ಭಾರತೀಯ ಕೃಷಿ ಎಂದಾಕ್ಷಣ ಎಲ್ಲರ ಮನದಲ್ಲಿಯೂ ಮೊಟ್ಟ ಮೊದಲಿಗೆ ಮೂಡಿಬರುವ ಚಿಂತನೆ “ಅದೊಂದು ಸಮಸ್ಯೆಗಳ ಸಾಗರ” ಎನ್ನುವಂತದ್ದು ಇದು ಸುಳ್ಳೇನೂ ಅಲ್ಲ. ಪ್ರಕೃತಿ, ಸಮಾಜ, ಮಾರುಕಟ್ಟೆ ಹಾಗೂ ಇನ್ನೂ ಮುಂತಾದ ವ್ಯವಸ್ಥೆಗಳೊಂದಿಗೆ ಸದಾ ಹೋರಾಡುವ ಕೃಷಿಕ ನಿರೀಕ್ಷಿತ ಹಾಗೂ ಅನಿರೀಕ್ಷಿತ ಸಮಸ್ಯೆಗಳನ್ನು ತನ್ನ ವೃತ್ತಿಯುದ್ದಕ್ಕೂ ಎದುರಿಸಬೇಕಾಗಿ ಬಂದಿರುವುದು ಅನಿವಾರ್ಯ. ಕೃಷಿಯಲ್ಲಿ ಸಮಸ್ಯೆಗಳು ಹೇಗೆ ಹೇರಳವಾಗಿವೆಯೋ, ಅದಕ್ಕೆ ಪರಿಹಾರ ಕೂಡಾ ಅಪರಿಮಿತವಾಗಿವೆ. ಸಮಸ್ಯೆಗಳನ್ನು ಸ್ವೀಕರಿಸಿ, ಆಲೋಚಿಸಿ, ಯೋಜಿಸಿ ಮುನ್ನಡೆದಾಗ ಕೃಷಿಕನ ದಾರಿಗೆ ಅಡ್ಡವಾಗಿ ಬರುವ ಸಮಸ್ಯೆಗಳೆಲ್ಲವೂ ತಾನಾಗಿಯೇ ಬದಿಗೆ ಸರಿಯುತ್ತವೆ.  ಬಂದ ಸಮಸ್ಯೆಗಳೆಲ್ಲವನ್ನೂ ಹಿಮ್ಮೆಟ್ಟಿ ಯಶಸ್ವಿ ಕೃಷಿಕನೆಂದೆನಿಸಿಕೊಂಡ ಕೀರ್ತಿ ಸಲ್ಲಬೇಕಾದುದು ನಮ್ಮ ನಿಮ್ಮ ನಡುವಿನ ಹರಿಯಬ್ಬೆಯ ಬಿ.ಎಸ್. ರಘುನಾಥ್ ಅವರಿಗೆ.

ದೊಡ್ಡ ಹಿಡುವಳಿದಾರರೇ ಆಗಿದ್ದ ರಘುನಾಥ್ ಅವರಿಗೆ ಅಂದಿನ ಕಾಲಕ್ಕೆ ಸುಮಾರು ೨೦ ಎಕರೆಯಷ್ಟು ಜಮೀನಿತ್ತು. ಭತ್ತ, ರಾಗಿ, ಹುರುಳಿ, ಅವರೆ, ತೊಗರಿ ಬೆಳೆದ್ದುಕೊಂಡೇ ಬದುಕು ಕಟ್ಟಿಕೊಂಡ ಇವರು ಕಾಲ ಬದಲಾದಂತೆ ಅನೇಕ ಕೃಷಿ ಸಮಸ್ಯೆಗಳಿಗೆ ಒಗ್ಗಿಕೊಳ್ಳಲು ಸಾಧ್ಯವಾಗಲಿಲ್ಲ. ಆಗ ರಘುನಾಥ್ ಅವರಿಗೆ ಆಸರೆಯಾಗಿದ್ದು ತೋಟಗಾರಿಕೆ ಬೆಳೆಗಳು. ದಾಳಿಂಬೆ, ಸಪೋಟಾ, ತೆಂಗು, ಅಡಿಕೆ, ಮೊಸಂಬಿ ಹಾಗೂ ಇನ್ನು ಮುಂತಾದ ಬೆಳೆಗಳು ಕೆಲ ಕಾಲ ಕೈ ಹಿಡಿದವಾದರೂ ಅವುಗಳಿಗೆ ಬರುತ್ತಿದ್ದ ರೋಗ, ಕೀಟದ ಸಮಸ್ಯೆ, ನೀರಿನ ಕೊರತೆ, ಕೃಷಿ ಕಾರ್ಮಿಕರ ಕೊರತೆ ದೃತಿಗೆಡಿಸಿದವು. ಈ ಹೊತ್ತಿಗಾಗಲೇ ಕೃಷಿಯ ಒಳ ಹೊರಗನ್ನು ಚನ್ನಾಗಿಯೇ ಅರಿತಿದ್ದ ರಘುನಾಥ್ ಹೊಸ ಹೊಸ ಆಲೋಚನೆಗಳನ್ನು ತನ್ನ ಜಮೀನಿನಲ್ಲಿ ಅನುಷ್ಟಾನಗೊಳಿಸಿದರು.

ಕೃಷಿಯ ನೂರಾರು ಸಮಸ್ಯೆಗಳನ್ನು, ಹತ್ತಾರು ತಲೆ ನೋವ್ವುಗಳನ್ನು ಹೇಗಾದರೂ ಸರಿ ಬಗೆ ಹರಿಸಿಕೊಳ್ಳಲೇಬೇಕು ಎಂದು ನಿಶ್ಚಿಯಿಸಿದಾಗ ಅವರ ನೆರವಿಗೆ ಬಂದದ್ದು “ಅರಣ್ಯ ಕೃಷಿ”. ರೋಗ, ಕೀಟ, ನೀರು, ಕಾರ್ಮಿಕರು ಹಾಗೂ ಮಾರುಕಟ್ಟೆಯಂತಹ ಮಹತ್ವದ ಸಮಸ್ಯೆಗಳನ್ನು ಅರಣ್ಯ ಕೃಷಿಯಿಂದ ದೂರಮಾಡಬಹುದು ಎಂಬುದನ್ನು ಅರಿತ ರಘುನಾಥ್ ಬರದ ನಾಡಿನಲ್ಲಿ ಅರಣ್ಯವನ್ನು ಸೃಷ್ಟಿಸುವಂತಹ ಸಾಹಸಕ್ಕೆ ಕೈ ಹಾಕಿದರು. ಅರಣ್ಯ ಕೃಷಿಯ ಸಾಧಕ ಬಾಧಕಗಳ ಬಗ್ಗೆಯೂ ಅರಿವಿರಬೇಕು ಎಂಬುದನ್ನು ಮನಗಂಡ ಅವರು ಸಾಕಷ್ಟು ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾನಿಲಯಗಳು, ಅರಣ್ಯ ಕೃಷಿಕರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದರು. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಕೃಷಿ ಪ್ರವಾಸಗಳನ್ನು ಕೈಗೊಂಡು ಅರಣ್ಯ ಸೃಷ್ಟಿಗೆ ಮುಂದಾದರು.

ಈ ಹೊತ್ತಿಗಾಗಲೇ ಇವರ ಹಿಡುವಳಿ ಸಾಕಷ್ಟು ಹೆಚ್ಚಾಗಿತ್ತು. ಲಭ್ಯವಿದ್ದ ಅಲ್ಪ ನೀರನ್ನು ಬಳಸಿಕೊಂಡು ಶ್ರೀಗಂಧ ಹಾಗೂ ಹೆಬ್ಬೇವಿನ ಕೃಷಿಗೆ ಮುಂದಾದರು. ಪ್ರಸ್ತುತ ಸುಮಾರು ೬೫ ಎಕರೆ ಕೃಷಿ ಭೂಮಿಯಲ್ಲಿ ಅರಣ್ಯ ಕೃಷಿ ಮಾಡುತ್ತಿದ್ದಾರೆ. ಹೆಬ್ಬೇವನ್ನು ಪ್ರಧಾನ ಬೆಳೆಯನ್ನಾಗಿ ಮಾಡಿಕೊಂಡಿದ್ದು ಅಂತರ ಬೆಳೆಯಾಗಿ ಶ್ರೀಗಂಧ ಹಾಕಿಕೊಂಡಿದ್ದಾರೆ. ಇದಷ್ಟೇ ಅಲ್ಲದೆ ದಾಳಿಂಬೆ, ಸಪೋಟಾ ಹಾಗೂ ಮೋಸಂಬಿಯನ್ನು ಸಹ ಕೆಲವು ತಾಕುಗಳಲ್ಲಿ ಅಂತರ ಬೆಳೆಯಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಹೆಬ್ಬೇವು, ಬೇವಿನ ಜಾತಿಯ ವೃಕ್ಷವಾಗಿರುವುದರಿಂದ ದಾಳಿಂಬೆಯಂತಹ ಸೂಕ್ಷ್ಮ ಬೆಳೆ ಬಾಧಿಸುವ ರೋಗ ಹಾಗೂ ಕೀಟಗಳು ಇವರ ತೋಟದ ಸಮೀಪ ಸುಳಿದಿಲ್ಲ. ಹೆಬ್ಬೇವು ನೇರವಾಗಿ, ಅತಿ ಎತ್ತರಕ್ಕೆ ಬೆಳೆಯುವ ಮರವಾಗಿರುವುದರಿಂದ ದಾಳಿಂಬೆ ಹಾಗೂ ಇತರೆ ಬೆಳೆಗಳಿಗೆ ನೆರಳಿನ ಸಮಸ್ಯೆಯೂ ಎದುರಾಗಿಲ್ಲ. ಇವರ ಈ ವಿಭಿನ್ನ ಪ್ರಯತ್ನವನ್ನು ನೋಡಿ ಅರಿಯಲು ರಾಜ್ಯದ ವಿವಿಧ ಭಾಗಗಳಿಂದ ಹಾಗೂ ನೆರೆ ರಾಜ್ಯಗಳಾದ ಆಂಧ್ರ, ತಮಿಳುನಾಡು ಮತ್ತು ಕೇರಳದ ಕೃಷಿಕರು ಭೇಟಿ ನೀಡಿ ತಮ್ಮ ತಾಕುಗಳಲ್ಲಿಯೂ ಅಳವಡಿಸಿಕೊಂಡಿದ್ದಾರೆ.

ನಿರ್ವಹಣೆ ಹಾಗೂ ಪೋಷಣೆ ದೃಷ್ಟಿಯಿಂದ ಅರಣ್ಯ ಕೃಷಿ ಅನುಕೂಲಕರ ಎನ್ನುತ್ತಾರೆ ರಘುನಾಥ್. ಮಳೆಯ ಹಂಚಿಕೆ ಹೇಗಾದರೂ ಇರಲಿ, ಅತಿವೃಷ್ಟಿ ಅನಾವೃಷ್ಟಿ ಏನಾದರೂ ಸಂಭವಿಸಲಿ ಅದು ಅರಣ್ಯ ಕೃಷಿಯ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ, ಪ್ರತಿಯೊಬ್ಬ ಕೃಷಿಕರು ತಮಗೆ ಲಭ್ಯವಿರುವ ಕೃಷಿ ಭೂಮಿಯಲ್ಲಿ ಒಂದಷ್ಟು ಭಾಗವನ್ನು ಅರಣ್ಯ ಕೃಷಿಗೆ ಮೀಸಲಿಡಬೇಕು ಇದು ನಮ್ಮ ಮಣ್ಣು ಹಾಗೂ ಪರಿಸರವನ್ನು ಆರೋಗ್ಯದಾಯಕವಾಗಿಸುವಲ್ಲಿ ಗಣನೀಯ ಪಾತ್ರ ನಿರ್ವಹಿಸುತ್ತದೆ ಎಂಬುದು ರಘುನಾಥ್ ಅವರ ಧೃಢ ಅಭಿಪ್ರಾಯ.

ಹೆಬ್ಬೇವು ಏಳು ವರ್ಷದಿಂದ ಹತ್ತು ವರ್ಷಗಳ ಒಳಗೆ ಕಟಾವಿಗೆ ಬರುತ್ತದೆ. ಗಂಟಿಲ್ಲದೆ ನೇರವಾಗಿ ಬೆಳೆಯುಂತಹ ಹಾಗೂ ಮೃದು ಗುಣವನ್ನು  ಇದು ಹೊಂದಿದ್ದು ಪ್ಲೇವುಡ್ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ ಹಾಗೂ ಇದಕ್ಕಾಗಿ ಅಗಾದವಾದ ಬೇಡಿಕೆಯೂ ಇದೆ. ಏಳು ವರ್ಷಗಳ ಕಾಲ ಬೆಳೆಸಿದ ಹೆಬ್ಬೇವು ಸುಮಾರು ೧೦ ಸಾವಿರ ರೂಪಾಯಿ ಬೆಲೆ ಬಾಳುತ್ತದೆ. ೧೫೧೫ ಅಡಿಗೆ ನಾಟಿ ಮಾಡಿದರೂ ಎಕರೆಗೆ ೨೦೦ ಮರಗಳನ್ನು ಬೆಳೆಸಬಹುದು ಇದರಿಂದ ಹತ್ತು ವರ್ಷಗಳಲ್ಲಿ ೨೦ ಲಕ್ಷದಷ್ಟು ಹಣ ಸಂಪಾದನೆ ಮಾಡಬಹುದಾಗಿದೆ. ಜೊತೆಗೆ ಹೆಬ್ಬೇವಿನ  ಎಲೆ ಉತ್ಕೃಷ್ಟ ಮೇವಾಗಿದ್ದು ಹಸು, ಕುರಿ, ಆಡುಗಳ ಸಾಕಾಣಿಕೆಯನ್ನು ಸಹ ಉಪ ಕಸುಬಾಗಿ ಕೈಗೊಳ್ಳಬಹುದು. ಇದರ ಎಲೆಗಳನ್ನು ಜಾನುವಾರುಗಳು ಇಷ್ಟಪಟ್ಟು ತಿನ್ನುವುದಿದೆ. ಹೆಬ್ಬೇವು ಕಟಾವಿಗೆ ಬರುವ ವರೆಗೂ ವಿವಿಧ ಅಂತರ್ ಬೆಳೆಗಳನ್ನು ಸಹ ಬೆಳೆದುಕೊಳ್ಳಬಹುದು.

ಶ್ರೀಗಂಧ ಪರಾವಲಂಭಿ ಸಸ್ಯ. ಇದು ಸ್ವತಂತ್ರವಾಗಿ ಬೆಳೆಯಲಾರದು ಹಾಗಾಗಿ ಶ್ರೀಗಂಧವನ್ನು ಹೆಬ್ಬೇವಿನೊಂದಿಗೆ ಅಂತರ್ ಬೆಳೆಯಾಗಿ ಬೆಳೆಯುವುದು ಸೂಕ್ತ. ಶ್ರೀಗಂಧಕ್ಕೆ ಮರಗಳ್ಳರೇ ಪರಮ ವೈರಿಗಳು. ಈ ನಿಟ್ಟಿನಲ್ಲಿ ಶ್ರೀಗಂಧದ ಬೆಳೆಗಾರರು “ರಕ್ಷಣೆಗೆ” ಹೆಚ್ಚು ಆಧ್ಯತೆ ನೀಡಬೇಕು ಎನ್ನುತ್ತಾರೆ ರಘುನಾಥ್.

ಶ್ರೀಗಂಧದ ಬೆಳೆ ಹಾಗೂ ಮಾರುಕಟ್ಟೆಯ ಮೇಲೆ ಇದಂತಹ ನಿಯಂತ್ರಣವನ್ನು ಸರ್ಕಾರ ೨೦೦೨ನೇ ಇಸವಿಯಲ್ಲಿ ಸಡಿಲಿಸಿ ಸಾಗುವಳಿ ಮಾಡಲು ಹಾಗೂ ಮಾರಾಟ ಮಾಡಲು ಅನುಕೂಲ ಕಲ್ಪಿಸಿದೆ ಆದರೆ ಶ್ರೀಗಂಧದ ರಕ್ಷಣೆಗೂ ಸಹ ಸರ್ಕಾರ ತಂತ್ರಜ್ಞಾನ ಹಾಗೂ ಸಹಾಯಧನ ನೀಡಬೇಕು ಎಂಬುದು ರಘುನಾಥ್ ಅವರ ಒತ್ತಾಯ. ಶ್ರೀಗಂಧದಲ್ಲಿ ೭ ವರ್ಷಗಳ ನಂತರ ಚೇಗು ರೂಪುಗೊಳ್ಳಲು ಆರಂಭವಾಗುತ್ತದೆ ಸಾಮಾನ್ಯವಾಗಿ ಇದು ೧೫ ವರ್ಷಕ್ಕೆ ಕಟಾವಿಗೆ ಬರುತ್ತದೆ ಅಲ್ಲಿಯ ವರೆಗೂ ಕಣ್ಣಲ್ಲಿ ಕಣ್ಣಿಟ್ಟು ಶ್ರೀಗಂಧ ರಕ್ಷಣೆ ಮಾಡಬೇಕಾಗುತ್ತದೆ. ಬೇಲಿ ಅಥವಾ ಕಾಂಪೋಂಡ್ ನಿರ್ಮಾಣ ಅನಿವಾರ್ಯ. ಸಿಸಿ ಕ್ಯಾಮೆರಾ, ಬಂದೂಕು ಪರವಾನಿಗೆ, ಡಾಗ್ ಸ್ಕ್ವಾಡ್ ಹಾಗೂ ತರಬೇತಿ ಪಡೆದ ಕಾವಲು ಪಡೆಯನ್ನು ರಕ್ಷಣೆಗೆ ಬಳಸಬೇಕು ಇದು ಸಾಮಾನ್ಯ ಕೃಷಿಕನಿಗೆ ದುಬಾರಿಯಾಗಿದ್ದು ಸರ್ಕಾರ ಗಿಡಗಳ ಪಾಲನೆ ಪೋಷಣೆಗೆ ಹೇಗೆ ಕೃಷಿಕರಿಗೆ ನೆರವಾಗುತ್ತದೆಯೋ ಅಂತೆಯೇ ರಕ್ಷಣೆಗೆಗೂ ನೆರವಾದರೆ ಶ್ರೀಗಂಧದ ಸಾಗುವಳಿ ಹೆಚ್ಚಲು ಸಹಾಯಕ ಎನ್ನುತ್ತಾರೆ ರಘುನಾಥ್.

ರಘುನಾಥ್ ಕೃಷಿಯನ್ನು ಬಹಳಷ್ಟು ಇಷ್ಟ ಪಟ್ಟು ಬಂದವರು ೫೦ರ ದಶಕದಲ್ಲಿಯೇ ಪಿಯೂಸಿಯಲ್ಲಿ ಶೇಖಡ ೮೫ಕ್ಕೂ ಅಧಿಕ ಅಂಕಗಳೊಂದಿಗೆ ತೇರ್ಗಡೆಯಾದ ಇವರಿಗೆ ಬೆಂಗಳೂರು ವೈಧ್ಯಕೀಯ ಮಹಾವಿದ್ಯಾಲಯದಲ್ಲಿ ಉಚಿತವಾಗಿ ಪ್ರವೇಶಾತಿ ದೊರೆತಿತ್ತು ಆದರೆ ಮಣ್ಣಿನ ಮೇಲಿನ ಮಮಕಾರದಿಂದಾಗಿದ ಅವರು ತನ್ನ ಹುಟ್ಟೂರಿನಲ್ಲಿಯೇ ಉಳಿದು ಕೃಷಿ ಆರಂಭಿಸಿದವರು.

ಉನ್ನತ ಶಿಕ್ಷಣದಿಂದ ವಂಚಿತರಾದ ನಿಮಗೆ ಆ ಕೊರಗು ಇದೆಯೇ ಎಂದು ಪ್ರಶ್ನಿಸಿದರೆ ಯಾವುದೇ ಬೇಸರ, ಅಳುಕು ಇಲ್ಲದೆ ಅವರು “ಇಲ್ಲ” ಎನ್ನುತ್ತಾರೆ ನಾನು ಯಶಸ್ವಿ ವೈದ್ಯನಾಗುತ್ತಿದ್ದೆನೋ ಇಲ್ಲವೋ ಯಶಸ್ವಿ ಕೃಷಿಕನಾಗಿದ್ದೇನೆ. ಈ ಕೃಷಿಯಿಂದ ನನ್ನ ಮನೆಯಲ್ಲಿ ಇದೀಗ ೦೯ ಜನ ವೈದ್ಯರನ್ನು ನಾನು ತಯಾರು ಮಾಡಿದ್ದೇನೆ. ಮಕ್ಕಳು ಮೊಮ್ಮಕ್ಕಳು ಸೇರಿದಂತೆ ನನ್ನ ಮನೆಯಲ್ಲಿ ಅಷ್ಟು ಜನ ವೈದ್ಯರಿದ್ದಾರೆ ಎಂದು ಹೆಮ್ಮೆಯಿಂದಲೇ ಹೇಳುತ್ತಾರೆ. ಯಶಸ್ವಿ ಕೃಷಿಕರಾದ ರಘುನಾಥ್ ಅವರಿಗೆ  ರಾಜ್ಯ ಸರ್ಕಾರ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ. ಶ್ರೀ ರಘುನಾಥ್ ಅವರ ಸಂಪರ್ಕಕ್ಕಾಗಿ-

ಅರಕಲಗೂಡು ವಿ. ಮಧುಸೂಧನ್