್(ಎಂ.ಓ.ಪಿ), ವಿವಿಧ ಶ್ರೇಣಿಗಳ ಕಾಂಪ್ಲೆಕ್ಸ್ (ಎನ್.ಪಿ.ಕೆ. ಕಾಂಪ್ಲೆಕ್ಸ್) ರಸಗೊಬ್ಬರಗಳ ಗರಿಷ್ಠ ಮಾರಾಟ ದರಗಳು (ಎಂ.ಆರ್.ಪಿ) ಸರ್ಕಾರದ ನಿಯಂತ್ರಣದಲ್ಲಿರದೆ ಬದಲಾವಣೆ ಆಗುವ ಸಂಭವವಿರುತ್ತದೆ. ಬೇರೆಬೇರೆ ಸಮುಯದಲ್ಲಿ ಪೂರೈಕೆಯಾಗುವ ರಸಗೊಬ್ಬರ ದಾಸ್ತಾನುಗಳಿಗೆ (ಹಳೆ ದಾಸ್ತಾನಿಗೆ ಅಥವಾ ಹೊಸ ದಾಸ್ತಾನಿಗೆ) ಬೇರೆ ಬೇರೆಯದೇ ಆದ ಗರಿಷ್ಠ ಮಾರಾಟ ದರಗಳಿರುವ ಸಂಭವವಿರುತ್ತದೆ.
ಕಾರಣ ರೈತರು ರಸಗೊಬ್ಬರಗಳನ್ನು ರಸಗೊಬ್ಬರ ಮಾರಾಟಗಾರರು ಹೆಚ್ಚಿನ ದರಗಳಲ್ಲಿ ಮಾರಾಟ ಮಾಡುತ್ತಿದ್ದಾರೆಂಬ ಗೊಂದಲಕ್ಕೆ ಒಳಗಾಗದೆ ತಾವು ಖರೀದಿಸುವ ರಸಗೊಬ್ಬರ ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಮಾರಾಟ ದರದಲ್ಲಿಯೇ ಖರೀದಿಸಲು ತಿಳಿಸಿದೆ. ರಸಗೊಬ್ಬರ ಚೀಲದ ಮೇಲಿರುವ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರೆ ರೈತರು ನಗದು ಬಿಲ್ಲಿನೊಂದಿಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಬಹುದಾಗಿದೆ. ರಸಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ನಗದು ರಸೀದಿ ಪಡೆಯತಕ್ಕದ್ದು ಎಂದು ಚಿತ್ರದುರ್ಗದ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.