ಚಿತ್ರದುರ್ಗ: ಬಯಲುಸೀಮೆ ಚಿತ್ರದುರ್ಗದಲ್ಲಿ ಮಾವು ತನ್ನದೇಯಾದ ಪ್ರಾಮುಖ್ಯತೆ ಹೊಂದಿದೆ. ಜಿಲ್ಲೆಯಲ್ಲಿ ಒಟ್ಟು 2609. 61 ಹೆಕ್ಟೇರ್ ಭೂಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಮಾವು ಬೆಳೆಯನ್ನು ಸಂರಕ್ಷಿಸಿಕೊಳ್ಳಲು ತೋಟಗಾರಿಕೆ ಇಲಾಖೆಯು ರೈತರಿಗೆ ಕೆಲವು ಸಲಹೆಗಳನ್ನು ನೀಡಿದೆ.

ಜಿಲ್ಲೆಯಲ್ಲಿ ಒಟ್ಟು 2609. 61 ಹೆ. ನಲ್ಲಿ ಮಾವು ಬೆಳೆಯಲಾಗುತ್ತಿದ್ದು, ತಾಲ್ಲೂಕುವಾರು ವಿವರ ಇಂತಿದೆ. ಚಳ್ಳಕೆರೆ-247.75 ಹೆ., ಚಿತ್ರದುರ್ಗ-223 ಹೆ., ಹೊಳಲ್ಕೆರೆ-1354 ಹೆ., ಹಿರಿಯೂರು-471.19 ಹೆ., ಹೊಸದುರ್ಗ-225.64 ಹೆ. ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 88 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ.

ಮಾವು ಬೆಳೆಯು ಉಷ್ಣವಲಯದ ಬೆಳೆಯಾಗಿದ್ದು, ತೇವಾಂಶ ಹಾಗೂ ಒಣಹವೆಯಿಂದ ಕೂಡಿದ ಎರಡು ಸನ್ನಿವೇಶಗಳಲ್ಲಿಯೂ ಬೆಳೆಯಬಹುದಾಗಿದೆ. ಈ ಸಸ್ಯಗಳು ಹೂ ಬಿಡುವ ಸಮಯದಲ್ಲಿ ಮಳೆ ಹಾಗೂ ಮೋಡ ಕವಿದ ವಾತಾವರಣವಿದ್ದಲ್ಲಿ ಬೂದಿರೋಗ ಹಾಗೂ ಜಿಗಿ ಹುಳುವಿನ ಹಾವಳಿಗೆ ಹೆಚ್ಚು ತುತ್ತಾಗುವ ಸಂಭವವಿರುತ್ತದೆ.  ಸದ್ಯ ಜಿಲ್ಲೆಯಲ್ಲಿ ಮಾವಿನ ಮರಗಳು ಉತ್ತಮವಾಗಿ ಹೂ ಬಿಟ್ಟಿದ್ದು, ಕಾಯಿ ಕಟ್ಟುವ ಸಮಯ ಇದಾಗಿದೆ.  ಹೀಗಾಗಿ ಮಾವು ಬೆಳೆಯ ಸಂರಕ್ಷಣೆಗಾಗಿ ರೈತರು ಕೆಲವು ಕ್ರಮಗಳನ್ನು ಅನುಸರಿಸಬೇಕಿದೆ.  ಈ ದಿಸೆಯಲ್ಲಿ ತೋಟಗಾರಿಕೆ ಇಲಾಖೆ ರೈತರಿಗೆ ಸಲಹೆಗಳನ್ನು ನೀಡಿದೆ.

ಜಿಲ್ಲೆಯಲ್ಲಿ ಬಾದಾಮಿ, ರತ್ನಗಿರಿ, ರಸಪುರಿ, ತೋತಾಪುರಿ, ಮಲಗೋವಾ, ನೀಲಂ, ಬೆನ್‍ಶ್ಯಾನ್, ಮಲ್ಲಿಕಾ, ಸೇರಿದಂತೆ ವಿವಿಧ ತಳಿಯ ಮಾವಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಬಾದಾಮಿ ಹೆಚ್ಚು ಜನಪ್ರಿಯವಾದ ಹಣ್ಣು. ಉತ್ಕøಷ್ಟ ಗುಣಮಟ್ಟದ ಹಣ್ಣು ಕೊಡುವ ತಳಿಯಾಗಿದ್ದು, ದೇಶ, ವಿದೇಶಗಳಲ್ಲಿಯೂ ಹೆಚ್ಚು ಜನಪ್ರಿಯವಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ತಳಿಯಾಗಿದೆ. ಇದು ಸಾಧಾರಣ ಇಳುವರಿ ಮತ್ತು 2 ವರ್ಷಕ್ಕೊಮ್ಮೆ ಅಧಿಕ ಇಳುವರಿ ಕೊಡುವ ತಳಿಯಾಗಿದೆ.

ಮಾವಿನಲ್ಲಿ ಹೂವು ಬಿಡುವ ಮತ್ತು ಕಾಯಿ ಕಟ್ಟುವ ಅವಧಿಯಲ್ಲಿ ರೈತರು ಕೈಗೊಳ್ಳಬೇಕಾದ ಅಗತ್ಯ ಸಸ್ಯ ಸಂರಕ್ಷಣಾ ಕ್ರಮಗಳು ಇಂತಿವೆ. ಈ ಹಂತದಲ್ಲಿ ಹೂ, ಮೊಗ್ಗು, ಅರಳಿದ ಹೂ ತೆನೆ, ಕಚ್ಚಿದ ಎಳೆಯ ಕಾಯಿಗಳಿಂದ ಮಾರಕ ರೋಗಗಳನ್ನು ರಕ್ಷಿಸುವುದು ಅತ್ಯಗತ್ಯ.

ಮಾವಿಗೆ ಕಾಡುವ ಕೀಟಗಳು: ಜಿಗಿಹುಳು, ಹಣ್ಣಿನ ನೊಣ, ಓಟೆ ಕೊರಕ ಹುಳು, ಎಲೆಗಂಟು ಮಸಕ, ರೆಂಬೆಕುಡಿ ಕೊರಕ, ಹಿಟ್ಟು ತಿಗಣೆ, ಎಲೆ ತಿನ್ನುವ ಹುಳು, ಕೆಂಪು ಇರುವೆ, ಮೈಟ್‍ನುಸಿ, ಕಾಂಡಕೊರಕ ಹುಳು ಕೀಟಗಳು ಮಾವು ಬೆಳೆಗೆ ಹೆಚ್ಚು ಹಾನಿಯುಂಟು ಮಾಡುತ್ತವೆ.

ಸಸ್ಯ ಸಂರಕ್ಷಣಾ ಕ್ರಮಗಳು: ಹೂವು ಬಿಡುವುದಕ್ಕಿಂತ ಮುಂಚೆ ಹಾಗೂ ಕಾಯಿ ಕಟ್ಟಿದ ಕೂಡಲೆ ಮಾವಿನಲ್ಲಿ ಜಿಗಿಹುಳು ನಿಯಂತ್ರಣಕ್ಕಾಗಿ ಗಿಡಗಳಿಗೆ ನಾಲ್ಕು ಗ್ರಾಂ ಕಾರ್ಬಾರಿಲ್ + 2 ಮಿ.ಲೀ ಮೇಲಾಥೀಯನ್ + 0.25 ಮಿ.ಲೀ ಇಮೀಡಾ ಕ್ಲೋಪ್ರೀಡ್ ಇವುಗಳನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಹೂವು ಬಿಟ್ಟಾಗ ಮತ್ತು ಪರಾಗಸ್ಪರ್ಶ ಆಗುತ್ತಿರುವ ಸಮಯದಲ್ಲಿ ಗಂಧಕವನ್ನು ಸಿಂಪಡಿಸಬಾರದು. ಕಾರಣ ಗಂಧಕವು ಪರಾಗ ಸ್ಪರ್ಶ ಕ್ರಿಯೆಗೆ ಸಹಕರಿಸುವ ಕೀಟಗಳಿಗೆ, ಅರಳಿದ ಹೂಗಳಿಗೆ ಹಾಗೂ ಎಳೆಯ ಕಾಯಿಗಳಿಗೆ ತೊಂದರೆ ಉಂಟು ಮಾಡುತ್ತದೆ. ಪರಾಗ ಸ್ಪರ್ಶ ಆಗುತ್ತಿರುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಾಯಿಗಳು ಊದರದಂತೆ ನೋಡಿಕೊಳ್ಳಲು ಅವುಗಳಿಗೆ ಸಸ್ಯ ಬೆಳವಣಿಗೆ ಛೋಧಕ-ಎನ್‍ಎಎ-50 ಪಿಪಿಎಂ ಪ್ರಮಾಣದಲ್ಲಿ ಸಿಂಪಡಿಸಬೇಕು. ಕಾಯಿ ಕಟ್ಟಿದ ನಂತರ ಗೋಲಿ ಗಾತ್ರದ ಹಂತದಲ್ಲಿ ತಪ್ಪದೇ ಲಘು ಪೋಷಕಾಂಶ ಮಿಶ್ರಣವಾದ ಮ್ಯಾಂಗೋ ಸ್ಪೆಷನ್ ಸಿಂಪರಣೆಯನ್ನು ಕೈಗೊಳ್ಳುವುದು. ಫಸಲನ್ನು ಹಣ್ಣಿನ ನೊಣದ ಭಾದೆಯಿಂದ ರಕ್ಷಿಸಲು ತಪ್ಪದೇ ಹಣ್ಣಿನ ನೊಣದ ಮೋಹಕ ಬಲೆಗಳನ್ನು ಅಳವಡಿಸಿಕೊಳ್ಳಬೇಕು.

ಮಾವು ಬೆಳೆಗಾರರಿಂದ ನೇರವಾಗಿ ಮಾವು ಖರೀದಿಸಿ ರೈತ ಸಮುದಾಯವನ್ನು ಉತ್ತೇಜಿಸಲು ಆನ್‍ಲೈನ್ ನೇರ ಮಾರಾಟಕ್ಕೆ ಇಲಾಖೆಯು ಅವಕಾಶ ಒದಗಿಸಿದ್ದು, ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಕಚೇರಿ ಅಥವಾ ವೆಬ್‍ಸೈಟ್ https://karsirimangoes.karnataka.gov.in  ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.