ಚಿತ್ರದುರ್ಗ: ಕೃಷಿ ಇಲಾಖೆಯಿಂದ ಪ್ರತಿ ವರ್ಷ ಬೆಳೆ ಕಟಾವು ಪರೀಕ್ಷೆ ನಡೆಸಲಾಗುತ್ತದೆ. ಆದರೆ ಈ ವರ್ಷದಿಂದ ಬೆಳೆ ಕಟಾವು ಪರೀಕ್ಷೆಗೆ ಟ್ಯಾಬ್ ಬಳಕೆ ಮಾಡಲಾಗುತ್ತಿದ್ದು ಇದರಿಂದ ಮಾಹಿತಿಯ ನಿಖರತೆ ಹೆಚ್ಚಿದೆ ಎಂದು ಕೃಷಿ ಸಚಿವರಾದ ಕೃಷ್ಣಬೈರೇಗೌಡ ತಿಳಿಸಿದರು.
ಚಳ್ಳಕೆರೆ ತಾಲ್ಲೂಕಿನ ಕಾಟವ್ವನಹಳ್ಳಿಯಲ್ಲಿ ಹನುಮಂತಪ್ಪನವರ ಜಮೀನಿನಲ್ಲಿ ಶೇಂಗಾ ಬೆಳೆಯ ಇಳುವರಿ ಪರೀಕ್ಷೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೆಳೆ ಕಟಾವು ಪರೀಕ್ಷೆ ಮಾಡುವುದು ಇಲಾಖೆಯ ಒಂದು ಭಾಗವಾಗಿದ್ದು ಇದರಲ್ಲಿ ಈ ಹಿಂದಿನ ಪರೀಕ್ಷೆಗಳಲ್ಲಿ ನಿಖರತೆಯ ಬಗ್ಗೆ ಖಾತರಿ ಇರಲಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಲಾಗಿದೆಯೋ, ಯಾವ ರೈತರ ಜಮೀನಿನಲ್ಲಿ ಪರೀಕ್ಷೆ ಮಾಡಲಾಗಿದೆ ಮತ್ತು ಅದರ ಮಾಹಿತಿ ಆ ರೈತರಿಗೆ ಇತ್ತೊ, ಇಲ್ಲವೋ ಎಂದು ತಿಳಿದುಕೊಳ್ಳಲಾಗುತ್ತಿರಲಿಲ್ಲ. ಈ ಬಗ್ಗೆ ರೈತರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು. ಆದರೆ ಇನ್ನು ಮುಂದೆ ಎಲ್ಲಾ ಪ್ರಯೋಗವು ಟ್ಯಾಬ್ ಮತ್ತು ಆಪ್, ಜಿ.ಪಿ.ಎಸ್.ತಂತ್ರಜ್ಞಾನದಿಂದ ಪಾರದರ್ಶಕ ಹಾಗೂ ನಿಖರತೆಯಿಂದ ಕೂಡಿರುತ್ತದೆ ಎಂದರು.
ಅಂಕಿ ಸಂಖ್ಯಾ ಇಲಾಖೆಯಿಂದ ಬೆಳೆ ಕಟಾವು ಪ್ರಾತ್ಯಕ್ಷಿತೆಗಳನ್ನು ಏರ್ಪಡಿಸಿ ಅದರ ಮಾಹಿತಿಯನ್ನು ಸಂಗ್ರಹಿಸಿ ಕೃಷಿ, ಕಂದಾಯ ಇಲಾಖೆಯಿಂದ ಅಂಕಿ ಅಂಶಗಳನ್ನು ಪಡೆದು ಸರ್ಕಾರಕ್ಕೆ ಕಳುಹಿಸಲಾಗುತ್ತಿತ್ತು. ಇದು ಕನಿಷ್ಠ ನಾಲ್ಕು ತಿಂಗಳಾದರೂ ಆಗುತ್ತಿತ್ತು. ಆದರೆ ಆಪ್ ಮೂಲಕ ಟ್ಯಾಬ್‌ನಿಂದ ಬೆಳೆ ಪ್ರಾತ್ಯಾಕ್ಷಿತೆಗೆ ಆಯ್ಕೆಯಾಗಿರುವ ರೈತರ ಜಮೀನಿಗೆ ಹೋಗಿ ಟ್ಯಾಬ್‌ನಲ್ಲಿಯೇ ವೀಡಿಯೋ ಮತ್ತು ಛಾಯಾಚಿತ್ರಗಳನ್ನು ತೆಗೆದು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮತ್ತು ಟ್ಯಾಬ್‌ನಲ್ಲಿಯೇ ಆಯಾ ರೈತರ ಹೆಸರು, ಜರ್ವೆ ನಂಬರ್, ಬೆಳೆ ವಿಸ್ತೀರ್ಣ, ರೈತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಕಳುಹಿಸಿದರೆ ಸರ್ವರ್ ಮೂಲಕ ಸಿಸ್ಟಮ್‌ನಲ್ಲಿ ರೆಕಾರ್ಡ್ ಆಗಿರುತ್ತದೆ. ಮತ್ತು ಬೆಳೆ ಕಟಾವು ಸಮಯ ಬಂದಾಗ ಸಿಸ್ಟಮ್ ಮೂಲಕ ಆಯಾ ರೈತರಿಗೆ ಮೊಬೈಲ್ ಮೂಲಕ ಮೆಸೇಜ್ ಹೋಗುತ್ತದೆ. ಮತ್ತು ಒಂದು ಪಕ್ಷ ವ್ಯತ್ಯಾಸವಾದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೊಬೈಲ್‌ಗೆ ಸಂದೇಶ ಹೋಗುತ್ತದೆ ಎಂದರು.
ಟ್ಯಾಬ್‌ನಲ್ಲಿ ಆಪ್ ಬಳಸಿ ಪ್ರಾಯೋಗಿಕ ಪರೀಕ್ಷೆಯನ್ನು ಮಾಡುವಾಗ ಜಮೀನಿನ ವೀಡಿಯೋ, ಬೆಳೆಯ ವೀಡಿಯೋ, ರೈತರ ಪೋಟೊ, ಎಷ್ಟು ಇಳುವರಿ ಬಂತು ಎಂಬ ಎಲ್ಲಾ ವಿವರವನ್ನು ಟ್ಯಾಬ್‌ನಲ್ಲಿ ನಮೂದು ಮಾಡಿ ಕಳುಹಿಸಬೇಕು. ಎಲ್ಲಾ ವಿವರವನ್ನು ದಾಖಲು ಮಾಡುವುದರಿಂದ ನಂತರದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಾಗದು. ದೇಶದಲ್ಲಿಯೇ ರಾಜ್ಯದಲ್ಲಿ ಮೊಟ್ಟ ಮೊದಲ ಭಾರಿಗೆ ಬೆಳೆ ಕಟಾವು ಪ್ರಯೋಗವನ್ನು ಟ್ಯಾಬ್ ಮೂಲಕ ಆಪ್ ಬಳಕೆ ಮಾಡಿ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ಕೃಷಿ ಬೆಳೆ ವಿಮೆ ಇತ್ಯಾರ್ಥಕ್ಕೂ ಸಹಾಯವಾಗಲಿದೆ ಮತ್ತು ಸಮಯ ಉಳಿತಾಯ ಮತ್ತು ಪಾರದರ್ಶಕತೆ ಹೆಚ್ಚುತ್ತದೆ ಎಂದರು.
ಹಿಂದೆಂದೂ ಕಂಡರಿಯದ ಬರಗಾಲ ರಾಜ್ಯಕ್ಕೆ ಬಂದಿದ್ದು ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ ೨೭ ಬರ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಕೇಂದ್ರ ಅಧ್ಯಯನ ತಂಡ ಬಂದು ಹೋಗಿರುತ್ತದೆ. ರಾಜ್ಯದಲ್ಲಿ ೧೩೯ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದ್ದು ೧೨ ಸಾವಿರ ಕೋಟಿಗಿಂತಲೂ ಹೆಚ್ಚು ನಷ್ಟವಾಗಿದೆ. ಮಾರ್ಗಸೂಚಿಯನ್ವಯ ೩೩೭೦ ಕೋಟಿ ಬೆಳೆ ಪರಿಹಾರ ಮತ್ತು ೩೭೦ ಕೋಟಿ ಅತಿವೃಷ್ಟಿಯಾಗಿ ಬೆಳೆ ನಷ್ಟವಾದ ರೈತರ ಬೆಳೆಗಳಿಗೆ ಪರಿಹಾರ ನೀಡಲು ಮನವಿ ಮಾಡಲಾಗಿದೆ. ಪ್ರಸಕ್ತ ವರ್ಷ ದೇಶದ ಯಾವುದೇ ರಾಜ್ಯವು ಬೆಳೆ ನಷ್ಟದ ಸಮೀಕ್ಷೆ ವರದಿ ನೀಡಿರುವುದಿಲ್ಲ, ರಾಜ್ಯವು ಮೊದಲಿಗೆ ಜಂಟಿ ಸಮೀಕ್ಷಾ ವರದಿ ಸಲ್ಲಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ೩.೩೦ ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದ್ದು ಶೇ ೯೦ ರಷ್ಟು ನಷ್ಟವಾಗಿದೆ. ಬರುವ ನವಂಬರ್ ೧೦ ರೊಳಗಾಗಿ ಎಲ್ಲಾ ಜಿಲ್ಲೆಗಳಿಂದ ಅಂತಿಮ ವರದಿ ನೀಡಲು ಗಡುವು ನೀಡಲಾಗಿದೆ ಎಂದರು.
ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಗೆ ೬೮ ಕೋಟಿ ಇನ್‌ಪುಟ್ ಸಬ್ಸಿಡಿ ನೀಡಲಾಗಿದ್ದು ಹಿಂದೆ ಯಾವಾಗಲೂ ಇಷ್ಟು ಮೊತ್ತದ ಸಬ್ಸಿಡಿ ನೀಡಲಾಗಿರಲಿಲ್ಲ. ಕಳೆದ ವರ್ಷ ಇನ್‌ಪುಟ್ ಸಬ್ಸಿಡಿ ನೀಡುವಾಗ ಲೋಪದೋಷಗಳು ಉಂಟಾಗಿದ್ದು ಈ ವರ್ಷ ಸಮೀಕ್ಷೆಯಲ್ಲಿ ಸುಧಾರಣೆ ತರಲಾಗಿದೆ. ಈ ವರ್ಷ ಪರಿಹಾರ ನೀಡುವುದಕ್ಕಿಂತಲೂ ಮೊದಲೇ ಸಮೀಕ್ಷೆ ನಡೆಸಲಾಗಿದೆ. ಆದರೂ ಸಹ ಕೆಲವು ಸಣ್ಣಪುಟ್ಟ ಲೋಪದೋಷಗಳಿದ್ದು ಸರಿಪಡಿಸಲು ಸೂಚಿಸಲಾಗಿದೆ ಎಂದರು.
ಸಚಿವರು ಶೇಂಗಾ, ತೊಗರಿ ಬೆಳೆನಷ್ಟದ ಬಗ್ಗೆ ಚಳ್ಳಕೆರೆ ತಾಲ್ಲೂಕಿನ ಬುಡ್ನಹಟ್ಟಿ, ಸಾಣೆಕೆರೆ ಮತ್ತು ವಿವಿಧ ಕಡೆ ವೀಕ್ಷಣೆ ಮಾಡಿದರು.
ಮೊಳಕಾಲ್ಮುರು ಶಾಸಕರಾದ ಎಸ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತ್ ಸದಸ್ಯೆ ಶಶಿರೇಖಾ ಹೆಚ್.ಪಿ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್, ಉಪನಿರ್ದೇಶಕಿ ಡಾ; ಮಮತ, ತಹಶೀಲ್ದಾರ್ ಶ್ರೀಧರ್‌ಮೂರ್ತಿ ಪಂಡಿತ್ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.