ಸಂಬಂಧ, ವಿಶ್ವಾಸ ಮತ್ತು ಒಡನಾಟ ಅನೇಕ ಸಾರಿ ಮುರಿದು ಬೀಳುತ್ತವೆ ಆದರೆ ಮಣ್ಣಿನೊಂದಿಗಿನ ಒಡನಾಟ ಅಂತದ್ದಲ್ಲ ನಾವು ಎಷ್ಟೇ ದೂರ ಕ್ರಮಿಸಿ, ಎಷ್ಟು ಎತ್ತರ ಬೆಳೆದರೂ ಮಣ್ಣಿನೊಂದಿಗಿನ ಒಡನಾಟ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿಯ ಯುವ ಕೃಷಿಕ ದಿನೇಶ್ ಸಾಕ್ಷಿ.

ದಿನೇಶ್ ಬಿ.ಎ ಪದವಿದರರು, ಕೃಷಿ ಹಿನ್ನೆಲೆಯಿಂದಲೇ ಬೆಳೆದವರು. ಇವರ ತಂದೆಗೆ ಸಾಕಷ್ಟು ಜಮೀನಿತ್ತು ಆದರೆ ಕಳೆದು ಹೋದ ಮಣ್ಣಿನ ಫಲವತ್ತತೆ, ಸಕಾಲದಲ್ಲಿ ಸರಿಯಾಗಿ ಬಾರದ ಮಳೆ ಹಾಗೂ ಎಂದೂ ದೊರಕದ ನ್ಯಾಯವಾದ ಬೆಳೆಯಿಂದ ಬೇಸತ್ತ ಅವರು ನನ್ನ ಮಕ್ಕಳೂ ಸಹ ಈ ಜಂಜಾಟದಲ್ಲಿ ಸಿಲುಕಿ ನೋವು ಅನುಭವಿಸಬಾರದು ಎಂದು ನಿರ್ಧರಿಸಿ ತಮ್ಮ ಕೃಷಿ ಭೂಮಿಯನ್ನೇ ಮಾರಾಟ ಮಾಡಿ ಬಿಟ್ಟರು. ಅಂದಿಗೆ ಕೃಷಿಯಿಂದಲೇ ಬದುಕು ಕಟ್ಟಿಕೊಂಡಿದ್ದ ಒಂದು ಕೃಷಿ ಕುಟುಂಬ ಮಣ್ಣಿನೊಂದಿಗಿನ ಸಂಬಂಧವನ್ನೇ ಕಡಿದುಕೊಂಡಿತು.

ಬಾಲ್ಯದ ದಿವಸಗಳನ್ನು ಹೊಲದ ಹತ್ತಾರು ಕೆಲಸಗಳೊಂದಿಗೆ ಕಳೆದು ಅದರಲ್ಲಿಯೇ ಸಂತೃಪ್ತಿ ಕಂಡು ಕೊಂಡಿದ್ದ ದಿನೇಶ್ ಗೆ ಇದು ನೋವ್ವುಂಟು ಮಾಡಿತಾದರೂ ಅಪ್ಪನ ನಿರ್ಧಾರವನ್ನು ಬದಲಿಸುವಷ್ಟು ಶಕ್ತಿ ಅವರಿಗೆ ಇರಲಿಲ್ಲ. ಆಧಾಗ್ಯಾ ಮುಂದೆ ಎಂದಾದರೂ ಒಂದು ದಿವಸ ನಾನು ಹೊಲದೊಡೆಯನಾಗಬೇಕು ಎಂಬ ಆಸೆಯನ್ನು ತನ್ನ ಮನದಲ್ಲಿ ಜೀವಂತವಾಗಿರಿಸಿಕೊಂಡಿದ್ದರು ದಿನೇಶ್.

 

ಕೃಷಿಯನ್ನು ಕೈಬಿಟ್ಟ ನಂತರ ದಿನೇಶ್ ಅವರ ಕುಟುಂಬದ ದೋಣಿ ಸಾಗಿದ್ದು ಒಂದು ಗೂಡಂಗಡಿಯಿಂದ. ಅಪ್ಪ ಮತ್ತು ಅಮ್ಮನ ಬದ್ಧತೆಯಿಂದಾಗಿ ಮಕ್ಕಳೆಲ್ಲರೂ ಪದವಿಧರರಾದರು ಮನೆಯ ಅಭಿವೃದ್ಧಿಯೂ ಆಯಿತು. ಮುಂದಿನ ದಿವಸಗಳಲ್ಲಿ ಗೂಡಂಗಡಿ ಅಂಗಡಿಯಾಗಿ ಪರಿವರ್ತನೆಯಾಯ್ತು. ಈ ಹೊತ್ತಿಗೆ ಒಂದು ವಾಹನದ ಮಾಲಿಕ ಹಾಗೂ ಚಾಲಕನೂ ಆಗಿದ್ದ ದಿನೇಶ್ ವಾಹನಕ್ಕೆ ಬಂದ ಬಾಡಿಗೆಯ ಸಲುವಾಗಿ ಮಲೆನಾಡಿಗೆ ಹೋಗಬೇಕಾಯ್ತು ಅಲ್ಲಿನ ಹಸಿರು, ಮಳೆ, ಕಾಡು, ಕಾಫಿ, ಏಲಕ್ಕಿ, ಬಾಳೆ, ಅಡಿಕೆ ತೋಟಗಳಿಗೆ ಮನಸೋತ ದಿನೇಶ್ ತನ್ನೂರಿನಲ್ಲಿಯೂ ತನ್ನದೇ ಒಂದು ಇಂತಹ ತೋಟವಿದ್ದರೆ ಎಷ್ಟು ಚನ್ನ ಎಂದು ಮನದಲ್ಲಿ ಮೂಡಿದ ಭಾವನೆಯನ್ನು ಹಂತ ಹಂತವಾಗಿ ಅನುಷ್ಟಾನಗೊಳಿಸಲು ಮುಂದಾದರು.

 

ಮಾಡಬೇಕೆಂಬ ಆಸೆಯೇನೋ ಇದೆ ಆದರೆ ಭೂಮಿ ಇಲ್ಲವಲ್ಲ ಎಂದು ಅವರು ಸುಮ್ಮನೆ ಕೂರಲಿಲ್ಲ. ಕೃಷಿ ಲಾಭದಾಯಕವಲ್ಲ ಎಂಬ ಕಾಲದಲ್ಲಿಯೂ ಭೂಮಿ ಕೊಳ್ಳಲು ಮುಂದಾದರು. ಅದಕ್ಕಾಗಿ ಬ್ಯಾಂಕಿನಲ್ಲಿ ಸಾಲ ಮಾಡಿದರು. ಹೀಗೆ ಬ್ಯಾಂಕಿನ ಸಹಾಯದಿಂದ ಭೂಮಾಲಿಕರಾದ ದಿನೇಶ್ ಇಂದು ಬರೋಬ್ಬರಿ 20 ಎಕರೆ ಭೂಮಿಯ ಒಡೆಯ. ಸಾಕಷ್ಟು ಸಾಲ ಮಾಡಿ ಭೂಮಿಕೊಂಡ ಮೇಲೆ ಭೂಮಿಯೊಂದಿಗಿನ ಬದುಕು ಸುಲಭವೇನೂ ಆಗಿರಲಿಲ್ಲ. ಎರಡೇ ವರ್ಷದಲ್ಲಿ ಕೊಳವೆ ಬಾಯಿ ಬತ್ತಿ ಹೋಯ್ತು. ಆತ್ಮ ವಿಶ್ವಾಸದಿಂದ ಬೆಳೆದ ಬಾಳೆ, ಈರುಳ್ಳಿ ಹಾಗೂ ಶೇಂಗಾ ಬೆಳೆಗಳು ಕೈತುಂಬಾ ಹಣ ತಂದು ಕೊಂಡಲಿಲ್ಲ. ಈ ಎಲ್ಲ ವಿದ್ಯಮಾನಗಳಿಂದ ವಿಚಲಿತರಾಗದ ದಿನೇಶ್ ಕೃಷಿಯಲ್ಲಿ ಗೆಲ್ಲಲೇ ಬೇಕೆಂದರೆ ನಾನು ಏನೆಲ್ಲ ಮಾಡಬಹುದು ಎಂಬುದನ್ನು ಯೋಚಿಸಿಕೊಂಡು ಮತ್ತೆ ಮಣ್ಣಿಗಿಳಿದರು.

 

ತಮ್ಮ ಎರಡನೇ ಇನಿಂಗ್ಸ್ ನಲ್ಲಿ ರಾಸಾಯನಿಕ ಗೊಬ್ಬರಗಳಿಗೆ ಗುಡ್ ಬೈ ಹೇಳಲಾಯಿತು. ಸಾವಯವ ಕೃಷಿಗೆ ಒತ್ತು ನೀಡಲಾಯ್ತು. ಇದಕ್ಕೆ ಬೇಕಾದ ಪೂರಕ ತಯಾರಿಗಳನ್ನು ಸಹ ದಿನೇಶ್ ಮಾಡಿಕೊಂಡರು. ಬತ್ತಿ ಹೋಗಿದ್ದ ಕೊಳವೆ ಬಾವಿಯನ್ನು ಮರುಪೂರಣ ಮಾಡಲು ತಯಾರಿಯನ್ನು ಮಾಡಿಕೊಳ್ಳಲಾಯ್ತು. ಖಾಲಿ ಇದ್ದ ಕೊಟ್ಟಿಗೆಗಳಿಗೆ ಹಸು ತಂದು ಕಟ್ಟಲಾಯ್ತು. ಅದರೊಂದಿಗೆ ಒಂದಷ್ಟು ಕುರಿ ಆಡು ಮತ್ತು ಕೋಳಿ ಹೀಗೆ ಕೃಷಿ “ಸಮಗ್ರ ಕೃಷಿಯಾಯ್ತು” ಅಲ್ಲಿಂದಲೇ ನನ್ನ ಕೃಷಿ ಗೆಲುವಿನತ್ತ ಮುನ್ನಡೆಯಿತು ಎನ್ನುತ್ತಾರೆ ದಿನೇಶ್.

 

ಈ ಎಲ್ಲ ದುರಸ್ಥಿಗೆ ಅಗತ್ಯವಿದ್ದ ಪೂರ್ಣ ಹಣವನ್ನು ದಿನೇಶ್ ತನ್ನ ಜೇಬಿನಿಂದಲೇ ಹಾಕಲಿಲ್ಲ ಇದಕ್ಕಾಗಿ ಎಂತಲೇ ಇಲಾಖೆಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳಿವೆ. ನೀರು ಹರಿಯುವ ಜಾಗ ತೋರಿಸಿದೆ, ಇಲಾಖೆಯವರು ಚೆಕ್ ಡ್ಯಾಂ ಕಟ್ಟಿಕೊಟ್ಟರು ಇದರಿಂದಾಗಿಯೇ ನನ್ನ ಕೊಳವೆ ಬಾವಿ ಮತ್ತೆ ಜೀವ ತಳೆಯಿತು ಎನ್ನುತ್ತಾರೆ ಅವರು. ಅರಣ್ಯ ಇಲಾಖೆಯಲ್ಲಿ ಸಸಿ ಕೊಟ್ಟರು ನಾನು ಅದನ್ನು ತಂದು ನೆಟ್ಟು ನೀರು ಹಾಕಿದೆ ಅವು ಇಂದು ನೆರಳಾಗಿವೆ. ನಾನೇ ಕಟ್ಟಿದ ಹಸು, ಕರು, ಕುರಿ ಮತ್ತು ಕೋಳಿ ಸಾಕಷ್ಟು ತ್ಯಾಜ್ಯ ಉತ್ಪಾದಿಸುತ್ತವೆ ಅದನ್ನು ಸದ್ಭಳಕೆ ಮಾಡುವಂತಹ ಜೈವಿಕ ಅನಿಲ ಘಟಕ ಹಾಗೂ ಎರೆಹುಳು ಗೊಬ್ಬರ ತಯಾರಿಸುವ ಘಟಕವನ್ನು ಇಲಾಖೆಯವರೇ ಕಟ್ಟಿಸಿಕೊಟ್ಟಿದ್ದಾರೆ ಈ ಎಲ್ಲ ನೆರವಿನಿಂದಾಗಿ ನಾನು ಕೃಷಿಕನಾಗಿ ಪುನಹ ಗೆದ್ದೆ ಎನ್ನುತ್ತಾರೆ ದಿನೇಶ್.

 

ಆರಂಭದಲ್ಲಿ ಎದುರಾದ ಸೋಲಿನಿಂದ ನಾನು ಕಂಗೆಟ್ಟಿದ್ದರೆ ನಾನು ಕೃಷಿಕನಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ ನನ್ನನ್ನು ಕೃಷಿಕನಾಗಿ ಇದುವರೆಗೂ ಉಳಿಸಿದ್ದು ನನ್ನ ತಾಳ್ಮೆ. ಪ್ರತಿ ಕೃಷಿಕನಿಗೂ ತಾಳ್ಮೆ ಇರಬೇಕು ಅದೇ ಕೃಷಿಕನ ಯಶಸ್ಸಿನ ಗುಟ್ಟು ಎಂಬುದು ದಿನೇಶ್ ಅವರ ಸ್ಪಷ್ಟ ಅಭಿಪ್ರಾಯ.

 

ಅರಣ್ಯ ಕೃಷಿಯತ್ತ ವಾಲಿರುವ ದಿನೇಶ್ ಇದೀಗ ಶ್ರೀಗಂಧದ ಬೆಳೆ ಮಾಡಿದ್ದಾರೆ. ಸುಮಾರು 4000 ಸಾವಿರ ಗಿಡಗಳನ್ನು ನಾಟಿ ಮಾಡಿದ್ದಾರೆ. ನನ್ನ ಇತರೆ ವ್ಯವಹಾರಗಳ ನಡುವೆಯೂ ಕೃಷಿ ಮಾಡಬೇಕು ಎಂಬ ಉದ್ದೇಶದಿಂದ ಕಡಿಮೆ ನೀರು, ನಿರ್ವಹಣೆ, ಕಾಳಜಿ ಬೇಡುವ ಶ್ರೀಗಂಧವನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನೆ ಇದು ನನ್ನ ಇಳಿಗಾಲದ ವೇಳೆಗೆ ನನ್ನ ಕೈ ಹಿಡಿಯಲಿದೆ ಎಂಬುದು ದಿನೇಶ್ ಅವರ ನಂಬಿಕೆ.

  • ಅರಕಲಗೂಡು ವಿ. ಮಧುಸೂದನ್