ಜಿಲ್ಲೆಯಲ್ಲಿ ರೋಗಾಣು ಕಾಟದಿಂದ ಪಪಾಯ ಬೆಳೆಯುವವರ ಪ್ರಮಾಣ ಕಡಿಮೆ ಆಗುತ್ತಿದೆ ಎಂಬ ಭಯದ ನಡುವೆಯೂ ರೈತರೊಬ್ಬರು ಸಮೃದ್ಧ ಪಪಾಯ ಬೆಳೆದು ಉತ್ತಮ ಆದಾಯಗಳಿಸಿದ್ದಾರೆ.
ತಾಲೂಕಿನ ಬೀರಾವರ ಗ್ರಾಮದ ರೈತ ಸಿ.ಎನ್.ಕುಮಾರ್ ಅವರು ತಮ್ಮ ಮೂರು ಎಕರೆ ಪ್ರದೇಶದಲ್ಲಿ ಎರಡು ಎಕರೆ ಮೂವತ್ತು ಗುಂಟೆಯಲ್ಲಿ ಸುಮಾರು ೨ ಸಾವಿರ ಪಪಾಯ ಗಿಡಗಳನ್ನು ಹಾಕಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಪ್ರತಿ ಗಿಡಕ್ಕೆ ೮ ಅಡಿ ಅಂತರದಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಹನಿ ನೀರಾವರಿ ಪದ್ಧತಿಯಿಂದ ಕಡಿಮೆ ಪ್ರಮಾಣದಲ್ಲಿ ನೀರು ಬಳಸಲಾಗುತ್ತಿದೆ. ಎರಡು ದಿನಗಳಿಗೊಮ್ಮೆ ನೀರು ಹಾಯಿಸಲಾಗುತ್ತಿದೆ. ಗಿಡಗಳ ಬುಡಕ್ಕೆ ಸಗಣಿ ಗೊಬ್ಬರ, ಬೇವಿನ ಇಂಡಿ ಹಾಕಲಾಗಿದ್ದು, ರೋಗಾಣುಗಳ ಕಾಟದಿಂದ ಅವಶ್ಯ ಬಿದ್ದಾಗ ಅಲ್ಪಸ್ವಲ್ಪ ರಸಾಯನಿಕ ಕೂಡ ಸಿಂಪಡಿಸಲಾಗುತ್ತದೆ.
ಐದಾರು ವರ್ಷಗಳ ಕಾಲ ರಾಗಿ, ಮೆಕ್ಕೆಜೋಳ ಬೆಳೆಯುತ್ತಿದ್ದ ಸಿ.ಎನ್.ಕುಮಾರ್ ಅವರು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದೇವರಾಜ್ ಅವರ ಮಾರ್ಗದರ್ಶನದಿಂದ ಮೊದಲ ಪ್ರಯತ್ನದಲ್ಲೇ ಭರಪೂರ ಪಪಾಯ ಬೆಳೆ ಬೆಳೆದು ಅಕ ಲಾಭಗಳಿಸಿದ್ದಾರೆ.
ಸಸಿ ನಾಟಿ ಮಾಡಿದ ೮-೯ ತಿಂಗಳಿಗೆ ಕಟಾವಿಗೆ ಬಂತು. ಮೊದಲ ಕಟಾವಿನ ಬಳಿಕ ಪ್ರತಿ ೧೫ ರಿಂದ ೨೦ ದಿನಕ್ಕೆ ಕಟಾವು ಮಾಡಲಾಗುತ್ತದೆ. ಮೊದಲ ಹಂತದಲ್ಲಿ ೧ ಟನ್ ಬೆಳೆ ಬಂತು. ಆಗ ಪ್ರತಿ ಕೆ.ಜಿ.ಗೆ ೧೦ ರೂ.ನಂತೆ ಮಾರಾಟ ಮಾಡಲಾಗಿತ್ತು. ೨ನೇ ಕಟಾವಿನಲ್ಲಿ ೩ ಟನ್, ಪ್ರತಿ ಕೆ.ಜಿ.ಗೆ ೧೨ ರೂ, ೩ನೇ ಕಟಾವಿನಲ್ಲಿ ೪.೫ ಟನ್, ಪ್ರತಿ ಕೆ.ಜಿ.ಗೆ ೧೨ ರೂ, ೪ನೇ ಕಟಾವಿನಲ್ಲಿ ಪ್ರತಿ ಕೆ.ಜಿ.ಗೆ ೧೮ ರೂ, ೫ನೇ ಕಟಾವಿನಲ್ಲಿ ಏಳು ಟನ್ ಬೆಳೆ ಸಿಗಬಹುದು. ಪ್ರಸ್ತುತ ಪ್ರತಿ ಕೆ.ಜಿ.ಗೆ ೨೩ ರಿಂದ ೨೪ ರೂ. ಇದೆ. ಇನ್ನೂ ೩-೪ ಕಟಾವು ಸಿಗುವ ನಿರೀಕ್ಷೆಯಿದೆ. ಖರ್ಚು ತೆಗೆದು ೪-೫ ಲಕ್ಷ ಆದಾಯ ಸಿಗಬಹುದು ಎಂದು ಅಂದಾಜಿಸಲಾಗಿದೆ. ಐದನೇ ಕಟಾವಿನಲ್ಲಿ ಬಹುತೇಕ ಹಣ್ಣುಗಳು ಮೂರರಿಂದ ನಾಲ್ಕು ಕೆ.ಜಿ. ತೂಕ ಇವೆ. ಆರಂಭದ ಕಟಾವಿನಲ್ಲೂ ನಾಲ್ಕೈದು ಕೆ.ಜಿ. ತೂಕದ ಹಣ್ಣುಗಳು ಬೆಳವಣಿಗೆ ಹೊಂದಿದ್ದವು. ಬೆಂಗಳೂರು, ಮುಂಬೈ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ರಂಜಾನ್ ಉಪವಾಸ ವ್ರತ ಇರುವುದರಿಂದ ಈಗ ಉತ್ತಮ ಬೆಲೆ ಸಿಕ್ಕಿದೆ ಎಂದು ಸಿ.ಎನ್.ಕುಮಾರ್ ತಿಳಿಸುತ್ತಾರೆ.
ನನಗಿಂತಲೂ ಹೆಚ್ಚು ನಮ್ಮ ತಂದೆ ನಿಂಗಪ್ಪ ಅವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಈಗ ೮೧ ವರ್ಷ ಆಗಿದ್ದರೂ ಯುವಕರನ್ನು ನಾಚಿಸುವಂತೆ ಕೆಲಸ ಮಾಡುತ್ತಾರೆ. ಕೃಷಿ ಮೇಲೆ ಅವರಿಗೆ ಇರುವ ಪ್ರೀತಿ, ಕಾಳಜಿ ನಮ್ಮಲ್ಲೂ ಒಲವು ಮೂಡಿಸಿದೆ ಎನ್ನುತ್ತಾರೆ ಕುಮಾರ್.
ಜಮೀನು ಖರೀದಿಸಿದ ಆರಂಭದ ಐದಾರು ವರ್ಷ ೧೦ ಚೀಲ ರಾಗಿ, ಇಲ್ಲಾಂದ್ರೆ ೫೦ ಚೀಲ ಮೆಕ್ಕೆಜೋಳ ಬೆಳೆಯುತ್ತಿದ್ವಿ, ಆದರೆ ತೋಟಗಾರಿಕೆ ಅಕಾರಿಗಳ ಮಾರ್ಗದರ್ಶನದಿಂದ ಈ ಬಾರಿ ಉತ್ಕೃಷ್ಠ ಪಪಾಯ ಬೆಳೆ ಬೆಳೆದಿದ್ದೇವೆ. ಸಿ.ಎನ್.ಕುಮಾರ್ ಅವರ ತಂದೆ ನಿಂಗಪ್ಪ ಹೇಳುತ್ತಾರೆ.