LokeshReddyಚಿತ್ರದುರ್ಗ: ಜಿಲ್ಲೆ ಸದಾಬರಗಾಲದ ಜಿಲ್ಲೆ ಎಂಬ ಖ್ಯಾತಿಯನ್ನು ಪಡೆದಿದೆ. ಆದರೆ ಇಲ್ಲೊಬ್ಬ ರೈತ ತೋಟಗಾರಿಕೆ ಬೆಳೆಯಲ್ಲಿ ಮೋಸಂಬಿ ಬೆಳೆದು ಆದಾಯ ಗಳಿಸಿದ ಚಿತ್ರ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನ ಹಳ್ಳಿಯ ರೈತ ಲೋಕೇಶ್‌ರೆಡ್ಡಿ ಕತೆ.
ಇಲ್ಲಿಂದ ಐದಾರು ಕಿಲೋ ಮೀಟರ್ ದೂರದಲ್ಲಿನ ದೊಡ್ಡಸಿದ್ದವ್ವನ ಹಳ್ಳಿಯ ರೈತ ಲೋಕೇಶ್ ರೆಡ್ಡಿ ತನ್ನ ೧೨ ಎಕರೆ ತೋಟದಲ್ಲಿ ಮೋಸಂಬಿ ಬೆಳೆದಿದ್ದಾರೆ. ಭರ್ಜರಿ ಆದಾಯವನ್ನು ಗಳಿಸಿದ್ದಾರೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ೧.೨೦ ಲಕ್ಷ ರೂ. ಸಹಾಯ ಧನ ಪಡೆದುಕೊಂಡು ೨೦೧೦-೧೧ರಲ್ಲಿ ೧೨೫೦ ಗಿಡಗಳನ್ನು ನಾಟಿ ಮಾಡಲಾಗಿತು. ನಾಲ್ಕು ವರ್ಷಗಳ ನಂತರ ಬೆಳೆ ಕೈಗೆ ಬಂದಿದ್ದು ಉತ್ತಮ ಇಳುವರಿ ಸಿಕ್ಕಿದೆ. ಮೊದಲ ಬೆಳೆಯಲ್ಲಿ ಅಂದಾಜು ೩೫ ಟನ್, ಎರಡನೆ ಬೆಳೆಯಲ್ಲಿ ೧೫-೨೦ ಟನ್ ಫಸಲು ಲಭಿಸಿದೆ.
ಈಗಾಗಲೇ ಇವರು ಎರಡು ಬೆಳೆಗಳನ್ನು ಪಡೆದುಕೊಂಡಿದ್ದು ಮೊದಲ ಬೆಳೆಯಲ್ಲಿ ೧೦ ಲಕ್ಷ, ಎರಡನೆ ಬೆಳೆಯಲ್ಲಿ ರೂ.೧೨ ಲಕ್ಷ ಆದಾಯ ಸಿಕ್ಕಿದೆ. ಈ ಬೆಳೆಯನ್ನು  ಚೈನ್ನೈ, ಕಲ್ಕತ್ತ, ನಾಗಪುರ, ದೆಹಲಿಗೆ ಮಾರಾಟ ಮಾಡಲಾಗುತ್ತದೆ. ಎರಡು ವರ್ಷಗಳಲ್ಲಿ ಅಂದಾಜು ಐದು ಲಕ್ಷ ಖರ್ಚಾಗಿದ್ದು ೧೫-೧೭ ಲಕ್ಷ ಆದಾಯ ಸಿಕ್ಕಿದೆ. ಬೇಸಿಗೆ ಸಮಯದಲ್ಲಿ ಜ್ಯೂಸ್‌ಗೆ ಉಪಯೋಗಿಸುವುದರಿಂದ ೪೦ ರಿಂದ ೪೫ ರೂ ಬೆಲೆ ಸಿಗುತ್ತದೆ. ಮಳೆಗಾಲದಲ್ಲಿ ಕಟಾವು ಮಾಡಿದರೆ ೧೫ ರಿಂದ ೨೦ ರೂ. ಬೆಲೆ ಸಿಗುತ್ತದೆ ಎಂದು ರೈತ ಲೋಕೇಶ್‌ರೆಡ್ಡಿ ಹೇಳುತ್ತಾರೆ.
ಒಂದು ಗಿಡಕ್ಕೆ ಒಂದು ವರ್ಷಕ್ಕೆ ೩೦-೫೦ ಕೆ.ಜಿ. ಬೆಳೆ ಸಿಗುತ್ತದೆ. ಕೆ.ಜಿ.ಗೆ ರೂ.೩೦ ರಿಂದ ೪೦ ರೂ.ಗೆ ಮಾರಾಟ ಮಾಡಲಾಗುತ್ತದೆ. ಕಳೆದ ವರ್ಷ ೧೦ ಲಕ್ಷ, ಈ ವರ್ಷ ೧೩ ಲಕ್ಷ ಆಗಿದೆ. ೧೦ ಲಕ್ಷಕ್ಕೆ ೩ ಲಕ್ಷ ಖರ್ಚು ಬಂದಿದ್ದು ಈ ವರ್ಷದ ೧೩ ಲಕ್ಷ ಆದಾಯದಲ್ಲಿ ನಾಲ್ಕು ಖರ್ಚಾಗಿದ್ದು ಒಂಭತ್ತು ಲಕ್ಷ ಲಾಭ ಸಿಕ್ಕಿದೆ. ಗಿಡಗಳು ಬೆಳವಣಿಗೆ ಆದಂತೆ ಇಳುವರಿಯು ಹೆಚ್ಚಾಗುತ್ತದೆ. ಮುಂದಿನ ವರ್ಷ ೬೦-೭೦ ಕೆ.ಜಿ. ಬೆಳೆ ಸಿಗುವ ನಿರೀಕ್ಷೆಯಿದೆ ಎನ್ನುತ್ತಾರೆ ಲೋಕೇಶ್‌ರೆಡ್ಡಿ.
ಮೊದಲು ಈರುಳ್ಳಿ ಸೇರಿದಂತೆ ಮತ್ತಿತರ ಬೆಳೆ ಬೆಳೆಯಲಾಗುತ್ತಿದ್ದು ಅದಕ್ಕೆ ನೀರು ಹೆಚ್ಚಿಗೆ ಬೇಕು ಎಂಬ ಕಾರಣಕ್ಕೆ ಮೋಸಂಬಿ ಬೆಳೆಯಲು ಮುಂದಾಗಿ ಯಶಸ್ಸು ಸಿಕ್ಕಿದೆ. ಈರುಳ್ಳಿ ಬೆಳೆಗೆ ಎರಡು ಎಕರೆಗೆ ಹಾಯಿಸುವ ನೀರನ್ನು ಈಗ ೧೨ ಎಕರೆಗೆ ಮೋಸಂಬಿ ಬೆಳೆಗೆ ಬಳಸಲಾಗುತ್ತಿದೆ. ಗಿಡದಿಂದ ಗಿಡಕ್ಕೆ ೨೦ ಅಡಿ ಅಂತರದಲ್ಲಿ ಮಾಡಿದ್ದು ಮೂರು ವರ್ಷಕ್ಕೆ ಫಸಲು ನೀಡಿದೆ. ಅಲ್ಲದೆ ಹೆಚ್ಚಿನ ಕೂಲಿ ಆಳುಗಳ ಅವಶ್ಯಕತೆಯೂ ಮೋಸಂಬಿ ಬೆಳೆ ನಿರ್ವಹಣೆಗೆ ಬೇಕಾಗುವುದಿಲ್ಲ, ಒಮ್ಮೆ ಗಿಡಗಳನ್ನು ನಾಟಿ ಮಾಡಿ ಉತ್ತಮ ನಿರ್ವಹಣೆ ಮಾಡಿದರೆ ವರ್ಷಕ್ಕೆ ಒಮ್ಮೆಯಂತೆ ಕನಿಷ್ಠ ಹತ್ತು ವರ್ಷಗಳವರೆಗೆ ಫಸಲು ಕಾಣಬಹುದಾಗಿದೆ.
ಮೋಸಂಬಿ ಬೆಳೆಯಲು ಹೆಚ್ಚು ಕೆಲಸಗಾರರು  ಬೇಕಾಗುವುದಿಲ್ಲ, ಬೇಸಿಗೆ ಸಮಯದಲ್ಲಿ ದಿನಕ್ಕೆ ಮೂರು ಗಂಟೆ ಡ್ರಿಪ್ ಮೂಲಕ ನೀರು ಹಾಯಿಸಲಾಗುತ್ತದೆ. ಅನಂತಪುರದ ಕೃಷಿ ತಂತ್ರಜ್ಞರ ಸಲಹೆಯಂತೆ ಚಿಗುರು, ಮೊಗ್ಗು, ಕಾಯಿ ಮತ್ತು ಹಣ್ಣು ಹಂತ ಸೇರಿದಂತೆ ಮೂರರಿಂದ ನಾಲ್ಕು ಹಂತದಲ್ಲಿ ಔಷ ಸಿಂಪಡಿಸಲಾಗುತ್ತದೆ. ಸರಿಯಾಗಿ ನಿರ್ವಹಣೆ ಮಾಡಿಕೊಂಡು ಹೋದರೆ ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಬೆಳೆದು ಅಕ ಲಾಭ ಗಳಿಸಬಹುದಾಗಿದೆ ಎಂದು ಲೋಕೇಶ್‌ರೆಡ್ಡಿ ತಿಳಿಸುತ್ತಾರೆ.
ಚಿತ್ರದುರ್ಗ ಜಿಲ್ಲೆಯು ಮೋಸಂಬಿ ಬೆಳೆ ಬೆಳೆಯಲು ಉತ್ತಮ ಹವಾಗುಣ ಹೊಂದಿದೆ. ಕೆಂಪು ಗೋಡು ಮಣ್ಣು ಈ ಬೆಳೆಗೆ ಅವಶ್ಯ. ದೊಡ್ಡಸಿದ್ದವ್ವನ ಹಳ್ಳಿಯ ರೈತ ಲೋಕೇಶ್ ರೆಡ್ಡಿ ಅವರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಮೋಸಂಬಿ ಬೆಳೆಗೆ ಸಹಾಯ ಧನ ನೀಡಲಾಗಿದ್ದು ಉತ್ತಮ ಬೆಳೆ ಬೆಳೆದಿದ್ದಾರೆ.