ಬಾಗಲಕೋಟೆ: ದಾಳಿಂಬೆಗೆ ಬರುವ ದುಂಡಾಣು ರೋಗ ನಿಯಂತ್ರಣಕ್ಕೆ ಸಸ್ಯರೋಗ ವಿಜ್ಞಾನಿಗಳು ಹೊಸ ಆವಿಷ್ಕಾರ ಮಾಡಿದ್ದಾರೆ.  ಬಳ್ಳಾರಿ ಜಾಲಿ ಗಿಡವನ್ನು ಬೇಲಿ ಆಗಿ ಅಥವ ಮನೆಗೆ ಉರವಲಾಗಿ ಬಳೆಸಲ್ಪಡುತ್ತಿತ್ತು. ಆದ್ರೆ ಬಳ್ಳಾರಿ ಜಾಲಿ ಗಿಡ ಇನ್ನು ಮುಂದೆ ದಾಳಿಂಬೆಯ ದುಂಡಾಣು ರೋಗದ ನಿಯಂತ್ರಕ ಮದ್ದಾಗಿ ಬಳಕೆ ಮಾಡಬಹುದು ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಬಳ್ಳಾರಿ ಜಾಲಿಯ ಸೊಪ್ಪಿನಿಂದ ಕಷಾಯ ತಯಾರಿಸಿ ಅದನ್ನು ನೀರಲ್ಲಿ ಬೆರೆಸಿ ದಾಳಿಂಬೆ ಗಿಡಕ್ಕೆ ಸಿಂಪಡಿಸುವ ಕೆಲಸವನ್ನು ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯದ ಸಸ್ಯರೋಗ ವಿಜ್ಞಾನಿಗಳು ಮಾಡಿದ್ದಾರೆ. ಆ ಮೂಲಕ ದುಂಡಾಣು ರೋಗ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಾದಾಮಿ ತಾಲ್ಲೂಕು ಗೋವನಕೊಪ್ಪದಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ಕಷಾಯ ಬಳಕೆ ಮಾಡಿ ರೋಗ ನಿಯಂತ್ರಣಕ್ಕೆ ತರಲಾಗಿದೆ. ಈಗ ತೋಟಗಾರಿಕೆ ಮೇಳದಲ್ಲಿ ಅದನ್ನು ದಾಳಿಂಬೆ ಬೆಳೆಗಾರರಿಗೆ ಪರಿಚಯಿಸಲಾಗುತ್ತಿದೆ ಎಂದು ಸಸ್ಯರೋಗ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎ.ಪಿ.ಕಿರಣ್‌ಕುಮಾರ  ಹೇಳಿದ್ದಾರೆ.

ಶೇ 70ರಷ್ಟು ನಿಯಂತ್ರಣ: ‘ಬಳ್ಳಾರಿ ಜಾಲಿ ಸೊಪ್ಪನ್ನು ಚೆನ್ನಾಗಿ ರುಬ್ಬಿ ಅದರ ರಸವನ್ನೇ ಕಷಾಯವಾಗಿ ಬಳಕೆ ಮಾಡಲಾಗುತ್ತದೆ. 50 ಗ್ರಾಂ ಸೊಪ್ಪಿನಿಂದ ತಯಾರಿಸಿದ ರಸವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಅದನ್ನು ಗಿಡಗಳಿಗೆ ಸಿಂಪಡಿಸಬೇಕಿದೆ. ಇದರಿಂದ ಶೇ 70ರಷ್ಟು ರೋಗ ನಿಯಂತ್ರಣ ಸಾಧ್ಯ’ ಎನ್ನುತ್ತಾರೆ ಕಿರಣ್‌ಕುಮಾರ.

‘ಈಗ ದುಂಡಾಣು ರೋಗಕ್ಕೆ ಸ್ಟ್ರೆಪ್ಟೊಸೈಕ್ಲಿನ್ ಎಂಬ ದ್ರಾವಣವನ್ನು ಬೆಳೆಗಾರರು ಸಿಂಪಡಿಸುತ್ತಾರೆ. ಅದರ ಬದಲಿಗೆ ಇಲ್ಲವೇ ಅದರೊಂದಿಗೆ ಕಷಾಯ ಬೆರೆಸಿದಲ್ಲಿ ಪರಿಣಾಮಕಾರಿ ನಿಯಂತ್ರಣ ಸಾಧ್ಯ.

ಈಗ ಪ್ರತಿ ಲೀಟರ್ ನೀರಿಗೆ 0.5 ಮಿಲಿ ಲೀಟರ್ ಸ್ಟ್ರೆಪ್ಟೊಸೈಕ್ಲಿನ್ ದ್ರಾವಣ ಬಳಕೆ ಮಾಡಲಾಗುತ್ತಿದೆ. ಕಷಾಯ ಬಳಸಿದಲ್ಲಿ ಆ ಪ್ರಮಾಣವನ್ನು 0.25 ಮಿಲಿ ಲೀಟರ್‌ಗೆ ಕಡಿಮೆ ಮಾಡಬಹುದು. ಹಿತ್ತಲ ಗಿಡದ ಈ ಮದ್ದನ್ನು ಬೆಳೆಗಾರರು ಸುಲಭವಾಗಿ ಹಾಗೂ ಯಾವುದೇ ಖರ್ಚಿಲ್ಲದೇ ಬಳಸಬಹುದು’ ಎಂದು ಅವರು ಹೇಳುತ್ತಾರೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ಈ ನಂಬರ್ ಗೆ ಕರೆಮಾಡಿ. 94486–40881

ವಾಟ್ಸ್ ಆಪ್ ಸಂದೇಶ