ಭೂಮಿಯ ಹಕ್ಕುಳ್ಳವರು ಇಂದು ಭೂ ಒಡೆಯರೆಂದೆನಿಸಿಕೊಳ್ಳಬಹುದು ಆದರೆ ಒಡೆತನ ಇದ್ದವರೆಲ್ಲರೂ ಉತ್ತಮ ಕೃಷಿಕರು ಎಂದೆನಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಕೃಷಿ ಕೂಡಾ ಅನಾದಿಕಾಲದ ಒಂದು ವೃತ್ತಿಯಾಗಿದ್ದು ಇಲ್ಲಿ ಯಶಸ್ವಿಯಾಗಿರುವವರು ಬೆರಳೆಣಿಕೆಯಷ್ಟು ಮಾತ್ರ. ಕೃಷಿಯಷ್ಟೇ ಅಲ್ಲ ಯಾವುದೇ ವೃತ್ತಿಯಾಗಿರಲಿ ಅಲ್ಲಿ ಬೆಳವಣಿಗೆ ಹೊಂದಬೇಕು ಎಂದರೆ ಪರಿಶ್ರಮ ಹಾಗೂ ಬದ್ಧತೆ ಇರಲೇಬೇಕು. ಭೂಮಿ ಇಲ್ಲದಿದ್ದರೂ ಪರವಾಗಿಲ್ಲ ತನ್ನಲ್ಲಿರುವ ಪರಿಶ್ರಮ ಹಾಗೂ ಬದ್ಧತೆಯನ್ನೇ ಬಂಡವಾಳ ಮಾಡಿಕೊಂಡು ಮಣ್ಣು ಮುಟ್ಟಿ ಗೆದ್ದ ಅಪರೂಪದವರೂ ಇದ್ದಾರೆ ಅಂತಹವರ ಸಾಲಿನಲ್ಲಿ ನಿಲ್ಲುತ್ತಾರೆ ಚಿತ್ರದುರ್ಗದ ಮುತ್ತಯ್ಯನ ಹಟ್ಟಿಯ ಕೃಷಿಕ ನೆಲಜರುವ.

ಕಲಿತದ್ದು ಕೃಷಿ ಕಾಯಕ ಮಾತ್ರ: ನೆಲಜರುವ ಓದಿದ್ದು ಬಹಳ ಕಡಿಮೆ ಏಳನೇ ತರಗತಿಗೇ ಓದಿಗೆ ವಿದಾಯ ಹೇಳಿದ ನೆಲಜರುವ ಅಪ್ಪನನ್ನು ನೋಡ ನೋಡುತ್ತ ಕಲಿತಿದ್ದು ಕೃಷಿಯನ್ನು ಮಾತ್ರ. ಕೈ ಮುಟ್ಟಿ ದುಡಿದ ಬಾಲಕನಿಗೆ ಭೂಮಿಯ ಮೇಲೆ ಎಲ್ಲಿಲ್ಲದ ಪ್ರೀತಿ ಮಣ್ಣಿನೊಂದಿಗೇ ಹೆಚ್ಚು ಒಡನಾಟ ಇರಿಸಿಕೊಂಡ ನೆಲಜರುವ ಹಸು ಎಮ್ಮೆ ಕುರಿ ಕೋಳಿಗಳನ್ನು ನೋಡಿಕೊಂಡು ತನ್ನ ಜೀವನವನ್ನೇ ಕೃಷಿಗಾಗಿ ಮುಡುಪಿಟ್ಟುಕೊಂಡವರು. ಕೃಷಿ ಮೇಲಿನ ಅತೀವ ಮಮತೆ ಗಮನಿಸಿದ ತಂದೆ ಶಾಲೆ ಬಿಡಿಸಿ ಕೃಷಿಯಲ್ಲೇ ಇವರನ್ನು ಸಂಪೂರ್ಣವಾಗಿ ತೊಡಗುವಂತೆ ಮಾಡಿದರು ಇದನ್ನು ಅತ್ಯಂತ ಸಂತೋಷದಿಂದ ಒಪ್ಪಿಕೊಂಡ ನೆಲಜರುವ ಏಳನೇ ತರಗತಿಗೆ ಶಿಕ್ಷಣಕ್ಕೆ ವಿದಾಯ ಹೇಳಿ ತಮ್ಮ ಪಾಲಿಗಿದ್ದ ಕೃಷಿ ಭೂಮಿಯನ್ನು ಹಸನು ಮಾಡುತ್ತ ಮುಂದುವರಿದರು. ತಾನು ಓದಿಗೆ ವಿದಾಯ ಹೇಳುವ ಮುಖಾಂತರ ತನ್ನ ಸಹೋದರರು ಓದಲು ಅನುವು ಮಾಡಿಕೊಟ್ಟರು.

ಹಂತ ಹಂತವಾಗಿ ಏಳಿಗೆ ಕಂಡವರು: ತನ್ನ ಅನುಭವ ಹಾಗೂ ನೆರೆ ಹೊರೆಯ ಕೃಷಿಕರ ವಿವಿಧ ಪ್ರಯೋಗಗಳನ್ನು ಕಂಡು ಕೇಳಿದ ನೆಲಜರುವ ತನ್ನ ಕೃಷಿ ತಾಕಿನಲ್ಲಿಯೂ ಅನೇಕ ಪ್ರಯೋಗಗಳನ್ನು ಮಾಡಿ ಹಂತ ಹಂತವಾಗಿ ಮೇಲೆರಿದವರು. ಕೃಷಿ ಲಾಭದಾಯಕ ಆಗಬೇಕಾದರೆ ಕೇವಲ ರಾಗಿ, ಜೋಳ, ಹುರುಳಿ, ಅವರೆಯನ್ನಷ್ಟೇ ಬೆಳೆದರೆ ಸಾಲದು ಹೆಚ್ಚು ಹೆಚ್ಚು ಲಾಭ ತಂದುಕೊಡುವ ತರಕಾರಿ ಬೆಳೆಗಳು, ತೋಟಗಾರಿಕೆ ಬೆಳೆಗಳನ್ನು ಸಹ ಬೆಳೆಯಬೇಕು ಎಂಬುದನ್ನು ಅರಿತ ನೆಲಜರುವ ಈ ಎಲ್ಲ ಉತ್ತಮ ಅಂಶಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡರು. ಈರುಳ್ಳಿ, ಮೆಣಸಿನಕಾಯಿ, ಮೆಕ್ಕೆಜೋಳದಂತಹ ಪದಾರ್ಥಗಳನ್ನು ಬೆಳೆಯುವ ಮುಖಾಂತರ ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿಸಿಕೊಂಡರು. ನೀರಾವರಿ ಸೌಲಭ್ಯವಿದ್ದ ಜಮೀನಿನಲ್ಲಿ ತೆಂಗು ಹಾಗೂ ಅಡಿಕೆ ಬೆಳೆಗಳನ್ನು ಬೆಳೆಯುವ ಮುಖಾಂತರ ಕೃಷಿಯನ್ನು ಮತ್ತಷ್ಟು ಲಾಭದಾಯಕವನ್ನಾಗಿಸಿಕೊಂಡರು. ಈ ಎಲ್ಲ ಬೆಳವಣಿಗೆ ಒಂದು ಹಂತ ತಲುಪುವ ವೇಳೆಗೆ ಸಹೋದರರ ಒತ್ತಾಯಕ್ಕೆ ಮಣಿದು ಇದುವರೆಗೂ ಅಭಿವೃದ್ಧಿಗೆ ಒಳಪಡಿಸಿದ್ದ ಜಮೀನನ್ನೆಲ್ಲಾ ಎಲ್ಲ ಸಹೋದರರಿಗೂ ಹಂಚುವುದು ಅನಿವಾರ್ಯವಾಗಿತ್ತು.

ಪಾಲಿಗೆ ಬಂದದ್ದು ಪಂಚಾಮೃತ : ಸಹೋದರರಿಗೆಲ್ಲರಿಗೂ ಸಮಾನವಾಗಿ ಜಮೀನು ಹಂಚಿದ ಮೇಲೆ ಇವರ ಪಾಲಿಗೆ ಬಂದ ಜಮೀನಿನಲ್ಲಿಯೇ ಕೃಷಿ ಆರಂಭಿಸಿದರು ಆದರೆ ಇವರ ಪಾಲಿನ ಜಮೀನು ಕೆರೆ ಪಕ್ಕದಲ್ಲಿಯೇ ಇದ್ದುದರಿಂದ ಹೆಚ್ಚು ತೇವ ಹಾಗೂ ಸವುಳಿಗೆ ಒಳಗಾಗಿ ಯಾವುದೇ ಬೆಳೆಗಳು ಇಲ್ಲಿ ಹುಲುಸಾಗಿ ಬರಲಿಲ್ಲ ಸವುಳನ್ನು ಕಡಿಮೆ ಮಾಡಲಾಯ್ತಾದರೂ ತೇವಾಂಶದ ಪ್ರಮಾಣವನ್ನ ಕಡಿಮೆ ಮಾಡಲು ಸಾಧ್ಯವಾಗಲಿಲ್ಲ ಇದರಿಂದಾಗಿ ನೆಲಜರುವ ಅವರಿಗೆ ಅತೀವವಾದ ಬೇಸರ ಆಯ್ತಾದರೂ ಧೃತಿಗೆಡಲಿಲ್ಲ. ಬದುಕು ಕಟ್ಟಿಕೊಳ್ಳುವ ಸಲುವಾಗಿ ಬೇರೆ ವೃತ್ತಿಗಳತ್ತ ಆಲೋಚನೆ ಮಾಡಲಾಯ್ತಾದರೂ ಕೃಷಿಯಷ್ಟು ಖುಷಿ ಕೊಡುವಂತಹ ವೃತ್ತಿಗಳಾವುವು ನೆಲಜರುವ ಅವರನ್ನು ಆಕರ್ಷಿಸಲಿಲ್ಲ.

ಖೇಣಿ ಭೂಮಿಯಲ್ಲಿ ಹೊಸ ಕೃಷಿ : ಕೃಷಿಯೊಂದೆ ದಾರಿದೀಪ ಎಂಬುದನ್ನು ಅರಿತ ನೆಲಜರುವ ತನ್ನ ಪಾಲಿನ ಭೂಮಿ ಈಗಾಗಲೇ ಕೊಡುವಷ್ಟು ಕೊಟ್ಟಿದೆ ಅದನ್ನು ದೂರುವುದು ಬೇಡ. ಮಾಡುವಂತಹ ಮನಸ್ಸಿರುವಾಗ ಮತ್ಯಾರಿಗೆ ಹೆದರಬೇಕು ಎಂದು ಕೊಂಡು ಫಲವತ್ತಾದ ಭೂಮಿ ಎಲ್ಲಿ ಸಿಕ್ಕರೂ ಪರವಾಗಿಲ್ಲ ಅಲ್ಲಿಯೇ ದುಡಿಯೋಣ ಎಂದು ನಿರ್ಧರಿಸಿ ಮುನ್ನಡೆದರು. ನೆಲಜರುವಾಗೆ ಕೃಷಿ ಮೇಲಿದ್ದ ಅತೀವವಾದ ಪ್ರೀತಿಯನ್ನು ಊರಿನವರು ಗಮನಿಸಿದ್ದರಿಂದಲೋ ಏನೋ ಖೇಣಿಗೆ ಭೂಮಿ ಪಡೆಯುವುದು ಕಷ್ಟವಾಗಲಿಲ್ಲ. ಖೇಣಿ ಭೂಮಿಯಲ್ಲಿಯೆ ಕೃಷಿ ಆರಂಭಿಸಿದ ನೆಲಜರುವ ಅಲ್ಲಿಯೂ ಯಶಸ್ಸನ್ನು ತನ್ನದಾಗಿಸಿಕೊಂಡರು. ನೀರಾವರಿ ಜಮೀನು ಸಿಕ್ಕರೆ ತರಕಾರಿ ಹಾಗೂ ವಾಣಿಜ್ಯ ಬೆಳೆಗಳನ್ನು ಬೆದ್ದಲು ಭೂಮಿಯಲ್ಲಿ ಆಹಾರ ಬೆಳೆಗಳನ್ನು ಬೆಳೆದು ಅಲ್ಲಿಯೂ ಸೈ ಎನ್ನಿಸಿಕೊಂಡಿದ್ದಾರೆ ನೆಲಜರುವ.

ಪಟ್ಟಣವೆಂಬ ವರದಾನ : ಚಿತ್ರದುರ್ಗದಿಂದ ತುರುವನೂರು ಕಡೆಗೆ ಸಾಗುವ ಹಾದಿಯ ಕೂಗಳತೆಯ ದೂರದಲ್ಲಿ ನೆಲಜರುವ ಅವರ ಊರು ಮುತ್ತಯ್ಯನಹಟ್ಟಿ ಇದೆ. ಚಿತ್ರದುರ್ಗ ನಗರಕ್ಕೆ ಸಮೀಪದಲ್ಲಿಯೇ ಇರುವ ಈ ಊರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಕೃಷಿ ಮಾಡಲಾಗುತ್ತದೆ ಆದರೂ ಇಲ್ಲಿನ ಬಹುತೇಕ ಭೂಮಿ ಪಾಳು ಬಿದ್ದಿದೆ ಅಭಿವೃದ್ದಿಗಾಗಿ ಕಾದು ನಿಂತಿರುವ, ಇನ್ನು ಕೆಲವೇ ವರ್ಷಗಳಲ್ಲಿ ಬಡಾವಣೆ ಅಥವಾ ಕೃಷಿಯೇತರವಾಗಿ ಪರಿವರ್ತನೆ ಹೊಂದಲಿರುವ ಈ ಭೂಮಿ ಪ್ರತಿಷ್ಠಿತರಿಗೆ ಸೇರಿದ್ದು ಹಾಗಾಗಿ ಈ ಭೂಮಿ ಅತ್ಯಂತ ಕಡಿಮೆ ಬೆಲೆಗೆ ಖೇಣಿಗಾಗಿ ದೊರಕುತ್ತದೆ ಸುಮ್ಮನೆ ಪಾಳು ಬೀಳುವುದಕ್ಕಿಂತಲೂ ಇದನ್ನು ಯಾರಾದರೂ ನಿರ್ವರಿಸಿದರೆ ಸಾಕು ಎಂಬ ಸ್ಥಿತಿಯಲ್ಲಿ ಇದರ ಮಾಲೀಕರಿದ್ದಾರೆ ಹಾಗಾಗಿ ಕನಿಷ್ಟ ಖೇಣಿಗೆ ದೊರಕುವ ಈ ಭೂಮಿಯನ್ನು ಖೇಣಿಗೆ ಪಡೆಯುವ ನೆಲಜರುವ ಈ ಭಾಗದ ಪ್ರಮುಖ ಬೆಳೆಯಾಗಿರುವ ಈರುಳ್ಳಿಯನ್ನು ಇಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ. ಪ್ರತಿ ವರ್ಷವೂ ಈರುಳ್ಳಿಯೊಂದರಲ್ಲಿಯೇ 8-10 ಲಕ್ಷ ರೂಪಾಯಿ ಸಂಪಾದಿಸುವ ನೆಲಜರುವ ಖೇಣಿ ಭೂಮಿಯಿಂದಲೇ ತಮ್ಮ ಬದುಕನ್ನು ಅಚ್ಚುಕಟ್ಟಾಗಿ ಕಟ್ಟಿಕೊಂಡಿದ್ದಾರೆ.

  • ಅರಕಲಗೂಡು ವಿ. ಮಧುಸೂದನ್