ಚಿತ್ರದುರ್ಗ: ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಮೆಕ್ಕೆಜೋಳವು ಒಂದಾಗಿದ್ದು, ಉತ್ತಮ ಮಳೆಯಾಗಿರುವ ಕಾರಣ ಜಿಲ್ಲೆಯಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ್ಯ ಶುರುವಾಗಿದೆ. ತಾಲ್ಲೂಕಿನ ಭರಮಸಾಗರ ಹೋಬಳಿ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಕೆಲವು ಭಾಗಗಳಲ್ಲಿನ ಮೆಕ್ಕೆಜೋಳ ಬೆಳೆಗಳಲ್ಲಿ ಸೈನಿಕ ಹುಳುವಿನ ಬಾದೆ ಕಂಡುಬಂದಿದ್ದು, ಇದರ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಕೀಟಶಾಸ್ತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳ ತಂಡ ರಚಿಸಿ, ರೈತರ ತಾಕುಗಳಿಗೆ ಭೇಟಿ ನೀಡಿ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೃಷಿ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.

ಸೈನಿಕಹುಳು ಲಕ್ಷಣಗಳು: ಬೆಳೆದ ಹುಳುವಿನ ಕಪ್ಪುತಲೆಯ ಮುಂಬಾಗದಲ್ಲಿ ತಲೆ ಕೆಳಗಾದ ವೈ (Y) ಆಕೃತಿಯ ಗುರುತು ಇರುತ್ತದೆ, ಹುಳುವಿನ ಹಿಂಬಾಗದಲ್ಲಿ ನಾಲ್ಕು ದಟ್ಟವಾದ ಕಂದು ಬಣ್ಣದ ಚುಕ್ಕೆಗಳು ಚೌಕಾಕಾರದಲ್ಲಿರುತ್ತದೆ.
ಬೆಳೆಹಾನಿ : ಸೈನಿಕ ಹುಳುವು ಬೆಳೆಯ ಪ್ರಾರಂಭಿಕ ಹಂತದ ಸುಳಿಯಲ್ಲಿ ಅವಿತು ಬೆಳೆಯುವ ಕುಡಿಯನ್ನು ತಿನ್ನುತ್ತದೆ. ಬಲಿತ ಹುಳುವಿನ ಹಾನಿಯಾದಲ್ಲಿ ಎಲೆಯು ಹರಿದ ರೀತಿಯಲ್ಲಿ ಕಂಡು ಎಲೆಯ ಮೇಲ್ಭಾಗದಲ್ಲಿ ಕಟ್ಟಿಗೆ ಹಿಟ್ಟಿನ ತರಹದ ಹಸಿ ಹಿಕ್ಕೆಗಳನ್ನು ಕಾಣಬಹುದು. ಬೆಳೆದ ಹುಳುಗಳು ತೆನೆಯನ್ನು ಕೊರೆದು ಬೆಳವಣಿಗೆ ಅಗುತ್ತಿರುವ ಕಾಳುಗಳನ್ನು ತಿನ್ನುತ್ತವೆ.

ಮುಂಜಾಗೃತ ಕ್ರಮಗಳು:  ಮೆಕ್ಕೆಜೋಳ ಬೆಳೆಯುವ ಪ್ರದೇಶದಲ್ಲಿ ಸಾಧ್ಯವಾದಷ್ಟು ಏಕಕಾಲಕ್ಕೆ ಬಿತ್ತನೆ ಮಾಡುವುದರಿಂದ ಕೀಟಗಳ ಸಂಖ್ಯೆ ಮತ್ತು ಸಂತತಿ ಅಭಿವೃದ್ಧಿ ಆಗುವುದನ್ನು ಕಡಿಮೆಗೊಳಿಸಬಹುದು, ಮೆಕ್ಕೆಜೋಳ ಬೆಳೆಯುವ ಪ್ರದೇಶದಲ್ಲಿ ದ್ವಿದಳ ದಾನ್ಯ ಬೆಳೆಗಳಾದ ತೊಗರಿ ಹೆಸರು, ಉದ್ದುಗಳನ್ನು ಅಂತರಬೆಳೆಯಾಗಿ ಬೆಳೆಯಬಹುದು. ರೈತರಿಗೆ ಕೃಷಿ ಅಧಿಕಾರಿಗಳು ಶಿಫಾರಸ್ಸು ಮಾಡಿರುವ ಪ್ರಮಾಣದ ರಸಗೊಬ್ಬರ ಬಳಸುವುದರಿಂದ ಸೈನಿಕ ಹುಳು ಹಾವಳಿ ನಿಯಂತ್ರಿಸಬಹುದು.

ಹತೋಟಿ ಕ್ರಮಗಳು:  ಬೆಳೆಯ ಪ್ರಾರಂಭಿಕ ಹಂತದಲ್ಲಿ ಮೊಟ್ಟೆಯ ಗುಂಪುಗಳನ್ನು ಮತ್ತು ಮರಿ ಹುಳುಗಳನ್ನು ಗಿಡದ ಮೇಲೆ ಕಂಡಾಗ ಸಂಗ್ರಹಿಸಿ ನಾಶಪಡಿಸಬೇಕು. ಬೇವಿನ ಬೀಜದ ಕಶಾಯವನ್ನು ಶೇ 5 ರಂತೆ ಅಥವಾ ಬೇವಿನ ಮೂಲದ ಕೀಟನಾಶಕವಾದ ಅಜಾರಿಡಿಕ್ವಿನ್ 2 ಮಿ.ಲೀ 1 ಲೀ. ನೀರಿಗೆ ಮಿಶ್ರಣ ಮಾಡಿ, ಸುಳಿಯಲ್ಲಿ ಸಿಂಪರಣೆ ಮಾಡುವುದರಿಂದ ಮೊಟ್ಟೆ ಮತ್ತು ಮರಿ ಹುಳುಗಳ ಹಂತಗಳನ್ನು ನಾಶಪಡಿಸಬಹುದು. ಬೆಳೆಯು 15 ರಿಂದ 30 ದಿನ ಪ್ರಾರಂಭಿಕ ಹಂತದಲ್ಲಿ ಪರತಂತ್ರ ಕೀಟವಾದ ಟ್ರೈಕೊಗ್ರಾಮಾವನ್ನು ಪ್ರತಿ ಎಕರೆಗೆ 50,000 ರಂತೆ 15 ದಿನಗಳ ಅಂತರದಲ್ಲಿ ಎರಡು ಸಲ ಬಿಡುಗಡೆ ಮಾಡಬೇಕು, ಜೈವಿಕ ಶಿಲೀಂದ್ರವಾದ ಮಟಾರೈಜಿಯಂರಿಲೇಯನ್ನು 2 ರಿಂದ 3 ಗ್ರಾಂ 01 ಲೀ. ನೀರಿಗೆ ಬೆರಸಿ ಸಿಂಪಡಿಸಬೇಕು.

ಎಕರೆಗೆ 5-6 ಫರ್ಗುಲ್ಯೂರ್ ಒಳಗೊಂಡ ಮೋಹಕ ಬಲೆಗಳನ್ನು ಅಳವಡಿಸುವುದರಿಂದ ಪತಂಗಗಳನ್ನು ಆಕರ್ಷಿಸಬಹುದು. ಈ ಎಲ್ಲಾ ಕ್ರಮಗಳಿಂದ ಮೆಕ್ಕೆಜೋಳ ಬೆಳೆಯನ್ನು ಸೈನಿಕ ಹುಳು ಬಾದೆಯಿಂದ ನಿಯಂತ್ರಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.