-ಚಳ್ಳಕೆರೆ ವೀರೇಶ್.

ಪಾರಂಪರಿಕವಾಗಿ ಬಂದ ಕೃಷಿ, ಚಿಕ್ಕಂದಿನಿಂದ ಶಾಲೆ ನೋಡದ ವ್ಯಕ್ತಿ, ತಂದೆಯ ಕೃಷಿ ಬದುಕಿನಲ್ಲೇ ತಮ್ಮ ಜೀನವನ್ನ ಸವಿಸಿ, ತಂದೆಯ ನಂತರವೂ ಅಂಗೈಯಗಲದ ಭೂಮಿಯಿಂದಲೇ ಯಶಸ್ಸು ಕಾಣುತ್ತಾ, ತಮ್ಮ ಜೀವನ ನಡೆಸುವ ಪರಿಪಾಠ. ಕಳೆದ ಐದು ವರ್ಷಗಳ ಹಿಂದೆ ಬರಕ್ಕೆ ತುತ್ತಾದ ರೈತ ಕೃಷಿಯೇ ಬೇಡವೆಂದು ವಲಸೆ ಹೋಗಿ, ಮತ್ತೆ ತರಕಾರಿ, ಸೊಪ್ಪು ಬೆಳೆದು ಅಕ್ಕಪಕ್ಕದ ರೈತರಿಗೆ ಮಾದರಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿಗೆ ಸುಮಾರು ೩ ಕಿ.ಮೀ ದೂರದ ಪಂಪ್ ಹೌಸ್ ರಸ್ತೆಯ ಸಿಂಪಣ್ಣನ ಯಶಸ್ಸಿ ಕೃಷಿಯ ಬದುಕು ಕಂಡ ರೈತ. ದಿನಕ್ಕೆ ೮೦೦ ರೂ ನಿಂದ ೧೦೦೦ ರೂ ಹಣ ಗಳಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ.

ಬೆಳೆ ಏನು :- ಐದು ಎಕರೆ ಜಮೀನಿದೆ ಆದರೆ ನೀರಿನ ಕೊರತೆಯಿಂದ ಅದರನ್ನು ಹಾಗೇ ಬಿಟ್ಟು ಕೇವಲ ಮುಕ್ಕಾಲು ಎಕರೆ ಜಾಗವನ್ನು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಒಂದು ಕೊಳವೆ ಬಾವಿಯಲ್ಲಿ ಅರ್ಥ ಇಂಚು ನೀರು ಬರುತ್ತಿದೆ. ಆ ನೀರನ್ನು ಬಳಸಿ ಕೃಷಿ ಮಾಡುವುದು ಹೇಗೆ ಎಂಬುವುದನ್ನು ಸ್ನೇಹಿತರಾದ ಮಾಸ್ಟರ್ ಈರಣ್ಣ ಮತ್ತು ಎಚ್.ಮಹಲಿಂಗಪ್ಪರ ಸಲಹೆಯಂತೆ ತರಕಾರಿ ಬೆಳೆಯಲು ತಿಳಿಸಿದರು. ಮೂಕ್ಕಾಲು ಎಕರೆ ಜಾಗದಲ್ಲಿ ಅವರೆ, ಬೆಂಡೆ, ಜವಳಿ, ಫಲಕ, ಮೆಂಥೆ, ಸಬ್ಬಾಕ್ಷಿ, ಈರೆಕಾಯಿ, ಆಗಲ ಹೀಗೆ ತರಹೇವಾರಿ ಬೆಳೆಯಲು ಪ್ರಾರಂಭಿಸಿ ಈಗ ಕೈತುಂಬಾ ಹಣ ನೋಡುತ್ತಿದ್ದಾರೆ. ವರ್ಷದ ಎಲ್ಲಾ ದಿನಗಳಲ್ಲೂ ಬೆಳೆಯನ್ನು ನೋಡುವ ಈ ರೈತ ಕಳೆದ ಎರಡು ವರ್ಷಗಳಿಂದ ನಷ್ಟವನ್ನೇ ಕಂಡಿಲ್ಲ.

ಪ್ರಸ್ತುತ ಬೆಳೆ :- ಕಳೆದ ಮೂರು ತಿಂಗಳ ಹಿಂದೆ ಫಲಕ, ಮೆಂಥೆ, ಸಬ್ಬಾಕ್ಷಿ, ಈರೆಕಾಯಿ ಬೆಳೆಯನ್ನು ಬೆಳೆದು ಹಣ ಗಳಿಸಿದ ರೈತ ಸಿಂಪಣ್ಣ. ಪ್ರಸ್ತುತ ಕಲ್ಯಾಣ್ ಎಫ್೧ ಹೈಬ್ರಿಡ್ ತಳಿಯ ಬೆಂಡೆ, ಜವಳಿ ಕಾಯಿ ಬೆಳೆ ಹಾಕಿದ್ದಾರೆ. ದಿನಪ್ರತಿ ೧೦ ರಿಂದ ೧೫ ಕೆ.ಜಿಯವರೆಗೂ ಮಾರುಕಟ್ಟೆಗೆ ಹಾಕುತ್ತಿದ್ದಾರೆ. ವಾರಕ್ಕೆ ೭೦ ಕೆಜಿ, ಬೆಂಡೆ, ೩೦ ಕೆ.ಜಿ ಜವಳಿ ಬೆಳೆ ಮಾರುಕಟ್ಟೆಯ ಕಿರಿಕಿರಿ ಇಲ್ಲದೆ ಸುಲಭವಾಗಿ ಹಣ ಗಳಿಕೆಯಲ್ಲಿ ತೊಡಗಿದ್ದಾರೆ.

ಯಾವಾಗ ನಾಟಿ :- ಸ್ಥಳೀಯ ಅಂಗಡಿಯಲ್ಲಿ ಸುಮಾರು ಒಂದೂವರೆ ಕೆ.ಜಿಗೆ ೪೦೦ ರೂನಂತೆ ಬೀಜ ಖರೀದಿಸಲಾಯಿತು. ಕಳೆದ ಏಪ್ರೀಲ್ ತಿಂಗಳಲ್ಲಿ ಜವಳಿ, ಬೆಂಡೆ ಮುಕ್ಕಾಲು ಎಕರೆಗೆ ಬಿತ್ತನೆ ಮಾಡಿದರು. ಐದು ತಿಂಗಳ ಬೆಳೆಯಾಗಿದ್ದು, ಮೂರು ತಿಂಗಳಲ್ಲಿ ಹಾಕಿದ ಬಂಡವಾಳ ಕೈಸೇರಿದೆ ಎನ್ನುವುದು ಅವರ ಮಾತು.
ಭೂಮಿ ತಯಾರಿ ಹೇಗೆ :- ಭೂಮಿಗೆ ಭಿನ್ನವಾದ ಬೆಳೆಯನ್ನು ಹಾಕುವುದರಿಂದ ಕೃಷಿಯಲ್ಲಿ ಹೆಚ್ಚಿನ ಲಾಭಗಳಿಕೆ ಸಾಧ್ಯ ಎಂಬುವುದು ಇವರ ನಂಬಿಕೆ. ಒಮ್ಮೆ ಹಾಕಿದ ಬೆಳೆ ಮತ್ತೆ ಹಾಕಲಾರ ಈ ರೈತ ಸಿಂಪಣ್ಣ. ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರವನ್ನು ನಾಟಿ ಮಾಡುವ ಮುನ್ನ ಭೂಮಿಗೆ ಹಾಕಿ ಮೂರು ದಿನಗಳು ನೀರು ಹಾಯಿಸುತ್ತಾರೆ. ರೋಟವೇಟರ್‌ನಲ್ಲಿ ಮಿಕ್ಸ್ ಮಾಡಿ, ಸಾಲು ಹೊಡೆದು ದಿನಬಿಟ್ಟು ವಾರದ ಕಾಲ ನೀರು ಹಾಕಿ ನಂತರ ಬೀಜ ನಾಟಿ ಮಾಡಲಾಗುತ್ತದೆ. ೧೫ ದಿನಗಳ ನಂತರ ಗಿಡದ ಬುಡಕ್ಕೆ ಡಿಎಪಿ ಗೊಬ್ಬರ ನೀಡಲಾಗಿದೆ. ನಂತರ ಎರಡು ದಿನಗಳಿಗೊಮ್ಮೆ ಬೆಳಗ್ಗೆ ಸಂಜೆ ನೀರು ಹಾಯಿಸುವುದು ಬಿಟ್ಟರೆ ಬೇರೆ ಏನೂ ಮಾಡಬೇಕಾಗಿಲ್ಲ. ಮೂರು ತಿಂಗಳಲ್ಲಿ ಎರಡು ಬಾರಿ ಔಷಧಿಯನ್ನು ಸಿಂಪಡಣೆ ಮಾಡಿದ್ದು, ಯಾವುದೇ ರೋಗವಿಲ್ಲದೆ ಗಿಡಗಳು ಸಮೃದ್ಧಿಯಾಗಿ ಕಾಯಿ ನೀಡುತ್ತಿವೆ.

ಖರ್ಚು ವೆಚ್ಚ :- ಎರಡು ಬೆಳೆಯನ್ನು ಮಿಶ್ರ ಬೆಳೆಯನ್ನಾಗಿ ಮಾಡಿದ್ದು, ಒಂದಲ್ಲಾ ಒಂದು ಲಾಭ ನೀಡಲಿದೆ. ಎರಡು ಬೆಳೆಯ ಬೀಜಕ್ಕೆ ಸುಮಾರು ಒಂದು ಸಾವಿರ ರೂ, ಕೊಟ್ಟಿಗೆ, ರಾಸಾಯನಿಕ ಗೊಬ್ಬರಕ್ಕೆ ಸುಮಾರು ೮ ಸಾವಿರ ಖರ್ಚು ಬಂದಿದೆ. ಮನೆಯ ಮೂರು ಮಂದಿಯೂ ತೋಟದ ಕೆಲಸ ಮಾಡುವುದರಿಂದ ಕೂಲಿ ಕಾರ್ಮಿಕ ಖರ್ಚು ಬಂದಿಲ್ಲ. ೧೦ ರಿಂದ ೧೫ ಸಾವಿರ ಖರ್ಚು ಬಂದಿದ್ದು, ಈಗಾಗಲೇ ೧೮ ಸಾವಿರ ರೂಪಾಯಿ ಹಣ ಕೈ ಸೇರಿದೆ. ಇನ್ನೂ ಎರಡು ತಿಂಗಳು ಬೆಳೆ ನೀಡುವ ನಿರೀಕ್ಷೆ ಇದ್ದು ಸುಮಾರು ೧೦ ಸಾವಿರ ಹಣ ಪಡೆಯುವ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ಸಿಂಪಣ್ಣ. ಮಾಹಿತಿಗಾಗಿ 90082 97022 ಸಂಪರ್ಕಿಸಬಹುದು.