ಚಿತ್ರದುರ್ಗ: ನಮ್ಮ ಪುರಾತನವಾದ ಕೃಷಿಯಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಬೇರೆತ್ತಿದ್ದರ ಫಲವಾಗಿ ನಮ್ಮ ಭೂಮಿ ಫಲವತ್ತತೆಯನ್ನು ಕಳೆದುಕೊಂಡು ಬಂಜೆಯಾಗಿದೆ ಇದು ಮತ್ತೆ ಫಲವತ್ತತೆಯಾಗಬೇಕಾದರೆ ನಾವುಗಳು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಪದ್ಮಶ್ರೀ ಸುಭಾಷ್ ಪಾಳೇಕರ್ ಕರೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಕರ್ನಾಟಕ, ಅಮೃತಭೂಮಿ ಅಂತರಾಷ್ಟ್ರೀಯ ಸುಸ್ತಿರ ಅಭಿವೃದ್ಧಿ ಕೇಂದ್ರ, ಚಾಮರಾಜನಗರ ಮತ್ತು ಉಳಿಮೆ ಪ್ರತಿಷ್ಠಾನ, ಮೈಸೂರು ಇವರ ಸಂಯುಕ್ತಾಶ್ರದಲ್ಲಿ ಮುರುಘಾಮಠದ ಅನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಐದು ದಿನದ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷಿಗೆ ಭಾರತದ ಪುರಾತನವಾದ ಸಂಸ್ಕೃತಿಯಾಗಿದೆ, ಇಲ್ಲಿ ನಮ್ಮ ಪೂರ್ವಿಕರು ಯಾವುದೇ ರೀತಿಯ ರಾಸಾಯನಿಕ ಗೊಬ್ಬರದ ಬಳಕೆ ಇಲ್ಲದೆ ನೈಸರ್ಗಿಕವಾದ ವಸ್ತುಗಳನ್ನು ಬಳಕೆ ಮಾಡುವುದರ ಮೂಲಕ ಉತ್ತಮವಾದ ಇಳುವರಿ ಮತ್ತು ಪೌಷ್ಟಿಕವಾದ ಆಹಾರವನ್ನು ಬೆಳೆಯುವ ಪದ್ದತಿಯನ್ನು ನಮಗೆ ನೀಡಿದ್ದರು, ಆದರೆ ಇತ್ತೀಚೇಗೆ ಕೆಲವರು ರಾಸಾಯನಿಕ ಗೊಬ್ಬರವನ್ನು ಹಾಕುವುದರ ಮೂಲಕ ಬೆಳೆಯನ್ನು ಬೆಳೆಯಲು ಪ್ರಾರಂಭ ಮಾಡಿದರು ಆದರೆ ಇದರ ಪರಿಣಾಮ ಈಗ ನಮ್ಮ ಮೇಲೆ ಬೀರುತ್ತಿದೆ ಎಂದು ವಿಷಾಧಿಸಿದರು.
ರಾಸಾಯನಿಕ ಗೊಬ್ಬರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಕೆ ಮಾಡಿದ್ದರ ಫಲವಾಗಿ ಭೂಮಿ ಬಂಜರಾಗಿದೆ, ಇದರಲ್ಲಿ ಬೆಳೆಯುವ ಆಹಾರ ವಿಷವಾಗಿದ್ದು, ಅಪೌಷ್ಟಿಕತೆಯಿಂದ ಕೂಡಿದೆ. ಇದನ್ನು ಸೇವಿಸುವ ನಾವುಗಳು ವಿವಿಧ ರೋಗದಿಂದ ಬಳಲುತ್ತಿದ್ದೇವೆ. ನಮ್ಮ ಪುರಾತನವಾದ ನೈಸರ್ಗಿಕವಾದ ಕೃಷಿ ಪದ್ದತಿಯಿಂದ ಜನರ ಜೀವನ ಉತ್ತಮವಾಗಿ ಇರುತ್ತಲ್ಲದೆ ಭೂಮಿಯೂ ಸಹಾ ಯಾವುದೇ ರೀತಿಯ ವಿಷವನ್ನು ನೀಡದೆ ಉತ್ತಮವಾದ ಆಹಾರವನ್ನು ನೀಡುತ್ತಿತು ಎಂದ ಅವರು, ನಮ್ಮ ಕೃಷಿಕರು ಬೆಳೆಯವ ಬೆಳೆಯಲ್ಲಿ ಪೌಷಿಕಾಂಶವನ್ನು ನೋಡದೆ ಹಣದ ಹಿಂದೆ ಓಡಿದ್ದರ ಫಲವಾಗಿ ಆಹಾರ ಬೆಳೆಗಳನ್ನು ಬೆಳೆಯುವ ಪ್ರಮಾಣ ಕಡಿಮೆಯಾಗಿ ವ್ಯವಹಾರಿಕ ಬೆಳೆಗಳನ್ನು ಬೆಳೆಯುವ ಪ್ರಮಾಣ ಜಾಸ್ತಿಯಾಗಿದೆ ಸುಭಾಷ್ ಪಾಳೇಕರ್ ಹೇಳಿದರು.
ಇಂದಿನ ದಿನಮಾನದಲ್ಲಿ ರಾಸಾಯನಿಕ ಗೊಬ್ಬರ, ಕ್ರೀಮಿನಾಶಕಗಳ ಸಿಂಪಡಣೆ, ಬಿತ್ತನೆ ಬೀಜ, ಈ ರೀತಿಯಾದ ಕೃಷಿಗೆ ಸಂಬಂಧಪಟ್ಟ ವಸ್ತುಗಳ ಬಳಕೆಯಿಂದಾಗಿ ಉತ್ಪಾದನೆಯ ವೆಚ್ಚ ಜಾಸ್ತಿಯಾದರೆ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ಬಿತ್ತನೆ ಮಾಡಿದ ಬೆಳೆಯ ಬೆಲೆ ಬಾರದೆ ರೈತ ಆತ್ಮಹತ್ಯೆಯ ದಾರಿಯನ್ನು ಹಿಡಿದಿದ್ದಾನೆ, ಭಾರತದಲ್ಲಿ ಕರ್ನಾಟಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಾನದಲ್ಲಿ ಮೂರನೇ ಸ್ಥಾನದಲ್ಲಿದೆ, ಇದರ ಬಗ್ಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಗಮನ ನೀಡಿಲ್ಲ, ರೈತರ ಆತ್ಕಹತ್ಯೆಯನ್ನು ಕಡಿಮೆ ಮಾಡುವ ಅಥವಾ ತಡೆಯವ ಕಾರ್ಯವನ್ನು ಮಾಡಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೃಷಿ ಎನ್ನುವುದು ಇಂದಿನ ದಿನಮಾನದಲ್ಲಿ ಛಾಲೆಂಜ್ ಕೆಲಸವಾಗಿದೆ, ಪ್ರಕೃತಿಯನ್ನು ನಂಬಿಕೊಂಡು ಕೆಲಸವನ್ನು ಮಾಡುವ ಕೃಷಿಕ ಮಳೆ ಬಂದರೆ ಮಾತ್ರ ಬೆಳೆ ಎನ್ನುವಂತಾಗಿದೆ, ಭೂಮಿಯಲ್ಲಿ ನೀರಿಲ್ಲದೆ ನೀರಿದ್ದರೂ ಕರೆಂಟ್ ಇಲ್ಲದೆ ಬಿತ್ತಿದ ಬೆಳೆ ಕೈಗೆ ಬಾರದೆ ಬಾಡುತ್ತಿರುವುದನ್ನು ನೋಡಲಾಗದೆ ರೈತ ಆತ್ಕಹತ್ಯೆ ಮಾಡಿಕೊಂಡರೆ ಇದಕ್ಕೆ ಸರಿಯಾದ ದಾಖಲೆ ಇಲ್ಲ ಎಂದು ಸರ್ಕಾರ ನೀಡುವ ಪರಿಹಾರವೂ ಸಹಾ ಸರಿಯಾದ ರೀತಿಯಲ್ಲಿ ಧಕ್ಕುತ್ತಿಲ್ಲ ಎಂದ ಅವರು ಪಾಶ್ಚಿಮಾತ್ಯರು ಪುನರ್‌ಜನ್ಮವನ್ನು ನಂಬದೇ ಈಗ ಸಿಕ್ಕಿರುವ ಮಾನವ ಜನ್ಮವನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಬೇಕೆಂದು ದೇವರು ನೀಡಿದ ಸಂಪತ್‌ನ್ನು ಅನುಭವಿಸಿ ಮುಂದಿನ ಪೀಳಿಗೆಗೆ ಏನು ಇಲ್ಲದಂತೆ ಮಾಡುತ್ತಿದ್ದಾರೆ, ಇದೇ ಮಾದರಿಯಲ್ಲಿ ನಮ್ಮ ದೇಶದ ಜನತೆಯೂ ಸಹಾ ಮಾಡುತ್ತಿರುವುದರಿಂದ ನಮಗೆ ಸಂಕಷ್ಟ ಬಂದಿದೆ ಎಂದು ಪಾಳೇಕರ್ ನುಡಿದರು. ನಮ್ಮ ಅಭೀವೃದ್ದಿಯನ್ನು ಬೇರೆ ಯಾರು ಬಂದು ಬದಲಾಯಿಸುವುದಿಲ್ಲ ನಾವೇ ಬದಲಾಯಿಸಿಕೊಳ್ಳಬೇಕಿದೆ.
ಇದಕ್ಕೂ ಮುನ್ನಾ ಮುರುಘಾ ಮಠದ ಆವರಣದಲ್ಲಿ ಮಕ್ಕಳಿಂದ ಸಸಿಗಳನ್ನು ನಡೆವುದರ ಮೂಲಕ  ಕಾರ್ಯಗಾರವನ್ನು ಉದ್ಘಾಟಿಸಲಾಯಿತು.   ಅಧ್ಯಕ್ಷತೆಯನ್ನು ಡಾ|| ಶಿವಮೂರ್ತಿ ಮುರುಘಾ ಶರಣರು ವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ಚಂದ್ರಶೇಖರ ಕಾಡಾದಿ, ನೈಸರ್ಗಿಕ ಕೃಷಿಕರಾದ ನರಸಿಂಹರೆಡ್ಡಿ, ಶ್ರೀಮತಿ ಸುನೀತಮ್ಮ, ಶಂಕರಗೌಡ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ ಭಾವಹಿಸಲಿದ್ದಾರೆ.
ಮುರಾರ್ಜಿ ತಂಡ ರೈತ ಗೀತೆಯ ಗಾಯನ ಮಾಡಿದರೆ ಕಾರ್ಯಕ್ರಮದ ಸಂಘಟಕರಾದ ಅವಿನಾಶ್ ಸ್ವಾಗತಿಸಿ ಕಾರ್ಯಗಾರದ ಮಾಹಿತಿ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.