ನಮ್ಮ ಆರೋಗ್ಯ ಹಾಗೂ ಬೆಳವಣಿಗೆಗೆ ಪೋಷಕಾಂಶಗಳು ಹೇಗೆ ಅಗತ್ಯವೋ ಅಂತೆಯೇ ನಮ್ಮ ಕೃಷಿ ಬೆಳೆಗಳಿಗೂ ಕೂಡಾ ಪೋಷಕಾಂಶಗಳು ಅತ್ಯಗತ್ಯ. ಮಾನವನ ಬೆಳವಣಿಗೆಗೆ ಸುಮಾರು 40 ವಿಧಧ ಪೋಷಕಾಂಶಗಳು ಅಗತ್ಯವಿದ್ದರೆ ಸಸ್ಯಗಳ ಬೆಳವಣಿಗೆಗೆ 16 ವಿಧಧ ಪೋಷಕಾಂಶಗಳ ಅಗತ್ಯತೆ ಇದೆ.

ಮುಂಗಾರಿನ ಸಂದರ್ಭದಲ್ಲಿ ರಾಸಾಯನಿಕ ಗೊಬ್ಬರಗಳಿಗೆ ಅತೀವವಾದಂತಹ ಬೇಡಿಕೆ ಉಂಟಾಗುವುದನ್ನು ನಾವು ದಿನ ಪತ್ರಿಕೆಗಳಲ್ಲಿ ಗಮನಿಸಿರುತ್ತೇವೆ. ಇದು ಕೃಷಿ ಬೆಳೆಗಳಿಗೆ ಪೋಷಕಾಂಶವನ್ನು ಸಂಗ್ರಹಿಸುವ ಒಂದು ವಿಧಾನ ಆದರೆ ಈ ಸಂದರ್ಭದಲ್ಲಿ ಬೇಡಿಕೆ ಉಂಟಾಗುವುದು ಕೆಲವೇ ಕೆಲವು ಪೋಷಕಾಂಶಗಳಿಗೆ ಮಾತ್ರ ಇದು ಕೃಷಿಯ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ ಪೋಷಕಾಂಶಗಳ ನಿರ್ವಹಣೆ ಮತ್ತು ಪೂರೈಕೆ ಕೃಷಿ ಇಳುವರಿಯನ್ನಷ್ಟೇ ನಿರ್ಧರಿಸುವುದಿಲ್ಲ ಅದು ನಮ್ಮ ಆರೋಗ್ಯ ಹಾಗೂ ನಮ್ಮ ಮಣ್ಣಿನ ಆರೋಗ್ಯವನ್ನು ಸಹ ನಿರ್ಧರಿಸುವುದರಿಂದ ನಾವು ನೀಡುವ ಪೋಷಕಾಂಶಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳುವುದು ಅಗತ್ಯ.

ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ಪ್ರಧಾನ ಪೋಷಕಾಂಶಗಳು, ಲಘು ಪೋಷಕಾಂಶಗಳು, ಸೂಕ್ಷ್ಮ ಪೋಷಕಾಂಶಗಳು ಮತ್ತು ನೈಸರ್ಗಿಗವಾಗಿ ದೊರೆಯುವ ಪೋಷಕಾಂಶಗಳು.

ಮುಂಗಾರಿನ ಸಂದರ್ಭದಲ್ಲಿ ಅತೀವವಾದಂತಹ ಬೇಡಿಕೆಯುಂಟಾಗುವ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗಳನ್ನ ನಾವು ಪ್ರದಾನ ಪೋಷಕಾಂಶಗಳೆನ್ನುತ್ತೇವೆ. ಪ್ರಧಾನ ಪೋಷಕಾಂಶಗಳು ಕೃಷಿ ಬೆಳೆಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ಅಗತ್ಯವಿರುತ್ತವೆ ಎಂದರೆ ಇವುಗಳನ್ನು ಹೆಕ್ಟೇರ್ ಗೆ ಕ್ವಿಂಟಾಲ್ ಗಟ್ಟಲೆ ಬಳಸಲಾಗುತ್ತದೆ.

ಪ್ರದಾನ ಪೋಷಕಾಂಶಗಳಲ್ಲೊಂದಾದ ಸಾರಜನಕ ಸಸ್ಯಗಳ ಕಾಂಡ ಮತ್ತು ಎಲೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತದೆ ಎಲೆಯ ಹಸಿರು ಬಣ್ಣವನ್ನು ಶ್ರೀಮಂತವಾಗಿಸಲೂ ಸಹ ಇದು ಸಹಕರಿಸುತ್ತದೆ. ರಂಜಕ ಸಹ ಪ್ರದಾನ ಪೋಷಕಾಂಶವಾಗಿದ್ದು ಸಸ್ಯಗಳ ಬೆಳವಣಿಗೆಯನ್ನು ನಿರ್ಧರಿಸುವ ಬೇರಿನ ಬೆಳವಣಿಗೆಗೆ ಇದು ಅಗತ್ಯ. ಸಸ್ಯಗಳಿಗೆ ಅಗ್ಯವಿರುವ ವಿವಿಧ ಪೋಷಕಾಂಶಗಳು ಹಾಗೂ ನೀರನ್ನು ಒದಗಿಸಲು ಬೇರು ಆಧಾರವಾಗಿದ್ದು ಬೇರುಗಳ ಧೃಢ ಬೆಳವಣಿಗೆ ಹಾಗೂ ಕಾರ್ಯ ನಿರ್ವಹಣೆಗೆ ರಂಜಕ ಸಹಕರಿಸುತ್ತದೆ. ಇನ್ನು ಪೊಟ್ಯಾಷ್ ಸಸ್ಯಗಳಿಗೆ ಅಗತ್ಯವಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಾತಾವರಣದಲ್ಲಿನ ಬದಲಾವಣೆ ಆಗ್ಗಿಂದಾಗಲೇ ಆಗುವುದು ಸಹಜ ಅತಿಯಾದ ಮಳೆ ಅಥವಾ ಬಿಸಿಲು ಬೀಳುವಂತಹ ಸಂದರ್ಭದಲ್ಲಿಯೂ ಸಹ ಸಸ್ಯ ಸಮತೋಲನ ಬೆಳವಣಿಗೆ ಹೊಂದಲು ಪೊಟ್ಯಾಷ್ ಅನುಕೂಲ ಕಲ್ಪಿಸುತ್ತದೆ.

ಸುಣ್ಣ, ಮೆಗ್ನೀಷಿಯಂ ಮತ್ತು ಗಂಧಕವನ್ನು ಲಘು ಪೋಷಕಾಂಶಗಳೆಂದು ಗುರುತಿಸಲಾಗಿದ್ದು ಇವುಗಳ ಪೂರೈಕೆಗೆ ಸಂಬಂಧಿಸಿದಂತೆ ಇದುವರೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗಿಲ್ಲ. ಹೆಸರೇ ಹೇಳುವಂತೆ ಇವು ಲಘು ಪೋಷಕಾಂಶಗಳೆಂಬ ನಿರ್ಲಕ್ಷ್ಯವೂ ಸಹ ಇರಬಹುದೇನೋ. ಜೊತೆಗೆ ಇವುಗಳ ಬೇಡಿಕೆಯೂ ಸಹ ಅತ್ಯಲ್ಪ ಪ್ರದಾನ ಪೋಷಕಾಂಶಗಳಂತೆ ಇವು ಮೂಟೆಗಟ್ಟಲೆ ಅಗತ್ಯ ಬೀಳುವುದಿಲ್ಲ ಪ್ರತಿ ಹೆಕ್ಟೇರ್ ಗೆ ಇವುಗಳ ಅಗತ್ಯ 30 ರಿಂದ 50 ಕೆಜಿಯಷ್ಟು ಸಾಕು.

ಪ್ರಮುಖ ಲಘು ಪೋಷಕಾಂಶಗಳಲ್ಲೊಂದಾದ ಸುಣ್ಣ, ಮಾನವನ ಮೂಳೆಯ ಬೆಳವಣಿಗೆಗೆ ಹೇಗೆ ಸಹಕಾರಿಯೋ ಅಂತೆಯೇ ಸಸ್ಯಗಳ ಜೀವಕೋಶಗಳ ಗೋಡೆಯನ್ನು ಗಟ್ಟಿಗೊಳಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಗಿಡದ ತೊಗಟೆ, ಎಲೆ, ಪೊರೆ ಹಾಗೂ ಹೂವ್ವು ಮತ್ತು ಹಣ್ಣು ಕಾಯಿಗಳ ಹೊರ ಪದರವನ್ನು ಗಟ್ಟಿಗೊಳಿಸಲು ಸುಣ್ಣ ಅತ್ಯಗತ್ಯವಾಗಿರುತ್ತದೆ.

ಇನ್ನು ಮೆಗ್ನೀಷಿಯಂ ಎಲೆಗಳ ಪತ್ರಹರಿತ್ತಿನ ಪ್ರಮಾಣವನ್ನು ಸಮತೋಲನವಾಗಿ ಇಡುವಲ್ಲಿ ಸಹಕರಿಸುತ್ತದೆ. ಪತ್ರಹರಿತ್ತು ಅಗತ್ಯ ಪ್ರಮಾಣದಲ್ಲಿದ್ದಾಗ ಮಾತ್ರ ಸಸ್ಯದ ಎಲೆಗಳು ನಳನಳಿಸಿ ಸೌರಶಕ್ತಿಯಿಂದ ದೊರೆಯುವ ಪೋಷಕಾಂಶಗಳನ್ನು ಸಮರ್ಪಕವಾಗಿ ಬಳಕೆ ಮಾಡಲು ಅನುಕೂಲವಾಗುತ್ತದೆ.

ಗಂಧಕ ಲಘು ಪೋಷಕಾಂಶವಾಗಿದ್ದು ಎಣ್ಣೆ ಕಾಳಿನ ಬೆಳೆಗಳಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೇ ಸಸ್ಯಗಳಲ್ಲಿನ ಕೊಬ್ಬಿನ ಅಂಶದ ಬೆಳವಣಿಗೆ ಇದು ಸಹಕಾರಿ. ಪ್ರಮುಖ ಎಣ್ಣೆ ಕಾಳಿನ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಕುಸುಬೆ ಮತ್ತು ಹತ್ತಿಯಂತಹ ಬೆಳೆಗಳಲ್ಲಿ ಎಣ್ಣೆಯ ಅಂಶದ ಹೆಚ್ಚಳಕ್ಕೆ ಗಂಧಕ ಅತಿ ಮುಖ್ಯವಾದ ಪೋಷಕಾಂಶವಾಗಿದೆ.

ಏಳು ವಿಧಧ ಸೂಕ್ಷ್ಮ ಪೋಷಕಾಂಶಗಳಿದ್ದು ಅವುಗಳನ್ನು ಕಬ್ಬಿಣ, ಸತು, ಮ್ಯಾಂಗನೀಸ್, ಬೋರಾನ್, ತಾಮ್ರ, ಮ್ಯಾಲಿಬ್ಡಿನಂ ಮತ್ತು ಕ್ಲೋರಿನ್ ಎಂದು ಗುರುತಿಸಲಾಗಿದೆ ಇವು ಸೂಕ್ಷ್ಮ ಪೋಷಕಾಂಶಗಳಾಗಿದ್ದು ಪ್ರತಿ ಹೆಕ್ಟೇರ್ ಗೆ 2 ರಿಂದ 3 ಕೆಜಿ ಸಾಕಾಗುತ್ತದೆ.

ಕಬ್ಬಿಣ ಸಸ್ಯದಲ್ಲಿರುವ ಪತ್ರಹರಿತ್ತಿನ ರಚನೆಯಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಸಸ್ಯಗಳಲ್ಲಿ ಕಬ್ಬಿಣದ ಅಂಶದ ಕೊರತೆ ಎಲೆಗಳ ಹಸಿರು ಬಣ್ಣದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಸತು ಸಸ್ಯಗಳ ವಂಶಾಭಿವೃದ್ದಿಗೆ ಸಂಬಂಧಿಸಿದಂತೆ ಪ್ರಮುಖವಾಗಿದ್ದು ಗಿಡದ ಹಣ್ಣು ಮತ್ತು ಬೀಜಗಳ ಸದೃಢ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. ಇನ್ನು ಮ್ಯಾಂಗನೀಸ್ ಸಸ್ಯದ ಕಿಣ್ವಗಳ ರಚನೆಯ ಕಾರ್ಯವೈಕರಿಗೆ ಸಹಾಯಕವಾಗಿದ್ದು ಬೋರಾನ್ ಸಸ್ಯಗಳ ವಂಶಾಭಿವೃದ್ದಿ ಅಂಗಗಳ ರಚನೆಯಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸುತ್ತದೆ. ಅಡಿಕೆ ಬೆಳೆಯಲ್ಲಿ ಹೂವ್ವು ಹಾಗೂ ಹರುಳು ಉದುರುವುದು ಬೋರಾನ್ ನ ಕೊರತೆಯಿಂದ. ಮಾಲಿಬ್ಡಿನಿಂ ದ್ವಿದಳ ದಾನ್ಯಗಳ ಬೇರುಗಳಲ್ಲಿ ಗಂಟು ಮೂಡಿ ಸಾರಜನಕ ಸ್ಥಿರೀಕರಣಕ್ಕೆ ಅನುಕೂಲ ಕಲ್ಪಿಸುತ್ತದೆ ಅಂತೆಯೇ ಕ್ಲೋರಿನ್ ಸಸ್ಯದಲ್ಲಿರುವ ಉಪ್ಪಿನ ಪ್ರಮಾಣವನ್ನು ಸಮತೋಲನ ಮಾಡಲು ಅನುಕೂಲಕಾರಿ.

ಲಘು ಪೋಷಕಾಂಶ ಹಾಗೂ ಸೂಕ್ಷ್ಮ ಪೋಷಕಾಂಶಗಳ ಕೊರತೆ ಸಸ್ಯದ ಎಲೆಗಳ ಬೆಳವಣಿಗೆಯ ಮೇಲೆ ಪರಿಣಾಮ ಉಂಟುಮಾಡುತ್ತವೆ. ಎಲೆಗಳ ವಿಕೃತ ಬೆಳವಣಿಗೆ, ಎಲೆಗಳ ಹಸಿರು ಬಣ್ಣದಲ್ಲಿನ ವ್ಯತ್ಯಾಸ ಮತ್ತು ಹೂವ್ವು ಹಣ್ಣುಗಳ ವಕ್ರತೆ ಈ ಪೋಷಕಾಂಶಗಳ ಕೊರತೆಯ ಪರಿಣಾಮಗಳಾಗಿವೆ.

ಇಂಗಾಲ, ಜಲಜನಕ ಹಾಗೂ ಆಮ್ಲಜನಕ ನೈಸರ್ಗಿಕವಾಗಿ ದೊರೆಯುವ ಪೋಷಕಾಂಶಗಳಾಗಿದ್ದು ಇವುಗಳನ್ನು ನಾವು ಕೃತಕವಾಗಿ ಪೂರೈಸುವ ಅಗತ್ಯವಿರುವುದಿಲ್ಲ ನೀರು ಹಾಗೂ ಗಾಳಿಯ ಮುಖಾಂತರ ಇವು ಸಸ್ಯಗಳಿಗೆ ದೊರೆಯುತ್ತವೆ.

ಈ ಹಿನ್ನೆಲೆಯಲ್ಲಿ ಸಸ್ಯಗಳ ಪೋಷಕಾಂಶಗಳ ಪೂರೈಕೆಗೆ ಸಂಬಂಧಿಸಿದಂತೆ ನಾವು ಕೇವಲ ಕೆಲವೇ ಅಂಶಗಳ ಮೇಲೆ ಗಮನ ಹರಿಸುವುದಕ್ಕಿಂತಲೂ ಸಮಗ್ರ ಪೋಷಕಾಂಶಗಳನ್ನು ಪೂರೈಸುವ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಕಾಂಪೋಸ್ಟ್ ಮತ್ತು ಎರೆಹುಳುವಿನ ಗೊಬ್ಬರಗಳತ್ತಲೂ ಗಮನ ಹರಿಸಬೇಕಿದೆ.

-ಅರಕಲಗೂಡು ವಿ. ಮಧುಸೂದನ್