ಚಿತ್ರದುರ್ಗ: ಮಳೆ ನೀರು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಭೂಮಿಯಲ್ಲಿ ಇಂಗಿಸಿ ಬರಗಾಲದ ವಿರುದ್ದ ಸಮರ್ಥವಾಗಿ ಹೋರಾಡಲು ರೈತರ ಜೊತೆ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತೀಶ್‌ಪಾಟೀಲ್ ಜಲಧೂತರಿಗೆ ಕರೆ ನೀಡಿದರು.
ನಬಾರ್ಡ್, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಸಮಾವೇಶ ಹಾಗೂ ಕೃಷಿ ಜಲಧೂತರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ರೈತರು ಚೆಕ್‌ಡ್ಯಾಂ, ಕೃಷಿ ಹೊಂಡ, ಬದುಗಳನ್ನು ನಿರ್ಮಿಸಿಕೊಂಡರೆ ಮಳೆ ಬಾರದಿದ್ದರೂ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು. ಮಳೆ ನೀರು ಹರಿದು ಸಮುದ್ರ ಸೇರುವುದರಿಂದ ಯಾವುದೇ ಪ್ರಯೋಜನವಿಲ್ಲ. ಮಳೆ ನೀರು ಸಂರಕ್ಷಣೆಗಾಗಿ ವಾಟರ್‌ಶೆಡ್‌ನಿಂದ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಮಳೆ ನೀರು ಶೇಖರಣೆಗೆ ನರೇಗಾದಿಂದ ೨೨ ಕೋಟಿ ರೂ.ಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು. ಹಾಗಾಗಿ ೭೦ ಜಲಧೂತರು ಜಿಲ್ಲಾದ್ಯಂತ ಸುತ್ತಾಡಿ ಹನಿ ನೀರಿನ ಮಹತ್ವವನ್ನು ರೈತರು ಹಾಗೂ ಜನತೆಗೆ ತಿಳಿಸುವ ಮಹತ್ವದ ಕೆಲಸ ಮಾಡಬೇಕು ಎಂದು ಹೇಳಿದರು.
ಭಾರತ ಶೇ.೫೦ ರಷ್ಟು ಕೃಷಿಯ ಮೇಲೆ ನಿಂತಿದೆ. ಸಮಯಕ್ಕೆ ಸರಿಯಾಗಿ ನಿರೀಕ್ಷಿಸಿದಷ್ಟು ಮಳೆ ಬೆಳೆ ಇಲ್ಲದ ಕಾರಣ ಚಿತ್ರದುರ್ಗ ಜಿಲ್ಲೆಯಲ್ಲಿ ಬರಗಾಲ ಎದುರಾಗಿದೆ. ಎಲ್ಲಾ ಬ್ಯಾಂಕುಗಳಲ್ಲಿಯೂ ಶೇ.೧೮ ರಷ್ಟು ಕೃಷಿಗೆ ಸಾಲ ನೀಡಬೇಕು. ಜಮೀನಿನ ಫಲವತ್ತತೆ ಕಾಪಾಡುವಲ್ಲಿ ಜಲಾನಯನ ಹಾಗೂ ಕೃಷಿ ಇಲಾಖೆಯ ಪಾತ್ರ ಹೆಚ್ಚಾಗಿರಬೇಕು. ಆರು ವಾರ ಮಳೆ ಬರದಿದ್ದರೂ ಹಿಂದೆ ಬಂದ ಮಳೆಯ ನೀರನ್ನು ಸಂಗ್ರಹಿಸಿ ಬೆಳೆಗಳನ್ನು ಉಳಿಸಿಕೊಳ್ಳುವ ಜಾಗೃತಿಯನ್ನು ರೈತರಲ್ಲಿ ಜಲಧೂತರು ಮೂಡಿಸಬೇಕು ಎಂದರು.
ಪ್ರತಿ ಗ್ರಾಮದಲ್ಲಿಯೂ ಜನರು ದೇವಸ್ಥಾನ, ಸಮುದಾಯ ಭವನಗಳನ್ನು ಕೇಳುವ ಬದಲು ಚೆಕ್‌ಡ್ಯಾಂ ಕೇಳಿ ನಿರ್ಮಿಸಿಕೊಂಡರೆ ಬರಗಾಲವೆಂಬುದೇ ಇರುವುದಿಲ್ಲ.
ಅಪರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು
ನಬಾರ್ಡ್‌ನ ಡಿ.ಡಿ.ಎಂ.ಮಾಲಿನಿಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಮಳವಳ್ಳಿ, ಕೃಷಿ ಜಂಟಿ ನಿರ್ದೇಶಕ ಲಕ್ಷ್ಮಣ್, ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಷರೀಫ್, ಮಂಜುನಾಥ್, ಸಂಪನ್ಮೂಲ ವ್ಯಕ್ತಿ ಎಸ್.ಆರ್.ಸಂತೋಷ್ ವೇದಿಕೆಯಲ್ಲಿದ್ದರು.
ಸ್ವೀಚ್ ಸಂಸ್ಥೆ ಕಾರ್ಯದರ್ಶಿ ತರಬೇತುದಾರ ಹೆಚ್.ಶೇಷಣ್ಣ, ಟ್ರೈನರ್ ಬಿ.ಬೈಲಪ್ಪ ಜಲಧೂತರಿಗೆ ತರಬೇತಿ ನೀಡಿದರು.