ಚಿತ್ರದುರ್ಗ: ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಗೊಳಿಸಲಾಗಿದ್ದು, ರೈತರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಫಸಲ್ ಭೀಮಾ ಯೋಜನೆಯನ್ನು ಎಲ್ಲ ತಾಲ್ಲೂಕಿನಲ್ಲಿ ಬೆಳೆಯುವ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿಗಳನ್ನು ವಿಮಾ ಘಟಕವಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವಾಗಿ ಪರಿಗಣಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

ಪ್ರಸಕ್ತ ವರ್ಷವೂ ಸೇರಿದಂತೆ ಒಟ್ಟು 03 ವರ್ಷಗಳಿಗೆ ಜಿಲ್ಲೆಗೆ ಯೂನಿವರ್ಸಲ್ ಸೊಂಪೋ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆಯನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಏಜೆನ್ಸಿಯಾಗಿ ನಿಗದಿಪಡಿಸಲಾಗಿದೆ. ಈ ಬಾರಿ ಬೆಳೆ ಸಾಲ ಪಡೆಯುವ ರೈತರಿಗೆ ಮಂಜೂರಾದ ಬೆಳೆ ಸಾಲದ ಮೊತ್ತ ಜೊತೆಗೆ ರೈತರ ವಿಮಾಕಂತನ್ನು ಹೆಚ್ಚುವರಿ ಸಾಲವನ್ನಾಗಿ ಮಂಜೂರು ಮಾಡುವಂತೆ ನಿಯಮ ರೂಪಿಸಲಾಗಿದೆ.  ಈ ಬಾರಿಯ ಮಾರ್ಗಸೂಚಿಯಂತೆ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳು ರೈತರ ಬೆಳೆ ವಿಮೆ ಪ್ರಸ್ತಾವನೆ ಹಾಗೂ ವಿಮಾ ಕಂತನ್ನು ನಿಗದಿತ ಸಮಯದೊಳಗೆ ವಿಮಾ ಸಂಸ್ಥೆಗಳಿಗೆ ವರ್ಗಾಯಿಸಬೇಕು.  ಬ್ಯಾಂಕ್, ಆರ್ಥಿಕ ಸಂಸ್ಥೆ, ಸಾಮಾನ್ಯ ಸೇವಾ ಕೇಂದ್ರ ಸಂಸ್ಥೆಗಳ ನಿರ್ಲಕ್ಷ್ಯದಿಂದ ಯಾವುದೇ ಲೋಪದೋಷ ಉಂಟಾದಲ್ಲಿ ಅದರಿಂದಾಗುವ ಬೆಳೆವಿಮೆ ಪರಿಹಾರ ವ್ಯಾಜ್ಯಗಳಿಗೆ ಸಂಬಂಧಪಟ್ಟ ಆರ್ಥಿಕ ಸಂಸ್ಥೆಗಳೇ ನೇರ ಹೊಣೆ ಹೊರಬೇಕಾಗುತ್ತದೆ.

ಫಸಲ್‍ಬಿಮಾ ಯೋಜನೆಯಡಿ ಮಳೆಯಾಶ್ರಿತ ಹೆಸರು ಹಾಗೂ ನೀರಾವರಿ ಈರುಳ್ಳಿಗೆ ನೊಂದಣಿ ಮಾಡಲು ಜುಲೈ 15 ಕೊನೆಯ ದಿನವಾಗಿದ್ದು, ಉಳಿದಂತೆ ಮಳೆಯಾಶ್ರಿತ ಹತ್ತಿ, ಶೇಂಗಾ, ಹುರುಳಿ, ಮೆಕ್ಕೆಜೋಳ, ಈರುಳ್ಳಿ, ಸಜ್ಜೆ, ತೊಗರಿ, ಕೆಂಪು ಮೆಣಸಿನಕಾಯಿ, ಸಾವೆ, ಎಳ್ಳು, ಜೋಳ, ಸೂರ್ಯಕಾಂತಿ, ಟೊಮ್ಯಾಟೊ.  ನೀರಾವರಿಯ ಹತ್ತಿ, ಶೇಂಗಾ, ಮೆಕ್ಕೇಜೋಳ, ಜೋಳ ಮತ್ತು ಸೂರ್ಯಕಾಂತಿ ಬೆಳೆಗಳಿಗೆ ನೊಂದಣಿ ಮಾಡಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.  ಮಳೆಯಾಶ್ರಿತ ನವಣೆ ಮತ್ತು ರಾಗಿ.  ನೀರಾವರಿ ಭತ್ತ ಮತ್ತು ರಾಗಿ ನೊಂದಣಿಗೆ ಆಗಸ್ಟ್ 14 ಕೊನೆಯ ದಿನವಾಗಿದೆ.  ಯೋಜನೆಯಡಿ ಕೆಲವು ಮಳೆಯಾಶ್ರಿತ ಬೆಳೆಗಳನ್ನು ತಾಲ್ಲೂಕು ಮಟ್ಟದಲ್ಲಿ ಮುಖ್ಯ ಬೆಳೆಯಾಗಿ ನಿಗದಿಪಡಿಸಿದ್ದು, ಚಳ್ಳಕೆರೆ- ಶೇಂಗಾ, ಚಿತ್ರದುರ್ಗ-ಮುಸುಕಿನಜೋಳ, ಹಿರಿಯೂರು-ಶೇಂಗಾ, ಸೂರ್ಯಕಾಂತಿ.  ಹೊಳಲ್ಕೆರೆ-ಮುಸುಕಿನಜೋಳ, ರಾಗಿ.  ಮೊಳಕಾಲ್ಮೂರು-ಶೇಂಗಾ, ಹೊಸದುರ್ಗ-ರಾಗಿ.

ಹೋಬಳಿಮಟ್ಟದ ವಿಮಾ ಘಟಕಗಳಿಗೆ ನೀರಾವರಿಯ ಈರುಳ್ಳಿ, ಜೋಳ, ಭತ್ತ, ಮುಸುಕಿನ ಜೋಳ, ರಾಗಿ, ಸೂರ್ಯಕಾಂತಿ, ಹತ್ತಿ.  ಮಳೆಆಶ್ರಿತ ಬೆಳೆಗಳಾದ    ಜೋಳ, ತೊಗರಿ, ಸಜ್ಜೆ, ಸೂರ್ಯಕಾಂತಿ, ಹತ್ತಿ ಹುರುಳಿ, ಹೆಸರು, ನವಣೆ, ಕೆಂಪು ಮೆಣಸಿನ ಕಾಯಿ, ಸಾವೆ ಹಾಗೂ ಎಳ್ಳು ಬೆಳೆಗಳ ವಿಮೆಗೆ ನೋಂದಾಯಿಸಲು ಅವಕಾಶವಿದೆ.

ಆಸಕ್ತ ರೈತರು ತಮ್ಮ ವ್ಯಾಪ್ತಿಯ ಬ್ಯಾಂಕುಗಳಲ್ಲಿ ಹಾಗೂ ಅನುಮೋದಿತ ಸಾರ್ವಜನಿಕ ಸೇವಾ ಕೇಂದ್ರಗಳಲ್ಲೂ ವಿಮೆಗೆ ನೋಂದಣಿ ಮಾಡಬಹುದಾಗಿದೆ. ವಿಮಾ ಯೋಜನೆ ಕುರಿತು ಯೂನಿವರ್ಸಲ್ ಸೊಂಪೋ ಜನರಲ್ ಇನ್ಸೂರೆನ್ಸ್ ಕಂಪನಿಯ ಮಾರೇಶ್-9740594807, ಟೋಲ್‍ಫ್ರೀ-18004257919 ಅಥವಾ ಆಯಾ ವ್ಯಾಪ್ತಿಯ ಬ್ಯಾಂಕ್ ಸಂಪರ್ಕಿಸಬಹುದು.

ಆಸಕ್ತ ರೈತ ಬಾಂಧವರು ನಿಗದಿತ ದಿನಾಂಕದೊಳಗೆ ಬೆಳೆ ವಿಮೆಗೆ ನೋಂದಣಿ ಮಾಡಲು ವಿನಂತಿಸಿದೆ. ಅಂತಿಮ ಸಮಯದಲ್ಲಿ ಜನದಟ್ಟಣೆಯಿಂದಾಗಿ ನೋಂದಣಿಯಲ್ಲಿ ತಪ್ಪುಗಳು ಸಂಭವಿಸಿ, ವಿಮೆ ಪರಿಹಾರ ಬಾರದಿರುವ ಸಾಧ್ಯತೆಗಳಿರುವುದರಿಂದ, ಇದಕ್ಕೆ ಅವಕಾಶ ಕೊಡದೆ ಸಕಾಲದಲ್ಲಿ ನೋಂದಾವಣೆ ಮಾಡಲು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.